ಮನುಷ್ಯನ ವಿಕಾರಕ್ಕೆ ಹಲವು ಮುಖವಾಡಗಳು. ಮನುಷ್ಯನಾಳದಲ್ಲಿ ಅಡಗಿರುವ ಕ್ರೌರ್ಯ, ವಾಂಛೆ, ಅಧಿಕಾರದ ಹಪಾಹಪಿತನ, ಸಣ್ಣತನಗಳನ್ನು ಕಪ್ಪು ಬಿಳುಪಿನ ಚೌಕಟ್ಟಿನಲ್ಲಿಯೇ ಬಹಳ ಸಶಕ್ತವಾಗಿ ತೆರೆದಿಡುತ್ತವೆ ರಂಗಕರ್ಮಿ ಪ್ರಸನ್ನ ಅವರ ಕಲಾಕೃತಿಗಳು.

ಈ ಕಲಾಕೃತಿಗಳಲ್ಲಿ ಮೂರ್ತ ನೆಲೆಯಲ್ಲಿ ರಚಿತಗೊಂಡ ಪಾತ್ರಗಳ ಮುಖಮುದ್ರೆ ಅದೆಷ್ಟು ಪರಿಣಾಮಕಾರಿಯಾಗಿದೆಯೆಂದರೆ ಪಾತ್ರ ನಿಂತ ಭಂಗಿಯೇ ಭಾವವನ್ನೂ ಉಸುರುತ್ತದೆ.

ಮಹಾತ್ಮ ಗಾಂಧಿ ಈ ನೆಲದ ಬೆರಗು. ಆ ಬೆರಗಿನೆಡೆಗೆ ತೂರಿಬರುವ ಬಾಣಗಳು ಇಂದಿಗೂ ನಿಂತಿಲ್ಲ. ಪ್ರಸ್ತುತ ಹಲವು ದಿಕ್ಕುಗಳಿಂದ ಮಹಾತ್ಮನೆಡೆಗೆ ಬರುವ ಬಾಣಗಳ ಸಂಖ್ಯೆ ಈಗೀಗ ತುಸು ಹೆಚ್ಚೇ ದ್ವಿಗುಣಗೊಂಡು, ಗಾಸಿ ಮಾಡುತ್ತಿವೆ. ಕ್ರೌರ್ಯವನ್ನು ಬಿಂಬಿಸುವ ಆಕ್ರಮಣಕಾರಿ ಮುಖವಾಡಗಳು ಹಾಗೂ ಕತ್ತಿ, ಚೂರಿ, ಚಾಕು, ಪಿಸ್ತೂಲಿನಂಥ ನೆತ್ತರು ಹರಿಸಬಲ್ಲ ಹತಾರಗಳು. ಇವುಗಳ ಮುಂದೆ ಚರಕ ಹಿಡಿದು ತನ್ನೊಳಗೆ ತಾನೇ ಧ್ಯಾನಸ್ಥ ಸ್ಥಿತಿಯಲ್ಲಿರುವ ಮಹಾತ್ಮ. ಸದ್ಯಕ್ಕೆ ಇದು ಕೇವಲ ಕಲಾಕೃತಿಯಷ್ಟೆ ಅಲ್ಲ. ಬಾಪು ಎಂಬ ಬೆಳಕಿಗೆ ಒದಗಿಬಂದ ಸಂಕಷ್ಟವನ್ನು ಬಹಳ ವಾಸ್ತವ ನೆಲೆಯಲ್ಲಿ ಚಿತ್ರಿಸಿದ್ದಾರೆ.

ಪಾದವೇ ಮುಖವಾದರೆ, ಆ ಪಾದದಲ್ಲಿ ಮೂಡುವ ಕಣ್ಣು, ಮೂಗು, ಬಾಯಿ.. ಈ ಕಲಾಕೃತಿಯ ಸಂಕೇತವೇನಿರಬಹುದು ಎಂದು ಯೋಚಿಸಿದರೆ, ಸ್ಥಾವರಕ್ಕಳಿವುಂಟು ಜಂಗಮಕ್ಕಿಲ್ಲ ಎಂಬುದನ್ನು ಮತ್ತೆ ಮತ್ತೆ ಪ್ರತಿಪಾದಿಸಿದಂತೆ ಅನಿಸುತ್ತದೆ. ಬಿಳಿಯ ಕೊಕ್ಕರೆಯನ್ನು ನೋಡಿರುತ್ತೀರಿ. ಆದರೆ ಪ್ರಸನ್ನ ಅವರ ಕಲಾಕೃತಿಗಳಲ್ಲಿ ಕಪ್ಪು ಬಣ್ಣದ ಕೊಕ್ಕರೆಯೊಂದು ಮೈಮುರಿದು ನಿಂತಂತೆ ಭಾಸವಾಗುತ್ತದೆ. ಅವರ ಹಲವು ಕಲಾಕೃತಿಗಳಲ್ಲಿ ಕೊಕ್ಕರೆ, ಮೊಸಳೆ, ನಾಯಿ ಮತ್ತು ಹಕ್ಕಿಯೊಂದು ಮನುಷ್ಯನ ಒಳತೋಟಿಗಳನ್ನು ಹಿಡಿದಿಡುವ ಬಿಂಬಗಳಾಗಿಯೂ ಮೂಡಿವೆ.

ಇವು ರಂಗಕರ್ಮಿ ಪ್ರಸನ್ನ ಅವರ ‘ನಾಟಕವು ಬದುಕಿನೊಳಗೋ ಬದುಕು ನಾಟಕದೊಳಗೋ’ ಕಲಾಕೃತಿಗಳ ಪ್ರದರ್ಶನದಲ್ಲಿ ಕಂಡುಬಂದ ಕಲಾಕೃತಿಗಳು.

ಈ ಬಗ್ಗೆ ಅವರು ಹೇಳುವುದಿಷ್ಟು: ನಾಲ್ಕು ದಶಕಗಳಿಂದಲೂ ಚಿತ್ರ ಬಿಡಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ರಂಗಭೂಮಿಯಲ್ಲಿ ವಿನ್ಯಾಸ ಕಲೆಯಲ್ಲಿಯೂ ತೊಡಗಿಕೊಂಡಿದ್ದೆ. 2025ರಲ್ಲಿ ಬಿಡಿಸಿಟ್ಟ ಒಟ್ಟು 76 ಕೃತಿಗಳನ್ನು ಸದ್ಯ ಪ್ರದರ್ಶನಕ್ಕೆ ಇಡಲಾಗಿದೆ.

‘ಒಂದೆರಡು ವರ್ಷಗಳಿಂದೀಚೆಗೆ ಐಪ್ಯಾಡ್ ಬಳಕೆ ಮಾಡುವುದನ್ನು ಕಲಿತೆ. ಅದರಲ್ಲಿ ಚಿತ್ರ ಬಿಡಿಸುವುದಕ್ಕೆ ಆಗುತ್ತದೆ ಎಂದು ಗೊತ್ತಾದಾಗ ಐಪ್ಯಾಡ್ ಮತ್ತಷ್ಟು ಹತ್ತಿರವಾಯಿತು. ಈಗೀಗ ಸಿಕ್ಕಾಪಟ್ಟೆ ಸುತ್ತಾಟ ಮಾಡುತ್ತೇನೆ. ಮಳೆ ಬಂದು ಹಚ್ಚಹಸುರಿನಿಂದ ಕೂಡಿದ ಹೊಲಗದ್ದೆಗಳ ನಡುವೆ ಇರುವ ರೈಲಿನಲ್ಲಿ ಕುಳಿತರೆ, ಬರಿಯ ಚಿತ್ರಗಳೇ ಪಾತ್ರಗಳಾಗಿ ತಲೆಯಲ್ಲಿ ಮೂಡುತ್ತವೆ. ಅವೆಲ್ಲವನ್ನೂ ಐಪ್ಯಾಡ್ಗೆ ಇಳಿಸಿದ್ದೇನೆ. ಇಲ್ಲಿ ಪ್ರದರ್ಶನಗೊಂಡಿರುವುದೆಲ್ಲವೂ ಡಿಜಿಟಲ್ ಪ್ರಿಂಟ್ಸ್. ಹಾಗೆಂದು ಸಂಪೂರ್ಣ ತಂತ್ರಜ್ಞಾನ ಬಳಸಿಲ್ಲ. ಇದೇ ಸಮಯಕ್ಕೆ ಚಾರ್ಕೋಲ್ ಪೆನ್ಸಿಲ್ ಹಾಗೂ ಸಾಮಾನ್ಯ ಪೆನ್ಸಿಲ್ ಬಳಸಿಯೂ ಚಿತ್ರಗಳನ್ನು ಬಿಡಿಸಿದ್ದೇನೆ. ಅವೆಲ್ಲವನ್ನೂ ಸೇರಿಸಿ ಮತ್ತೊಂದು ಪ್ರದರ್ಶನ ಮಾಡುವ ಇರಾದೆಯಿದೆ.’ ಎನ್ನುತ್ತಾರೆ ಅವರು.

ಇವರ ಹಲವು ಕಲಾಕೃತಿಗಳನ್ನು ನೋಡುವಾಗ ಪಾತ್ರವೇ ಕಲಾಕೃತಿಯೋ, ಕಲಾಕೃತಿಯೇ ಪಾತ್ರವೋ ಎನ್ನುವಂತೆ ಭಾಸವಾದರೆ ಆಶ್ಚರ್ಯವಿಲ್ಲ.

‘ಈಚೀಚೆಗೆ ಹಕ್ಕಿಯನ್ನು ಕಲಾಕೃತಿಯಲ್ಲಿ ತರಲು ಇಷ್ಟವಾಗುತ್ತದೆ. ಹಕ್ಕಿಯೆಂಬುದು ಒಂದು ರೀತಿಯಲ್ಲಿ ನಟ ಇದ್ದ ಹಾಗೆ. ನಟ ಹಲವು ಬಾರಿ ಅಶಕ್ತ. ಸೂಪರ್ಸ್ಟಾರ್ ಆದರೆ ಬೇರೆ ಮಾತು. ಉಳಿದಂತೆ ನಟನಿಗೆ ಹಾರಬೇಕು, ಹಾಡಬೇಕು, ಹೊಳೆಯಬೇಕು ಎನ್ನುವ ತವಕ ತೀವ್ರವಾಗಿ ಇರುತ್ತದೆ. ಆದರೆ, ಸಣ್ಣ ಹಕ್ಕಿಯಂತೆ ಅವನೂ ನಿಸ್ಸಹಾಯಕ. ನಟ ಹಾಗೂ ಹಕ್ಕಿಯನ್ನು ಪರಸ್ಪರ ರೂಪಕವಾಗಿ ಇಟ್ಟುಕೊಂಡು, ಅದನ್ನೇ ಹಲವು ಕಲಾಕೃತಿಯಲ್ಲಿ ತಂದಿದ್ದೇನೆ’ ಎನ್ನುತ್ತಾರೆ ಅವರು.

ನಿಮ್ಮೆಲ್ಲ ಕಲಾಕೃತಿಗಳು ಕಪ್ಪು ಬಿಳುಪಿನಲ್ಲಿಯೇ ಮೂಡಿವೆಯಲ್ಲ, ಬಣ್ಣ ಏಕಿಲ್ಲ ಎಂಬ ಪ್ರಶ್ನೆಗೆ, ‘ ಇದೊಂದು ಕಸುಬುದಾರಿಕೆಯ ಸಮಸ್ಯೆ. ನನ್ನ ಕಸುಬು ನಾಟಕ ಮಾಡುವುದು. ಐವತ್ತು ವರ್ಷಗಳಿಂದ ನಾಟಕ ಮಾಡಿ, ಅದರಲ್ಲಿ ಒಳ್ಳೆಯ ಕಸುಬುದಾರಿಕೆ ಬಂದಿದೆ. ಚಿತ್ರವನ್ನು ಬಿಡಿಸುತ್ತೇನಾದರೂ ಕೌಶಲ ಇನ್ನು ಬರಬೇಕಷ್ಟೆ. ಕಸಬುದಾರಿಕೆ ರೂಢಿಯಾದ ಮೇಲೆ ಇಷ್ಟಿಷ್ಟೆ ಬಣ್ಣ ಬಳಸುತ್ತೇನೆ. ಟೀ ಕಷಾಯದ ಬಣ್ಣ ಹಾಗೂ ಚಾರ್ಕೋಲ್ ಪೆನ್ಸಿಲ್ ಬಳಸಿ ಕಲಾಕೃತಿ ಮಾಡಿದ್ದೇನೆ. ಆದರೂ ಬಣ್ಣಗಳನ್ನು ಬಳಸಿ ಕಲಾಕೃತಿ ಮಾಡುವಷ್ಟು ಧೈರ್ಯ ನನಗಿನ್ನು ಬಂದಿಲ್ಲ’ ಎನ್ನುವ ವಿನಮ್ರತೆ ಪ್ರಸನ್ನ ಅವರದ್ದು.

ಹೆಣ್ಣಿನ ಘನತೆ ಸೌಂದರ್ಯವನ್ನು ಮೀರಿದ್ದು. ಅವಳ ಘನತೆ ಅವಳ ವ್ಯಕ್ತಿತ್ವದಿಂದಲೇ ಹೊರತು ಕೇವಲ ಸೌಂದರ್ಯದಿಂದ ಅಲ್ಲ ಎಂಬುದನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಚಾಪೆಗಳನ್ನು ಹೆಣೆಯುವ ಕುಟುಂಬವೊಂದರ ಸರಳ ಕಲಾಕೃತಿಯೊಂದಿದೆ. ಈ ಕುಟುಂಬ ಬಡತನವನ್ನು ಹಾಸಿ ಹೊದ್ದಿದ್ದರೂ, ಆ ಹಾಸಿಗೆಯು ಕೌಶಲಯುಕ್ತವಾಗಿದೆ. ಕೌದಿ ಹೆಣೆಯುವ ಕೌಶಲವನ್ನು ರೇಖೆಯಾಗಿಸುವ ಮೂಲಕ ಕಲಾವಂತಿಕೆಯನ್ನು ಮೆರೆದಿದ್ದಾರೆ ಕಲಾವಿದ.

ಹೆಣ್ಣಿನ ಮೇಲೆ ಮೋಹಗೊಂಡ ಗಂಡು, ಅದನ್ನು ಕಣ್ಣಂಚಿನಲ್ಲಿಯೇ ಅರಿತ ಹೆಣ್ಣು, ಅವರೀರ್ವರ ನಡುವೆ ನುಸುಳಿ ಬಂದ ನಾಯಿ ಹೀಗೆ ಒಂದು ಚೌಕಟ್ಟಿನಲ್ಲಿ ಹಲವು ಪಾತ್ರಗಳನ್ನು, ಅವುಗಳ ಭಾವಗಳನ್ನು ಹೇಳುವ ಕೌಶಲವಂತೂ ಅವರಿಗೆ ದಕ್ಕಿದೆ. ಕಲಾಕೃತಿಗಳಲ್ಲಿ ಎರಡು ಪಾತ್ರಗಳ ನಡುವಿನ ಕಣ್ಣುಗಳು ಸಂಧಿಸಲು ಅನುವು ಮಾಡಿಕೊಟ್ಟುಬಿಟ್ಟರೆ, ಅವು ಆಡುವ ಮಾತುಗಳನ್ನು ನೋಡುಗರು ಗ್ರಹಿಸಲು ಸುಲಭವಾಗುತ್ತದೆ ಎನ್ನುವ ಆಲೋಚನೆ ಅವರದ್ದು.

ಚಾರ್ಕೋಲ್ ಪೆನ್ಸಿಲ್ನಿಂದ ರಚಿಸಿದ ಕಲಾಕೃತಿಗಳ ಜತೆಗೆ ವುಡ್ಬ್ಲಾಕ್ ಪ್ರಿಂಟಿಂಗ್, ಡೈಯಿಂಗ್ನಿಂದ ತಯಾರಿಸಿದ ಕಲಾಕೃತಿಗಳನ್ನು ಮುಂದಿನ ದಿನಗಳಲ್ಲಿ ಪ್ರದರ್ಶಿಸುವ ಇಚ್ಛೆ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.