ಗುರುವಾರ , ಆಗಸ್ಟ್ 6, 2020
24 °C

ರಂಗಭೂಮಿಯ ‘ಪ್ರಕಾಶ’

ಗುಡಿಹಳ್ಳಿ ನಾಗರಾಜ Updated:

ಅಕ್ಷರ ಗಾತ್ರ : | |

Prajavani

ತನ್ನ ಅಭಿನಯಕ್ಕೆ ತಾನೇ ಮನಸೋಲುವ, ತನ್ನ ರಾಗ ಸಂಯೋಜನೆಗೆ ತಾನೇ ಸಾಟಿ ಎನ್ನುವ ಪ್ರಕಾಶ್ ಕಡಪಟ್ಟಿ ಅವರೀಗ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

***

ಪ್ರಕಾಶ ಕಡಪಟ್ಟಿ ಹಾಡು ನಟ. ಅವರ ನಟನೆಯಲ್ಲಿ ಒಂದು ವಿಶೇಷತೆ ಇದೆ. ಪ್ರಕಾಶಗೆ ಕಡಪಟ್ಟಿಯೇ ಸಾಟಿ ಎಂಬ ಆಕರ್ಷಣೆ ಅದು. ಜನಪ್ರಿಯ ನಾಟಕಗಳನ್ನು ರಚಿಸಿದ ಕೆಲವೇ ನಾಟಕಕಾರರಲ್ಲಿ ಕಡಪಟ್ಟಿ ಪ್ರಮುಖರು.

ಇವರ ವಿಶಿಷ್ಟ ನಟನೆ, ನಾಟಕ ರಚನೆ ಒಂದು ತೂಕವಾದರೆ; ರಂಗಗೀತೆಗಳ ಸಂಯೋಜನೆ ಮತ್ತೊಂದು ತೂಕ. ಹೆಸರಾಂತ ಹಿಂದಿ ಚಿತ್ರಗೀತೆಗಳ ಧಾಟಿಯಲ್ಲಿ ಕನ್ನಡ ರಂಗಗೀತೆಗಳನ್ನು ಹಾಡಿ, ಹಾಡು ರಚಿಸಿ ಅವನ್ನು ಜನಪ್ರಿಯತೆಯ ತುತ್ತತುದಿಗೇರಿಸಿದರು.

ತಂದೆ ಶಂಕರಯ್ಯ ಸಾರಥ್ಯದಲ್ಲಿ 1967ರಲ್ಲಿ ‘ಶ್ರೀ ಗುರುಪ್ರಸಾದ ನಾಟ್ಯಸಂಘ’ ಎಂಬ ಕಂಪನಿ ಕಟ್ಟಿ 1990ರವರೆಗೆ ಅದನ್ನು ನಡೆಸುತ್ತಾರೆ. ತಂದೆ ರಚಿಸಿದ ‘ಮದನ ಮೋಹನ’, ‘ಬಹದ್ದೂರು ಮಗ’, ‘ಬೆಂಗಳೂರು ಬಾಬ’ ನಾಟಕ ಪ್ರಯೋಗಗಳೊಂದಿಗೆ ಕಂಪನಿ ಅಸ್ತಿತ್ವ ಸ್ಥಾಪಿಸುತ್ತದೆ. ಮುಂದೆ ಪ್ರಕಾಶ ರಚಿಸಿದ ‘ಚಿನ್ನದ ಗೊಂಬೆ’, ‘ಭಲೆ ಮಗಳೆ’, ‘ಸತಿ ಸಂಸಾರದ ಜ್ಯೋತಿ’, ‘ಭೂಮಿ ತೂಕದ ಹೆಣ್ಣು’, ‘ತವರು ಬಿಟ್ಟ ತಂಗಿ’ ನಾಟಕಗಳ ಪ್ರಯೋಗಗಳು ಸಾಲುಗಟ್ಟುತ್ತವೆ. ಜೊತೆಗೆ ಇತರರ ಹೆಸರಾಂತ ನಾಟಕಗಳೂ ಇವರ ಕಂಪನಿಯಲ್ಲಿ ಪ್ರಯೋಗಗೊಳ್ಳುತ್ತವೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕು ಕಡಪಟ್ಟಿಯಲ್ಲಿ ಶಂಕರಯ್ಯ- ರಾಚವ್ವ ದಂಪತಿಗೆ 1948ರಲ್ಲಿ ಪ್ರಕಾಶ ಜನಿಸುತ್ತಾರೆ. ತುಂಡು ಹೊಲ ಇದ್ದರೂ ಡ್ರೈವರ್ ಕೆಲಸದಿಂದ ಶಂಕರಯ್ಯ ಜೀವನ ಸಾಗಿತ್ತು. ಅವರಿಗೆ ನಾಟಕದ ಹುಚ್ಚು. ಅದನ್ನು ಮಗನಿಗೂ ಹಚ್ಚುತ್ತಾರೆ. ಎಸ್‍ಎಸ್‍ಎಲ್‍ಸಿ ಗೆ ಬರುವ ಹೊತ್ತಿಗೆ ಮಗ ಪ್ರಕಾಶ ನಟನಾಗಿ ರೂಪುಗೊಳ್ಳುತ್ತಾನೆ. ಶಾಲೆಯಲ್ಲಿದ್ದಾಗಲೇ ವಿ.ಬಿ. ಕುಲಕರ್ಣಿ ಬರೆದ ‘ಕಲಿಯುಗದ ಕುಬೇರ’ ನಾಟಕದ ಕುಬೇರನಾಗಿ ಪ್ರಕಾಶ ಸೈ ಎನಿಸಿಕೊಳ್ಳುತ್ತಾನೆ.

ನಾಟಕ ಕಂಪನಿ ಆರಂಭ

ಶಂಕರಯ್ಯ ತಾವೇ ರಚಿಸಿದ ‘ಮದನ ಮೋಹನ’ ನಾಟಕ ಪ್ರಯೋಗದಿಂದ ರಬಕವಿಯಲ್ಲಿ ನಾಟಕ ಕಂಪನಿ ಆರಂಭಿಸಿ ಮಗನನ್ನು ಜೊತೆಗೆ ಕರೆದೊಯ್ಯುತ್ತಾರೆ. ಗೋಕಾಕ, ಹುಬ್ಬಳ್ಳಿ ಮುಂತಾದ ಕಡೆ ನಾಟಕಗಳು ಯಶಸ್ಸು ಪಡೆದು ಹತ್ತಾರು ಪ್ರಯೋಗ ಕಾಣುತ್ತವೆ.

ಗಲಗಲಿಯಲ್ಲಿ ನಾಟಕ ಕಂಪನಿ ಕ್ಯಾಂಪ್ ಮಾಡಿದಾಗ ಮಗನಿಗೆ ಒಬ್ಬ ನಟಿಯೊಂದಿಗೆ ಶಂಕರಯ್ಯ ಮದುವೆ ಮಾಡಿಸುತ್ತಾರೆ. ಅವರು ಬೇರಾರೂ ಅಲ್ಲ. ವೃತ್ತಿರಂಗಭೂಮಿಯ ಹೆಸರಾಂತ ನಟಿ ಸುನಂದಾ ಕಡಪಟ್ಟಿ. ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕು ಬೋಗಾಪುರದಲ್ಲಿ ಜನಿಸಿದ ಸುನಂದಾ ಬಾಲ್ಯದಲ್ಲೇ ಗುಬ್ಬಿ ಕಂಪನಿ ಸೇರಿರುತ್ತಾರೆ. ಅಲ್ಲಿ ನಟನೆಯ ಪಾಠ ಕಲಿತಿದ್ದ ಸುನಂದಾಗೆ ಮದುವೆಯಾದ ಮೇಲೆ ತಮ್ಮದೇ ಅಖಾಡ ದೊರೆಯುತ್ತದೆ. ಪ್ರಕಾಶ ಮತ್ತು ಸುನಂದಾ ಅನುರೂಪವಾದ ಜೋಡಿ. ಪ್ರಕಾಶ ಪ್ರತಿ ನಾಟಕ ರಚನೆಯ ಸಂದರ್ಭದಲ್ಲೂ ಪತ್ನಿಯೊಂದಿಗೆ ಚರ್ಚಿಸಿಯೇ ಮುಂದಡಿ ಇಡುತ್ತಾರೆ. ಸುನಂದಾ ಕೂಡ ಒಳ್ಳೆಯ ಹಾಡುಗಾರ್ತಿ. ಪ್ರತಿ ನಾಟಕದ ಕೊನೆಯಲ್ಲಿ ಈ ಜೋಡಿ ಕೆಲವು ಚಿತ್ರಗೀತೆಗಳನ್ನು ಹಾಡಲೇಬೇಕು. ಮುಂದೆ ಮಗಳು ವೀಣಾ ಕೂಡ ಉತ್ತಮ ನಟಿಯಾಗಿ ರೂಪುಗೊಳ್ಳುತ್ತಾಳೆ.

ವಾಸ್ತವವೆನಿಸುವ ಭಾವುಕ ಸನ್ನಿವೇಶಗಳನ್ನು ಜನಪ್ರಿಯ ಅಂಶಗಳೊಂದಿಗೆ ಕಟ್ಟಿದ ಕಡಪಟ್ಟಿ ಅವರ ‘ಚಿನ್ನದ ಗೊಂಬೆ’, ‘ಚನ್ನಪ್ಪ ಚನ್ನಗೌಡ’, ‘ಭೂಮಿ ತೂಕದ ಹೆಣ್ಣು’, ‘ಸತಿ ಸಂಸಾರದ ಜ್ಯೋತಿ’, ‘ಮುತ್ತೈದೆಗೆ ಕುತ್ತು ಐದು’ ಮುಂತಾದ ನಾಟಕಗಳು ಒಂದಕ್ಕಿಂತ ಒಂದು ಹೆಸರಾಂತ ಎನಿಸಿಕೊಳ್ಳುತ್ತವೆ.

ಹಿಂದಿ ಚಿತ್ರಗೀತೆಗಳ ದಾಟಿಯಲ್ಲಿ ಕಟ್ಟಿದ ಹಾಡುಗಳಿಗೆ ಪ್ರೇಕ್ಷಕರು ಮುಗಿಬೀಳುತ್ತಾರೆ. ಗುಡಗೇರಿ ಬಸವರಾಜ ಅವರಂತೂ ತಮ್ಮ ಬಹುತೇಕ ನಾಟಕಗಳಿಗೆ ಪ್ರಕಾಶ ಅವರಿಂದ ಹಾಡು ಬರೆಸಿ ರಾಗ ಸಂಯೋಜಿಸುತ್ತಾರೆ. ನಾಟಕದ ಜನಪ್ರಿಯತೆ ಕೇಳಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಪೊಲೀಸ್ ಅಧಿಕಾರಿ ಸುಭಾಷ್ ಭರಣಿ ಮೇಲಿಂದ ಮೇಲೆ ಬಂದು ನಾಟಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. 1970ರ ದಶಕದಲ್ಲೇ ಬಂಗಾರಪ್ಪನವರು ನಾಟಕ ಕಂಪನಿಗೆ ₹ 25 ಸಾವಿರ ಆಯೇರ್ ಮಾಡುತ್ತಾರೆ.

ಗಲ್ಲಾಪೆಟ್ಟಿಗೆ ಲಕ್ಷವೇ ಇಲ್ಲ!

ರಾಜೇಶ್‍ ಖನ್ನಾನ ಹಾಗೇ ಕೂದಲಿಗೆ ಅಲಂಕಾರ ಮಾಡಿಕೊಂಡು ವಿಶೇಷವಾಗಿ ನಟಿಸುವ, ಹಾಡುವ ಹಾಗೂ ಅವರಿಗೆ ಸರಿಸಾಟಿಯಾಗಿ


ಪ್ರಕಾಶ ಕಡಪಟ್ಟಿ

ನಟಿಸುವ ಸುನಂದಾ ಅವರನ್ನು ನೋಡಲು ಜನ ಮುಗಿಬೀಳುತ್ತಾರೆ. ಪ್ರೇಕ್ಷಕರ ಈ ಪ್ರತಿಕ್ರಿಯೆಗೆ ಮನಸೋಲುವ ಮುಗ್ಧ, ಭಾವುಕ ಕಡಪಟ್ಟಿಯವರಿಗೆ ಗಲ್ಲಾಪೆಟ್ಟಿಗೆಯತ್ತ ಗಮನವೇ ಇಲ್ಲ. ಹೆಗ್ಗಣಗಳು ಒಳಗೇ ಬಿಲ ಕೊರೆಯುತ್ತವೆ. 1990ರಲ್ಲಿ ಅಂಕಲಗಿಯಲ್ಲಿ ಕಂಪನಿಗೆ ತೆರೆ ಬೀಳುತ್ತದೆ. ನಂತರ ದಂಪತಿ ನಿಷ್ಕ್ರಿಯರಾಗುವುದಿಲ್ಲ. ಅರಿಷಿಣಗೋಡಿಯವರ ಕಂಪನಿಯಲ್ಲಿ ಬಹಳ ಕಾಲ ನಟಿಸುತ್ತಾರೆ. ಅವರಿಗೆ ಹೊಸ ನಾಟಕಗಳನ್ನು ಕೂಡಿಸಿಕೊಡುತ್ತಾರೆ. ಅಕ್ಕಲಕೋಟೆ ರೇಣುಕಾ ಅವರ ನಾಟಕ ಕಂಪನಿಗೆ ಅನೇಕ ನಾಟಕಗಳನ್ನು ಪ್ರಕಾಶ ಕೂಡಿಸುತ್ತಾರೆ. ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶೇಖ ಮಾಸ್ತರ ಅವರ ನಾಟಕ ಕಂಪನಿಗೆ ನಾಟಕಗಳನ್ನು ಕೂಡಿಸುತ್ತಾರೆ, ನಟಿಸುತ್ತಾರೆ. ಪ್ರೇಮಾ ಗುಳೇದಗುಡ್ಡ ಅವರ ನಾಟಕ ಕಂಪನಿಗೆ ನಾಟಕಗಳನ್ನು ಕೂಡಿಸುತ್ತಾರೆ. ಪ್ರಕಾಶ ನಟಿಸಿ, ನಾಟಕಗಳನ್ನು ಕೂಡಿಸಿದ ಒಟ್ಟು ಕಂಪನಿಗಳು 15. ಪ್ರಕಟಿತ ಅಪ್ರಕಟಿತ ಸೇರಿ ರಚಿಸಿದ ನಾಟಕಗಳು 18. ರಾಗಸಂಯೋಜಿಸಿದ ರಂಗಗೀತೆಗಳು ನೂರಾರು. ಆದರೆ ಅವಕ್ಕೆ ಸರಿಯಾದ ದಾಖಲೆಗಳಿಲ್ಲ.

ಪ್ರಕಾಶ ಅತಿಯಾಗಿ ಹಚ್ಚಿಕೊಂಡಿದ್ದ ಅಪ್ಪ ಶಂಕರಯ್ಯ, ಪತ್ನಿ ಸುನಂದಾ 1999ರಲ್ಲಿ ನಿಧನರಾಗುತ್ತಾರೆ. ನಂತರ ಪ್ರಕಾಶ ಮೆತ್ತಗಾಗುತ್ತಾರೆ. ಆರೋಗ್ಯದ ಬಗ್ಗೆ ಅಶಿಸ್ತು ಅತಿಗೆ ಹೋಗುತ್ತದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಇನಾಮಕೊಪ್ಪದಲ್ಲಿ ಮಗಳು ವೀಣಾ ಬಳಿ ಆಗಾಗ ನೆಲಸಿರುತ್ತಾರೆ. ಆದರೆ ನಾಟಕ ರಚನೆ, ಕೂಡಿಸುವುದು, ಅಭಿನಯವನ್ನು ಈಗಲೂ ನಿಲ್ಲಿಸಿಲ್ಲ. ಅಂತೆಯೇ ಅವರು ಕಂಪನಿಯಿಂದ ಕಂಪನಿಗೆ ಸುತ್ತುತ್ತಾರೆ. ಅವರ ಸೃಜನಶೀಲ ಕ್ರಿಯೆ ಬತ್ತದ ಸೆಲೆ.

ಗುಬ್ಬಿ ವೀರಣ್ಣ ಪ್ರಶಸ್ತಿ

ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ಪ್ರಕಾಶ್ ಕಡಪಟ್ಟಿ ಅವರಿಗೆ ಇದೀಗ ಕನ್ನಡ ರಂಗಭೂಮಿಯ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಗುಬ್ಬಿ ವೀರಣ್ಣ ಪ್ರಶಸ್ತಿಯ ಗರಿ. ಕರ್ನಾಟಕ ನಾಟಕ ಅಕಾಡೆಮಿಯು ರಂಗಸಂಪನ್ನರು ಮಾಲಿಕೆಯಲ್ಲಿ ನಟಿ, ನಾಟಕಕಾರ್ತಿ ಪ್ರೇಮಾ ಬದಾಮಿ ಅವರಿಂದ ‘ಪ್ರಕಾಶ ಕಡಪಟ್ಟಿ’ ಜೀವನಚಿತ್ರ ಬರೆಸಿ ಪ್ರಕಟಿಸಿದೆ.

ಆರೋಗ್ಯದ ಬಗ್ಗೆ ಆ ಪರಿಯಾದ ಅಶಿಸ್ತು ಅವರಿಗಿದ್ದರೂ- 70ರ ನಂತರವೂ ಅವರು ಬದುಕಿರುವುದಕ್ಕೆ ಅವರ ಸೃಜನಶೀಲತೆಯೇ ಕಾರಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು