ಕನ್ನಡದ ವೈವಿಧ್ಯತೆ ಅಪಾರ. ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗ, ಮಲೆನಾಡು, ಕರಾವಳಿ... ಹೀಗೆ ರಾಜ್ಯದಲ್ಲಿ ಪ್ರಾದೇಶಿಕ ವೈವಿಧ್ಯತೆಗಳಿಗೆ ಅನುಗುಣವಾಗಿ ಭಾಷಾ ವೈವಿಧ್ಯತೆಯು ಕನ್ನಡದ ಸೊಬಗು. ಇಂಥ ಭಾಷಾ ವೈವಿಧ್ಯತೆ ನಡುವೆ ಕೆಲವು ಪ್ರದೇಶ, ಜನಾಂಗ, ಸಮುದಾಯಗಳೂ ವಿಶಿಷ್ಟವಾಗಿ ತಮ್ಮದೇ ಕನ್ನಡ ಮಾತನಾಡುತ್ತವೆ. ಅವುಗಳಲ್ಲಿ ಹವ್ಯಕ, ದೀವರು/ನಾಮಧಾರಿ, ನಾಡವ, ಹಸ್ಲರ, ಕೊಮಾರಪಂಥ ಸೇರಿದ ವಿಶಿಷ್ಟ ಕನ್ನಡಗಳಿವೆ. ಇವುಗಳಲ್ಲಿ ಮಲೆನಾಡಿನ ದೀವರ ಕನ್ನಡ ಆಡುಭಾಷೆ ತನ್ನ ಅನನ್ಯತೆಯಿಂದ ವೈಶಿಷ್ಟ್ಯಪೂರ್ಣ ಎನಿಸಿದೆ.

ಈ ಭಾಷೆಯ ರಂಗ ಪ್ರಯೋಗವೊಂದು ಈಗ ಹೆಸರು ಮಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ರಂಗಸೌಗಂಧ ಪ್ರಸ್ತುತಪಡಿಸಿದ ‘ಕ್ರಾಂತಿಯ ಕಿಡಿ’ ನಾಟಕ ಕೆಲವು ವಿಶೇಷತೆಗಳಿಂದ ಮಹತ್ವದ ರಂಗ ಪ್ರಸ್ತುತಿಯಾಗಿ ಗಮನಸೆಳೆಯುತ್ತಿದೆ. ಈ ರಂಗ ಪ್ರಸಂಗದ ವಿಷಯ ವಸ್ತು ಸ್ವಾತಂತ್ರ್ಯ ಹೋರಾಟ.

ಸಿದ್ದಾಪುರದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಅಗ್ರಗಣ್ಯರೂ, ಮೊದಲ ರಾಜಕೈದಿಯೂ ಆಗಿದ್ದ ಚೌಡಾ ನಾಯ್ಕ ಬೇಡ್ಕಣಿ, ರಾವ್ ಬಹದ್ದೂರ್ ಆಗಿದ್ದ ಅಪ್ಪ ಕನ್ನಾ ನಾಯ್ಕರ ದರ್ಪ-ದೌಲತ್ತು ಬ್ರಿಟಿಷ್ ಪರ ವಕಾಲತ್ತಿನ ನಡುವೆ ಸ್ವಾತಂತ್ರ್ಯ ಹೋರಾಟಕ್ಕಿಳಿದು ಅಪ್ಪನ ವಿರೋಧ ಕಟ್ಟಿಕೊಳ್ಳುತ್ತಾರೆ. ನಂತರದ್ದು ದುರಂತ ಕಥೆ. ಈ ಕಥಾ ಹಂದರದೊಂದಿಗೆ ಈ ಭಾಗದ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಪರಿಚಯಿಸುವಲ್ಲಿ ಎಸ್.ವಿ.ಹೆಗಡೆ ಮಘೇಗಾರರ ಮೂಲ ನಾಟಕ ‘ಕ್ರಾಂತಿಯ ಕಿಡಿ’ ಯಶಸ್ವಿಯಾಗಿದೆ.

ಈ ಕಥೆ ಆಧಾರಿತ ‘ಕ್ರಾಂತಿಯ ಕಿಡಿ’ ನಾಟಕ ನಿರ್ದೇಶಿಸಿರುವ ರಂಗಕರ್ಮಿ ಗಣಪತಿ ಹೆಗಡೆ ಹುಲಿಮನೆ ಮೂಲ ಕಥೆಗೆ ಧಕ್ಕೆಯಾಗದಂತೆ ಇದೇ ಕೃತಿಕಾರರ ಇನ್ನೊಂದು ನಾಟಕದ ಅಂಕವೊಂದನ್ನು ಸೇರಿಸಿ ಈ ರಂಗ ಪ್ರಯೋಗದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಒಂದು ಅಂಕದಲ್ಲಿ ಬರುವ ಪುರಾಣಿಕರ ಸ್ವಾತಂತ್ರ್ಯ ಹೋರಾಟದ ಕಥೆ ಬಿಟ್ಟರೆ, ಇಡೀ ನಾಟಕದ ಹೈಲೈಟ್ ದೀವರ ಗ್ರಾಮ್ಯ ಭಾಷೆ. ಅಪ್ಪಟ ಸ್ಥಳೀಯ ಕಮಟಿನ ದೀವರ ಭಾಷೆ ಮಾತನಾಡುವ ಪಾತ್ರಗಳು ‘ಇದೇ ಮಾತನ….., ಅದಕ್ಕೆ ಉತ್ತರವಾಗಿ ‘ಹೂಂ…ವಾ...’, ‘ಮನಿಂದ ಹೊರಗ ಹಾಕಬೈದು ದೇಸದಿಂದ ಹೊರಗಹಾಕಕಾಕೈತನ’
‘ಏ ಹುಡ್ಗ, ಯಾರಹತ್ರ ಮಾತಾಡಕಿಡದಿಯೆ ಗೊತೈತ, ನಾಕಕ್ಷರ ಕಲ್ತು ಇಂಗ್ಲಿಸಗೆ ಟಸ್-ಪುಸ್ ಅಂತ ಚೊಗರಹಾರಸಬಡ...’ ಎನ್ನುವ ನೆಲಮೂಲದ ಭಾಷೆ, ಭಾವನೆಗಳ ಪ್ರತಿಬಿಂಬದ ತೀವ್ರತೆಯನ್ನು ಹೆಚ್ಚಿಸಿದೆ.

ಹಾಗೆ ನೋಡಿದರೆ ಈ ನಾಟಕದ ತಂಡದ ನಿರ್ದೇಶಕರಾಗಲಿ, ನಟರಾಗಲಿ, ಯಾರೂ ದೀವರ ಸಮೂದಾಯದವರೇ ಅಲ್ಲ. ಆದರೆ ದೀವರ ಭಾಷೆಯ ಪ್ರಯೋಗದಲ್ಲಿ ಇಡೀ ತಂಡ ಹೊಸದೊಂದು ದಾಖಲೆಗೆ ಕಾರಣವಾಗಿದೆ. ಇದು ಮೊಟ್ಟ ಮೊದಲಿಗೆ ದೀವರ ಭಾಷೆ ಪ್ರಯೋಗಿಸಲ್ಪಟ್ಟ ಆಧುನಿಕ (ಹೊಸ ಅಲೆ) ನಾಟಕದ ದಾಖಲೆಯೂ ಹೌದು. (ಹೌದೇನೊ) ಇಂಥ ಐತಿಹಾಸಿಕ ಕಥೆಯ, ಕೃಷಿ ಸಂಸ್ಕೃತಿಯ ದೀವರ ಭಾಷೆಯ ನಾಟಕ ಪ್ರದರ್ಶನವನ್ನು ಕೈಗೆತ್ತಿಕೊಂಡ ರಂಗಸಂಸ್ಥೆಯ ನಿರ್ದೇಶಕ, ಕಲಾವಿದರ ಹಿನ್ನೆಲೆ ಸಣ್ಣದಲ್ಲ. ಉತ್ತರ ಕನ್ನಡ ಜಿಲ್ಲೆಯ ಮೊದಲ ಮತ್ತು ಕೊನೆಯ ಏಕೈಕ ವೃತ್ತಿ ನಾಟಕ ಕಂಪನಿ ಶ್ರೀ ಜಯಕರ್ನಾಟಕ ನಾಟಕ ಸಂಘದ ಪ್ರಸಿದ್ಧ ನಾಟಕಕಾರ ದಿವಂಗತ ಸೀತಾರಾಮ ಶಾಸ್ತ್ರಿ ಹುಲಿಮನೆಯವರ ಸ್ಮರಣೆಯಲ್ಲಿ ಹುಟ್ಟಿಕೊಂಡ ರಂಗಸೌಗಂಧ. ಪ್ರತಿವರ್ಷ ನಾಟಕೋತ್ಸವ, ವಿಚಾರ ಸಂಕಿರಣ, ಮಕ್ಕಳ ರಂಗ ತರಬೇತಿ ಶಿಬಿರ ನಡೆಸುವ ಸಂಸ್ಥೆ. ಈ ಸಂಸ್ಥೆ ರಂಗಭೂಮಿ ಇತಿಹಾಸದ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಶ್ರೀಧರ ಹೆಗಡೆ ಹುಲಿಮನೆ ಮಾರ್ಗದರ್ಶನದಲ್ಲಿ ಕ್ರಿಯಾಶೀಲ ಕೃಷಿಕ ಗಣಪತಿ ಹೆಗಡೆ ಹುಲಿಮನೆಯವರ ನೇತೃತ್ವದಲ್ಲಿ ನಡೆಯುತ್ತಿದೆ.

ರಂಗಭೂಮಿಗಾಗಿ ಸಮರ್ಪಿಸಿಕೊಂಡ ಹುಲಿಮನೆ ಕುಟುಂಬದ ಕುಡಿ ಗಣಪತಿ ಹೆಗಡೆ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಂಸ್ಥೆಯ ಕಲಾವಿದರ್ಯಾರೂ ವೃತ್ತಿಪರರಲ್ಲ. ಮಲೆನಾಡಿನ ಕೃಷಿ-ಕೃಷಿ ಸಂಬಂಧಿತ ಕೆಲಸಗಳು, ಮನೆ ವಾರ್ತೆ, ವೈದಿಕ ವೃತ್ತಿ, ಸರ್ಕಾರಿ ನೌಕರಿ ಸೇರಿದಂತೆ ನಾನಾ ಕ್ಷೇತ್ರಗಳ ವೈವಿಧ್ಯಮಯ ವ್ಯಕ್ತಿ-ವ್ಯಕ್ತಿತ್ವಗಳನ್ನು ಸೇರಿಸಿ ರಂಗತಂಡ ಕಟ್ಟಿಕೊಂಡಿರುವ ಹುಲಿಮನೆ ಕುಟುಂಬ, ಈ ಭಾಗದಲ್ಲಿ ಪ್ರಸಿದ್ಧವಾಗಿರುವ ಸಾಮಾಜಿಕ ನಾಟಕಗಳಿಗೆ ಪರ್ಯಾಯವಾಗಿ ಐತಿಹಾಸಿಕ, ಪೌರಾಣಿಕ, ನವೀನ ಸಾಹಿತ್ಯ ಪ್ರಕಾರಾಧಾರಿತ ರಂಗವಸ್ತುಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ. ನಾನಾ ಭಾಷಾ ಸೊಗಡಿನ ಹಲವು ನಾಟಕಗಳನ್ನು ಪ್ರದರ್ಶಿಸಿ ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡಿರುವ ರಂಗಸೌಗಂಧದ ದೀವರ ಭಾಷೆಯ ‘ಕ್ರಾಂತಿಯ ಕಿಡಿ’ ನಾಟಕ ಈ ಸಂಸ್ಥೆಯ ಪ್ರಯೋಗಶೀಲತೆಯ ವೈಶಿಷ್ಟ್ಯಕ್ಕೂ ಕನ್ನಡಿ ಹಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.