ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನವಮಿ ಸಂಗೀತೋತ್ಸವ ಮನಸೋತ ಕಲಾಸಕ್ತರು

Last Updated 8 ಮೇ 2019, 20:00 IST
ಅಕ್ಷರ ಗಾತ್ರ

ಶ್ರೀರಾಮಸೇವಾ ಮಂಡಳಿಯ ರಾಮನವಮಿ ಅಂತರರಾಷ್ಟ್ರೀಯ ಸಂಗೀತೋತ್ಸವ ಸೋಮ ವಾರ ಸಮಾರೋಪಗೊಂಡಿತು. 81 ವರ್ಷದ ಇತಿಹಾಸವಿರುವ ಈ ಸಂಗೀತೋತ್ಸವದ ರಸದೌತಣಕ್ಕೆ ಚಾಮರಾಜಪೇಟೆಯ ಕೋಟೆ ಮೈದಾನ ನಿತ್ಯ ಕಿಕ್ಕಿರಿದ ಪ್ರೇಕ್ಷಕರಿಂದ ತುಂಬಿರುತ್ತಿತ್ತು.

ಇಲ್ಲಿನ ಸಂಗೀತ ಲೋಕಕ್ಕೆ ಮಾರು ಹೋಗದವರೇ ಇಲ್ಲ. ಇಡೀ ವಾತಾವರಣ ‘ದೇವರ ಮನೆಯಷ್ಟು ಪವಿತ್ರ’ ಎಂಬುದು ಕಲಾಸಕ್ತರ ಮಾತು.

ಪ್ರಬುದ್ಧ ಪ್ರೇಕ್ಷಕರು

ನಾನು ಪ್ರತಿ ವರ್ಷ ರಾಮಸೇವಾ ಮಂಡಳಿಯ ಸಂಗೀತೋತ್ಸವ ಕೇಳಲು ಹೋಗುತ್ತೇನೆ. ಇಲ್ಲಿ ಸಂಗೀತದ ಗಂಧ–ಗಾಳಿ ಗೊತ್ತಿಲ್ಲದವರು ಬರುವುದು ತೀರಾ ಕಡಿಮೆ. ಪ್ರಬುದ್ಧ ಪ್ರೇಕ್ಷಕರ ಜೊತೆ ಕಾಲ ಕಳೆಯುವುದು, ಸಂಗೀತ ಕೇಳುವುದು ಎಂದರೆ ಹಬ್ಬವೇ ಸರಿ.

ಸ್ನೇಹಿತರೆಲ್ಲಾ ಒಟ್ಟಿಗೆ ಹೋಗಿ ಸಂಗೀತ ಕೇಳುತ್ತೇವೆ. ಈ ಮಂಡಳಿಯ ಜೊತೆ ನಮಗೆ ಭಾವನಾತ್ಮಕ ಸಂಬಂಧ ಇದೆ. ಬಾಂಬೆ ಜಯಶ್ರೀ ಅವರ ಸಂಗೀತವನ್ನು ಮೊದಲ ದಿನ ಕೇಳಿದೆ. ತುಂಬಾ ಇಷ್ಟವಾಯಿತು. ರಂಜನಿ ಹಾಗೂ ಗಾಯತ್ರಿ ಅಮೋಘವಾಗಿ ಹಾಡಿದರು. ಐದು ಸಾವಿರ ಕಲಾಸಕ್ತರು ಒಂದೇ ಕಡೆ ಕೂರುವ ಅವಕಾಶ ಇದೆ. ದೂರದ ಊರಿನಿಂದ ಬಂದವರು ಒಂದು ತಿಂಗಳು ಬಾಡಿಗೆ ಮನೆಯಲ್ಲಿ ಉಳಿದುಕೊಂಡು ಸಂಗೀತ ಕೇಳಲು ಬರುತ್ತಾರೆ. ಇದಲ್ಲಾ ಇಲ್ಲಿ ಮಾತ್ರ ನೋಡಲು ಸಿಗುತ್ತದೆ.

- ಎಸ್‌.ಕೇಶವಮೂರ್ತಿ, ಗಾಯನ ಸಮಾಜದ ಮಾಜಿ ಕಾರ್ಯದರ್ಶಿ, ಬಾಲಸುಬ್ರಹ್ಮಣ್ಯಂ ಕಛೇರಿ

ಮಿಸ್‌ ಆಯಿತು

ಆ ದಿನ ನಾನು ಊರಲ್ಲಿ ಇರಲಿಲ್ಲ. ಬಾಲಸುಬ್ರಹ್ಮಣ್ಯಂ ಅವರ ಕಛೇರಿಯನ್ನು ಕೇಳಲು ಆಗಲಿಲ್ಲ ಎಂಬ ಬೇಸರ ಉಳಿದುಕೊಂಡಿತು. ಉದಯೋನ್ಮುಖ ಕಲಾವಿದರು ಕೂಡ ಇಲ್ಲಿ ಕಛೇರಿ ನೀಡುವ ಅವಕಾಶ ಇದೆ. ಇಲ್ಲಿ ಸಂಗೀತಕ್ಕೆ ಮಾತ್ರ ಪ್ರಾಧಾನ್ಯತೆ ಕೊಡುವುದಿಲ್ಲ. ಬದಲಾಗಿ ತಾಳ ವಾದ್ಯಗಳಿಗೂ ಅಷ್ಟೇ ಪ್ರಾಮುಖ್ಯತೆ ಇದೆ. ಜುಗಲ್‌ಬಂದಿಗೆ ಕೂಡ ಅವಕಾಶ ಇದೆ. ಬೇರೆ ಸಂಗೀತ ಕಾರ್ಯಕ್ರಮಗಳು ಕೇವಲ ಹಾಡುಗಾರರಿಗೆ ಮಾತ್ರ ಹೆಚ್ಚಿನ ಅವಕಾಶ ನೀಡುತ್ತವೆ.

- ಬಾಲು ಮಾಸ್ತಿ, ವೀಣಾ ವಾದಕರು

ಜುಗಲ್‌ಬಂದಿ ವಿಶೇಷ

ಪಿಟೀಲು ಸೇರಿದಂತೆ ತಾಳ ವಾದ್ಯಗಳಿಗೂ ಜುಗಲ್‌ಬಂದಿಗೆ ಅವಕಾಶ ಸಿಕ್ಕಿದೆ. ನಮ್ಮ ತಾತನ ಕಾಲದಿಂದಲೂ ಈ ಮಂಡಳಿಯ ಸಂಗೀತೋತ್ಸವಕ್ಕೆ ಹೋಗುತ್ತಿದ್ದೆವು. ಇಲ್ಲಿಯ ವಾತಾವರಣದಲ್ಲಿ ಸಂಗೀತ ಕೇಳುವುದೇ ಖುಷಿ. ಮ್ಯಾಂಡೊಲಿನ್‌ ಯು. ರಾಜೇಶ್‌ ಅವರ ಕಛೇರಿ ತುಂಬಾ ಇಷ್ಟ ಆಯಿತು.

- ಎನ್‌.ಆಶಿಶ್‌, ಗಾಯಕ

ವಿಭಿನ್ನ ಕಲಾಪ್ರಕಾರಗಳ ದರ್ಶನ

ಪ್ರತಿ ವರ್ಷವೂ ಸಂಗೀತೋತ್ಸವದಲ್ಲಿ ಭಿನ್ನತೆ ಇರುತ್ತದೆ. ಈ ಬಾರಿ ಪಿಟೀಲು ಜುಗಲ್‌ಬಂದಿ ವಿಶೇಷವಾಗಿತ್ತು.
ಎಸ್‌.ಪಿ.ಬಾಲಸುಬ್ರಹ್ಮಣಂ ಅವರ ಕಛೇರಿಗೆ 5 ಸಾವಿರಕ್ಕಿಂತ ಹೆಚ್ಚು ಸಂಗೀತಾಸಕ್ತರು ಸೇರಿದ್ದರು. ನಾನು ನಾಲ್ಕು ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಸಂಗೀತಗಾರರ ಫೋಟೊಗಳ ಸಂಗ್ರಹ ಮಾಡಿಟ್ಟುಕೊಂಡಿದ್ದೇನೆ.

- ಬಿ.ಕೆ.ಅಮರನಾಥ್‌, ಹಿಂದೂಸ್ತಾನಿ ಗಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT