ಬುಧವಾರ, ಫೆಬ್ರವರಿ 19, 2020
16 °C

ಮತ್ತೆ ಬಂದರು ‘ಗಾಂಧಿ ಬಾಪು’

ರಮೇಶ ಕೆ. Updated:

ಅಕ್ಷರ ಗಾತ್ರ : | |

ಕತ್ತಲಾಗಿದ್ದ ವೇದಿಕೆಗೆ ಒಮ್ಮೆಲೆ ಬೆಳಕು ಮೂಡಿತು. ಹಿನ್ನೆಲೆ ಸಂಗೀತಕ್ಕೆ ತಕ್ಕಂತೆ ಖಾದಿ ಬಟ್ಟೆ ಧರಿಸಿದ್ದ ಕಲಾವಿದರು ಹೆಜ್ಜೆ ಹಾಕುತ್ತಾ ಬಂದರು. ಚರಕದ ಮಾದರಿಯನ್ನು ಪ್ರದರ್ಶಿಸಿದರು. ಮಹಾತ್ಮನ ಕುರಿತ ನಾಟಕಕ್ಕೆ ನಿರೂಪಣೆ ಮೂಲಕ ನಾಂದಿ ಹಾಡಿದರು. ವೇದಿಕೆ ಮೇಲೆ ಮತ್ತೆ ಕತ್ತಲು ಆವರಿಸಿತು.

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜಯಂತ್ಯುತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಂಗಾಯಣದ ಸಹಯೋಗದಲ್ಲಿ ‘ಪಾಪು ಗಾಂಧಿ ಗಾಂಧಿ ಬಾಪು’ ಆದ ನಾಟಕವನ್ನು ರಾಜ್ಯದಾದ್ಯಂತ ಪ್ರದರ್ಶನ ನೀಡಲು ಸಜ್ಜಾಗಿದೆ. ಇದರ ಅಂಗವಾಗಿ ರಂಗಾಯಣದ ಆವರಣದಲ್ಲಿ ವಿವಿಧ ಜಿಲ್ಲೆಗಳಿಂದ ಬಂದಿರುವ ಸುಮಾರು 60 ಕಲಾವಿದರು ತಾಲೀಮು ನಡೆಸುತ್ತಿದ್ದಾರೆ. ಒಳಾಂಗಣ ಮಾತ್ರವಲ್ಲದೇ ವನರಂಗದಲ್ಲೂ ಅಭ್ಯಾಸ ನಿರತರಾಗಿದ್ದು, ರಂಗಾಯಣದ ಆವರಣದ ತುಂಬಾ ‘ಗಾಂಧಿ ಜಪ’ ಮೇಳೈಸಿದೆ.

ವನರಂಗದಲ್ಲಿ ನಾಟಕದ ತಾಲೀಮಿನ ದೃಶ್ಯ

ಕೆಲ ಕಲಾವಿದರು ಗಾಂಧಿಯ ‘ನನ್ನ ಸತ್ಯಾನ್ವೇಷಣೆ’ ಆತ್ಮಕಥೆಯನ್ನು ಹಿಡಿದು ಬಾಪುವಿನ ಬಗ್ಗೆ ಅರಿತುಕೊಳ್ಳುತ್ತಿದ್ದರು. ಮತ್ತೆ ಕೆಲವರು ಹಾಡಿನ ಅಭ್ಯಾಸ ಮಾಡುತ್ತಿದ್ದರು. ಕಳೆದ ವರ್ಷ ಇದೇ ನಾಟಕ ಪ್ರದರ್ಶನದಲ್ಲಿ ಅಭಿನಯಿಸಿದ ಕಲಾವಿದರೂ ಇದ್ದಾರೆ. 10 ದಿನಗಳ ತರಬೇತಿಯಲ್ಲಿ ರಂಗಾಯಣದಲ್ಲಿ ಕಲಿತ ಕಲಾವಿದರು ಸೇರಿದಂತೆ ಹವ್ಯಾಸಿ ಕಲಾವಿದರೂ ಭಾಗವಹಿಸಿದ್ದಾರೆ. 

ಗಾಂಧಿ ಬದುಕಿನ ಪ್ರಮುಖ ಘಟನೆಗಳನ್ನು ಆಧರಿಸಿದ, ಬೊಳುವಾರು ಮಹಮ್ಮದ್‌ ಕುಂಞಿ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ‘ಪಾಪು ಗಾಂಧಿ ಗಾಂಧಿ ಬಾಪು’ ಆದ ಕೃತಿಯನ್ನು ರಂಗಕ್ಕೆ ತರಲಾಗಿದೆ. ರಂಗಕರ್ಮಿ ಶ್ರೀಪಾದ ಭಟ್‌ ಅವರು ಶಿಬಿರದ ನಿರ್ದೇಶಕರಾಗಿದ್ದಾರೆ.  

‘ಕಳೆದ ವರ್ಷ ಇದೇ ನಾಟಕವನ್ನು ನಾಡಿನಾದ್ಯಂತ ಪ್ರದರ್ಶಿಸಿ ಯಶಸ್ವಿಯಾಗಿದ್ದೆವು. ಶಿಕ್ಷಕರು ಹಾಗೂ ಸಾರ್ವಜನಿಕರ ಒತ್ತಾಯದ ಮೇರೆಗೆ 1050 ಶಾಲಾ, ಕಾಲೇಜುಗಳಲ್ಲಿ ನಾಟಕ ಆಡಿಸಲಾಗಿತ್ತು. ಈ ಬಾರಿಯೂ ಡಿ.1ರಿಂದ ಮೂರು ತಿಂಗಳು ರಾಜ್ಯದ ವಿವಿಧೆಡೆ ನಾಟಕ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗಿದೆ. ಬೆಳಿಗ್ಗೆ 6ರಿಂದ ರಾತ್ರಿ 10ರ ವರೆಗೆ ತರಬೇತಿ ನೀಡಲಾಗುತ್ತದೆ. ಹೊರಾಂಗಣ ಹಾಗೂ ಒಳಾಂಗಣದಲ್ಲಿ ಪ್ರದರ್ಶನ ನೀಡಲು ಅನುಕೂಲವಾಗುವಂತೆ ಕಲಿಯುತ್ತಾರೆ’ ಎಂದರು ಶಿಬಿರದ ನಿರ್ದೇಶಕ ಶ್ರೀಪಾದ ಭಟ್‌.

ಶ್ರೀಪಾದ ಭಟ್‌

‘ಬೆಳಿಗ್ಗೆಯಿಂದಲೇ ತಾಲೀಮಿಗೆ ಬರುತ್ತೇವೆ. ಕಳೆದ ವರ್ಷ ಇದೇ ನಾಟಕದ 350 ಪ್ರದರ್ಶನದಲ್ಲೂ ಅಭಿನಯಿಸಿದ್ದೇನೆ. ಕಲಿಯಲು ಕಷ್ಟವೇನೂ ಆಗುವುದಿಲ್ಲ. ಚಂದ್ರಮತಿ, ಕಸ್ತೂರ ಬಾ ಪಾತ್ರಗಳನ್ನು ಮಾಡಿದ್ದೇನೆ. ನಾಟಕದಲ್ಲಿ ಗಾಂಧಿಯ ಹಲವು ಪಾತ್ರಗಳು ಬರುತ್ತವೆ. ಅವುಗಳಲ್ಲಿ ಒಂದು ಪಾತ್ರ ನಿರ್ವಹಿಸುವೆ’ ಎನ್ನುತ್ತಾರೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಅಕ್ಷತಾ.

ಕಲಾವಿದರಿಗೆ ಗಾಂಧಿ ತತ್ವ, ಸಿದ್ಧಾಂತಗಳು ಹಾಗೂ ಲೇಖನಗಳ ಬಗ್ಗೆ ತಿಳಿಸಲಾಗುತ್ತದೆ. ಅಲ್ಲದೇ, ಗುಂಪುಚರ್ಚೆಯನ್ನೂ ಮಾಡಲಾಗುತ್ತದೆ. ಒಟ್ಟು ಕಲಾವಿದರಲ್ಲಿ 16 ಯುವತಿಯರು ಇದ್ದಾರೆ. 14 ಕಲಾವಿದರ ಒಂದು ತಂಡ ರಚಿಸಲಾಗಿದೆ. ತಂಡಕ್ಕೆ ಒಬ್ಬರು ಸಂಯೋಜಕರು ಇರುತ್ತಾರೆ. ತರಬೇತಿ ಪಡೆದು ನಾಲ್ಕು ರಂಗಾಯಣಗಳ ವ್ಯಾಪ್ತಿಯಲ್ಲಿ ಪ್ರದರ್ಶನ ನೀಡಲಿದ್ದಾರೆ.

ಅಕ್ಷತಾ

‘ರಂಗಾಯಣದಲ್ಲಿ ಡಿಪ್ಲೊಮಾ ಕೋರ್ಸ್‌ ಮಾಡಿದ್ದೇನೆ. ನಾಟಕಕ್ಕೆ ಸಂಗೀತ ನಿರ್ವಹಣೆ ಮಾಡುತ್ತಿದ್ದೇನೆ, ಈ ಮೊದಲು ‘ತಲೆದಂಡ’, ‘ಜ್ಯೂಲಿಯಸ್‌ ಸೀಜರ್‌’ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಇದೆ’ ಎಂದರು ಗುಂಡ್ಲುಪೇಟೆಯ ಮಂಜು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು