ಶುಕ್ರವಾರ, ಫೆಬ್ರವರಿ 28, 2020
19 °C
chitrapata ramayana-nsd

ಯಕ್ಷಗಾನ ರಂಗ ಪ್ರಯೋಗದಲ್ಲಿ‘ಚಿತ್ರಪಟ ರಾಮಾಯಣ’

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

Deccan Herald

ಯಕ್ಷಗಾನಕ್ಕೂ ರಂಗಭೂಮಿಗೂ ಇರುವ ನಂಟು ಅಪಾರ. ಅಭಿನಯ, ಕುಣಿತದ ಸಮ್ಮಿಲನವಾಗಿರುವ ಯಕ್ಷಗಾನ ನಟನಾ ವಿದ್ಯಾರ್ಥಿಗಳಿಗೆ ಕಲಿಕೆಯ ಆಗರವಿದ್ದಂತೆ. ಯಕ್ಷಗಾನ ಮತ್ತು ರಂಗಪ್ರಯೋಗಗಳೆರಡೂ ಒಂದರಲ್ಲೇ ಮೇಳೈಸಿದರೆ ಅದರ ಸೊಗಸು ಮತ್ತಷ್ಟು ಹೆಚ್ಚುತ್ತದೆ. ಇಂಥ ಅಪರೂಪದ ಪ್ರಯೋಗಕ್ಕೆ ನಗರದ ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್‌ಡಿ) ಮುಂದಾಗಿದೆ.

ಶಿವರಾಮ ಕಾರಂತರ ನೇರ ಶಿಷ್ಯರಾಗಿ ಯಕ್ಷಗಾನದ ಆಳ–ಅಗಲವನ್ನು ಅರಿತಿರುವ ಬನ್ನಂಜೆ ಸಂಜೀವ ಸುವರ್ಣ ಅವರು ‘ಚಿತ್ರಪಟ ರಾಮಾಯಣ’ ಯಕ್ಷಗಾನವನ್ನು ಎನ್‌ಎಸ್‌ಡಿ ವಿದ್ಯಾರ್ಥಿಗಳ ಮೂಲಕ ರಂಗಪ್ರಯೋಗಕ್ಕೆ ತರುತ್ತಿದ್ದಾರೆ.

‘ನಾಟಕದ ವಿದ್ಯಾರ್ಥಿಗಳು ಯಕ್ಷಗಾನದ ಹೆಜ್ಜೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಈ ಯಕ್ಷಗಾನ–ರಂಗ ಪ್ರಯೋಗದ ಮೂಲಕ ಕಲಿಸಿಕೊಡುತ್ತಿರುವೆ. ಬಡಗುತಿಟ್ಟು ಪರಂಪರೆಯಲ್ಲಿ ‘ಚಿತ್ರಪಟ ರಾಮಾಯಣ’ ಪ್ರದರ್ಶನವಾಗುತ್ತಿದೆ’ ಎನ್ನುತ್ತಾರೆ ಅವರು.

ಎನ್‌ಎಸ್‌ಡಿ ದೆಹಲಿಯ ನಿರ್ದೇಶಕರಾಗಿದ್ದಾಗ ಹಿರಿಯ ರಂಗಕರ್ಮಿ ಬಿ.ವಿ.ಕಾರಂತರು ‘ಮ್ಯಾಕ್‌ಬೆತ್‌’ ನಾಟಕಕ್ಕೆ ಯಕ್ಷಗಾನ ಕಲೆಯನ್ನು ಬಳಸಿಕೊಂಡಿದ್ದರು. ಆಗ ನಾನು ದೆಹಲಿಗೆ ಹೋಗಿ ಅಲ್ಲಿಯ ಎನ್‌ಎಸ್‌ಡಿ ವಿದ್ಯಾರ್ಥಿಗಳಿಗೆ ಯಕ್ಷಗಾನದ ಹೆಜ್ಜೆಗಳನ್ನು ಕಲಿಸಿಕೊಟ್ಟಿದ್ದೆ. ಕಾರಂತರ ನಂತರ ಜಂಬೆ ಅವರು ಯಕ್ಷಗಾನಕ್ಕೆ ಒತ್ತು ನೀಡಿದ್ದರು. ಈಗ ಎನ್‌ಎಸ್‌ಡಿಯಲ್ಲಿ ಮತ್ತೆ ಯಕ್ಷಗಾನದ ಹೆಜ್ಜೆಗಳನ್ನು ಕಲಿಸುತ್ತಿರುವುದು ನಟನೆಯಲ್ಲಿ ಆಸಕ್ತಿ ಇರುವವರಿಗೆ ವರದಾನವಾಗಲಿದೆ’ ಎನ್ನುವುದು ಸುವರ್ಣ ಅವರ ಅಭಿಮತ.

‘ಈ ಪ್ರಯೋಗದಲ್ಲಿ ಒಡ್ಡೋಲಗ ಸೇರಿದಂತೆ ಕ್ಲಿಷ್ಟಕರವಾದ ಹೆಜ್ಜೆಗಳನ್ನು ಬಿಟ್ಟಿದ್ದೇನೆ. ಮೂಲ ಹೆಜ್ಜೆಗಳನ್ನಷ್ಟೇ ಬಳಸಿಕೊಂಡು ‘ಚಿತ್ರಪಟ ರಾಮಾಯಣ’ ರೂಪಿಸಲಾಗಿದೆ. ನನ್ನ ಗುರುಗಳಾದ ಶಿವರಾಮ ಕಾರಂತರು ದುಃಖವನ್ನು ನೂರು ರೀತಿಯಲ್ಲಿ ಅಭಿನಯಿಸಿ ತೋರಿಸುತ್ತಿದ್ದರು. ತಂದೆ ಸತ್ತಾಗ ಆಗುವ ದುಃಖವೇ ಬೇರೆ, ಹೆಂಡತಿ ಸತ್ತಾಗ ಆಗುವ ದುಃಖವೇ ಬೇರೆ ಅನ್ನುವುದನ್ನು ಅವರು ಕಲಿಸಿಕೊಟ್ಟಿದ್ದರು. ಶಾಸ್ತ್ರದಲ್ಲಿ ನವರಸ ಎಂದೇ ಹೇಳುತ್ತೇವೆಯಾದರೂ ಅದರಲ್ಲಿ ವೈವಿಧ್ಯವಿದೆ. ಅದನ್ನೇ ‘ಚಿತ್ರಪಟ ರಾಮಾಯಣ’ದ ಮೂಲಕ ನನಗೆ ಗೊತ್ತಿದ್ದಷ್ಟು ಹೇಳಿಕೊಡುತ್ತಿದ್ದೇನೆ’ ಎಂದು ವಿನಮ್ರವಾಗಿ ಹೇಳುತ್ತಾರೆ ಸುವರ್ಣ.

‘ಚಿತ್ರಪಟ ರಾಮಾಯಣ’ದಲ್ಲಿ ರಾವಣನ ಹತ್ಯೆ, ಲಕ್ಷ್ಮಣ ತನ್ನ ಮೂಗು ಕತ್ತರಿಸಿದ ದುಃಖದಲ್ಲಿರುವ ಶೂರ್ಪನಖಿ ಸೇಡಿಗಾಗಿ ವೇಷ ಬದಲಿಸಿ ಯೋಗಿನಿಯಾಗಿ ರಾಮನ ಅರಮನೆ ಪ್ರವೇಶಿಸುವ ಕಥೆ. ಸೀತೆಯ ಅಂತಃಪುರ ಪ್ರವೇಶಿಸುವ ಯೋಗಿನಿ, ಸೀತೆಗೆ ರಾವಣನ ಚಿತ್ರ ಬರೆಯುವಂತೆ ಪ್ರೇರೇಪಿಸುತ್ತಾಳೆ. ಯೋಗಿನಿಯ ದುಃಖದ ಕಥೆ ಕೇಳಿ ಮರುಗುವ ಸೀತೆ ರಾವಣನ ಉಂಗುಷ್ಠವನ್ನಷ್ಟೇ ಬಿಡಿಸುತ್ತಾಳಾದರೂ, ಚಿತ್ರ ಪೂರ್ಣಗೊಳ್ಳವುದು ಯೋಗಿನಿಯ ಕುಂಚಕಲೆಯ ಮೂಲಕ. ಆನಂತರದ ಕಥೆ ಕುತೂಹಲಕಾರಿಯಾದದ್ದು. ಅದನ್ನು ರಂಗದ ಮೇಲೆಯ ನೋಡಿ ಅನುಭವಿಸಬೇಕು’ ಎಂದು ಈ ಪ್ರಯೋಗದ ಹೂರಣ ತೆರೆದಿಡುತ್ತಾರೆ ಸುವರ್ಣ.

‘ಯಕ್ಷಗಾನದಲ್ಲಿ ದೇಹವಷ್ಟೇ ಹುರಿಗೊಳ್ಳುವುದಿಲ್ಲ ಧ್ವನಿ, ಮುಖಾಭಿನಯ, ಭಾವಾಭಿನಯ ಎಲ್ಲವೂ ಇವೆ. ಇದು ನಟರಿಗೆ ಅಗತ್ಯವಾದ ವ್ಯಾಯಾಮವೆಂದೇ ಹೇಳಬಹುದು. ಈ ಯಕ್ಷಗಾನ ರಂಗಪ್ರಯೋಗದಲ್ಲಿ ಪರಿಸರ ಸಂರಕ್ಷಣೆ, ಪ್ರಾಣಿ ಪ್ರೀತಿ, ಮನೋವೈಜ್ಞಾನಿಕ ಅಂಶಗಳಿರುವುದು ವಿಶೇಷ. ಇದು ಬರೀ ಮನರಂಜನೆ ಮಾತ್ರವಲ್ಲ. ಸಂದೇಶವನ್ನೂ ನೀಡುತ್ತದೆ. ಇದರಲ್ಲಿ ನಾಯಕ–ನಾಯಕಿ ಅನ್ನುವ ಪಾತ್ರಗಳಿಲ್ಲ. ಸೀತೆ, ಶೂರ್ಪನಖಿ, ಯೋಗಿನಿ ಎಲ್ಲವೂ ಮುಖ್ಯಪಾತ್ರಗಳೇ. ಪ್ರತಿ ನಟನಿಗೂ ಇಲ್ಲಿ ನಟನೆಯ ಅವಕಾಶವಿದೆ’ ಎಂದು ಈ ಯಕ್ಷಗಾನ ರಂಗಪ್ರಯೋಗದ ವೈಶಿಷ್ಟ್ಯವನ್ನು ಬಿಡಿಸಿಡುತ್ತಾರೆ ಅವರು.

**

‘ಚಿತ್ರಪಟ ರಾಮಾಯಣ’ ಯಕ್ಷಗಾನ ರಂಗಪ್ರಯೋಗ: ಪ್ರಸಂಗ ರಚನೆ–ಹೊಸ್ತೋಟ ಮಂಜುನಾಥ ಭಾಗವತ. ನಿರ್ದೇಶನ–ಬನ್ನಂಜೆ ಸಂಜೀವ ಕುಲಕರ್ಣಿ. ಆಯೋಜನೆ– ರಾಷ್ಟ್ರೀಯ ನಾಟಕ ಶಾಲೆ. ಸ್ಥಳ–ಸಮುಚ್ಚಯ ಭವನ, ಕಲಾಗ್ರಾಮ, ಮಲ್ಲತ್ತಹಳ್ಳಿ. ಸೋಮವಾರ–ಮಂಗಳವಾರ ರಾತ್ರಿ 7.
ಉಚಿತ ಪ್ರವೇಶ.

**

ಕುಣಿತ–ಮಾತಿನ ಸಮ್ಮಿಲನ

ಪಕ್ಕಾ ಯಕ್ಷಗಾನ ಶೈಲಿಯಲ್ಲಿರುವ ಪ್ರಸಂಗವಿದು. ಇದನ್ನು ಎನ್‌ಎಸ್‌ಡಿ ವಿದ್ಯಾರ್ಥಿಗಳೇ ಅಭಿನಯಿಸುತ್ತಿರುವುದು ವಿಶೇಷ. ಯಕ್ಷಗಾನದಲ್ಲಿ ವಿದ್ಯಾರ್ಥಿಗಳು ಕಲಿಯುವುದು ಬಹಳಷ್ಟಿದೆ. ಆಂಗಿಕ ವಾಚಿಕಕ್ಕೆ ಇದು ಪೂರಕ. ನಟರಿಗೆ ಸಂಭಾಷಣೆ ಸುಲಲಿತವಾಗಿ ಹೇಳಲು ಪದ್ಯಗಳು ಗೊತ್ತಿರಬೇಕು. ಇದರಿಂದ ಭಾಷೆ ಸುಧಾರಣೆಯಾಗುತ್ತದೆ. ಯಕ್ಷಗಾನದಲ್ಲಿ ನಟನಾದವನು ಬರೀ ಕುಣಿಯುವುದಷ್ಟೇ ಅಲ್ಲ ಮಾತನ್ನೂ ಆಡಬೇಕು. ಇದು ಎನ್‌ಎಸ್‌ಡಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಕಲಿಕೆ.

‘ಚಿತ್ರಪಟ ರಾಮಾಯಣ’ದಲ್ಲಿ ಮನೋವೈಜ್ಞಾನಿಕ ಸಂಗತಿಗಳಿರುವುದು ವಿಶೇಷ. ಆಧುನಿಕ ನಟನಿಗೆ ಪ್ರಾದೇಶಿಕ ಕಲೆಗಳ ಪರಿಚಯವೂ ಇರಬೇಕು. ಆಂಗಿಕ, ವಾಚಿಕ, ಆಹಾರ್ಯ, ಸಾತ್ವಿಕ ಎಲ್ಲಾ ಅಂಶಗಳು ಯಕ್ಷಗಾನದಲ್ಲಿ ಅಡಕವಾಗಿವೆ. ಪ್ರದರ್ಶನ ಒಂದೂವರೆ ಗಂಟೆಯಿದ್ದರೆ, ಬಣ್ಣದ ಮನೆಯಲ್ಲಿ ನಟನಾದವನು ಮೂರು ತಾಸು ಇರಬೇಕಾಗುತ್ತದೆ. ಇದರಿಂದ ನಟನಿಗೆ ತಾಳ್ಮೆಯೂ ಮೈಗೂಡುತ್ತದೆ.

–ಸಿ.ಬಸವಲಿಂಗಯ್ಯ, ನಿರ್ದೇಶಕರು, ರಾಷ್ಟ್ರೀಯ ನಾಟಕ ಶಾಲೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)