7

ಸಿಜಿಕೆ ನೆನಪಲ್ಲಿ ಬೀದಿರಂಗ ದಿನ

Published:
Updated:

‘ಅದೊಂದು ದಿನ ರಂಗಕರ್ಮಿ ಸಿಜಿಕೆ (ಸಿ.ಜಿ.ಕೃಷ್ಣಸ್ವಾಮಿ) ಸಂಸ ಬಯಲು ರಂಗಮಂದಿರದ ಕಟ್ಟೆ ಮೇಲೆ ಮಲಗಿದ್ದರು. ರಂಗಭೂಮಿಯ ಬಗ್ಗೆ ಕನಸು ತುಂಬಿಕೊಂಡಿದ್ದ ನಾನು ಅವರನ್ನು ಭೇಟಿ ಮಾಡಿ, ‘ಸರ್ ರಂಗಭೂಮಿ ಕುರಿತು ನಾನೊಂದು ಪತ್ರಿಕೆ ಮಾಡಬೇಕು ಅಂತ ಇದ್ದೀನಿ ಅಂದೆ. ಅಷ್ಟು ಅಂದದ್ದೇ ತಡ ನನ್ನನ್ನು ಮೇಲಿನಿಂದ ಕೆಳಗೆ ನೋಡಿ ಚೆನ್ನಾಗಿ ಬೈಯ್ದು ಕಳಿಸಿದರು. ಅದಾಗಿ ಹದಿನೈದು ದಿನದ ನಂತರ ಕಲಾಕ್ಷೇತ್ರದಲ್ಲಿ ಮತ್ತೆ ಅವರನ್ನು ಭೇಟಿ ಮಾಡಿದಾಗ ಏನಯ್ಯಾ ಭಾವೀ ಸಂಪಾದಕ? ಎಲ್ಲಿಗೆ ಬಂತು ಪತ್ರಿಕೆ ಕೆಲಸ ಅಂದ್ರು. ಆಗ ನಾನು ಇಲ್ಲಾ ಸರ್. ನೀವು ಬೈದದ್ದಕ್ಕೆ ಪತ್ರಿಕೆ ಮಾಡಲಿಲ್ಲ ಅಂದೆ. ಆಗ ಮತ್ತಷ್ಟು ಬೈದ ಸಿಜಿಕೆ, ತಮ್ಮ ಜೇಬಿನಲ್ಲಿದ್ದ ಅಷ್ಟೂ ದುಡ್ಡನ್ನು ತೆಗೆದು ನನ್ನ ಜೇಬಿನಲ್ಲಿಟ್ಟು ಹೋಗಯ್ಯಾ ಒಳ್ಳೇ ಕೆಲಸ ಮಾಡ್ತಾ ಇದ್ದೀಯಾ. ಮೊದಲು ಪತ್ರಿಕೆ ಹೆಸರು ರಿಜಿಸ್ಟ್ರೇಷನ್ ಮಾಡಿಸು ಅಂದ್ರು... ಅದು ಸಿಜಿಕೆ...’

‘ಕಲಾಕ್ಷೇತ್ರದ ಆವರಣದಲ್ಲಿ ನಡೆಯುತ್ತಲೇ ಅವರು ಕೊಟ್ಟ ದುಡ್ಡ ಎಣಿಸಿದರೆ ಕೈಯಲ್ಲಿ ₹ 4,800 ಇತ್ತು!. ಅಷ್ಟಾಗಿ ಪರಿಚಯವಿರದ ನನ್ನಂಥವನಿಗೆ ಸಿಜಿಕೆ ತೋರಿದ ಆ ಪ್ರೀತಿ ನನ್ನ ಮನದಲ್ಲಿ ಇಂದಿಗೂ ಹಚ್ಚಹಸಿರಾಗಿದೆ’.

–ಹಾಗೆಂದು ತಮ್ಮ ಮತ್ತು ಸಿಜಿಕೆ ಅವರ ಒಡನಾಟವನ್ನು ಭಾವುಕವಾಗಿ ಬಿಚ್ಚಿಟ್ಟರು ‘ಸಂಸ’ ಸುರೇಶ್.

ನನ್ನಂಥವರಿಗೆ ಸಿಜಿಕೆ ತೋರಿದ ಕಕ್ಕುಲಾತಿ ಮತ್ತು ರಂಗಬದ್ಧತೆಯ ಪ್ರತೀಕವಾಗಿ ಸಮಾನ ಮನಸ್ಕರೆಲ್ಲಾ ಸೇರಿ ಸಿಜಿಕೆ ಹುಟ್ಟುಹಬ್ಬದ ದಿನ ಜೂನ್ 27ರಂದು ‘ಸಿಜಿಕೆ ಬೀದಿರಂಗದಿನ’ ಆಚರಿಸುತ್ತಿದ್ದೇವೆ ಎಂದು ವಿವರಿಸುತ್ತಾರೆ ಅವರು. 

2013ರಲ್ಲಿ ಸಿಜಿಕೆಗೆ 65 ವರ್ಷ ಮತ್ತು ಅವರ ನಿರ್ದೇಶನದ ‘ಬೆಲ್ಚಿ’ ನಾಟಕದ 35 ವರ್ಷದ ನೆನಪಿಗಾಗಿ ರಾಜ್ಯಾದ್ಯಂತ 65 ದಿನಗಳ ಜಾಥಾ ಮಾಡಿದ್ದೆವು. 2014ರಿಂದ ಪ್ರತಿವರ್ಷ ಜೂನ್ 27ರಂದು ಸಿಜಿಕೆ ಬೀದಿರಂಗದಿನ ಆಚರಿಸಲು ಆರಂಭಿಸಿದೆವು. ಅಂದು ರಂಗಭೂಮಿ ಮತ್ತು ಇತರ ಕ್ಷೇತ್ರಗಳಲ್ಲಿ ಬದ್ಧತೆಯಿಂದ ಕೆಲಸ ಮಾಡಿದವರಿಗೆ ಸಿಜಿಕೆ ರಂಗಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಈ ಕಾರ್ಯಕ್ರಮ ರಾಜ್ಯದ 30 ಜಿಲ್ಲೆಗಳಲ್ಲೂ ಏಕಕಾಲಕ್ಕೆ ನಡೆಯುತ್ತದೆ. ಸಿಜಿಕೆ ಒಡನಾಡಿ, ಅಭಿಮಾನಿಗಳು ಆ ದಿನ ಒಗ್ಗೂಡಿ ಸಿಜಿಕೆ ಅವರನ್ನು ನೆನಪಿಸಿಕೊಳ್ಳುವಂಥ ಕಾರ್ಯಕ್ರಮ ಮಾಡುತ್ತೇವೆ. ಕರ್ನಾಟಕ ಬೀದಿನಾಟಕ ಅಕಾಡೆಮಿ, ಬೆಂಗಳೂರು ಆರ್ಟ್ ಫೌಂಡೇಷನ್ ಮತ್ತು ಅವಿರತ ಪುಸ್ತಕದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯುತ್ತದೆ’ ಎಂದು ಮಾಹಿತಿ ನೀಡುತ್ತಾರೆ ಅವರು.

‘ಬೀದಿನಾಟಕ ಅಕಾಡೆಮಿಯ ಜಿಲ್ಲಾ ಸಂಚಾಲಕರು ಆಯಾ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸುತ್ತಾರೆ. ನಮ್ಮಿಂದ ಬ್ಯಾನರ್, ಒಂದು ಪ್ರಶಸ್ತಿ ಫಲಕ, 200 ಆಹ್ವಾನ ಪತ್ರಿಕೆಗಳು ಇಷ್ಟು  ಮಾತ್ರ ಕೊಡ್ತೀವಿ. ಸಿಜಿಕೆ ಆಶಯಗಳನ್ನು ಜೀವಂತವಾಗಿಡುವುದಷ್ಟೇ ನಮ್ಮ ಗುರಿ. ಬೀದಿನಾಟಕಗಳ ಮೂಲಕ ಪ್ರತಿರೋಧ ತೋರುವುದಕ್ಕಾಗಿ ಪ್ರಸ್ತುತ ವಿಷಯಗಳಾಧಾರಿತ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಪೌರಾಣಿಕ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡಿರುವ ಹಿರಿಯ ರಂಗಕರ್ಮಿ ಡಿ.ಕೆ.ಸಿಂಧೆ ಅವರಿಗೆ ಈ ಬಾರಿಯ ‘ಸಿಜಿಕೆ ರಂಗಪುರಸ್ಕಾರ’ ನೀಡಿ ಗೌರವಿಸಲಾಗುತ್ತಿದೆ. ಪುರಸ್ಕಾರದ ಪ್ರಶಸ್ತಿ ಫಲಕವನ್ನು ಕಲಾವಿದ ಎಂ.ಎಸ್.ಮೂರ್ತಿ ರೂಪಿಸಿಕೊಟ್ಟಿದ್ದಾರೆ ಎಂದು ಸಿಜಿಕೆ ಬೀದಿರಂಗದ ಹಿಂದಿನ ಉದ್ದೇಶ ಬಿಚ್ಚಿಡುತ್ತಾರೆ ಅವರು.


ಸಿಜಿಕೆ

ಸಿಜಿಕೆ ಬೀದಿರಂಗ ದಿನ ಮತ್ತು ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮ: ಸಂಜೆ 6ಕ್ಕೆ ಉದ್ಘಾಟನೆ–ಜೆ.ಲೋಕೇಶ್, ಅತಿಥಿ– ಕಬಡ್ಡಿ ರಾಮಚಂದ್ರ, ಹಣಮಂತ ಹಾಲಿಗೇರಿ. ಅಧ್ಯಕ್ಷತೆ–ಡಾ.ಎಂ.ಎಸ್.ಮೂರ್ತಿ. ಸಿಜಿಕೆ ರಂಗಪುರಸ್ಕಾರ ಪುರಸ್ಕೃತರು–ಹಿರಿಯ ರಂಗಕರ್ಮಿ ಡಿ.ಕೆ.ಸಿಂಧೆ. ರಾತ್ರಿ 7ಕ್ಕೆ ‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕ ಪ್ರದರ್ಶನ. ತಂಡ–ಕನ್ನಡ ಸಂಘ, ನಾಗಮಂಗಲ. ನಿರ್ದೇಶನ–ಭಾಸ್ಕರ್, ಆಯೋಜನೆ–ಕರ್ನಾಟಕ ಬೀದಿನಾಟಕ ಅಕಾಡೆಮಿ, ಬೆಂಗಳೂರು ಆರ್ಟ್ ಫೌಂಡೇಷನ್, ಅವಿರತ ಪುಸ್ತಕ. ಸ್ಥಳ–ಕಲಾಗ್ರಾಮ, ಮಲ್ಲತ್ತಹಳ್ಳಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !