ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ನುಡಿಗಟ್ಟಿನ ಬಾಬ್ ಮಾರ್ಲಿ

Published 10 ಆಗಸ್ಟ್ 2024, 23:53 IST
Last Updated 10 ಆಗಸ್ಟ್ 2024, 23:53 IST
ಅಕ್ಷರ ಗಾತ್ರ

ತಳ ಸಮುದಾಯಗಳ ಪರವಾದ ಗಟ್ಟಿ ಧ್ವನಿಯ ಈ ನಾಟಕವು ಮೂರೇ ಪಾತ್ರಗಳು ಮತ್ತು ಕೆಲವೇ ರಂಗಪರಿಕರಗಳೊಂದಿಗೆ ಸಮಾಜವು ತಮಗೆ ಆರೋಪಿಸಿರುವ ಸೀಮಿತ ಗುರುತನ್ನು ಕಳಚಿ ಬಿಸಾಡಿ, ಹೊಸ ಅಸ್ಮಿತೆಯನ್ನು ಹುಡುಕಿಕೊಂಡಿರುವ ಕಥೆಯನ್ನು ಹೇಳುತ್ತದೆ...

ಕೆ. ಪಿ.ಲಕ್ಷ್ಮಣ್ ರಚನೆ ವಿನ್ಯಾಸ ಮತ್ತು ನಿರ್ದೇಶನದ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕವು ತಳ ಸಮುದಾಯಗಳು-ಸಮಾಜವು ತಮಗೆ ಆರೋಪಿಸಿರುವ ಸೀಮಿತ ಗುರುತನ್ನು ಕಳಚಿ ಬಿಸಾಡಿ, ಹೊಸ ಅಸ್ಮಿತೆಯನ್ನು ಹುಡುಕಿಕೊಂಡಿರುವ ಕಥೆಯನ್ನು ಹೇಳುತ್ತದೆ. ಮೂರು ಪ್ರತಿಭೆಗಳ ಸಾಧನೆಯ ಕಿರುಧಾರೆಗಳನ್ನು ಒಂದೆಡೆ ಸೇರಿಸಿ ‘ವಿ.ಎಲ್‌.ನರಸಿಂಹಮೂರ್ತಿ’ ಡ್ರಮಟರ್ಗ್‌ ಮಾಡಿ ಗಟ್ಟಿಯಾದ ಹಗ್ಗದಂತೆ ಹೊಸೆಯಲಾಗಿದೆ.

ಒಂದು ಸಣ್ಣ ವೃತ್ತದಷ್ಟು ಮಾತ್ರವಿರುವ ಜಾತಿಮೂಲದ ಅರ್ಥಹೀನ ಗುರುತಿನ ವ್ಯಾಪ್ತಿಯನ್ನು ಅಳಿಸಿ, ಅದನ್ನು ಮಿಲ್ಕಿ ವೇ ಗೆಲಾಕ್ಸಿಯ ಮಟ್ಟಕ್ಕೆ ವಿಸ್ತರಿಸಿಕೊಳ್ಳುವ ಆಶೆ, ಕನಸು, ಆತ್ಮವಿಶ್ವಾಸ ಮತ್ತು ಅದಕ್ಕೆ ಅಗತ್ಯವಾದ ಸತ್ವದ ಆಧಾರಗಳನ್ನು ದೊಡ್ಡಮಟ್ಟದಲ್ಲಿಯೇ ಹೊಂದಿರುವ ಪ್ರತಿಭಾಬೀಜಗಳ ಪ್ರತಿನಿಧೀಕರಣದಂತೆ ಈ ಮೂರು ಪಾತ್ರಗಳಿವೆ. ಬಾಬ್ ಮಾರ್ಲಿ ಪಾತ್ರದಲ್ಲಿ ಚಂದ್ರಶೇಖರ್ ಕೆ., ಶಿಕ್ಷಕಿ-ಸಾಹಿತ್ಯ ಪ್ರೇಮಿ ‘ನದಿ’ಯ ಪಾತ್ರದಲ್ಲಿ ಶ್ವೇತಾರಾಣಿ ಎಚ್‌.ಕೆ. ಮತ್ತು ಶಾಕ್ಯ ಪಾತ್ರದಲ್ಲಿ ಭರತ್ ಡಿಂಗ್ರಿ ಸಜೀವವಾಗಿ ನಟಿಸಿದ್ದಾರೆ.

ಅವರು ದನದ ಮಾಂಸ ತಿಂದರೆಂಬ ಕಾರಣಕ್ಕೆ ಮನೆ ಬಿಡಿಸಲಾಗುತ್ತಿರುವ ದೃಶ್ಯದೊಂದಿಗೆ ನಾಟಕ ಆರಂಭವಾಗುತ್ತದೆ. ಬುದ್ಧಿಯು, ಮಾಂಸ ತಿನ್ನುವ ಆಸೆಯನ್ನು ಅದುಮಿಟ್ಟಾದರೂ ಸರಿ, ಭವಿಷ್ಯ ಕಟ್ಟಿಕೊಳ್ಳಬೇಕೆಂದು ಹಂಬಲಿಸಿದರೆ; ಮನಸ್ಸು- ಆ ಆಸೆಯನ್ನು ಪೂರೈಸಿಕೊಂಡೇ ಭವಿಷ್ಯದತ್ತ ಸಾಗಬಹುದಾದ ಆಶಾವಾದವನ್ನು ಪ್ರಕಟಿಸುತ್ತದೆ. ಅಂತೂ ಅವರೆಲ್ಲ ಮನಸಿನ ಮಾತಿನಂತೆ ಮಾಂಸ ತಿಂದು, ಬೇರೊಂದು ಮನೆ ಹುಡುಕಿಕೊಳ್ಳಲು ತಯಾರಾಗುವ ದೃಶ್ಯದೊಂದಿಗೆ ನಾಟಕ ಮುಗಿಯುತ್ತದೆ. ಆಗ ಥಿಯೇಟರ್ ಹೊರಗಿನ ಕಂಬಗಳಿಗೆ, ಬಾಗಿಲಿಗೆ ಅಂಟಿಸಿರುವ ‘ಮನೆ ಬೇಕಾಗಿದೆ’ ಎಂಬ ಹಾಳೆಗಳೂ ರಂಗಪರಿಕರಗಳಾಗಿ ಪ್ರೇಕ್ಷಕನಿಗೆ ತಾಕಿ ರಂಗದ ಹೊರಗೂ ಒಂದು ಆತ್ಯಂತಿಕ ವಿಷಾದ ಭಾವವು ಉದ್ದೀಪಿತವಾಗುತ್ತದೆ.

ಈ ನಾಟಕದ ವಸ್ತು ಹಳೆಯದೇ. ಅದನ್ನು ನಿರೂಪಿಸಲು ಬಳಸಿರುವ ಭಾಷೆ, ತಂತ್ರ, ಶೈಲಿ ಮತ್ತು ಪರಿಕರಗಳು ಹೊಸತು. ಇಡೀ ನಾಟಕದ ಭಾಷೆ ದೈನಂದಿನ ನುಡಿಗಟ್ಟಿನಲ್ಲಿ ಮಾತಾಡುತ್ತಲೇ ಕಾವ್ಯಾತ್ಮಕ ಎತ್ತರಕ್ಕೆ ಏರುತ್ತದೆ. ಅಂಬೇಡ್ಕರ್‌ ಮಾತು, ಎನ್‌ಕೆಯ ಕವಿತೆ, ಅಲ್ಲಮನ ವಚನ, ರೋಹಿತ್ ವೇಮುಲ ಪತ್ರದ ಸಾಲುಗಳು ನಾಟಕದ ಅನುಭವವನ್ನು ಅದರ ಉದ್ದೇಶಿತ ವೃತ್ತದಾಚೆಗೂ ವಿಸ್ತರಿಸುವಲ್ಲಿ ನೆರವಾಗುತ್ತವೆ. ಒಂದು ವಿಶಿಷ್ಟ ಹದದ ರೂಪಕಾತ್ಮಕ ಭಾಷೆಯನ್ನು ಹೊಸದಾಗಿ ಕಟ್ಟಿಕೊಂಡಿರುವ ಬಗೆಯು ನಾಟಕಕ್ಕೆ ಹೊಸಶಕ್ತಿಯನ್ನು ನೀಡಿದೆ. ಅಬ್ಬರ, ಅತಿ ವಾಚ್ಯತೆ, ಘೋಷಣೆ, ರೋದನೆ, ಅತಿರಂಜನೆ, ಪ್ರತಿರೋಧ ಮತ್ತು ಪ್ರತಿಭಟನೆಗಳ ಸವಕಲು ಮಾರ್ಗದೆಡೆ ವಾಲಬಹುದಾದ ಸಾಧ್ಯತೆಯಿದ್ದ ವಸ್ತುವನ್ನು ಬಲು ಜತನದಿಂದ ಸರಿಸಿ ಅದರ ಆತ್ಮಕ್ಕೆ ಊನವಾಗದಂತೆ ಕಲಾತ್ಮಕವಾಗಿ ಮಂಡಿಸಲಾಗಿದೆ.

ಈ ಶೋಷಿತ ಸಂಕಥನದ ಆತ್ಮಕ್ಕೆ ಸಾತ್ವಿಕ ವ್ಯಂಗ್ಯ ಮತ್ತು ತಾತ್ವಿಕ ವಿರೋಧಗಳ ಶರೀರಧಾರಣೆ ಮಾಡಿ; ಕಾವ್ಯಾತ್ಮಕವಾದ ಭಾಷೆಯಲ್ಲಿ ನುಡಿಸಲು ಹಚ್ಚಲಾಗಿದೆ. ಈ ಭಾಷೆಯೇ ನಾಟಕಕ್ಕೆ ಹೊಸ ಹೊಳಪನ್ನು ನೀಡಿದೆ. ವಿಷಾದಗಾಥೆ ಮಾತ್ರವಾಗಬಹುದಾಗಿದ್ದ ನಾಟಕವನ್ನು ವಿಚಾರೋದ್ದೀಪಕವಾಗಿ ಬೆಳೆಸಿದೆ. ರೂಪಕಾತ್ಮಕವಾಗಿಯೂ ಗೆಲ್ಲಿಸಿದೆ. ಮಿಂಚುಹುಳು, ಚಿನ್ನದ ಕೊಕ್ಕಿನ ಹದ್ದು, ಮಾರಿಜಾತ್ರೆಯ ಬಲಿಪಶು.. ಎಲ್ಲ ರೂಪಕಗಳು ನಾಟಕದ ಧ್ವನಿಶಕ್ತಿಯನ್ನು ಹೆಚ್ಚಿಸಿವೆ. ಮುಖ್ಯವಾಗಿ ಇಡೀ ನಾಟಕದಲ್ಲಿ ಮಾತಿನಷ್ಟೇ ಪರಿಣಾಮಕಾರಿಯಾಗಿ ಮೌನವನ್ನೂ ದುಡಿಸಿಕೊಂಡಿರುವ ಪರಿ ಮಾತ್ರ ಅನನ್ಯವಾಗಿದೆ. ಕೆಲವೆಡೆ ಪ್ರಕಟವಾಗಿರುವ ಮೊನಚಾದ ವ್ಯಂಗ್ಯ ಪರಿಣಾಮಕಾರಿಯಾಗಿದೆ.

ತಾಳೆ ಗರಿ, ಗಿಟಾರ್, ಗಣೆ, ದನದ ಮಾಂಸ, ಕಕ್ಕೆ ಹೂವು, ದೇವದಾಸಿ ನೃತ್ಯ.. ಪ್ರತಿಯೊಂದೂ ರಂಗಾನುಭೂತಿಯ ವಿಸ್ತರಣೆಗಾಗಿ ದುಡಿದಿವೆ. ಇವುಗಳ ಬಳಕೆಯಲ್ಲೇ ಅಡಗಿರುವ ಸಮಾಜೋ-ರಾಜಕೀಯ ಹೇಳಿಕೆ ಕೂಡ ಪ್ರೇಕ್ಷಕರು ತಮಗೆ ತಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಯೊಂದನ್ನು ಅವರ ಎದೆಯೊಳಗೇ ನಾಟಿಸುವಂತೆ ಬಂದಿವೆ.

ಮತ್ತೆ ಮತ್ತೆ ಗುನುಗುವಂತಿರುವ ಮೂರೂ ಹಾಡುಗಳು ಕ್ರಮವಾಗಿ ಜನಪದೀಯ, ಸಿನಿಮೀಯ ಮತ್ತು ಜಮೈಕನ್ ರ‍್ಯಾಗೀ ಮಟ್ಟುಗಳಲ್ಲಿವೆ. ‘ಎಲ್ಲೀಗಂಟ..’ ಎಂಬ ಕೊನೆಯ ಹಾಡಿನ ರಾಗವು ಆವರಿಸಿಕೊಳ್ಳುವಂತಿದ್ದರೂ, ನಾಟಕದ ಆಶಯದ ಘೋಷವಾಕ್ಯವಾಗಿ ತುಸು ವಾಚ್ಯದತ್ತಲೇ ಹೆಚ್ಚು ವಾಲಿದೆ. ದೃಶ್ಯದಿಂದ ದೃಶ್ಯಕ್ಕೆ ಬೆಳೆಯುತ್ತ, ಆವರಿಸಿಕೊಳ್ಳುತ್ತ ಸಾಗುವ ಈ ಏಕಾಂಕವನ್ನು ಪುನಃ ಆಶಯವೊಂದಕ್ಕೆ ಕಟ್ಟಿಹಾಕುವ, ವಾಚ್ಯದಲ್ಲಿಯೇ ಅದನ್ನು ಪ್ರಕಟಿಸುವ-ಸೆಳೆತಕ್ಕೆ ಒಳಗಾದಂತೆ ಮತ್ತು ಈ ನಿರ್ಧಾರಕ ಮಾತಿನಿಂದಾಗಿ ಪ್ರೇಕ್ಷಕನ ಅಂತರಾವಲೋಕನೆಗೆ, ಆತ್ಮವಿಮರ್ಶೆಗೆ ತಡೆಯುಂಟಾದಂತೆ ಭಾಸವಾಗುತ್ತದೆ.

ಒಂದು ಮಟ್ಟಿಗಿನ ವಿಮೋಚನೆಗೆ ನಗರಗಳು ನೆರವಾದುದನ್ನು ಹೇಳುತ್ತಲೇ, ಅದರಾಚೆಗಿನ ಬೆಳವಣಿಗೆಗೆ ಸಂಬಂಧಿಸಿದಂತೆ ಅವಕ್ಕಿರುವ ಅಸೂಯೆ-ಅಸಮಾಧಾನಗಳನ್ನೂ ಇಲ್ಲಿ ಹೇಳಲಾಗಿದೆ. ಜಮೈಕನ್ ಕಂಪೋಸರ್-ಸಿಂಗರ್ ಬಾಬ್ ಮಾರ್ಲಿಯ ಹೆಸರೂ ಇಲ್ಲಿ ಒಂದು ಅರ್ಥಪೂರ್ಣ ರೂಪಕವಾಗಿ ಬಳಕೆಯಾಗಿದೆ. ನಾಟಕದ ಕೊನೆಯಲ್ಲಿ ಕೋಡಿಹಳ್ಳಿಯ ಬಾಲವನ್ನು ಕಿತ್ತೆಸೆದು ಮಿಲ್ಕಿವೇ ಗೆಲಾಕ್ಸಿಯನ್ನು ಬಾಬ್ ಮಾರ್ಲಿಯಾಗಿರುವ ಚಂದ್ರು ಸೇರಿಸಿಕೊಳ್ಳುತ್ತಾನೆ. ಹೀಗೆ ಸರಿಪಡಿಸಿಕೊಂಡಿರುವ ಹೆಸರೇ ನಾಟಕದ ಶೀರ್ಷಿಕೆಯಾಗಿದ್ದರೆ ಅದಿನ್ನೂ ಹೆಚ್ಚು ಧ್ವನಿಪೂರ್ಣವಾಗಿರುತ್ತಿತ್ತೇನೋ ಎನಿಸುತ್ತದೆ.

ಮೂರೇ ಪಾತ್ರಗಳ, ಕೆಲವೇ ರಂಗಪರಿಕರಗಳ, ಒಂದೂವರೆ ಗಂಟೆಯ ಈ ಅವಿಶ್ರಾಂತ ಏಕಾಂಕವು ವಿಶಿಷ್ಟ ರಂಗಾನುಭವವನ್ನಂತೂ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT