ಮಂಗಳವಾರ, ಏಪ್ರಿಲ್ 7, 2020
19 °C

‘ಜನಪದರ’ ಸುಸಜ್ಜಿತ ‘ರಂಗಮಂದಿರ’

ಸುಬ್ರಮಣ್ಯ ಎಚ್.ಎಂ. Updated:

ಅಕ್ಷರ ಗಾತ್ರ : | |

Prajavani

ನಿಂ ಬೆಕಾಯಿಪುರ, ನಗರದ ಹೊರವಲಯ - ಹೊಸಕೋಟೆ ನಡುವಿನ ಕೋಲಾರ ಹೆದ್ದಾರಿ ಪಕ್ಕದ ಊರು. ಅತ್ತ ನಗರವೂ ಅಲ್ಲದ, ಇತ್ತ ಹಳ್ಳಿಯೂ ಅಲ್ಲದ ಸೆಮಿ ಅರ್ಬನ್ ಪ್ರದೇಶ.

ಸುತ್ತಲೂ ಅಪಾರ್ಟ್‌ಮೆಂಟ್‌ಗಳು, ಮಾಲ್‌ಗಳು ತಲೆಯೆತ್ತಿವೆ. ಇಂತಹ ಪ್ರದೇಶದಲ್ಲಿ 'ಜನಪದರು' ಸಾಂಸ್ಕೃತಿಕ ವೇದಿಕೆ ಇಲ್ಲಿನ ತಲ್ಲಣಗಳಿಗೆ ಮುಖಾಮುಖಿ ಆಗುತ್ತಲೇ ಕಳೆದ 25ವರ್ಷಗಳಿಂದ ರಂಗ ಚಟುವಟಿಕೆಗಳ ಮೂಲಕ ಸಾಂಸ್ಕೃತಿಕ ವಾತಾವರಣವನ್ನು ಜೀವಂತವಾಗಿ ಇಟ್ಟಿದೆ.

ಇಂಥ ನಿಂಬೆಕಾಯಿಪುರದ ರಂಗಾಸಕ್ತರೆಲ್ಲ ಸೇರಿ 3 ಕೋಟಿ ವೆಚ್ಚದಲ್ಲಿ 150× 70 ವಿಸ್ತೀರ್ಣದ 650ಆಸನ ವ್ಯವಸ್ಥೆಯ ವಿಶಾಲ ರಂಗಮಂದಿರ ಕಟ್ಟಿದ್ದಾರೆ. ಇದು ಸಾಮಾನ್ಯ ರಂಗಮಂದಿರವಲ್ಲ.  ಹವಾನಿಯಂತ್ರಿತ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ರಂಗಮಂದಿರ ಇದು. 

ಮಾರ್ಚ್27, ವಿಶ್ವರಂಗಭೂಮಿ ದಿನದಂದು ಅದ್ಧೂರಿಯಾಗಿ ಈ ರಂಗಮಂದಿರವನ್ನು ಉದ್ಘಾಟಿಸಬೇಕೆಂದು ತೀರ್ಮಾನವಾಗಿತ್ತು. ಈ ದಿನದಿಂದಲೇ ಸರಣಿ ನಾಟಕಗಳು ಪ್ರದರ್ಶನಗೊಳ್ಳಬೇಕಿತ್ತು. ಆದರೆ, ಕೊರೊನಾ ಸೋಂಕಿನ ಭೀತಿ, ಭಾರತದಾದ್ಯಂತ ಕರ್ಫ್ಯೂ ವಿಧಿಸಿರುವ ಹಿನ್ನೆಲೆಯಲ್ಲಿ ರಂಗಮಂದಿರದಲ್ಲಿ ಸಾಕಷ್ಟು ಕೆಲಸಗಳು ಬಾಕಿ ಉಳಿದಿವೆ. ಹಾಗಾಗಿ ಇಂದು ಸರಳ ಕಾರ್ಯಕ್ರಮ ಮೂಲಕ ಸಾಂಕೇತಿಕವಾಗಿಯಾದರೂ ರಂಗಮಂದಿರವನ್ನು ಲೋಕಾರ್ಪಣೆಗೊಳಿಸಬೇಕೆಂದು ರಂಗತಂಡ ಯೋಚಿಸಿದೆ.

ರಂಗಮಂದಿರ ನಿರ್ಮಾಣದ ಹಿಂದೆ

ನಿಂಬೆಕಾಯಿಪುರದ ರಂಗಾಸಕ್ತರಿಗೆ  ಆಂಜನೇಯಸ್ವಾಮಿ ದೇವಸ್ಥಾನದ ಆವರಣ, ಪಕ್ಕದ ಬಂಡೆಯೇ ರಂಗಮಂಚ. ಇಲ್ಲಿ ಎಷ್ಟೋ ಮಂದಿ ರಂಗಭೂಮಿ ಖ್ಯಾತನಾಮರು ಯಾವ ಹಮ್ಮು–ಬಿಮ್ಮು ತೋರದೆ ಇಲ್ಲಿನ ಬಂಡೆ ಕಲ್ಲುಗಳ ಮೇಲೆ ನಾಟಕ ಪ್ರದರ್ಶಿಸಿದ್ದಾರೆ‘ ಎಂದು ಜನಪದರು ತಂಡದ ಅಧ್ಯಕ್ಷ ಪಾಪಣ್ಣ, ಎಲೆ ಅಡಿಕೆ ಮೇಲುತ್ತಾ ರಸವತ್ತಾದ ಘಟನೆಗಳನ್ನು ಮೆಲುಕು ಹಾಕಿದರು.

ಹೀಗೆ ಬಂಡೆಯ ಮೇಲೆ ರಂಗಚಟುವಟಿಕೆಗಳು ನಡೆಯುತ್ತಿದ್ದವು. 2017ರ ವಿಶ್ವರಂಗಭೂಮಿದಿನದಂದು ‘ರಂಗಮಾಲೆ‘ ಹೆಸರಿನ ರಂಗ ಪ್ರದರ್ಶನ ನಾಟಕ ಸರಣಿ ಆರಂಭವಾಯಿತು. ಪ್ರತಿ ತಿಂಗಳ 2ನೇ ಶನಿವಾರ ಈ ರಂಗಪ್ರದರ್ಶನವಿರುತ್ತಿತ್ತು. ಹಲವು ನಾಟಕಗಳು ಇಲ್ಲಿ ಪ್ರದರ್ಶನಗೊಂಡವು. ಕ್ರಮೇಣ, ರಂಗತಂಡದ ಸದಸ್ಯರು ಅಪಾರ ಪ್ರೇಕ್ಷಕ ವರ್ಗವನ್ನು ಸಂಪಾದಿಸಿದರು.

ಪ್ರೇಕ್ಷಕರ ಸಂಖ್ಯೆ ಹೆಚ್ಚಾದಂತೆ ಕಳವಳಗೊಂಡ ಸದಸ್ಯರು ಮೂಲಸೌಕರ್ಯಗಳತ್ತ ಗಮನಹರಿಸಿದರು. ಸೂರು, ಶೌಚಾಲಯ, ನೀರು, ಆಸನ ವ್ಯವಸ್ಥೆ ಬೇಕಿತ್ತು. ಆಗ ಮೂಡಿದ್ದೇ ವಿಶಾಲ ರಂಗಮಂದಿರ ನಿರ್ಮಾಣದ ಕಲ್ಪನೆ. ಆದರೆ, ರಂಗಮಂದಿರ ನಿರ್ಮಾಣದ ಕನಸು ಸಾಕರಗೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ‘ಮೊದಲೇ ರಂಗಭೂಮಿಯವರೆಂದರೆ ನಮ್ಮ ಜನ ನೋಡುವ ರೀತಿಯ ಬೇರೆ. ಇನ್ನು ಅವರ ಬಳಿ ಕೈಯೊಡ್ಡುವುದು ಕಷ್ಟದ ಮಾತಾಗಿತ್ತು‘ ಎಂದು ಪಾಪಣ್ಣ ರಂಗಮಂದಿರ ನಿರ್ಮಾಣದ ಆರಂಭದ ದಿನಗಳನ್ನು ನೆನಪಿಸಿಕೊಂಡರು.

ಜನಪದರು ತಂಡದ ಅಧ್ಯಕ್ಷ ಪಾಪಣ್ಣ, ಸಂಚಾಲಕರಾದ ಜಗದೀಶ ಕೆಂಗನಾಳ, ವೇದಿಕೆ ರೂವಾರಿಗಳಾದ ಸಿದ್ದೇಶ್ ದೊಡ್ಡಬನಹಳ್ಳಿ, ರಾಮಕೃಷ್ಣ ಬೇಳ್ತೂರು, ಸುರೇಶ್, ಶಿವಕುಮಾರ್, ಚಲಪತಿ, ಜನಾರ್ದನ.. ಒಟ್ಟಾಗಿ ಸೇರಿ, ರಂಗಮಂದಿರ ನಿರ್ಮಾಣದ ಕೆಲಸಕ್ಕೆ ಮುಂದಾದರು. ಈ ತಂಡದ ಹಗಲಿರುಳ ಶ್ರಮದಿಂದಾಗಿ ಈ ಸುಸಜ್ಜಿತ ರಂಗ ನಿರ್ಮಾಣವಾಯಿತು.


ದುರ್ಗಾಸ್ತಮಾನ ನಾಟಕದ ದೃಶ್ಯ

ರಂಗಮಂದಿರದ ವಿನ್ಯಾಸ

ಈ ರಂಗಮಂದಿರ ಇಂಡೋ ಸಾರ್ಸನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. 40×40 ವಿಸ್ತೀರ್ಣ ಇದ್ದು, ಏಕಕಾಲಕ್ಕೆ ಮೂರು ರಂಗ ಸಜ್ಜಿಕೆ ಬಳಸಬಹುದು. ಕೋಲ್ಕತ್ತ ರಾಯಲ್ ರಂಗ ಮಾದರಿಯಲ್ಲಿ ಸೈಡ್‌ವಿಂಗ್‌ನಲ್ಲಿ ಎರಡು ಅಟ್ಟಣಿಗೆ ಇದ್ದು, ಪಾರ್ಸಿ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಷೇಕ್ಸ್‌ಪಿಯರ್ ನಾಟಕಗಳಲ್ಲಿನ ವಿಶೇಷ ಪ್ರವೇಶದ ಕಲ್ಪನೆಯಲ್ಲಿಇದನ್ನು ನಿರ್ಮಿಸಲಾಗಿದೆ. ಇಕೊ ಸ್ಟಿಕ್ ಧ್ವನಿವರ್ಧಕ ವ್ಯವಸ್ಥೆ ಮಾಡಲಾಗಿದೆ. ಅತ್ಯಾಧುನಿಕ ಬೆಳಕಿನ ವ್ಯವಸ್ಥೆ ಇದೆ. 600 ಆಸನ ವ್ಯವಸ್ಥೆ ಇದ್ದು,  ಹವಾನಿಯಂತ್ರಿತ ವ್ಯವಸ್ಥೆ ಇದೆ. ವೇದಿಕೆಯ ಆಸುಪಾಸಿನಲ್ಲಿ ಗ್ರೀನ್‌ ರೂಮ್‌ (ಪ್ರಸಾದನ ಕೊಠಡಿ) ಇದೆ.

ಬೇಸಿಗೆ ಶಿಬಿರ ನಿರಂತರ

ಈವರೆಗೆ ರಂಗಮಂದಿರ ಇಲ್ಲದಿದ್ದರೂ, ಇರುವ ವ್ಯವಸ್ಥೆಯಲ್ಲೇ ಪ್ರತಿ ವರ್ಷ ಜನಪದರು ತಂಡ ‘ನಾಟಕೋತ್ಸವ– ಬೇಸಿಗೆ ಶಿಬಿರ‘ ಆಯೋಜಿಸಿಕೊಂಡು ಬರುತ್ತಿದೆ.  ‘ಈ ವರ್ಷ ಸುಸಜ್ಜಿತ ರಂಗಮಂದಿರ ನಿರ್ಮಾಣವಾಗಿರುವದರಿಂದ ಶಿಸ್ತುಬದ್ಧ ಕಲಿಕೆ ಮತ್ತು ವೃತ್ತಿಪರತೆ ಸಾಧಿಸಲು ಅನುಕೂಲವಾಗಲಿದೆ‘ ಎನ್ನುತ್ತಾರೆ ರಾಮಕೃಷ್ಣ ಬೇಳ್ತೂರು. ಆದರೆ,  ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷದ ಶಿಬಿರ ನಡೆಯುವ ಸಾಧ್ಯತೆ ಕಡಿಮೆ ಇದೆ.

ಈ ರಂಗಮಂದಿರ ನಿರ್ಮಾಣದ ಹಿಂದೆ ಜನಪದರು ತಂಡಕ್ಕೆ ಡಾ‌.ಚಂದ್ರಶೇಖರ ಕಂಬಾರ, ಡಾ.ವಿಜಯಮ್ಮ, ಡಾ.ಕೆ.ವೈನಾರಾಯಣಸ್ವಾಮಿ, ಬಿ.ಜಯಶ್ರೀ, ಡಾ.ಕೆ. ಮರಳಸಿದ್ದಪ್ಪ, ಡಾ.ಪಂಡಿತಾರಾಧ್ಯ ಸ್ವಾಮೀಜಿ, ಕೋಟಿಗಾನಹಳ್ಳಿ ರಾಮಯ್ಯ ಸೇರಿದಂತೆ ಹಲವು ಸಾಹಿತಿ, ಚಿಂತಕರು, ರಂಗಕರ್ಮಿಗಳ ಪ್ರೋತ್ಸಾಹ ನೀಡಿದ್ದಾರೆ. ಇದನ್ನು ಇಡೀ ತಂಡ ಪ್ರೀತಿಯಿಂದ ಸ್ಮರಿಸುತ್ತದೆ.

'ಜನಪದ'ರು ಬೆಳೆದಿದ್ದು

1996-97ರಲ್ಲಿ ಕನ್ನಡ ಉಪನ್ಯಾಸಕ ಜಗದೀಶ್‌ ಕೆಂಗನಾಳ್‌ ಅವರ ರಂಗಪ್ರೀತಿಯಿಂದ ರೂಪುಗೊಂಡ ರಂಗತಂಡ ‘ಜನಪದರು’. ಗ್ಯಾಟ್‌–ಡಂಕಲ್‌ ವಿರೋಧಿ, ಸಾಕ್ಷರತೆ, ಅಂತರ್ಜಲ ಮಹತ್ವ, ಮೂಢನಂಬಿಕೆ ಹಾಗೂ ಅಂಗವಿಕಲರ ಶೋಷಣೆಯ ವಿರುದ್ಧ ಜಾಗೃತಿ, ಸ್ತ್ರೀ ಶೋಷಣೆ, ಅಸಮಾನತೆಯಂತಹ ವಿಷಯಗಳ ಕುರಿತು ಬೀದಿ ನಾಟಕಗಳನ್ನು ಆಡಿ ಸಾಮಾಜಿಕ ಜಾಗೃತಿ ಮೂಡಿಸುವುದಲ್ಲಿ ತೊಡಗಿಕೊಂಡಿದ್ದ ‘ಜನಪದರು’ ತಂಡ 1999ರಲ್ಲಿ ಮೊದಲ ಬಾರಿಗೆ ಮುಖ್ಯ ವೇದಿಕೆಯಲ್ಲಿ ‘ಯಾರ ಸ್ವತ್ತು?’ಎಂಬ ನಾಟಕ ಪ್ರದರ್ಶಿಸಿತು.

ನಂತರ 2003ರಲ್ಲಿ ಈ ತಂಡ ರಂಗಕರ್ಮಿ ರಾಮಕೃಷ್ಣ ಬೆಳ್ತೂರು ಅವರ ನಿರ್ದೇಶನದಲ್ಲಿ ಒಂದು ರಂಗಭೂಮಿ ಶಿಬಿರ ನಡೆಸಿತು. ಈ ಶಿಬಿರದ ಅಭ್ಯರ್ಥಿಗಳನ್ನೇ ಆಯ್ದುಕೊಂಡು ಬೆಳ್ತೂರು ಅವರು ಕೋಟಿಗಾನಹಳ್ಳಿ ರಾಮಯ್ಯ ಅವರ ‘ನಾಯಿತಿಪ್ಪ’ ಎಂಬ ನಾಟಕವನ್ನು ನಿರ್ದೇಶಿಸಿ ಪ್ರದರ್ಶಿಸಿದರು. ಈ ನಾಟಕ ಗಳಿಸಿದ ಜನಮೆಚ್ಚುಗೆ ಜನಪದರು ತಂಡದಲ್ಲಿ ವಿಶ್ವಾಸ ಹೆಚ್ಚಿಸಿತು.

ಇದರ ಜತೆಗೆ ‘ಯಮನ ನಿರ್ಧಾರ’, ‘ತಂಗಿ ಗೌರವ್ವ’, ‘ಎಚ್ಚರ ಎಚ್ಚರ’, ಆಕಾಶ ಬುಟ್ಟಿ’ ‘ಯಾಕೆ ಹೀಗೆ?’.. ಇಂಥ  ವಿವಿಧ ಬೀದಿ –ನಾಟಕಗಳನ್ನು ಪ್ರದರ್ಶಿಸುವುದರ ಮೂಲಕ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿತ್ತು ಜನಪದರು ತಂಡ. ಈ ಚಟುವಟಿಗೆಗಳ ಜತೆ ಸಾಣೆಹಳ್ಳಿಯ ‘ಶಿವಸಂಚಾರ’, ಹೆಗ್ಗೋಡಿನ ‘ನೀನಾಸಮ್‌’ ನಾಟಕ ತಂಡಗಳ ನಾಟಕ ಪ್ರದರ್ಶನಗಳನ್ನೂ ಇವರು ಆಯೋಜಿಸುತ್ತಿದ್ದರು.

2008ರಲ್ಲಿ ರೂಪಾಂತರ ರಂಗತಂಡದಲ್ಲಿದ್ದ ಸಿದ್ದೇಶ್‌ ಅವರು, ಬೇರೆ ತಂಡಗಳ ನಾಟಕಗಳ ಪ್ರದರ್ಶನವನ್ನು ಆಯೋಜಿಸುವ ಬದಲು ನಾವೇ ಯಾಕೆ ಒಂದು ತಂಡ  ನೋಂದಾಯಿಸಿಕೊಂಡು ನಾಟಕ ಪ್ರದರ್ಶನ ಆಯೋಜಿಸಬಾರದು? ಎಂದ ಅವರು ‘ಜನಪದರು’ ತಂಡವನ್ನು ಸೇರಿದರು. ಇದರಿಂದ ತಂಡಕ್ಕೆ ಹೊಸ ಹುರುಪು ಬಂತು. 2009ರಲ್ಲಿ ‘ಜನಪದರು’ ಎಂಬ ಹೆಸರನ್ನು ನೋಂದಣಿ ಮಾಡುವುದರ ಮೂಲಕ ಇದು ಅಧಿಕೃತ ರಂಗತಂಡವಾಯಿತು.

ಪ್ರಮುಖ ನಾಟಕಗಳು

ಹೀಗೆ ಅಧಿಕೃತಗೊಂಡ ನಂತರ ಈ ತಂಡ ಪ್ರದರ್ಶಿಸಿದ ಮೊದಲ ನಾಟಕ ‘ತಿರುಕರಾಜ’. ನಿಸರ್ಗಪ್ರಿಯ ಬರೆದ ಈ ರಾಜಕೀಯ ವಿಡಂಬನೆಯ ನಾಟಕವನ್ನು ರಾಮಕೃಷ್ಣ ಬೆಳ್ತೂರು ಅವರೇ ನಿರ್ದೇಶಿಸಿದ್ದರು. ಈ ನಾಟಕ ಅಪಾರ ಜನಮೆಚ್ಚುಗೆ ಪಡೆಯಿತು. ಬಾಲಗುರುಮೂರ್ತಿ ಬರೆದಿರುವ ‘ಬುಡ್ಗನಾದ’ ಇನ್ನೊಂದು ಹೆಸರು ಪಡೆದ ನಾಟಕ. ಸುರೇಶ್‌ ವರ್ತೂರು ನಿರ್ದೇಶಿಸಿದ ಈ ನಾಟಕ ಬುಡಕಟ್ಟು ಜನಾಂಗಗಳ ಕುರಿತಾದ ನಾಟಕ  ಕನ್ನಡ ಮತ್ತು ತೆಲುಗು ಮಿಶ್ರಗೊಳಿಸಿದ ವಿಶಿಷ್ಟ ಭಾಷೆ ಬಳಕೆಯಿಂದ ಗಮನ ಸೆಳೆಯುತ್ತದೆ.

ಅಲ್ಲದೇ ಚಂದ್ರಶೇಖರ ಕಂಬಾರರ ‘ಸಾಂಬಸದಾಶಿವ ಪ್ರಹಸನ’ (ನಿರ್ದೇಶನ– ರಾಮಕೃಷ್ಣ ಬೆಳ್ತೂರು), ಸುರೇಶ್‌ ವರ್ತೂರು ರಂಗರೂಪಕ್ಕೆ ಅಳವಡಿಸಿ ನಿರ್ದೇಶಿಸಿದ ‘ದುರ್ಗಾಸ್ತಮಾನ’, ಶಂಕರ್‌ ಶೇಷ್‌ ರಚಿಸಿ ಸುರೇಶ್‌ ವರ್ತೂರು ನಿರ್ದೇಶಿಸಿದ ‘ಉರುಳು’ ಇವು ಜನಪದರು ತಂಡದ ಯಶಸ್ವೀ ನಾಟಕಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು