ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿಗರನ್ನು ವಿಸ್ಮಯಗೊಳಿಸಿದ ‘ಜಸ್ಮಾ ಓಡನ್’

Last Updated 15 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿರುವ ಕನ್ನಡ ನಾಟಕ ತಂಡ ‘ನಾಟಕ ಚೈತ್ರ’ ಆರಂಭವಾಗಿ ಹತ್ತು ವರ್ಷ ಕಳೆದಿದೆ. ಈ ಹತ್ತನೇ ಹುಟ್ಟುಹಬ್ಬದ ಉಡುಗೊರೆಯಾಗಿ ಖ್ಯಾತ ರಂಗಕರ್ಮಿ ಬಿ.ಜಯಶ್ರೀ ಅವರ ನಿರ್ದೇಶನದಲ್ಲಿ ಭವಾಯಿ ಶೈಲಿಯ ‘ಜಸ್ಮಾ ಓಡನ್‘ ಕನ್ನಡ ಜಾನಪದ ನಾಟಕವನ್ನು ಇತ್ತೀಚೆಗೆ ಬೇ ಏರಿಯಾದಸಾಂಟಾ ಕ್ಲಾರಾ ನಗರದಲ್ಲಿ ಪ್ರದರ್ಶಿಸಲಾಯಿತು.

‘ಜಸ್ಮಾ ಓಡನ್‘ ಗುಜರಾತಿನ ಒಂದು ಜನಪ್ರಿಯ ಜಾನಪದ ಕಥೆ. ಒಬ್ಬ ಶಾಪಗ್ರಸ್ತ ಅಪ್ಸರೆ, ಭೂಮಿಯಲ್ಲಿ ಜಸ್ಮಾ ಎಂಬ ಹೆಣ್ಣಾಗಿ ಹುಟ್ಟಿ, ಅಲೆಮಾರಿ ಬುಡಕಟ್ಟಿನ ರೂಪಾಲ ಎಂಬವನೊಂದಿಗೆ ಮದುವೆಯಾಗಿರುತ್ತಾಳೆ. ಆ ಪ್ರಾಂತದ ರಾಜ ಜಸ್ಮಾಳ ಸೌಂದರ್ಯಕ್ಕೆ ಮರುಳಾಗಿ, ಅವಳನ್ನು ಮದುವೆಯಾಗಲು ಪೀಡಿಸುತ್ತಿರುತ್ತಾನೆ. ಆ ಕಾಮುಕ ದುಷ್ಟ ರಾಜನ ದುರಾಸೆ ಮತ್ತು ಜಸ್ಮಾಳ ಪತಿಪ್ರೇಮವೇ ನಾಟಕದ ಕಥೆ.

ಈ ಶೈಲಿಯ ನಾಟಕ ಪ್ರೇಕ್ಷಕರೊಬ್ಬರಿಗೆ ಪರಿಪೂರ್ಣ ಭಾರತೀಯ ಸಂಸ್ಕೃತಿಯ ಪ್ರತಿನಿಧಿಸುವಂತೆ ಕಂಡಿತು. ಕನ್ನಡ ಬಾರದ ಅವರ ಮಕ್ಕಳಿಬ್ಬರು ನಾಟಕದಲ್ಲಿ ಪೂರ್ಣ ತಲ್ಲೀನರಾಗಿ, ಕುರ್ಚಿಯ ತುದಿಯಲ್ಲೇ ಕೂತಿದ್ದರಂತೆ.

ಇನ್ನೊಬ್ಬ ಪ್ರೇಕ್ಷಕರಿಗೆ, ಇಡೀ ನಾಟಕ ಒಂದು ಪೇಟಿಂಗ್ ತರಹ ಕಂಡಿತು. ಚಿತ್ರಕಲೆಯನ್ನು ಹೋಲುವ ವೇಷಭೂಷಣಗಳ ಬಣ್ಣ ಸಂಯೋಜನೆ, ನಿಂತಲ್ಲಿ ನಿಲ್ಲದೆ ಕುಂಚದ ರೀತಿಯಲ್ಲಿ ರಂಗದ ಮೇಲೆಲ್ಲಾ ಓಡಾಡುವ ನಟರು ಮತ್ತು ಅವರ ಮುಖದ ಭಾವನೆಗಳು, ಸಭಾಂಗಣದಲ್ಲಿ ಪ್ರೇಕ್ಷಕರ ಮಧ್ಯದಿಂದ ಬರುವ ನಟರ ಚಾಕಚಕ್ಯತೆ ಎಲ್ಲರನ್ನು ಹಿಡಿದಿಟ್ಟಿತ್ತು.

ಅಮೆರಿಕನ್ ಸ್ನೇಹಿತರಿಬ್ಬರಿಗೆ ಈ ನಾಟಕದ ಹಾಡುಗಳು, ತಾಳಕ್ಕೆ ತಕ್ಕ ಕುಣಿತ, ಗುಜರಾತಿನ ಸಾಂಪ್ರದಾಯಿಕ ವೇಷಭೂಷಣ ತುಂಬಾ ಅಚ್ಚರಿ ಮೂಡಿಸಿದವು. ನಗುವ ಸಂದರ್ಭಗಳಲ್ಲಿ ನಕ್ಕು, ಅಳುವ ದೃಶ್ಯಗಳಲ್ಲಿ ಕಣ್ಣಂಚಿನಲ್ಲಿ ನೀರು ತುಂಬಿ, ನಾಟಕದಲ್ಲಿ ಒಂದಾಗಿ ಹೋಗಿದ್ದರು. ‘ವಿದೇಶಿ ಭಾಷೆಯಲ್ಲಿದ್ದ ಈ ನಾಟಕ ಹೇಗೆ ಅರ್ಥವಾಯಿತು‘ ಎಂದು ಕೇಳಿದ್ದಕ್ಕೆ ಅವರಿಂದ ಬಂದ ಉತ್ತರ ಕೇಳಿದಾಗ, ನಾಟಕಗಳು ಭಾಷಾತೀತ ಮತ್ತು ಸೀಮಾರಹಿತ ಎಂದು ಅರ್ಥವಾಯಿತು.

ಆದರೆ ಒಂದು ದೃಶ್ಯದ ಬಗ್ಗೆ ಅಮೆರಿಕನ್ನರ ಮನದಲ್ಲಿ ಅನುಮಾನ, ಪ್ರಶ್ನೆ ಮೂಡಿಸಿತು. ಆ ದೃಶ್ಯ ಹೀಗಿದೆ; ರೂಪಾಲನಿಗೆ ಮನಸೋತ ಜಸ್ಮಾ, ಅನಾನುಕೂಲ ಸಂದರ್ಭಗಳನ್ನು ಎದುರಿಸಿ ಮದುವೆ ಆಗುತ್ತಾಳೆ. ಮದುವೆಯ ನಂತರ ಜಸ್ಮಾಳನ್ನು ಬೀಳ್ಕೊಡುವ ದೃಶ್ಯವಿದೆ. ಅಲ್ಲಿ, ದೃಶ್ಯದ ಜತೆಗೆ ಜಯಶ್ರೀಯವರ ಆಳವಾದ ಕಂಚಿನ ಕಂಠದಲ್ಲಿ ಮೊಳಗಿದ ‘ಹೊರಟಾಳೋ ಚಂದದ ಸುಹಾಸಿನಿ ಮನೆತುಂಬಲು...‘ ಹಾಡು ಸಭಾಂಗಣದಲ್ಲಿದ್ದವರನ್ನು ಭಾವಪೂರ್ಣವಾಗಿಸಿತು. ಈ ದೃಶ್ಯದಲ್ಲಿ ಜಸ್ಮಾ ಮತ್ತು ಅವಳ ಕಡೆಯವರೆಲ್ಲ ಅಳುತ್ತಿದ್ದಾಗ, ಅಮೆರಿಕನ್ ಸ್ನೇಹಿತರ ಗಂಟಲು ಒಣಗಿದ್ದರೂ, ಅವರಿಗೆ ಆ ಅಳು ಏಕೆಂದು ಅರ್ಥ ಆಗಲಿಲ್ಲ. ‘ಜಸ್ಮಾ ಅಷ್ಟೆಲ್ಲಾ ಕಷ್ಟಪಟ್ಟು ತನ್ನ ಪ್ರಿಯನನ್ನು ಕೊನೆಗೂ ಮದುವೆಯಾಗಿ, ಈಗ ಯಾಕೆ ಅಳುತ್ತಿದ್ದಾಳೆ‘ ಎಂದು ಪ್ರಶ್ನಿಸಿಕೊಂಡರು. ನಾಟಕದ ಆನಂತರ ಅವರಿಗೆ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ಬೀಳ್ಕೊಡುವ ಪದ್ಧತಿ ಕುರಿತು ವಿವರಿಸಿದಾಗ, ಅವರಿಗಾದ ವಿಸ್ಮಯ ಅಷ್ಟಿಷ್ಟಲ್ಲ. ಈ ರೀತಿಯ ಎಷ್ಟೋ ಭಾವಪೂರ್ಣ ಪದ್ಧತಿಗಳನ್ನು ಕಳೆದುಕೊಳ್ಳುತ್ತಿರುವ ಇಂದಿನ ಭಾರತಕ್ಕೆ ಜಾನಪದ ಕಲೆಯೇ ನೆನಪಿನ ಭಂಡಾರ.

ಭವಾಯಿ ಶೈಲಿಯ ಮಹತ್ವ, ಗಹನವಿಲ್ಲದ ಸರಳ ಕಥೆಯನ್ನು ಭಾವಪೂರ್ಣವಾಗಿ, ಹಾಡು, ಕುಣಿತ ಮತ್ತು ಸರಳ ಸಂವಾದದಲ್ಲಿ ಮನಮುಟ್ಟುವ ರೀತಿಯಲ್ಲಿ ಹೇಳಿದ್ದು ವಿಶಿಷ್ಟವಾಗಿತ್ತು. ಇದರ ಜತೆಗೆ ಬಿ. ಜಯಶ್ರೀ ಅವರ ನಾಟಕದ ವಿನ್ಯಾಸ, ಹಾಡಿನ ಮೇಳ, ನಾಟಕ್ಕಕೆ ಹೊಸ ಮೆರಗು ನೀಡಿತ್ತು. ಬೆಂಗಳೂರಿನಿಂದ ಬಂದಿದ್ದ ‘ಸ್ಪಂದನ‘ ತಂಡದ ರಾಘವೇಂದ್ರ ಕೃಷ್ಣಮೂರ್ತಿರವರ ಡೋಲಕ್, ಪ್ರೇಕ್ಷಕರನ್ನು ಯಾವುದೋ ಮಾಂತ್ರಿಕ ಲೋಕಕ್ಕೆ ಕರೆದೊಯ್ದಿತ್ತು.

ಹಿರಿಯರು-ಕಿರಿಯರು, ಆಧುನಿಕ-ಸಾಂಪ್ರದಾಯಿಕ ಮನಸ್ಥಿತಿ ಉಳ್ಳವರು, ಸಂಗೀತ ಬಲ್ಲವರು - ಕೇಳದೇ ಇದ್ದವರು, ಭಾಷಾ ಪಂಡಿತರು - ಬರದೇ ಇದ್ದವರು, ಹೀಗೆ ಎಲ್ಲರನ್ನೂ ಮನಸೂರೆಗೊಂಡಿತು ‘ಜಸ್ಮಾ ಓಡನ್‘.


‘ನಾಟಕ ಚೈತ್ರ’ ತಂಡ

‘ನಾಟಕ ಚೈತ್ರ‘- ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದ ಸಮುದಾಯ ಪೋಷಿತ, ಹವ್ಯಾಸಿ ಕನ್ನಡ ನಾಟಕ ತಂಡ. ಈ ತಂಡದ ರೂವಾರಿಗಳು ಶರ್ಮಿಳಾ ವಿದ್ಯಾಧರ, ಅಶೋಕ ಉಪಾಧ್ಯ, ವಿಕ್ರಮ್ ಹೊಳ್ಳ ಮತ್ತು ಸುರೇಶ ಭಟ್. 2010ರಲ್ಲಿ ಆರಂಭವಾದ ಈ ತಂಡ, ಸ್ವಯಂಸೇವಕರ ಮತ್ತು ಸ್ಥಳೀಯ ಕನ್ನಡಿಗರ ಬೆಂಬಲದಿಂದ ಗುಣಮಟ್ಟದ ಕನ್ನಡ ನಾಟಕಗಳನ್ನು ಇಲ್ಲಿ ಪ್ರದರ್ಶಿಸುತ್ತಿದೆ. ಈವರೆಗೆ ಈ ತಂಡ ಅಮೆರಿಕದಾದ್ಯಂತ 15 ನಾಟಕಗಳ ನಲವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಏರ್ಪಡಿಸಿದೆ.

ವಿಕ್ರಮ್ ಹೊಳ್ಳ, ಕ್ಯಾಂಪಬೆಲ್, ಕ್ಯಾಲಿಫೋರ್ನಿಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT