‘ಮೊದಲು ಅವರು ನಿಮ್ಮನ್ನು ನಿರ್ಲಕ್ಷಿಸುತ್ತಾರೆ; ನಂತರ ನಿಮ್ಮನ್ನು ನೋಡಿ ನಗುತ್ತಾರೆ; ನಂತರ ನಿಮ್ಮೊಂದಿಗೆ ಕಾದಾಡುತ್ತಾರೆ; ನಂತರ ನೀವು ಗೆಲ್ಲುತ್ತೀರಿ.’

ಇದು ಮಹಾತ್ಮ ಗಾಂಧಿ ಅವರ ಬಹುಜನಪ್ರಿಯ ಮಾತು. ಮೇದಿನಿ ಕೆಳಮನೆ ಅವರ ನಿರ್ದೇಶನದ ‘ದಾಳಿ’ ಕಿರುಚಿತ್ರ ಗಾಂಧೀಜಿಯ ಈ ಮಾತಿಗೆ ದೃಶ್ಯರೂಪ ಕೊಟ್ಟ ಹಾಗಿದೆ.

ತಾಂತ್ರಿಕವಾಗಿ ದುರ್ಬಲವಾಗಿದ್ದರೂ ಬಹುಸೂಕ್ಷ್ಮವಾದ ವಸ್ತುವಿನ ಕಾರಣದಿಂದಲೇ ಗಮನಸೆಳೆಯುವ ಕಿರುಚಿತ್ರವಿದು. ಮೆಲ್ಲಗೆ ಹೇಳಿದರೆ ಕೇಳಿಸದೇ ಹೋಗಿಬಿಡಬಹುದಾದದ್ದನ್ನು ತುಸು ಲೌಡ್ ಆದ ಪಾತ್ರವೊಂದನ್ನು ಕಟ್ಟಿ, ಆ ಪಾತ್ರದ ಎದುರಿಗೆ ಅಸಾಧಾರಣ ಮೌನವೊಂದನ್ನು ನಿಲ್ಲಿಸಿ ಗೆಲ್ಲಿಸುವ ಪ್ರಯತ್ನ ಇಲ್ಲಿದೆ. ಇಲ್ಲಿ ಪಾತ್ರಗಳ ಸಹಜತೆಗಿಂತ ಅದು ಹೊರಡಿಸುವ ಧ್ವನಿಸಾಧ್ಯತೆಯೇ ಹೆಚ್ಚು ಮುಖ್ಯವಾಗುತ್ತದೆ.

ಹಲವು ಟ್ವಿಸ್ಟ್‌ಗಳಿರುವ ನಾಟಕೀಯ ಕಥೆ ಇದಲ್ಲ. ಮುಖಾಮುಖಿ ಹೊಡೆದಾಟಗಳಿಲ್ಲ. ಆದರೆ ಆ ಹೊಡೆದಾಟಗಳನ್ನೂ ಮೀರಿಸುವ ತುಂಬ ಹರಿತವಾದ ಮೌನವಿದೆ. ಆ ಮೌನ ಒಂದು ರೀತಿ ಆಕಾಶದಂತೆ. ಆಕಾಶಕ್ಕೆ ಉಗುಳಿ ಉಗುಳಿ ಅದು ತನ್ನ ಮುಖಕ್ಕೇ ಬಂದು ಬಿದ್ದಾಗ ನಡುಗಿ ಕುಸಿದುಹೋಗುವ ವ್ಯಕ್ತಿಯ ಚಿತ್ರಣ ನಮ್ಮ ಸುಸಂಸ್ಕೃತ ನಾಗರಿಕತೆಯ ಕ್ರೌರ್ಯದ ಅಲಗುಗಳೆಲ್ಲವನ್ನು ಸೂಕ್ಷ್ಮವಾಗಿ ತೆರೆದಿಡುತ್ತ ಹೋಗುತ್ತದೆ.

ವೈದೇಹಿ ಅವರ ಕಥೆಯನ್ನು ಆಧರಿಸಿದ ಈ ಕಿರುಚಿತ್ರ ನಡೆಯುವುದೆಲ್ಲ ಒಂದು ಖಾಸಗಿ ಬಸ್‌ನಲ್ಲಿ. ಸೀಟ್ ಕೊಡಿಸುತ್ತೇನೆ ಎಂದು ಭರವಸೆ ನೀಡಿ ಮಧ್ಯವಯಸ್ಸಿನ ಹೆಂಗಸೊಬ್ಬಳನ್ನು ಕಂಡಕ್ಟರ್ ಬಸ್ಸಿಗೆ ಹತ್ತಿಸಿಕೊಳ್ಳುತ್ತಾನೆ. ಬಸ್ಸು ಹತ್ತುವಾಗ ಕಂಡಕ್ಟರ್‌ನ ಧ್ವನಿಯಲ್ಲಿ ಇದ್ದ ನಯ ಬಸ್ ಹತ್ತಿದ ಮೇಲೆ ಇರುವುದಿಲ್ಲ. ಆ ಬಸ್ ಹತ್ತುವ ಬೇರೆ ಗಂಡಸರನ್ನೆಲ್ಲ ಆದರದಿಂದ ಮಾತನಾಡಿಸುವ ಅವನು ಈ ಹೆಂಗಸು ಸೀಟು ಕೇಳಿದಾಗ ಮಾತ್ರ ಉರಿದು ಬೀಳುತ್ತಾನೆ. ಆ ಸನ್ನಿವೇಶಕ್ಕೆ ಸಂಬಂಧವೇ ಇಲ್ಲದ ಮಾತುಗಳನ್ನೆಲ್ಲ ಆಡಿ ಇಡೀ ಹೆಣ್ಣು ಜನ್ಮವನ್ನೇ ಜಾಲಾಡುತ್ತಾನೆ. ಇಡೀ ಬಸ್‌ನಲ್ಲಿ ಹೆಣ್ಣುಕುಲದ ಮೇಲಿನ ಅವನ ಸಿಟ್ಟನ್ನೆಲ್ಲ ತಾನೇ ಏನೋ ತಪ್ಪು ಮಾಡಿದವಳ ಹಾಗೆ ಅವಳು ಭರಿಸಬೇಕಾಗುತ್ತದೆ.

ತನ್ನದಲ್ಲದ ತಪ್ಪಿಗೆ, ಹೀಗೆ ಕ್ರೂರವಾಗಿ ಅವಮಾನ ಮಾಡಿಸಿಕೊಂಡ ಹೆಣ್ಣು ಏನು ಮಾಡಬೇಕು? ಜಗಳಕ್ಕೆ ನಿಂತರೆ ಕಂಡಕ್ಟರಿನಿಗೂ ಖುಷಿ. ತನ್ನ ಯಾವಯಾವುದೋ ಸಿಟ್ಟುಗಳನ್ನೆಲ್ಲ ತೀರಿಸಿಕೊಳ್ಳಲು ಅವನು ಕಾದಿದ್ದಾನೆ. ಬಸ್ಸು ಇಳಿದು ಹೋದರೆ ಇನ್ನೊಂದು ಬಸ್ಸಿನಲ್ಲಿ ಹೀಗೆಯೇ ಆಗುವುದಿಲ್ಲ ಎಂದು ಏನು ಗ್ಯಾರಂಟಿ?

ಆ ಹೆಂಗಸು, ತನ್ನ ತುಟಿಗಳ ಮೇಲೆ ತೆಳುವಾದ ನಗುವೊಂದನ್ನು ಅರಳಿಸಿಕೊಂಡು ಕಿಟಕಿಯಿಂದ ಹೊರಗೆ ನೋಡುತ್ತ ನಿಂತುಬಿಡುತ್ತಾಳೆ. ಅಷ್ಟೆ!

ಕಂಡಕ್ಟರ್ ಅವಳನ್ನು ಇನ್ನೂ ಬೈಯುತ್ತಲೇ ಇದ್ದಾನೆ. ಬಯ್ಯುತ್ತ ಬಯ್ಯುತ್ತಲೇ ಅವಳನ್ನು ನೋಡುತ್ತಾನೆ. ಅರೆ! ನಗುತ್ತಿದ್ದಾಳೆ. ಕಂಡಕ್ಟರ್‌ಗೆ ಇನ್ನಷ್ಟು ಕೆರಳುತ್ತದೆ. ಬಸ್ಸಿನುದ್ದಕ್ಕೂ ಅವಳನ್ನು ಪರೋಕ್ಷವಾಗಿ ಬೈಯುತ್ತ ಅವಳನ್ನು ಸಿಟ್ಟಿಗೇಳಿಸಲು ಯತ್ನಿಸುತ್ತ ಓಡಾಡುತ್ತಾನೆ. ಊಹೂಂ, ಅವಳ ಮುಖದ ನಗು ತುಸುವೂ ಮಾಸುವುದಿಲ್ಲ. ಬಸ್ಸಿನೊಳಗೆ ಮಹಿಳಾ ಮೀಸಲಾತಿಯ ಕುರಿತ ಮಾತುಗಳು ಬರುತ್ತವೆ. ಬಸ್ಸಿನಲ್ಲಿ ಸೀಟಿನಲ್ಲಿ ಆರಾಮಾಗಿ ಕೂತ ಹುಡುಗರು, ‘ಅವರಿಗೆ 33 ಪರ್ಸೆಂಟ್ ಮೀಸಲಾತಿ ಬೇಕಂತೆ. ಮುಂದೆ 50 ಪರ್ಸೆಂಟ್ ಕೇಳಿದ್ರೂ ಕೇಳ್ಬೋದು... ಕೈಲಾಗದವರಿಗೆ ಮೀಸಲಾತಿ ಕೊಡೋದು‘ ಎಂದೆಲ್ಲ ಮಾತಾಡಿಕೊಂಡು ನಗುತ್ತಿದ್ದಾರೆ. ಆದರೆ ಸೀಟು ಸಿಕ್ಕದೆ ನಿಂತ ಆ ಹೆಂಗಸು ಮತ್ತು ಕಾಲೇಜಿಗೆ ಹೋಗುವ ಮೂರು ನಾಲ್ಕು ತರುಣಿಯರು ಅದನ್ನು ಕೇಳಿಸಿಕೊಳುತ್ತಿದ್ದಾರೆ. ಈ ಒಂದು ದೃಶ್ಯದಲ್ಲಿಯೇ ನಿರ್ದೇಶಕರು ಮೀಸಲಾತಿಯ ವಿರೋಧಿಸುವವರ ಮನಸ್ಥಿತಿ ಮತ್ತು ಒಟ್ಟಾರೆ ಸಮಾಜದ ಪರಿಸ್ಥಿತಿ ಎರಡನ್ನೂ ಬಿಂಬಿಸಿಬಿಡುತ್ತಾರೆ.

ಹಾಗೆ ನೋಡಿದರೆ ಅದು ಬಸ್ಸಲ್ಲ, ನಮ್ಮ ಸಮಾಜದ ಮಿನಿಯೇಚರ್. ಆ ಮಿನಿಯೇಚರ್‌ನಲ್ಲಿ ಜರುಗುವ ಘಟನೆಗಳು ‘ದಾಳಿ’ ಎಂಬುದರ ಅರ್ಥವನ್ನೇ ಬದಲಿಸಿಬಿಡುತ್ತದೆ. ಯಾವುದು ತನ್ನ ಶಕ್ತಿ ಎಂದುಕೊಂಡಿದ್ದಾನೋ ಅದು ಅಸಹಾಯಕತೆಯ ಅಭಿವ್ಯಕ್ತಿಯಷ್ಟೇ ಎಂದು ಹೊಳೆದರೆ ಗಂಡಿಗೆ ಹೆಣ್ಣಿನ ಮುಖಕ್ಕೆ ಮುಖಕೊಟ್ಟು ಮಾತಾಡುವ ಧೈರ್ಯ ಎಲ್ಲಿಂದ ಬಂದೀತು? ಹೆಣ್ಣಿನ ದೌರ್ಬಲ್ಯ ಎಂದು ಭಾವಿಸಿರುವುದು ಅವಳ ಶಕ್ತಿಯೂ ಆಗಬಲ್ಲದು ಎಂದು ಗೊತ್ತಾದ ಕ್ಷಣ ಅವನು ಬಸ್ಸಿನಿಂದ ಹಾರಿಕೊಳ್ಳಬೇಕಷ್ಟೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.