ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ–20 ಕ್ರಿಕೆಟ್‌ ಮಾದರಿಯ ರಂಗೋತ್ಸವ | ಒಪ್ಪೊತ್ತಿನಲ್ಲಿ 20ರ ಪ್ರಯೋಗ

Last Updated 16 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಮನರಂಜನಾ ಕ್ಷೇತ್ರದ ಡಿಜಿಟಲ್‌ ಜಗತ್ತು ಕಾಲಮಿತಿಗೆ ಸಂಕ್ಷೇಪವಾದಂತೆ, ವಾಸ್ತವದ ರಂಗ ಪ್ರಯೋಗಗಳೂ ಕಾಲಮಿತಿಗೆ ಒಳಗಾಗಿ ‘ಷಾರ್ಟ್ಸ್’ ರೂಪ ಪಡೆದಿವೆ. ಟ್ವೆಂಟಿ–20 ಕ್ರಿಕೆಟ್‌ ಮಾದರಿಯಲ್ಲೇ ನಡೆದ 20 ನಿಮಿಷಗಳ ನಾಟಕಗಳ ರಂಗೋತ್ಸವವೊಂದು ಹೊಸ ಪ್ರತಿಭೆಗಳನ್ನು, ಪ್ರೇಕ್ಷಕರನ್ನೂ ಸೆಳೆಯುವ ಪ್ರಯತ್ನ ಮಾಡಿತು. ಆ ಪ್ರಯೋಗಗಳು ಇನ್ನೂ ಮುಂದುವರಿದಿವೆ.

***

ಅಂತರ್ಜಾಲದಲ್ಲಿ ಕಾಣುವ ಷಾರ್ಟ್ಸ್, ರೀಲ್ಸ್‌, ಕಿರುಚಿತ್ರಗಳ ಮಾದರಿಯಲ್ಲೇ ನಾಟಕಗಳು ಕೂಡಾ ‘ಕಿರು ನಾಟಕಗಳಾಗಿ’ ಟ್ರೆಂಡ್‌ ಸೃಷ್ಟಿಸಿವೆ. ದುಡಿಮೆ ನಡುವೆ ಪುರುಸೊತ್ತಿಲ್ಲದವರು ಬಿಡುವಾಗಿಸಿಕೊಂಡು ಅಭಿನಯಿಸಿದ, ಪುರುಸೊತ್ತಿಲ್ಲದ ಪ್ರೇಕ್ಷಕರೂ ಪುರುಸೊತ್ತು ಮಾಡಿಕೊಂಡು ನೋಡುವಂತೆ ಮಾಡುವ ಪ್ರಯತ್ನ ಈ ‘ಇಪ್ಪತ್ತ’ರದು.

ಕಲಾ ಪ್ರಕಾರಗಳು ಕಾಲಮಿತಿಗೊಳಗಾಗಿರುವ ಹೊತ್ತಿನಲ್ಲಿ ನಾಟಕಗಳನ್ನು ಕೂಡಾ ಕ್ರಿಕೆಟ್‌ನಂತೆ 20 ನಿಮಿಷಗಳ ಅವಧಿಗೆ ಇಳಿಸಿದ ಪ್ರಯೋಗ ಇತ್ತೀಚೆಗೆ ಸ್ಪರ್ಧೆ ಏರ್ಪಡುವವರೆಗೂ ಹೋಯಿತು.

ಬೆಂಗಳೂರಿನ ಪ್ರಕಸಂ (ಪ್ರದರ್ಶನ ಕಲಾ ಸಂಸ್ಥೆ) ಆಶ್ರಯದಲ್ಲಿ ಸುಚಿತ್ರಾ ಫಿಲಂ ಸೊಸೈಟಿ ಆವರಣದಲ್ಲಿ ನಡೆದ ಈ ಪ್ರದರ್ಶನಗಳು ಹೊಸ ಕಲಾವಿದರನ್ನು ಮತ್ತು ಪ್ರೇಕ್ಷಕರನ್ನು ರಂಗಭೂಮಿಯತ್ತ ಸೆಳೆಯುವಲ್ಲಿ ಒಂದಿಷ್ಟು ಪ್ರಯತ್ನ ಮಾಡಿದವು.

ನಾಟಕಗಳು ಕಿರು ಅವಧಿಗಿಳಿದದ್ದು ಹೊಸದೇನಲ್ಲ. ಆದರೆ, ಅದನ್ನೇ ಒಂದು ಪ್ರಕಾರವನ್ನಾಗಿ ಗುರುತಿಸಿ ವ್ಯಾಪಕಗೊಳಿಸಿದ್ದು ಈ ಸ್ಪರ್ಧೆಯ ವಿಶೇಷ. ಇದನ್ನೆಲ್ಲಾ ನೋಡಿದ ‘ಪ್ರವರ’ತಂಡವೂ ಕೂಡಾ ಕಿರುನಾಟಕ ಸ್ಪರ್ಧೆಯನ್ನು ಆಯೋಜಿಸಿದೆ. ಮೇ 16ರಂದು ಈ ಸರಣಿಯ ಅಂತಿಮ ಸ್ಪರ್ಧೆ ನಡೆಯಲಿದೆ.

ಎಲ್ಲವೂ ಕ್ರಿಕೆಟ್‌ಮಯ
ಈ ಸರಣಿಗಿಟ್ಟ ಹೆಸರು ‘ರಿಫ್ರೆಷ್‌ ಟಿ–20’. ಸ್ಪರ್ಧೆಗೆ ಬಂದ ನೂರಾರು ನಾಟಕಗಳ ಪೈಕಿ ಆಯ್ಕೆಯಾದದ್ದು ಇಪ್ಪತ್ತು. ಪ್ರತಿ ನಾಟಕ ತಲಾ 20 ನಿಮಿಷ ಅವಧಿಯದ್ದು. ಕಾಕತಾಳೀಯವೆಂಬಂತೆ ಈ ಪ್ರಕಸಂಗೂ ಈಗ 20ರ ಹರೆಯ. ಹಾಗಾಗಿ ಇಲ್ಲಿ ಏನಿದ್ದರೂ ಇಪ್ಪತ್ತಕ್ಕೇ ಮಹತ್ವ.

ಬೆಂಗಳೂರು ಥಿಯೇಟರ್‌ ಎನ್ಸೆಂಬಲ್‌ನ ‘ಬೂದು’ ನಾಟಕದ ದೃಶ್ಯ
ಬೆಂಗಳೂರು ಥಿಯೇಟರ್‌ ಎನ್ಸೆಂಬಲ್‌ನ ‘ಬೂದು’ ನಾಟಕದ ದೃಶ್ಯ

ನಾಟಕಗಳ ಪ್ರದರ್ಶನ ವೇಳಾಪಟ್ಟಿ, ಅವಧಿ, ಪ್ರಚಾರ, ಅಂಕಪಟ್ಟಿ, ಮೌಲ್ಯಮಾಪನ, ಬಹುಮಾನ ವಿತರಣೆ, ಚೆಕ್‌ ವಿನ್ಯಾಸ ಎಲ್ಲವೂ ಟ್ವೆಂಟಿ –20 ಕ್ರಿಕೆಟ್‌ನ ಮಾದರಿಯಲ್ಲೇ ಇದ್ದವು. ಒಂದು ನಾಟಕದಲ್ಲಿ ಗರಿಷ್ಠ 5 ಪಾತ್ರಗಳಷ್ಟೇ ಇದ್ದವು. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದ ನಾಟಕಗಳ ಪುಟ್ಟ ನೋಟ ಕ್ರಮವಾಗಿ ಮುಂದಿದೆ.

ಪ್ರವರ ಸ್ಟುಡಿಯೊ ಅಭಿನಯಿಸಿದ ‘ಒಂದರೊಳಗಿನ್ನೆರಡು’ ನಾಟಕದಲ್ಲಿ ವರ್ಕ್‌ಫ್ರಂ ಹೋಂ, ಪತಿ ಪತ್ನಿ ನಡುವಿನ ವಿರಸ, ಸಾಮಾಜಿಕ ಮಾಧ್ಯಮಗಳ ಅಧ್ವಾನ, ಮನಸ್ಸು ಬುದ್ಧಿಗಳ ನಡುವಿನ ಸಂಘರ್ಷವನ್ನು ಕೊನೆಯವರೆಗೂ ರಂಜಿಸುತ್ತಲೇ ಹೇಳಿತು. ರಾಜ್‌ ಆರಾಧ್ಯ ಈ ನಾಟಕದ ನಿರ್ದೇಶಕರು.

ವ್ಯೋಮ ಆ್ಯಕ್ಟರ್ಸ್‌ ಸ್ಟುಡಿಯೊ ಅಭಿನಯಿಸಿದ ನಾಟಕ ‘ಸಿಕ್ದೋರ್ಗಾ ಸೀರುಂಡೆ’. ಭೂಮಿಯಲ್ಲಿ ಜಿರಳೆ, ಚಿರತೆ, ಮನುಷ್ಯ ಮೂವರಿಗೂ ಅವಕಾಶವಿದೆ. ಆದರೆ ಇತರ ಜೀವಿಗಳ ಅವಕಾಶವನ್ನು ಮನುಷ್ಯನೊಬ್ಬನೇ ಕಿತ್ತುಕೊಂಡು ಸಿಕ್ಕಿದ್ದೇ ಸೀರುಂಡೆ ಎಂದು ಎಲ್ಲವನ್ನೂ ಅನುಭವಿಸಲು ಹೋಗುವುದು, ನಾನೇ ಶ್ರೇಷ್ಠ ಎಂದು ಬೀಗುವುದು, ಕೊನೆಗೆ ಇದು ಸೇರಬೇಕಾದ್ದು ನಿಮಗಲ್ಲ ಎಂದು ಪರಮಶಕ್ತಿಯೊಂದು ಕಿತ್ತುಕೊಂಡು ಹೋಗುವುದು ನಾಟಕದ ತಿರುಳು. ಪುಟ್ಟ ಅವಧಿಯಲ್ಲಿ ವಿಸ್ತಾರವಾದ ವಿಷಯವೊಂದನ್ನು ಮುಟ್ಟಿಸಿತು ಈ ನಾಟಕ. ಶರತ್‌ ಪರ್ವತವಾಣಿ ಈ ನಾಟಕದ ನಿರ್ದೇಶಕರು.

ವ್ಯೋಮ ಆ್ಯಕ್ಟರ್ಸ್‌ ಸ್ಟುಡಿಯೋ ಅಭಿನಯಿಸಿದ ‘ಸಿಕ್ದೋರ್ಗಾ ಸೀರುಂಡೆ’ ನಾಟಕದ ದೃಶ್ಯ
ವ್ಯೋಮ ಆ್ಯಕ್ಟರ್ಸ್‌ ಸ್ಟುಡಿಯೋ ಅಭಿನಯಿಸಿದ ‘ಸಿಕ್ದೋರ್ಗಾ ಸೀರುಂಡೆ’ ನಾಟಕದ ದೃಶ್ಯ

ಬೆಂಗಳೂರು ಥಿಯೇಟರ್‌ ಎನ್ಸೆಂಬಲ್‌ ತಂಡ ಅಭಿನಯಿಸಿದ ‘ಬೂದು’ ನಾಟಕ ಸದ್ಯದ ರಷ್ಯಾ–ಉಕ್ರೇನ್‌ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ನಡೆಯುವ ಕಥೆ. ಖಿನ್ನತೆಗೊಳಗಾದ ಮೂವರು ಆಸ್ಪತ್ರೆಯಲ್ಲಿದ್ದುಕೊಂಡು ಸಾವನ್ನೇ ಬಯಸುತ್ತಿದ್ದವರು. ಅಲ್ಲಿಗೆ ಮಗುವನ್ನು ಕಳೆದುಕೊಂಡ ತಾಯಿ ಬಂದು ಸಹಾಯ ಕೇಳುತ್ತಾರೆ. ಆಗ ಈ ಮೂವರೂ ಮನಸ್ಸು ಬದಲಾಯಿಸಿ ತಮ್ಮ ಬದುಕಿಗೊಂದು ಉದ್ದೇಶವಿದೆ ಎಂದುಕೊಂಡು ಮತ್ತೆ ಭರವಸೆಯ ಹೆಜ್ಜೆ ಇಡುತ್ತಾರೆ.

ಈ ನಾಟಕದಲ್ಲಿ ಶಿಕ್ಷಣಕ್ಕಾಗಿ ಹಣ ಹೊಂದಿಸಲು ಬಾಡಿಗೆ ತಾಯಿಯಾಗಿ ಉಕ್ರೇನ್‌ಗೆ ಹೋಗುವ ವಿದ್ಯಾರ್ಥಿನಿ, ಸಾಮಾಜಿಕ ಮಾಧ್ಯಮದ ಗೀಳಿಗೊಳಗಾದ ಹುಡುಗಿ, ವಂಚನೆಗೊಳಗಾದ ಸಂಶೋಧಕ ಇದ್ದಾರೆ. ಖಾರ್ಕಿವ್‌ ಸಮೀಪದ ಆಸ್ಪತ್ರೆಯಲ್ಲಿ ನಡೆಯುವ ಘಟನೆ ಇದು. ಎಲ್ಲ ಪಾತ್ರಗಳೂ ‘ಯುದ್ಧದಿಂದ ಯಾರಿಗೂ ಪ್ರಯೋಜನವಿಲ್ಲ’ ಎಂಬುದನ್ನೇ ಒತ್ತಿ ಹೇಳುತ್ತವೆ. ಅಭಿಮನ್ಯು ಭೂಪತಿ ಈ ನಾಟಕದ ನಿರ್ದೇಶಕರು.

ಪ್ರವರ ಥಿಯೇಟರ್ಸ್‌ ಕಲಾವಿದರು ಅಭಿನಯಿಸಿದ ‘ಒಂದರೊಳಗಿನ್ನೆರಡು’ ನಾಟಕದ ದೃಶ್ಯ
ಪ್ರವರ ಥಿಯೇಟರ್ಸ್‌ ಕಲಾವಿದರು ಅಭಿನಯಿಸಿದ ‘ಒಂದರೊಳಗಿನ್ನೆರಡು’ ನಾಟಕದ ದೃಶ್ಯ

ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾದ ವಿಷಯಗಳನ್ನೇ ಈ ಮೂರೂ ನಾಟಕಗಳು ಕಟ್ಟಿಕೊಟ್ಟವು.

ಹೆಚ್ಚಿನ ನಾಟಕಗಳು ಲಾಕ್‌ಡೌನ್‌ ಅವಧಿಯಲ್ಲಿ ಸಿದ್ಧಗೊಂಡವುಗಳು. ತಿರುಳು ಕೂಡಾ ಅಂಥ ಸನ್ನಿವೇಶಗಳದ್ದೇ ಇದೆ. ಅಭಿನಯಿಸಿದವರು ಹವ್ಯಾಸಿ ರಂಗತಂಡಗಳೇ. ಹೆಚ್ಚಿನವರು ಐ.ಟಿ. ಕ್ಷೇತ್ರದಲ್ಲಿ ದುಡಿಯುವವರು. ಬೆಳಗಿನ ವೇಳೆ ನಾಟಕಾಭ್ಯಾಸ ಮಾಡಿ, ನಂತರ ದುಡಿಮೆಗೆ ಹೋಗುತ್ತಿದ್ದವರು. ಈ ನಾಟಕಗಳಿಗೆ ಹಿರಿ–ಕಿರಿತೆರೆಯ ದಿಗ್ಗಜರು ಬೆನ್ನು ತಟ್ಟಿದ್ದಾರೆ. ಇನ್ನಷ್ಟು ಹೊಸ ಪ್ರಯೋಗಗಳನ್ನು ಮಾಡುವ ಹುಮ್ಮಸ್ಸಿನಲ್ಲಿ ಈ ತಂಡಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT