ಶುಕ್ರವಾರ, ಆಗಸ್ಟ್ 7, 2020
25 °C

‘ಮರಳಿ ಬಂದಳು ಸೀತೆ’ಯ ಐಎಎಸ್ ಕನವರಿಕೆ

ರಾಘವೇಂದ್ರ ಕೆ. Updated:

ಅಕ್ಷರ ಗಾತ್ರ : | |

Prajavani

ಸ್ಟಾರ್‌ ಸುವರ್ಣದ ‘ಮರಳಿ ಬಂದಳು ಸೀತೆ’ಯ ಅಂಗಧ ಎಂದು ಖ್ಯಾತಿ ಪಡೆದಿರುವ ರಕ್ಷಿತಾ ಎಂ. ಅವರ ಮನದಾಳ....​

* ನಿಮಗೆ ವಿನೋದ ಪ್ರಜ್ಞೆ ಜಾಸ್ತಿ ಅನ್ನಿಸುತ್ತೆ...

ಯಾವಾಗಲೂ ಖುಷಿ ಖುಷಿಯಾಗಿ ಇರುತ್ತೇನೆ. ಎಲ್ಲರೂ ನನ್ನ ಹಾಗೆಯೇ ಇರಬೇಕು ಎಂದು ಬಯಸುತ್ತೇನೆ. ಯಾರಿಗೂ ನೋವು ನೀಡಲು ನನಗೆ ಇಷ್ಟ ಇಲ್ಲ. ನಮ್ಮಲ್ಲಿ ಸಂತೋಷ ನೆಲೆಗೊಂಡಿದ್ದರೆ, ಮಾತು– ನಡತೆಯಲ್ಲಿ ವಿನೋದ ಕಾಣಿಸಿಕೊಳ್ಳುತ್ತದೆ. 

* ಅಂಗಧ ಗಂಡೋ ಹೆಣ್ಣೋ..?

ನಾನೇ ಹುಡುಗನಂತೆ ಬೆಳೆದಿದ್ದೇನೆ. ನನ್ನ ಸ್ವಭಾವಕ್ಕೆ ತಕ್ಕ ಪಾತ್ರವನ್ನು ಕೊಟ್ಟಿದ್ದಾರೆ ಅನ್ನಿಸುತ್ತದೆ. ಮೊದಲು ಈ ಬಗ್ಗೆ ನನಗೂ ಗೊತ್ತಿರಲಿಲ್ಲ. ಬಹುತೇಕ ಜನರೂ ಅಂಗದಾ ಪುರುಷ ಎಂದೇ ತಿಳಿದಿದ್ದಾರೆ. ಈ ಬಗ್ಗೆ ತುಂಬ ಜನರ ಜೊತೆ ನಾನೂ ಚರ್ಚಿಸಿದ ನಂತರವಷ್ಟೇ ನನಗೆ ಈ ಸಂಗತಿ ಗೊತ್ತಾಗಿದ್ದೇನೆಂದರೆ ಆಂಜನೇಯನ ಮಗ ಅಂಗದ್‌ ಪುರುಷ, ಅಂಗಧ ಮಹಿಳೆ. ಇಲ್ಲಿ ಅಂಗಧ ತಾಯಿಯನ್ನು ಕಳೆದುಕೊಂಡಿದ್ದಾಳೆ. ತುಂಬ ಬುದ್ಧಿವಂತೆ ಹುಡುಗಿಯನ್ನು ತಂದೆಯೇ ಸಾಕಿದ್ದಾರೆ. ಹಿರಿಯರು ಇಷ್ಟಪಟ್ಟು ಆರ್ಯನ ಜೊತೆ ಮದುವೆ ಮಾಡಿದ್ದಾರೆ. 

* ನಿಮ್ಮ ಕನಸಿನ ಬಗ್ಗೆ ಹೇಳಿ.. 

ಇನ್ನೂ ನಾನು ಓದುತ್ತಿದ್ದೇನೆ. ಬಿಕಾಂ ಓದಿದ ನಂತರ ಸಾರ್ವಜನಿಕ ಆಡಳಿತದಲ್ಲಿ ಮಾಸ್ಟರ್ಸ್‌ ಮಾಡಿದೆ. ನಂತರ ಫೊರೆನ್ಸಿಕ್‌ ವಿಜ್ಞಾನದಲ್ಲಿಯೂ (ಹಸ್ತಾಕ್ಷರ ಅಪರಾಧಕ್ಕೆ ಸಂಬಂಧಿಸಿದಂತೆ) ಸ್ನಾತಕೋತ್ತರ ಪದವಿಯನ್ನು ಮಾಡಿದೆ. ಈಗ ಯುಪಿಎಸ್‌ಸಿಗೆ ಅಭ್ಯಾಸ ಮಾಡುತ್ತಿದ್ದೇನೆ. ಅದರ ಖರ್ಚು ವೆಚ್ಚಕ್ಕೆ ಹಣ ಅಗತ್ಯ ಇತ್ತು. ಅದಕ್ಕಾಗಿ ನಾನು ನಟಿಸುತ್ತಿದ್ದೇನೆ. ನಟನೆಗೆ ಒಗ್ಗಲು ನನ್ನ ನೆರವಿಗೆ ಬಂದಿದ್ದು ಭರತನಾಟ್ಯ. ಶಾಸ್ತ್ರೀಯವಾಗಿ ನಾಟ್ಯವನ್ನು ಅಧ್ಯಯನ ಮಾಡಿದ್ದೇನೆ. ‘ಮಹಾದೇವಿ’ಯಲ್ಲಿ ನಟಿಸುವಂತೆ ಶ್ರುತಿ ನಾಯ್ಡು ಕೇಳಿದರು. ಅದರಲ್ಲಿ ಬ್ರಹ್ಮಚಾರಿಣಿ ಪುಟ್ಟ ಪಾತ್ರವನ್ನು ಮಾಡಿದೆ. ಕೆಲವರು ಇನ್ನೂ ಆ ಪಾತ್ರದಿಂದಲೇ ಗುರುತಿಸುತ್ತಾರೆ. ನಂತರ ‘ಮನೆದೇವ್ರು’ನಲ್ಲಿ ಜಾನಕಿಯಾಗಿ, ‘ಏಟಿಗೆ ಎದುರೇಟು’ನಲ್ಲಿಯೂ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ.

* ಓದು– ಬಣ್ಣಕ್ಕೆ ಸಮಯವನ್ನು ಹೇಗೆ ಹೊಂದಾಣಿಕೆ ಮಾಡುತ್ತಿದ್ದೀರಿ?

ಒಂದು ಧಾರಾವಾಹಿಯಾಗಿದ್ದರೆ ಅಷ್ಟು ಕಷ್ಟ ಆಗುತ್ತಿರಲಿಲ್ಲ. ಎರಡು ಧಾರಾವಾಹಿ ಒಪ್ಪಿಕೊಂಡಿದ್ದರಿಂದ ಆ ಸರ್ಕಸ್‌ ಮಾಡಲೇಬೇಕು. ಶನಿವಾರ– ಭಾನುವಾರ ತರಗತಿಗಳು ಹಾಗೂ ಓದಿಗೆ ಮೀಸಲು. ಅಪರೂಪಕ್ಕೆ ಒಮ್ಮೊಮ್ಮೆ ಭಾನುವಾರವೂ ಬಣ್ಣ ಹಚ್ಚಬೇಕಾಗುತ್ತದೆ. ಅಂತಹ ಸಂದರ್ಭಗಳೂ ಸೇರಿದಂತೆ ಬಹುತೇಕ ಎಲ್ಲ ಹೊತ್ತಿನಲ್ಲಿಯೂ ನನ್ನ ಕೈಯಲ್ಲಿ ಪುಸ್ತಕ ಇರುತ್ತವೆ. ಟ್ರಾವೆಲ್‌ ಮಾಡುವಾಗ ಕೂಡ ಮೊಬೈಲ್‌ನಲ್ಲಿ ಪುಸ್ತಕಗಳನ್ನು ಹಾಕಿಕೊಂಡಿರುತ್ತೇನೆ. ವೇಳಾಪಟ್ಟಿಯನ್ನು ಸಿದ್ಧಮಾಡಿಕೊಂಡಿದ್ದೇನೆ. ದಿನದಲ್ಲಿ ಎಷ್ಟು ಓದಬೇಕು ಎಂಬ ಟಾರ್ಗೆಟ್‌ ತಪ್ಪದೇ ಪೂರೈಸುತ್ತೇನೆ.

* ಓದಲು ಜನಪ್ರಿಯತೆ ಅಡ್ಡಿ ಪಡಿಸುವುದಿಲ್ಲವೇ? 

ಮೇಕಪ್‌ ತೆಗೆದರೆ ನನ್ನನ್ನು ಗುರುತು ಹಿಡಿಯುವುದು ಕಷ್ಟ. ಈಗಷ್ಟೇ ಐದು ನಿಮಿಷದ ಹಿಂದೆ ಅಂಗಡಿಗೆ ಹೋಗಿದ್ದಾಗ ನನ್ನನ್ನೇ ನೋಡಿ ಐವರು ಯುವಕರು ಮಾತನಾಡುತ್ತಿದ್ದರು. ಅವರಿಗೆ ನಾನು ಕಿರುತೆರೆ ನಟಿ ಹೌದೋ ಅಲ್ಲವೋ ಎನ್ನುವ ಅನುಮಾನ. ‘ಹೌದು ಅವಳೇ ಇವಳು, ಇಲ್ಲ ಅವಳೂ ಇವಳ ಹಾಗೆ ಸ್ವಲ್ಪ ಕಾಣಿಸುತ್ತಾಳೆ’ ಹೀಗೆ ಮಾತನಾಡುತ್ತಿದ್ದರು. ಸುಲಭಕ್ಕೆ ಪರಿಚಯ ಸಿಗದಿರುವುದು ನನಗೆ ಒಂದು ರೀತಿಯಲ್ಲಿ ವರ, ಮತ್ತೊಂದು ರೀತಿಯಲ್ಲಿ ಶಾಪ. ಗುರುತು ಸಿಗದಿದ್ದರೆ ನಮ್ಮ ಖಾಸಗಿತನಕ್ಕೆ ಕಿರಿಕಿರಿ ಆಗುವುದಿಲ್ಲ. ಗುರುತಿಸಿದರೆ ನಮ್ಮ ಕೆಲಸಕ್ಕೆ ಮನ್ನಣೆ ಸಿಕ್ಕಿದೆ ಎನ್ನುವ ಸಂತೋಷ. ಆಕ್ಷಣದ ಖುಷಿ ಒಂದೆಡೆಯಾದರೆ ಗುರುತಿಸದೆ ಇದ್ದರೆ ನಮ್ಮ ಸ್ವಾತಂತ್ರ್ಯಕ್ಕೆ ಮಿತಿ ಇರುವುದಿಲ್ಲ. 

* ಐಎಎಸ್‌ ಮಾಡಲೇಬೇಕು ಎನ್ನುವ ಆಶೆ?

ನನಗೆ ಮೊದಲ ಗುರು ನನ್ನ ತಾತ. ಈಗ ಅವರು ಇಲ್ಲ. ತಾತ ಮತ್ತು ನಮ್ಮ ಅಮ್ಮ ಕೂಡ ಇದಕ್ಕೆ ಪ್ರೇರಣೆ ನೀಡಿದ್ದಾರೆ. ಈಗ ನಮ್ಮ ತಾತ ಇಲ್ಲ. ಅವರನ್ನು ಮನಸ್ಸಿನಲ್ಲಿ ನೆನೆದೇ ನನ್ನ ಕೆಲಸವನ್ನು ಆರಂಭಿಸುವುದು. ನನಗೆ ಡಾನ್ಸ್‌ ಚೆನ್ನಾಗಿ ಗೊತ್ತು. ಅಭಿನಯ ಮಾಡುತ್ತಿದ್ದೇನೆ. ಉಪನ್ಯಾಸಕಿ ಆಗುವ ಅರ್ಹತೆಯೂ ಇದೆ. ಅದೇ ಕಾರಣಕ್ಕೆ ಹೇಗೂ ನಟಿಸುತ್ತೀಯಾ ಅದನ್ನೇ ಮುಂದುವರಿಸು ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ನೀನು ಹುಡುಗಿ ನಿನಗೆ ಸುಮ್ಮನೇ ಯಾಕೆ ಅರಾಮಾಗಿ ಟೀಚಿಂಗ್‌ ಪ್ರೊಫೆಷನ್‌ಗೆ ಹೋಗು ಎಂದು ಸಲಹೆ ನೀಡುತ್ತಾರೆ. ನನ್ನ ಸಾಮರ್ಥ್ಯವನ್ನು ಮಿತಿಗೊಳಿಸಲು ಮನಸ್ಸಿಲ್ಲ. ಆಡಳಿತ ಸುಧಾರಣೆಗೆ ಅಡಿಗಲ್ಲು ನಾನಾಗಬೇಕು. ಸಾಮಾನ್ಯರ ಸೇವೆಗೆ ವಿಫುಲ ಅವಕಾಶ ಇಲ್ಲಿದೆ. ಒಳ್ಳೆಯದನ್ನು ಮಾಡಬೇಕು, ನ್ಯಾಯಕ್ಕಾಗಿ ಯಾರನ್ನಾದರೂ ಎದುರು ಹಾಕಿಕೊಳ್ಳುತ್ತೇನೆ. ಚಿಕ್ಕವಳಿದ್ದಾಗಲೇ ನಮ್ಮ ಮನೆಯಲ್ಲಿ ಕಚೇರಿ ವ್ಯವಹಾರಗಳನ್ನು ಸ್ವತಂತ್ರವಾಗಿ ಮಾಡಿಸಿಕೊಳ್ಳುವುದನ್ನು ಹೇಳಿಕೊಟ್ಟಿದ್ದಾರೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು