ಬುಧವಾರ, ಜೂನ್ 23, 2021
30 °C

ಪ್ರಭಾತ ಕಲಾವಿದರ ಶ್ರೀರಾಮ ಪ್ರತೀಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ಕಾರಣದಿಂದಾಗಿ ಕಲಾ ಕ್ಷೇತ್ರವೂ ಹಲವು ಸಂಕಷ್ಟಗಳನ್ನು ಎದುರಿಸುತ್ತಿದೆ. ಹಲವೆಡೆ ಪ್ರೇಕ್ಷಕರ ಸಂಖ್ಯೆ ನಿರ್ಬಂಧ ಹೇರಲಾಗಿದೆ. ಇನ್ನೂ ಕೆಲವೆಡೆ ಸಾಂಸ್ಕೃತಿಕ ಭವನ, ಕಲಾ ಕ್ಷೇತ್ರಗಳನ್ನೇ ಮುಚ್ಚಲಾಗಿದೆ. ಈ ರೀತಿಯ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರೇಕ್ಷಕರನ್ನು ಮುಟ್ಟಲು, ಜೊತೆಗೆ ಕಲೆಯನ್ನೂ ಉಳಿಸಲು ಪರ್ಯಾಯ ವ್ಯವಸ್ಥೆಯತ್ತ ಕಲಾ ತಂಡಗಳು ಹೆಜ್ಜೆ ಇಟ್ಟಿವೆ. ಇದೇ ರೀತಿಯ ಹೊಸ ಪರಿಕಲ್ಪನೆಯನ್ನು ಹೊತ್ತು ಪ್ರೇಕ್ಷಕರ ಮನೆಗೇ ತಲುಪಿದೆ ‘ಪ್ರಭಾತ ಕಲಾವಿದರು’ ತಂಡ. ಆನ್‌ಲೈನ್‌ ವೇದಿಕೆಯ ಸದ್ಬಳಕೆ ಮಾಡಿಕೊಂಡ ಈ ತಂಡವು, ‘ಶ್ರೀರಾಮ ಪ್ರತೀಕ್ಷ’ ನೃತ್ಯ ನಾಟಕವನ್ನು ವರ್ಚುವಲ್‌ ಪ್ಲ್ಯಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಿದೆ.

ಸುಮಾರು 75 ಕಲಾವಿದರು-ತಂತ್ರಜ್ಞರ ತಂಡ ಕೂಡಿ, ಈ ನೃತ್ಯ ನಾಟಕವನ್ನು ಕ್ರಿಯಾತ್ಮಕವಾಗಿ ಚಿತ್ರೀಕರಿಸಿದೆ. ಈ ನೃತ್ಯ ನಾಟಕ ಕನ್ನಡ ಭಾಷೆಯಲ್ಲಲ್ಲದೆ, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲೂ ನಿರ್ಮಾಣವಾಗಿದೆ.

‘ಶ್ರೀರಾಮ ಪ್ರತೀಕ್ಷ’, ಶ್ರೀರಾಮನ ನ್ಯಾಯ, ನಿಷ್ಠೆ, ಧರ್ಮ, ಕರ್ತವ್ಯ ಪರಿಪಾಲನೆ, ಒಟ್ಟಾರೆ ಶ್ರೀರಾಮನ ಪರಿಪೂರ್ಣ ವ್ಯಕ್ತಿತ್ವವನ್ನು ಬಿಂಬಿಸುವ ಸುಮಧುರ ಸಂಗೀತ, ನೃತ್ಯಗಳ ರಸದೌತಣವಾಗಿದೆ. ಶ್ರೀ ರಾಮಚಂದ್ರನಿಗಾಗಿ ಕಾಯುತ್ತ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅಹಲ್ಯೆ, ಸೀತೆ, ಹನುಮ, ಸುಗ್ರೀವ, ಭರತ, ಅಯೋಧ್ಯೆಯ ಪ್ರಜೆಗಳು ಹಾಗು ಎಲ್ಲಾ ಭಕ್ತರ ನಿರ್ಮಲ ಪ್ರೀತಿಯ ಸಂಕೇತವೇ ಶ್ರೀರಾಮ ಪ್ರತೀಕ್ಷ. ಶ್ರೀ ರಾಮನು, ಮಾರೀಚ ಸುಬಾಹುರನ್ನು ವಧಿಸುವ ಸನ್ನಿವೇಶದಿಂದ ಹಿಡಿದು ರಾವಣನನ್ನು ಸಂಹರಿಸುವ ದೃಶ್ಯದ ತನಕ, ಅತ್ಯಾಕರ್ಷವಾಗಿ ಜನರ ಮನಮುಟ್ಟುವಂತೆ ಇದನ್ನು ಚಿತ್ರೀಕರಿಸಲಾಗಿದೆ.

‘ಪ್ರಭಾತ ಕಲಾವಿದರು’ ಜೀವಂತ ವಾಹಿನಿಯಾಗಿ 86 ವರ್ಷಗಳಿಂದ ಭೋರ್ಗರಿಯುತ್ತಾ ಹರಿದುಬರುತ್ತಿದೆ. ನಮ್ಮ ನಾಡು-ದೇಶದ ಕಲೆ, ಇತಿಹಾಸ, ಸಂಸ್ಕೃತಿಯನ್ನು ನೃತ್ಯ ನಾಟಕಗಳ ಮೂಲಕ ಪ್ರಪಂಚದಾದ್ಯಂತ ಪಸರಿಸುತ್ತಾ ಬಂದಿದೆ. ಹಲವಾರು ಪೀಳಿಗೆಗಳನ್ನು ದಾಟಿ ನಡೆದಿದೆ. ಹರಿಕಥಾ ರತ್ನಾಕರ ಟಿ.ವಿ.ಗೋಪೀನಾಥ ದಾಸರು ತಮ್ಮ ಸಹೋದರರ ಸಹಕಾರದಿಂದ 1935ರಲ್ಲಿ ಪೌರಾಣಿಕ ನಾಟಕಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ‘ಪ್ರಭಾತ ಕಲಾವಿದರು’ ಸಂಸ್ಥೆಯನ್ನು ಸ್ಥಾಪಿಸಿದರು. 1963ರಲ್ಲಿ ಮಹಾಭಾರತದ ಕೀಚಕವಧೆ ಪ್ರಸಂಗವನ್ನು ಪ್ರಧಾನಾಂಶವಾಗಿಟ್ಟುಕೊಂಡು ಗೋಪೀನಾಥ ದಾಸರು ‘ವಿಜಯೋತ್ಸವ’ ನಾಟಕವನ್ನು ಪ್ರದರ್ಶಿಸಿದರು.

ಸಾಮಾನ್ಯವಾಗಿ ಪೌರಾಣಿಕ ಹಾಗು ಐತಿಹಾಸಿಕ ನಾಟಕಗಳಲ್ಲಿ ಬಳಸುತ್ತಿದ್ದ ಅರಮನೆ, ಕಾಡು ಮುಂತಾದ ರಂಗುರಂಗಿನ ಪರದೆಗಳನ್ನು (painted screen) ಬಳಸುವುದನ್ನು ನಿಲ್ಲಿಸಿ, ಈ ನಾಟಕದ ಪ್ರಯೋಗಗಳಲ್ಲಿ, ಕಪ್ಪು ಹಾಗೂ ನೀಲಿ ಬಣ್ಣದ ಪರದೆಗಳನ್ನು ಬಳಸಲಾಯಿತು. ದೃಶ್ಯಗಳಿಗೆ ಅನುಗುಣವಾಗಿ ಬಣ್ಣದ ಬೆಳಕಿನ ವ್ಯವಸ್ಥೆಯನ್ನು ಅಂದರೆ ಕಾಡಿನ ದೃಶ್ಯಕ್ಕೆ ಹಸಿರು, ನದಿಯನ್ನು ಸೂಚಿಸುವುದಕ್ಕೆ ನೀಲಿ, ಹೀಗೆ ಸಾಂಕೇತಿಕವಾಗಿ ಬಳಸಿ, ನಾಟಕ ರಂಗದಲ್ಲಿ ಒಂದು ನೂತನ ಆವಿಷ್ಕಾರ ಸೃಷ್ಟಿಸಿದರು.

1969ರಲ್ಲಿ ಪ್ರಭಾತ ಕಲಾವಿದರು, ಗೋಪೀನಾಥ ದಾಸರ ನಿರ್ದೇಶನದಲ್ಲಿ ಬ್ಯಾಲೆ-ನೃತ್ಯ ನಾಟಕಗಳನ್ನು ಪ್ರದರ್ಶಿಸಲು ತೊಡಗಿತು. ದಕ್ಷಿಣ ಭಾರತದಲ್ಲಿ ಇಂತಹ ಧ್ವನಿ ಮುದ್ರಿತ (pre recorded music) ನೃತ್ಯ ನಾಟಕಗಳ ಪ್ರಯೋಗ ಮಾಡಿದ ಹೆಗ್ಗಳಿಕೆ ಪ್ರಭಾತ ಕಲಾವಿದರದ್ದು. ಇದು ರಂಗಭವನ ನಾದತರಂಗಗಳಿಂದ ರಾರಾಜಿಸುವಂತೆ ಮಾಡಿತ್ತು. 

‘ಗೋವಿನ ಕಥೆ’, ‘ಕಿಂದರ ಜೋಗಿ’ ಇವು ಜಾನಪದದ ಕಥೆಗಳಾದರೆ, ‘ಧರ್ಮಭೂಮಿ’, ‘ಕರ್ನಾಟಕ ವೈಭವ’ ಮುಂತಾದವುಗಳು ಇತಿಹಾಸದ ಹಿನ್ನಲೆಯ ವಸ್ತುಗಳಾಗಿದ್ದವು. ಆದರೂ ಪೌರಾಣಿಕ ಕಥೆಗಳನ್ನು ಸಂಸ್ಥೆಯು ಕೈ ಬಿಟ್ಟಿರಲಿಲ್ಲ. ‘ಮೋಹಿನಿ ಭಸ್ಮಾಸುರ’, ‘ಭಗವದ್ಗೀತೆ’ ‘ಪಾಶುಪತಾಸ್ತ್ರ’ ಮುಂತಾದ ಪುರಾಣ ವಸ್ತುಗಳ ಆಯ್ಕೆಯೂ ಇತ್ತು.

ಇವುಗಳೊಂದಿಗೆ ಪಾಶ್ಚಿಮಾತ್ಯ ಕಥಾಹಂದರವನ್ನು ಹೊಂದಿದ ‘ಸಿಂಡ್ರೆಲಾ’ ನೃತ್ಯ ನಾಟಕವನ್ನೂ ಗೋಪೀನಾಥ ದಾಸರು ಜನಸಾಮಾನ್ಯರಿಗೆ ಅರ್ಪಿಸಿದ್ದರು. ಅತ್ಯಾಧುನಿಕ ಬೆಳಕು ಹಾಗೂ ಧ್ವನಿ ತಂತ್ರಜ್ಞಾನದಿಂದ ಕೂಡಿದ್ದ ಈ ನೃತ್ಯ ನಾಟಕ ಜನರನ್ನು ವಿಸ್ಮಿತರನ್ನಾಗಿಸಿತ್ತು. ದೇಶಾದ್ಯಂತ ಜನರಿಗೆ ಅದ್ಭುತ ಮನರಂಜನೆ ನೀಡಿದ ಸಿಂಡ್ರೆಲಾ, ಸಾವಿರಾರು ಪ್ರದರ್ಶನಗಳನ್ನು ಪೂರೈಸಿತು. 

1982ರ ನಂತರ, ಸಂಸ್ಥೆಯ ರೂವಾರಿ ಗೋಪೀನಾಥ ದಾಸರು ದಿವಂಗತರಾದ ಮೇಲೆ, ಅವರ ಹಿರಿಯ ಮಗನಾದ ಟಿ.ಜಿ. ವೆಂಕಟೇಶಾಚಾರ್, ಅವರ ಮಕ್ಕಳು ಹಾಗೂ ಅವರ ಸಹೋದರರು, ಓಡುತ್ತಿದ್ದ ‘ಪ್ರಭಾತ ಕಲಾವಿದರು’ ರಥದ ಚುಕ್ಕಾಣಿ ಹಿಡಿದು ‘ಶ್ರೀನಿವಾಸ ಕಲ್ಯಾಣ’, ‘ಶ್ರೀ ಕೃಷ್ಣ ವೈಜಯಂತಿ’, ‘ಶ್ರೀರಾಮ ಪ್ರತೀಕ್ಷ’, ‘ಮಹಿಷಾಸುರ ಮರ್ಧಿನಿ’, ‘ಹರಿಭಕ್ತ’, ‘ಕರುನಾಡ ವೈಭವ’, ‘ಶ್ರೀ ಕೃಷ್ಣದೇವರಾಯ’ ಮುಂತಾದ ನೃತ್ಯ ನಾಟಕಗಳ ಯಶಸ್ವಿ ಪ್ರಯೋಗಗಳನ್ನು ಮಾಡುತ್ತಿದ್ದಾರೆ.

ರೇಷ್ಮೆ ವಸ್ತ್ರದ ಉಗಮದ ಕಥಾವಸ್ತುವನ್ನೊಳಗೊಂಡ ‘ಕ್ರೌನ್ ಆಫ್ ಕ್ರಿಯೇಷನ್’ (ದಿವ್ಯ ಸೃಷ್ಟಿ), ಪರಿಸರದ ಪ್ರಾಮುಖ್ಯತೆಯನ್ನು ಹೇಳುವ ‘ಅಭಿಜ್ಞಾನ’ ಯಶಸ್ವಿಯಾಗಿ ಹೊರಬಂದ ಇತರೆ ಕಾರ್ಯಕ್ರಮಗಳು. ಈ ನೃತ್ಯ ನಾಟಕಗಳ ಪ್ರದರ್ಶನ ಭಾರತದಲ್ಲಲ್ಲದೆ, ಅಮೆರಿಕ, ಸಿಂಗಪುರ, ಕುವೈತ್‌, ಮಸ್ಕತ್‌, ಕತಾರ್‌ ದೇಶಗಳಲ್ಲೂ ನಡೆದಿದೆ. ಇದರಲ್ಲಿ ಹಲವಾರು ನೃತ್ಯ ನಾಟಕಗಳು ಕನ್ನಡ ಭಾಷೆಯ ಜೊತೆಗೆ, ಹಿಂದಿ, ಇಂಗ್ಲಿಷ್‌, ತೆಲುಗು, ತಮಿಳು, ಸಂಸ್ಕೃತ ಭಾಷೆಗಳಿಗೂ ಭಾಷಾಂತರಗೊಂಡು ಪ್ರಪಂಚದಾದ್ಯಂತ ಸಾವಿರಾರು ಪ್ರದರ್ಶನಗಳನ್ನು ಕಂಡಿದೆ. 

ಶ್ರೀರಾಮ ಪ್ರತೀಕ್ಷ ನಾಟಕವು ವಾಲ್ಮೀಕಿ ರಾಮಯಣ, ದಾಸ ಸಾಹಿತ್ಯದ ಆಧಾರದಲ್ಲಿ ವಿಜಯನಾರಸಿಂಹ ಅವರಿಂದ ರಚಿತವಾಗಿದೆ. ಪಂಡಿತ್ ವಿಜಯರಾಘವ ರಾವ್ ಅವರ ಇಂಪಾದ ಸಂಗೀತ ಇದಕ್ಕಿದೆ. ಉಡುಪಿ ಲಕ್ಷ್ಮೀನಾರಾಯಣಾಚಾರ್ಯ ಹಾಗೂ ಹೇಮಾ ಪ್ರಭಾತ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಹರೀಶ್‌ ಪ್ರಭಾತ್‌ ಅವರ ತಾಂತ್ರಿಕ ನಿರ್ದೇಶನದ ಪ್ರಭಾವ ವರ್ಚುವಲ್‌ನಲ್ಲಿ ನಾಟಕದ ಸೊಬಗು ಹೆಚ್ಚಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು