ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಪೌರಾಣಿಕ ನಾಟಕ ಕಲಿಸಿ ಮೇಷ್ಟ್ರೇ!

ನಾಟಕ ಪ್ರದರ್ಶನವಿಲ್ಲದೇ ಬಿಕೋ ಎನ್ನುತ್ತಿದೆ ಮಂಡ್ಯದ ಕಲಾಮಂದಿರ
Last Updated 20 ನವೆಂಬರ್ 2020, 11:34 IST
ಅಕ್ಷರ ಗಾತ್ರ

ಸಕ್ಕರೆ ನಾಡು ಜಾನಪದ ಕಲೆಗಳ ತವರು, ಅದರಲ್ಲೂ ಪೌರಾಣಿಕ ನಾಟಕಗಳಿಗೆ ಇಲ್ಲಿ ಕೊರತೆ ಇಲ್ಲ. ಮಂಡ್ಯದ ನಾಲ್ವಡಿ ಕೃಷ್ಣರಾಜ ಕಲಾಮಂದಿರ ವರ್ಷದಲ್ಲಿ 300 ದಿನ ಪೌರಾಣಿಕ ನಾಟಕಗಳ ಪ್ರದರ್ಶನಕ್ಕೆ ಮೀಸಲಾಗಿರುತ್ತದೆ. ಕಲಾಮಂದಿರ ರಸ್ತೆ ಕಡೆಗೆ ತಿರುಗಿದರೆ ಸಾಕು, ಕಂದಪದಗಳು ನಾಲಗೆ ಮೇಲೆ ಬರುತ್ತವೆ. ಸಭಾಂಗಣದಿಂದ ತೂರಿ ಬರುವ ಹಾರ್ಮೋನಿಯಂ, ತಬಲಾ, ಕ್ಲಾರಿಯೋನೆಟ್‌ ಸದ್ದು ದಾರಿಯಲ್ಲಿ ಓಡಾಡವವರ ತಲೆದೂಗಿಸುತ್ತವೆ. ತಿಂಗಳುಗಟ್ಟಲೇ ಪೌರಾಣಿಕ ನಾಟಕೋತ್ಸವ, ರಾಜ್ಯಮಟ್ಟದ ನಾಟಕ ಸ್ಪರ್ಧೆಗಳು ಅಲ್ಲಿ ಸಾಮಾನ್ಯವಾಗಿರುತ್ತವೆ.

ರಾಮಾಯಣ, ಮಹಾಭಾರತವನ್ನೇ ಬೇರೆಬೇರೆ ತಂಡಗಳು ಬೇರೆಬೇರೆ ರೀತಿಯಾಗಿ ಪ್ರಸ್ತುತಪಡಿಸುತ್ತವೆ. ಸುತ್ತಮುತ್ತಲ ಹಳ್ಳಿಗಳಿಂದ ಬರುವ ಪೌರಾಣಿಕ ನಾಟಕ ಪ್ರೇಮಿಗಳು ಇಡೀ ದಿನ ನಾಟಕ ನೋಡಿ ಸಂಭ್ರಮಿಸುತ್ತಾರೆ. ಸಿನಿಮಾ ಥಿಯೇಟರ್‌ ಮಾದರಿಯಲ್ಲಿ ಕಲಾಮಂದಿರದ ಮುಂದೆ ನೆಚ್ಚಿನ ಕಲಾವಿದರ ಕಟೌಟ್‌ ಹಾಕುವುದು, ಅವರಿಗೆ ಬೃಹತ್‌ ಹಾರ ಹಾಕುವುದು, ಅಭಿಷೇಕ ಮಾಡುವುದನ್ನು ಮಂಡ್ಯದಲ್ಲಿ ಮಾತ್ರ ನೋಡಲು ಸಾಧ್ಯ!

ಆದರೆ, ಕೋವಿಡ್‌ ಕಾರಣದಿಂದಾಗಿ ಕಳೆದ 8 ತಿಂಗಳಿಂದ ಪೌರಾಣಿಕ ನಾಟಕ ಪ್ರದರ್ಶನವಿಲ್ಲದೇ ಮಂಡ್ಯ ಕಲಾಮಂದಿರ ಬಿಕೋ ಎನ್ನುತ್ತಿದೆ. ಮುಂದಿನ ಕಾಂಪೌಂಡ್‌ ಮುಂದೆ ನಾಟಕಗಳ, ಪಾತ್ರಧಾರಿಗಳ ಚಿತ್ರಗಳು ಕಾಣಿಸುತ್ತಿಲ್ಲ, ಕಟೌಟ್‌ಗಳಿಲ್ಲ, ಹೂವಿನ ಹಾರಗಳಿಲ್ಲ. ಫ್ಲೆಕ್ಸ್‌ಗಳ ಮುಂದೆ ನಿಂತು ನಾಟಕದ ಕಂದಗಳನ್ನು ಹಾಡುವವರೂ ಕಾಣಿಸುತ್ತಿಲ್ಲ.

ಮೈಸೂರು, ಬೆಂಗಳೂರು ನಗರಗಳಲ್ಲಿ ಆಧುನಿಕ ರಂಗಭೂಮಿಯ ರಂಗಪ್ರಯೋಗಗಳು ಆರಂಭಗೊಂಡಿವೆ. ಆದರೆ ಮಂಡ್ಯದಲ್ಲಿ ಇನ್ನೂ ಪೌರಾಣಿಕ ನಾಟಕ ಪ್ರದರ್ಶನಗಳು ಆರಂಭವಾಗದಿರುವುದು ಕಲಾವಿದರನ್ನು ಕಂಗಾಲಾಗಿಸಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ಹಳ್ಳಿಗಳಲ್ಲಿರುವ ನಾಟಕ ಸಂಘದ ಕಲಾವಿದರು ನಿತ್ಯವೂ ಕರೆ ಮಾಡುತ್ತಿದ್ದಾರೆ. ನಾಟಕ ಕಲಿಸಿ ಬನ್ನಿ ಮೇಷ್ಟ್ರೇ ಎಂದು ಒತ್ತಾಯ ಮಾಡುತ್ತಿದ್ದಾರೆ. ದಕ್ಷಯಜ್ಞ, ಮಹಿಷಾಸುರ ಮರ್ಧಿನಿ ತ್ರಿಜನ್ಮ ಮೋಕ್ಷ, ಶನಿಮಹಾತ್ಮೆ, ರಾಮಾಯಣ, ಕುರುಕ್ಷೇತ್ರ ಕಲಿಸಿ ಎಂದು ಕರೆಯುತ್ತಿದ್ದಾರೆ. ಆದರೆ, ನಮಗೆ ಇನ್ನೂ ಕೋವಿಡ್‌ ಭಯ ಹೋಗಿಲ್ಲ. ನಾಟಕ ಆರಂಭವಾದರೆ ಜನರನ್ನು ನಿಯಂತ್ರಣ ಮಾಡುವುದೇ ಕಷ್ಟ. ಹೀಗಾಗಿ ಇನ್ನೊಂದಷ್ಟು ದಿನ ಕಾಯಲೇಬೇಕಾಗಿದೆ’ ಎಂದು ರಂಗನಟ, ನಿರ್ದೇಶಕ ಕಾಳೇನಹಳ್ಳಿ ಕೆಂಚೇಗೌಡ ಹೇಳಿದರು.

‘ಪೌರಾಣಿಕ ನಾಟಕಗಳಲ್ಲಿ ಕಂದಗಳನ್ನು ಹಾಡುವಾಗ ಒಬ್ಬರಿಗೊಬ್ಬರು ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ. ಮೇಕಪ್‌, ವೇಷಭೂಷಣದಿಂದಲೂ ರೋಗ ಹರಡಬಹುದು. ಹೀಗಾಗಿ ಪೌರಾಣಿಕ ನಾಟಕಗಳು ಇನ್ನೂ ಆರಂಭವಾಗಿಲ್ಲ’ ಎಂದು ನಿರ್ದೇಶಕ ಚನ್ನಪ್ಪ ಹೇಳಿದರು.

ತುಕ್ಕು ಹಿಡಿಯುತ್ತಿರುವ ಸೀನರಿಗಳು: ಮಂಡ್ಯ ಜಿಲ್ಲೆಯಲ್ಲಿ ಪೌರಾಣಿಕ ನಾಟಕ ಸೀನರಿಗಳಿಗೇ ದೊಡ್ಡ ಇತಿಹಾಸವಿದೆ. ಜಗಮಗಿಸುವ ಬೆಳಕಿನ ಡ್ರಾಮಾ ಸೀನರಿಗಳನ್ನು ನೋಡಬೇಕು ಎಂದರೆ ಮಂಡ್ಯಕ್ಕೆ ಬರಬೇಕು. ನಾಟಕ ಕಲಾವಿದರು ಕಾಲರ್‌ ಮೈಕ್‌ ಬಳಸಿ ಪಾತ್ರ ಮಾಡುವ ಆಧುನಿಕ ತಂತ್ರಜ್ಞಾನವನ್ನು ಮೊದಲ ಬಾರಿಗೆ ಸಕ್ಕರೆ ನಾಡಿನ ಕಲಾವಿದರು ಮೈಗೂಡಿಸಿಕೊಂಡರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಭಾಂಗಣದ ಸುತ್ತಲೂ ಎಲ್‌ಇಡಿ ಪರದೆ ಅಳವಡಿಸಿ ದೃಶ್ಯಗಳನ್ನು ಸೃಷ್ಟಿಸುವ ತಂತ್ರಜ್ಞನಕ್ಕೂ ಚಾಲನೆ ನೀಡಿದರು.

ಆಧುನಿಕ ಯುಗದಲ್ಲೂ ಅತೀ ಹೆಚ್ಚು ಡ್ರಾಮ ಸೀನರಿಗಳನ್ನು ಹೊಂದಿದ ಕೀರ್ತಿ ಮಂಡ್ಯ ಜಿಲ್ಲೆಗೆ ಸಲ್ಲುತ್ತದೆ. ಸದ್ಯ ನಗರದಲ್ಲಿ 10 ಸೀನರಿ ಕಂಪನಿಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ಕಳೆದ 45 ವರ್ಷಗಳಿಂದ ನಡೆಯುತ್ತಿರುವ ‘ಉಮೇಶ ಡ್ರಾಮ ಸೀನರಿ’ ಹೆಚ್ಚು ಪ್ರಸಿದ್ಧಿ ಪಡೆದಿದೆ. ಕಾರಸವಾಡಿ ಶಿವಲಿಂಗೇಗೌಡ ಅವರು ‘ಶಿವ ಡ್ರಾಮಾ ಸೀನರಿ’ ನಡೆಸುತ್ತಿದ್ದಾರೆ. ಕಲ್ಲಹಳ್ಳಿಯ ಸಿದ್ದರಾಮಣ್ಣ ಅವರು ‘ಕಾವೇರಿ ಸೀನರಿ’ ಮುನ್ನಡೆಸುತ್ತಿದ್ದಾರೆ.

ರಾಜೇಂದ್ರ ಪ್ರಸಾದ್ ಅವರು ‘ಲಕ್ಷ್ಮಿದೇವಿ ಸೀನರಿ’ ಮಾಲೀಕರಾಗಿದ್ದಾರೆ. ಇವರು ಸಾಮಾಜಿಕ ನಾಟಕಗಳಿಗೂ ಸೀನರಿ ಕೊಡುತ್ತಾರೆ. ಆಬಲವಾಡಿ ಹೊನ್ನೇಗೌಡ ಅವರು ‘ವಿನಾಯಕ ಸೀನರಿ’ ನಡೆಸುತ್ತಿದ್ದಾರೆ. 30 ವರ್ಷಗಳಿಂದ ಪೇಟೆ ಬೀದಿಯ ಮಾರ್ಕೆಟ್‌ ನಾರಾಯಣಪ್ಪ ‘ರಾಘವೇಂದ್ರ ಡ್ರಾಮ ಸೀನರಿ’ ನಡೆಸುತ್ತಿದ್ದಾರೆ. ನ್ಯೂ ಇಂದ್ರ ಸೀನರಿಯನ್ನು ಗೆಜ್ಜಲಗೆರೆ ಹರೀಶ್‌ ನಡೆಸುತ್ತಿದ್ದಾರೆ. ಚಿದಂಬರ್‌ ಅವರು ಹಲವು ದಶಕಗಳಿಂದ ರಾಜರಾಜೇಶ್ವರಿ ಡ್ರಾಮ ಸೀನರಿ ನಡೆಸುತ್ತಿದ್ದಾರೆ. ದೊಡ್ಡರಸಿನಕೆರೆ ಚೇತನ್‌ ಅವರು ವಜ್ರೇಶ್ವರಿ ಡ್ರಾಮ ಸೀನರಿ ಮಾಡಿದ್ದು ಕಲಾವಿದರಿಗೆ ಹಲವು ಸೌಲಭ್ಯ ಕೊಟ್ಟಿದ್ದಾರೆ.

ಈಗ ಕೋವಿಡ್‌ನಿಂದಾಗಿ ಡ್ರಾಮ ಸೀನಗರಿಗಳಿಗೆ ಬೇಡಿಕೆ ಇಲ್ಲವಾಗಿದ್ದು ಪರಿಕರಗಳು ತುಕ್ಕು ಹಿಡಿಯುತ್ತಿವೆ. ಅವುಗಳನ್ನು ನಿರ್ವಹಣೆ ಮಾಡುವುದೇ ಮಾಲೀಕರಿಗೆ ಕಷ್ಟವಾಗಿದೆ. ‘ಮಂಡ್ಯದ ಡ್ರಾಮ ಸೀನಗರಿಗಳು ಕೇವಲ ಮಂಡ್ಯ ಜಿಲ್ಲೆಗಷ್ಟೇ ಸೀಮಿತವಾಗಿಲ್ಲ. ಇಲ್ಲಿಂದ ಬೆಂಗಳೂರು, ಮೈಸೂರು, ಮಧುಗಿರಿ, ಕೋಲಾರ, ತುಮಕೂರು ಕಡೆಗೂ ಹೂಗುತ್ತವೆ. ಕೆಲವರು ತಮಿಳುನಾಡಿನಲ್ಲೂ ಸೀನರಿ ಹಾಕಿದ್ದಾರೆ. ಕೋವಿಡ್‌ ಪರಿಸ್ಥಿತಿ ತಿಳಿಯಾಗಿ ಸೀನರಿ ಹಾಕುವ ಅವಕಾಶಕ್ಕೆ ಕಾಯುತ್ತಿದ್ದೇವೆ’ ಎಂದು ಸೀನರಿ ಮಾಲೀಕರಾದ ರಮೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT