ಜನರ ಪ್ರಜ್ಞೆಯ ಭಾಗವಾಗಿ ಹೋಗಿರುವ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನು ರಂಗಕ್ಕೆ ತರುವುದು ಸವಾಲೂ ಹೌದು, ಅವಕಾಶವೂ ಹೌದು. ಈ ಮಹಾಕಾವ್ಯಗಳನ್ನು ಆಧರಿಸಿ ಈಗಾಗಲೇ ನೂರಾರು ರಂಗಪ್ರಯೋಗಗಳು ಮೂಡಿಬಂದಿದ್ದು, ಈ ಪ್ರದರ್ಶನಗಳಿಗೆ ಹೊರತಾದ ಪ್ರೇಕ್ಷಕರ ಹೊಸತನದ ನಿರೀಕ್ಷೆಯನ್ನು ಪೂರೈಸಬೇಕಾಗಿರುವುದು ಸವಾಲು.

ಈ ಹೊಸ ಪ್ರಯೋಗ ರಂಗದ ಎಲ್ಲಾ ಭೌತಿಕ ಮತ್ತು ಬೌದ್ಧಿಕ ಪರಿಕರಗಳನ್ನು ಸೃಜನಶೀಲವಾಗಿ ಬಳಸಿಕೊಂಡು ಹೊರಹೊಮ್ಮಿಸಲು ಸಾಧ್ಯವಾದರೆ ಅದು ನಿರ್ದೇಶಕರಿಗೆ ಒದಗುವ ಅವಕಾಶ. ಸವಾಲುಗಳನ್ನು ಸ್ವೀಕರಿಸಿ ಸೃಷ್ಟಿಸಿದ ನವೀನ ಪ್ರಯೋಗಗಳ ಹೆಜ್ಜೆಗುರುತುಗಳು ಕರ್ನಾಟಕ ರಂಗಪಯಣದ ದಾರಿಯುದ್ದಕ್ಕೂ ಕಂಡು ಬರುತ್ತವೆ. ಈ ಸಾಲಿಗೆ ಹೊಸ ಸೇರ್ಪಡೆ ‘ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ’.

ಕನ್ನಡ ರಂಗಭೂಮಿಗೆ ಅದರ ಎಳೆವೆಯಲ್ಲಿಯೇ ಕಸುವು ತುಂಬಿದ ಕಂದಗಲ್ಲ ಹನುಮಂತರಾಯರು ಮಹಾಭಾರತವನ್ನು ಆಧರಿಸಿ ರಚಿಸಿದ ಏಳು ನಾಟಕಗಳನ್ನು ಆಕರವಾಗಿ ಬಳಿಸಿಕೊಂಡು, ಧಾರವಾಡ ರಂಗಾಯಣದ ರೆಪರ್ಟರಿ ಕಲಾವಿದರು, ಶಿವಮೊಗ್ಗ ರಂಗಾಯಣವು ಶಿವಮೊಗ್ಗದಲ್ಲಿ ಆಯೋಜಿಸಿದ್ದ ರಂಗ ಸಂಕ್ರಾಂತಿ ನಾಟಕೋತ್ಸವದಲ್ಲಿ ಈ ರಂಗರೂಪವನ್ನು ಪ್ರಸ್ತುತಪಡಿಸಿದರು.

ನಾಟಕದ ಆರಂಭದಲ್ಲಿ ಇದು ಮೂರು ಗಂಟೆಗಳ ನಾಟಕ ಎಂದು ನಿರೂಪಕರು ಹೇಳಿದಾಗ ಒಂದರಿಂದ ಎರಡು ಗಂಟೆಗಳ ನಾಟಕಕ್ಕೆ ಸಿದ್ಧವಾಗಿ ಬಂದಿದ್ದ ಪ್ರೇಕ್ಷಕರು ಕೊಂಚ ಕಸಿವಿಸಿಗೊಂಡರು. ಆದರೆ ಮೂರೂವರೆ ತಾಸು ಕಳೆದದ್ದೇ ಗೊತ್ತಾಗದಂತೆ ಹೊಸ ಮಹಾಭಾರತ ರಂಗದಲ್ಲಿ ವರ್ಣರಂಜಿತವಾಗಿ ತೆರೆದುಕೊಳ್ಳುತ್ತಾ ಸಾಗಿತು. ಎಲ್ಲರಿಗೂ ತಿಳಿದಿರುವ ಮಹಾಭಾರತದ ಕಥಾಸರಣಿಯನ್ನು, ಯಾವ ಬಗೆಯಲ್ಲಿ ವಿನ್ಯಾಸಗೊಳಿಸಿದ್ದಾರೆ ಎಂಬ ಕುತೂಹಲದಲ್ಲಿ ನಾಟಕ ಆರಂಭಗೊಂಡಿತು. ಅರಗಿನ ಅರಮನೆಯ ಬೆಂಕಿಯ ಅವಘಡದಿಂದ ಪಾಂಡವರು ಪಾರಾಗುವುದು, ದ್ರೌಪದಿಯ ಸ್ವಯಂವರ, ಪಾಂಡವರು-ಕೌರವರ ನಡುವಿನ ಪಗಡೆಯಾಟ, ಸೋತ ಪಾಂಡವರ ವನವಾಸ, ಮುರಿದ ಬೀಳುವ ಕೃಷ್ಣ ಸಂಧಾನ, ಕುರುಕ್ಷೇತ್ರ ಯುದ್ಧ.. ಹೀಗೆ ಮಹಾಭಾರತ ಮುಂದುವರೆಯಿತು.

ಕರ್ಣನ ವಿಚಾರವಾಗಿ ಜಾತಿ ತಾರತಮ್ಯ ಕುರಿತ ಮಾತು-ಪ್ರತಿಮಾತುಗಳು ನಾಟಕವನ್ನು ಸಮಕಾಲೀನಗೊಳಿಸುವಲ್ಲಿ ಸಹಕರಿಸಿದರೆ, ಖಾದಿ ಪ್ರಚಾರ ನಾಟಕದ ಬಂಧದ ಹೊರಗೆ ಉಳಿಯಿತು. ಕೃಷ್ಣನ ‘ರಾಜಕಾರಣ’ದ ತಂತ್ರಗಾರಿಕೆಗಳು, ದುರ್ಯೋಧನನ ಕರ್ಣನೆಡೆಗಿನ ಮಿತ್ರಪ್ರೇಮ, ಕರ್ಣನ ಸ್ವಾಮಿನಿಷ್ಠೆ, ಶಕುನಿಯ ಕುತಂತ್ರಗಳು, ನಮ್ಮ ಮನಸ್ಸಿನಲ್ಲಿದ್ದ ಮಹಾಭಾರತದ ಪಾತ್ರಗಳಿಗೆ ಸಾಕ್ಷೀಭೂತವಾದವು. ತನ್ನಿಬ್ಬರು ಮಕ್ಕಳು; ಅರ್ಜುನ-ಕರ್ಣರ ನಡುವೆ ಒಬ್ಬರನ್ನು ಉಳಿಸಿಕೊಳ್ಳುವ ಆಯ್ಕೆಯ ಪ್ರಶ್ನೆ ಬಂದಾಗ ಕುಂತಿಯ ತೊಳಲಾಟ ಮನೋಜ್ಞವಾಗಿ ಮೂಡಿಬಂದಿತು. ಕೊನೆಗೂ ಗೆಲ್ಲುವುದು ತಾಯಿ ಹೃದಯಕ್ಕಿಂತ ಜಾತಿಗ್ರಸ್ಥ ಸಾಮಾಜಿಕ ವ್ಯವಸ್ಥೆ ಹಾಗೂ ಈ ವ್ಯವಸ್ಥೆ ಮುಂದುವರೆಯಲು ಹೆಣ್ಣು ಕೂಡ ಒಂದು ಪರಿಕರ ಎಂಬ ಸಾರ್ವತ್ರಿಕ ಸತ್ಯದ ಧ್ವನಿ ಹೊರಡಿಸುವಲ್ಲಿ ಸಫಲವಾಯಿತು. ಈ ಸನ್ನಿವೇಶ ನಾಟಕದ ಅತ್ಯುತ್ತಮ ಭಾಗವಾಗಿ ಕಂಡುಬಂತು.

ವೃತ್ತಿ ರಂಗಭೂಮಿಯ ಪೌರಾಣಿಕ ನಾಟಕಗಳಲ್ಲಿ ಬಳಸುವ ದೀರ್ಘವಾದ, ಸಂಸ್ಕೃತಭೂಯಿಷ್ಠ ಪದಗಳಿಂದ ಕೂಡಿದ, ವೇಗವಾಗಿ ಮಾತನಾಡುವ ಶೈಲಿ ಕೆಲವು ವೇಳೆ ಕ್ಲೀಷೆಯೆನಿಸುತ್ತಿತ್ತು, ಅರ್ಥವೂ ಆಗುತ್ತಿರಲಿಲ್ಲ. ದ್ರೌಪದಿ ಸ್ವಯಂವರ ಮತ್ತು ಕೃಷ್ಣ ಕುಂತಿಯರ ಸಂವಾದದ ಪ್ರಸಂಗಗಳು ಈ ಶೈಲಿಗೆ ಹೊರತಾಗಿದ್ದು ಅನುಸರಿಸಬಹುದಾದ ಮಾತಿನ ಶೈಲಿಗೆ ಮಾದರಿಯಂತಿದ್ದವು.

ನಾಟಕದ ಅವಧಿ ವೃತ್ತಿ ರಂಗಭೂಮಿಯಂತೆ ದೀರ್ಘ ಮೂರು ಗಂಟೆಗಳು. ಬಹುಶಃ ಕಂದಗಲ್ಲರ ಮಹಾಭಾರತ ಆಧರಿತ ಎಲ್ಲ ನಾಟಕಗಳನ್ನು ಆಕರವಾಗಿ ಮಾಡಿಕೊಂಡಾಗ ಸಹಜವಾಗಿಯೇ ಅದು ಇಷ್ಟು ದೀರ್ಘ ಸಮಯವನ್ನು ನಿರೀಕ್ಷಿಸುತ್ತದೆ. ಇದೇನು ಸಮಸ್ಯೆಯಲ್ಲ. ‘ಮಲೆಗಳಲ್ಲಿ ಮದುಮಗಳು’ನಂತಹ ದೀರ್ಘಾವಧಿಯ ನಾಟಕಗಳು ಯಶಸ್ವಿಯಾದ ಹಲವು ಉದಾಹರಣೆಗಳಿವೆ. ಆದರೆ ಕಂದಗಲ್ಲರ ಮಹಾಭಾರತ ಆಧರಿತ ಎಲ್ಲಾ ನಾಟಕಗಳನ್ನು ಒಳಗೊಳ್ಳುವ ಉದ್ದೇಶದ ಕಾರಣಕ್ಕೆ ಕೈಬಿಡಬಹುದಾಗಿದ್ದ ಭಾಗಗಳನ್ನು ಸೇರ್ಪಡೆಗೊಳಿಸಿಕೊಂಡಿದ್ದು ನಾಟಕಕ್ಕೆ ಕೊಂಚ ಭಾರವೆನಿಸಿತು.

‘ಕಂದಗಲ್ಲ ಭಾರತ’ ವೃತ್ತಿ ರಂಗಭೂಮಿಯ ಜನಪ್ರಿಯ ಶೈಲಿ ಮತ್ತು ಆಧುನಿಕ ರಂಗಭೂಮಿಯ ರಂಗವಿನ್ಯಾಸಗಳೆರೆಡನ್ನೂ ಹದವಾಗಿ ಮಿಶ್ರಣ ಮಾಡಿ ಹೊರಹೊಮ್ಮಿದ ವಿಶಿಷ್ಟ ರಂಗಪ್ರಯೋಗ. ಪ್ರಕಾಶ ಗರುಡ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ರಂಗಪ್ರಯೋಗ ಮುಂದಿನ ಪ್ರಯೋಗಗಳಲ್ಲಿ ಮೀರಬಹುದಾದ ಒಂದೆರೆಡು ಮಿತಿಗಳ ನಡುವೆಯೂ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.

ವೇಷಭೂಷಣ (ರಜನಿ ಗರುಡ), ರಂಗಸಜ್ಜಿಕೆ (ಶ್ವೇತಾರಾಣಿ ಎಚ್.ಕೆ), ಬೆಳಕು (ಮಧು ಮಳವಳ್ಳಿ), ಹಿನ್ನೆಲೆ ಸಂಗೀತ (ರಾಘವ ಕಮ್ಮಾರ) ಎಲ್ಲವುಗಳಲ್ಲಿ ಪರಿಣಾಮಕಾರಿಯಾಗಿತ್ತು. ಪ್ರತಿಯೊಬ್ಬ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾದರು. ದ್ರೌಪದಿ (ರೇಖಾ ಹೊಂಗಲ), ಕುಂತಿ(ಇಂದು. ಡಿ), ಕರ್ಣ (ಸುನೀಲ ಲಗಳಿ), ಕೃಷ್ಣ (ಅಕ್ಕಮ್ಮಾ ದೇವರಮನಿ), ಶಕುನಿ (ವಿನೋದ ದಂಡಿನ) ಪಾತ್ರಗಳು ಈ ಕಲಾವಿದರ ಪ್ರತಿಭೆಯ ಜೊತೆಗೆ ಮಹಾಭಾರತದಲ್ಲಿನ ಈ ಪಾತ್ರಗಳ ವಿಶಿಷ್ಟತೆಯ ಕಾರಣಕ್ಕೂ ಗಮನ ಸೆಳೆದವು.⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.