ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ನಾಟಕಕಾರ ಹಬೀಬ್‌ ತನ್ವೀರ್‌ ಜನುಮದಿನ

Last Updated 1 ಸೆಪ್ಟೆಂಬರ್ 2020, 13:48 IST
ಅಕ್ಷರ ಗಾತ್ರ

ಭಾರತದ ಆಧುನಿಕರಂಗಭೂಮಿಯಲ್ಲಿ ಹಬೀಬ್‌ ತನ್ವೀರ್‌ ಅವರದು ಅಗ್ರಗಣ್ಯ ಹೆಸರು.ರಂಗ ನಿರ್ದೇಶಕ, ನಾಟಕಕಾರ, ನಟ, ಕವಿಯಾಗಿ ರಂಗಭೂಮಿ ಮತ್ತು ಸಿನಿಮಾಕ್ಷೇತ್ರಗಳಿಗೆ ತಮ್ಮದೇ ಕಾಣಿಕೆಯನ್ನು ನೀಡಿದವರು ತನ್ವೀರ್‌.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ‌ ಸಂಪಾದಿಸಿರುವ ‘ಭಾರತೀಯ ರಂಗಭೂಮಿ’ ಪುಸ್ತಕವು, ‘ಸ್ವಾತಂತ್ರ್ಯೋತ್ತರ ಭಾರತದ ಅತಿ ಪ್ರಮುಖ ರಂಗತಜ್ಞ, ನಾಟಕಕಾರ’ ಎಂದು ತನ್ವೀರ್ ಅವರನ್ನು‌ ಬಣ್ಣಿಸಿದೆ.

1929ರ ಸೆ.1ರಂದು ಛತ್ತೀಸ್‌ಗಡದ ರಾಯ್‌ಪುರದಲ್ಲಿ ಜನಿಸಿದತನ್ವೀರರ ಹುಟ್ಟು ಹೆಸರು ಹಬೀಬ್‌ ಅಹ್ಮದ್‌ ಖಾನ್‌. ‘ತನ್ವೀರ್’ ಎಂಬ ಕಾವ್ಯನಾಮದಲ್ಲಿ ಕವಿತೆಗಳನ್ನು ಅವರು ಬರೆಯಲು ಆರಂಭಿಸಿದ ನಂತರ ಹಬೀಬ್‌ ತನ್ವೀರ್‌ ಎಂದು ತಮ್ಮ ಹೆಸರನ್ನು ಕರೆದುಕೊಂಡರು. ಅಲಿಗಢ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ 1945ರಲ್ಲಿ ಮುಂಬೈಗೆ ತೆರಳಿದ ಅವರು ಇಂಡಿಯನ್‌ ಪೀಪಲ್‌ ಅಸೋಸಿಯೇಷನ್‌ ಮತ್ತು ಪ್ರೋಗ್ರೆಸಿವ್‌ ರೈಟರ್‌ ಅಸೋಸಿಯೇಷನ್‌ಗಳಲ್ಲಿ ಬರೆಹಗಾರ, ನಟ ಮತ್ತು ಪತ್ರಕರ್ತರಾಗಿ ಕಾರ್ಯನಿರ್ವಹಿಸಿದರು. ಒಂಭತ್ತು ವರ್ಷಗಳ ನಂತರ ದೆಹಲಿಗೆ ತೆರಳಿ ನಾಟಕಗಳ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಸಕ್ರಿಯರಾದರು.

ಭಾರತೀಯ ರಂಗಭೂಮಿಗೆ ನೆಲಮೂಲ ಸಂಸ್ಕೃತಿಯ ಸ್ಪರ್ಶವನ್ನು ಅವರು ನೀಡಿದರು. ಛತ್ತೀಸಗಡದ ಬುಡಕಟ್ಟು ಸಮುದಾಯಗಳ ವಿಶಿಷ್ಟ ಪರಂಪರೆಯನ್ನು ರಂಗಭೂಮಿಗೆ ಪರಿಚಯಿಸಿದರು.1950ರ ದಶಕದಲ್ಲಿ ಯೂರೋಪ್‌ ಪ್ರವಾಸ ಕೈಗೊಂಡಿದ್ದಾಗ ಅಲ್ಲಿನ ಆಧುನಿಕ ರಂಗಭೂಮಿಯ ಪರಿಚಯವಾಯಿತು. ಭಾರತಕ್ಕೆ ಮರಳಿದ ನಂತರ ಯೂರೋಪ್‌ ರಂಗಭೂಮಿಯ ಅಂಶಗಳನ್ನು ತಮ್ಮ ನಾಟಕಗಳಲ್ಲಿ ಅಳವಡಿಸಿದರು. 1959ರಲ್ಲಿ ’ನಯಾ ಥಿಯೇಟರ್‌’ ರಂಗ ತಂಡವನ್ನು ಕಟ್ಟಿದರು. ತಂಡದ ನಾಟಕಗಳಿಗೆ ಛತ್ತೀಸ್‌ಗಡದ ಜಾನಪದ ಕಲಾವಿದರನ್ನು ಕರೆತಂದರು.ತಮ್ಮನಾಟಕಗಳಲ್ಲಿ ನಾಟಕೀಯತೆ, ಸಂಗೀತ ಮತ್ತು ಕಥನ ತಂತ್ರಗಳಿಗೆ ಹೆಚ್ಚು ಅವಕಾಶ ನೀಡಿದರು. ಹೀಗಾಗಿಯೇ ಆಧುನಿಕ ಮತ್ತು ಜಾನಪದದ ಅಂಶಗಳು ಅವರ ರಂಗಕೃತಿಗಳಲ್ಲಿ ಮೇಳೈಸಿದವು.

ಅವರು ಬರೆದ ಆಗ್ರಾ ಬಜಾರ್‌, ಜಿಸ್‌ ಲಾಹೋರ್‌ ನೈ ದೇಖ್ಯಾ ವೋ ಜನ್ಮ್ಯಾಹೀ ನೈ, ಚರಣ್‌ದಾಸ್‌ ಚೋರ್‌, ಗಾವ್‌ ನಾಮ್‌ ಸಸುರಾಲ್‌ ಮೊರ್‌ ನಾ ದಮಾದ್‌ ಸೇರಿದಂತೆ ಹಲವು ನಾಟಕಗಳು ಭಾರತೀಯ ರಂಗಭೂಮಿಗೆ ’ಮಾರ್ಗ’ ತೋರಿದವು.

ಹಬೀಬ್‌ ತನ್ವೀರ್‌ ಅವರು ತಮ್ಮ ರಂಗಭೂಮಿಯನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸುತ್ತಾ ಹೀಗೆ ಹೇಳುತ್ತಾರೆ.‘ನಾನು ಸಂಸ್ಕೃತಿಯನ್ನು ಸರಳವಾಗಿ ಎರಡು ರೀತಿಯಲ್ಲಿ ವಿಂಗಡಿಸುತ್ತೇನೆ. ಒಂದು ಶೋಷಕರ ಪರವಾದ ಸಂಸ್ಕೃತಿಯಾದರೆ ಮತ್ತೊಂದು ಶೋಷಿತರ ಪರವಾಗಿರುವಂಥದ್ದು. ಇವೆರಡರ ಮಧ್ಯೆ ನೀವು ಯಾರ ಪರ ಎಂಬುದನ್ನು ನಿರ್ಧರಿಸಿ? ಶೋಷಕರದೂ ಅಥವಾ ಶೋಷಿತರದೋ?’ ಎಂದು.’ ತನ್ವೀರ್‌ ಅವರ ರಂಗಭೂಮಿ ಮಾದರಿಯಲ್ಲಿ ಸಾಮಾಜಿಕ ನ್ಯಾಯ ಪ್ರತಿಪಾದನೆಯು ಸದಾ ವ್ಯಕ್ತವಾಗುತ್ತದೆ.

ಹೆಸರಾಂತ ನಟ ನಾಸಿರುದ್ಧೀನ್‌ ಶಾ ಅವರು ಹೀಗೆ ಹೇಳುತ್ತಾರೆ.‘ನಾನು ರಂಗಭೂಮಿಯ ನವ ಪೀಳಿಗೆಯೊಂದಿಗೆ ಮಾತನಾಡುವಾಗೆಲ್ಲ ಹಬೀಬ್‌ ತನ್ವೀರ್‌, ಬಿ.ವಿ.ಕಾರಂತ್‌, ಗಿರೀಶ್‌ ಕಾರ್ನಾಡ್‌, ಓಂ ಪುರಿ, ಶ್ಯಾಮ್‌ ಬೆನೆಗಲ್‌, ಸತ್ಯದೇವ್‌ ದುಬೆ ಅವರ ಹೆಸರನ್ನು ಹೇಳುತ್ತೇನೆ. ನಾನು ಯುವಕನಾಗಿದ್ದಾಗ ಇವರೆಲ್ಲರೂ ನನಗೆ ಮಾದರಿಯಾಗಿದ್ದರು’ ಎಂದು. ಅವರ ಈ ಹೇಳಿಕೆಯು 50–70ರ ದಶಕದ ರಂಗಭೂಮಿಯ ಶ್ರೀಮಂತಿಕೆಯನ್ನು ಹೇಳುತ್ತದೆ.

‘ತನ್ವೀರ್‌ ಜೀ ತಮ್ಮ ಸುತ್ತಲಿನವರೆಲ್ಲರನ್ನೂ ಸದಾ ನಗಿಸುತ್ತಿದ್ದರು. ಅಲ್ಲದೇ, ಮುಖ್ಯವಾದ ವಿಷಯಗಳನ್ನು ಸರಳಗೊಳಿಸಿ ಹೇಳಿಬಿಡುತ್ತಿದ್ದರು. ದೆಹಲಿಯ ಇಂದ್ರಪ್ರಸ್ಥ ಮಹಿಳಾ ಕಾಲೇಜಿನಲ್ಲಿ ನಾಟಕ ಆಗ್ರಾ ಬಜಾರ್‌ ಪ್ರದರ್ಶನವಿದ್ದಾಗ ಅವರನ್ನು ಭೇಟಿಯಾಗಿದ್ದೆ. ಸಭಾಂಗಣದ ಮೂಲೆಯಲ್ಲಿ ಕುಳಿತು ಯಾರು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ಅವರು ಗಮನವಿಡುತ್ತಿದ್ದರು. ಸದಾ ಅವರ ತಲೆಯಲ್ಲಿ ನಾಟಕ ತಯಾರಿಯೇ ತುಂಬಿತ್ತು. ಎಲ್ಲ ಸಮಯದಲ್ಲೂ ಅವರದೂ ಒಂದೇ ಎನರ್ಜಿ’ ಎಂದು ತನ್ವೀರರನ್ನು ನೆನೆಯುತ್ತಾರೆ ನಟಿ ಸಯಾನಿ ಗುಪ್ತಾ.

ತನ್ವೀರ್‌ ಅವರಿಗೆ 1969ರಲ್ಲಿ ಸಂಗೀತ ನಾಟಕ ಅಕಾಡೆಮಿ, 1979ರಲ್ಲಿ ಜವಹರಲಾಲ್‌ ನೆಹರೂ ಫೆಲೋಶಿಪ್, 1983ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ ಸಂದಿವೆ.2009ರ ಜೂನ್‌ 8ರಂದು ಅವರು ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT