ಸೋಮವಾರ, ಮಾರ್ಚ್ 30, 2020
19 °C

ಕಿರುತೆರೆ ಮನೆ ಬಾಗಿಲು ತೆರೆಯುತ್ತೆ

ರಾಘವೇಂದ್ರ ಕೆ Updated:

ಅಕ್ಷರ ಗಾತ್ರ : | |

Prajavani

ನಿಖಿಲ್‌ ಮಾಳಿಯಕ್ಕಲ್‌ ಕಲರ್ಸ್‌ ಸೂಪರ್‌ನ ‘ಮನೆಯೇ ಮಂತ್ರಾಲಯ’ದ ಜೀವನ್‌ ಅವರು ‘ಸುಧಾ’ಗೆ ನೀಡಿದ ಸಂದರ್ಶನ 

* ಅರ್ಧಕ್ಕೆ ನಿಂತ ಪಾತ್ರವನ್ನು ನಿರ್ವಹಿಸುವ ಕಲಾವಿದನ ಸವಾಲು ಹೇಗಿರುತ್ತವೆ?

ತಾಂತ್ರಿಕ ಕಾರಣಗಳಿಗೆ ಹೀಗೆ ಆಗುತ್ತವೆ. ಕಥೆಯ ಅರ್ಧದಲ್ಲಿ ಪ್ರವೇಶ ಪಡೆದಾಗ ವೀಕ್ಷಕರಿಗೆ ಹಳೆಯ ನಟನ ರೂಪವನ್ನು ಮೀರಿ ನಮ್ಮ ರೂಪವನ್ನು ಉಳಿಸಬೇಕಾಗುತ್ತದೆ. ಇಲ್ಲಿ ಜೀವನ್‌ ಪಾತ್ರ ಒಂದೇ ಆದರೆ ನಟರು ಇಬ್ಬರಾಗಿದ್ದೇವೆ. ನಟರು ಯಾರೇ ಆದರೂ ಜೀವನ್‌ ಆಗಿಯೇ ಕಾಣಿಸಿಕೊಳ್ಳಬೇಕು. ಅದಕ್ಕಾಗಿ ಹಿಂದಿನ ಹಲವಾರು ಕಂತುಗಳನ್ನು ನೋಡಬೇಕು. ಕಥೆ ತಿಳಿಯುವ ಜೊತೆಗೆ ಪಾತ್ರದ ಬಗ್ಗೆ ಒಂದು ಕಲ್ಪನೆ ಬರುತ್ತದೆ. ಅದರ ಸ್ಟೈಲ್‌ ಜೊತೆ ನಮ್ಮದೇ ಆದ ಅನನ್ಯತೆಯನ್ನು ಪಾತ್ರಕ್ಕೆ ಹೇಗೆ ಕೊಡುತ್ತೇವೆ ಎನ್ನುವುದು ನಿಜವಾದ ಸವಾಲು. 

ಕಿರುಮಣಿ ಕುಟುಂಬ ಅತ್ಯಂತ ಮುದ್ದು ಮೊಮ್ಮೊಗ ಜೀವನ್‌. ಅವನು ತನಗೆ ಎಷ್ಟೇ ನೋವುಗಳಿದ್ದರೂ ಕುಟುಂಬದವರು ಚೆನ್ನಾಗಿರಬೇಕು ಎನ್ನುವು ಭಾವನೆ ಇರುವ ಸದ್ಗುಣಗಳ ಯುವಕ. ತೊಂದರೆಯಲ್ಲಿ ಇರುವವರಿಗೆ ಸದಾ ನೆರವು ನೀಡಲು ಮುಂದಿರುತ್ತಾನೆ. ವೈಯಕ್ತಿಕವಾಗಿ ತುಂಬಾ ಶಿಸ್ತಿನ ಗುಣವನ್ನು ಹೊಂದಿರುವ ಆ ಪಾತ್ರ ನನಗೆ ತುಂಬಾ ಇಷ್ಟ.

* ಪಾತ್ರಕ್ಕೆ ಜೀವ ತುಂಬ ಬೇಕು ಅಂದರೆ ನಿಮ್ಮ ಹೋಂ ವರ್ಕ್‌ ಹೇಗಿರುತ್ತದೆ?

ನಾವೂ ಬದುಕಿದ್ದೇವೆ ಎಂದರೆ ನಮಗೂ ಅನುಭವಗಳು ಆಗಿರುತ್ತವೆ. ಅಪಾರ ಅನುಭವಗಳ ಗಣಿ ಇಲ್ಲದಿದ್ದರೂ ದುಃಖ, ಸಂತೋಷ, ಸಿಟ್ಟು ಸೇರಿದಂತೆ ನವ ರಸಗಳ ನವ ಭಾವಗಳನ್ನೂ ಅನುಭವಿಸಿರುತ್ತೇವೆ. ಅವು ನಮ್ಮ ಮನೋಪಟಲದಲ್ಲಿ ಅಚ್ಚಳಿಯದೇ ಉಳಿದಿರುತ್ತವೆ. ಅದು ನಮಗೆ ನೆರವಿಗೆ ಬರುತ್ತದೆ ಎಂದು ನಾನು ಅಂದುಕೊಂಡಿದ್ದೇನೆ. ಏಕೆಂದರೆ ವೈಯಕ್ತಿಕವಾಗಿ ನಾನು ಅದನ್ನು ಅಳವಡಿಸಿಕೊಂಡಿದ್ದೇನೆ. ನನಗೆ ಕನ್ನಡಿ ಅತ್ಯಂತ ಪರಮ ಗುರು ಮತ್ತು ಗೆಳೆಯ ಕೂಡ ಹೌದು. ನಾನು ಪಾತ್ರವನ್ನು ಹೇಗೆ ನಿಭಾಯಿಸಬೇಕು ಎನ್ನುವ ತಾಲೀಮು ಕನ್ನಡಿ ಮುಂದೆ ಮಾಡುತ್ತೇನೆ. ಅಲ್ಲಿ ನಮ್ಮ ಭಾವಾಭಿವ್ಯಕ್ತಿಯ ಬಿಂಬ ಕಾಣುತ್ತೇವೆ. ನಮ್ಮ ಲೋಪ ದೋಷಗಳನ್ನೂ ಕಾಣಬಹುದು. ನಮ್ಮ ಅಭಿನಯ ನಮಗೆ ಇಷ್ಟ ಆಗುವಂತೆ ಆಗಬೇಕು. ಅದನ್ನು ನಾನು ಮಾಡುತ್ತೇನೆ. 

* ಕಲಾವಿದರಾಗಿದ್ದು ಹೇಗೆ ಏಕೆ?

ನಾನು ನಟ ಆಗಲೇ ಬೇಕು ಎಂದು ಈ ಕ್ಷೇತ್ರಕ್ಕೆ ಬಂದಿದ್ದೇನೆ. ಆದರೆ ಇದರಲ್ಲಿ ಸಾಕಷ್ಟು ಕಷ್ಟಗಳನ್ನೂ ಅನುಭವಿಸಿದ್ದೇನೆ. ನಾನು ಪಿಯುಸಿ ಓದುವಾಗಲೇ ‘ಊಟಿ’ ಎನ್ನುವ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿಯಿಸಿದ್ದೆ. ಅಷ್ಟರಲ್ಲಿ ಡಿಪ್ಲೊಮಾ ಆರ್ಟಿಟೆಕ್ಟ್‌ ಸೇರಿದೆ. ಅಷ್ಟರಲ್ಲಿ ಮೂರು ವರ್ಷ ಮನೆಯಲ್ಲೇ ಉಳಿದೆ. ನಮ್ಮ ಊರು ಮೈಸೂರು ಅಲ್ಲೇ ಒಂದಿಷ್ಟು ಸಮಯ ಇದ್ದಿದ್ದರಿಂದ ಅಲ್ಲಿ ರಂಗಭೂಮಿಗೆ ಪ್ರವೇಶ ಮಾಡಿದೆ. ಹಲವಾರು ನಾಟಕಗಳಲ್ಲೂ ನಟಿಸಿದೆ. ಅಷ್ಟರಲ್ಲಿ ‘ಏಳು ಹಗಲುಗಳು ಆರು ರಾತ್ರಿಗಳು’ ಎಂಬ ಸಿನಿಮಾ ಮಾಡಿದೆ. ಅದಾದ ಮೇಲೆ ಒಂದೊಂದೇ ಅಡಿಷನ್‌ಗಳನ್ನು ಕೊಡ್ತಾ ಇದ್ದೆ. ಅಂದಾಜು ಒಂದು ನೂರು ಆಡಿಷನ್‌ ನೀಡಿರಬಹುದು. ರಾಮ್‌ಜಿ ಈ ಪಾತ್ರಕ್ಕೆ ಅವಕಾಶ ಮಾಡಿಕೊಟ್ಟರು. ಕಿರುತೆರೆಯಲ್ಲಿ ಇದು ನನ್ನ ಮೊದಲ ಪ್ರಯತ್ನ. ಇಲ್ಲಿ ಅವಕಾಶ ಸಿಕ್ಕಿರುವುದು ನನ್ನ ಪಾಲಿಗೆ ಸಿಕ್ಕ ಕಾಣಿಕೆ ಎಂದೇ ಭಾವಿಸಿದ್ದೇನೆ. 

* ಮುಂದಿನ ಹೆಜ್ಜೆಗಳು ಹೇಗಿರಬಹುದು ಎಂದು ನಿರೀಕ್ಷೆ ಮಾಡಿದ್ದೀರಿ?

ನಟನಾಗಿಯೇ ಉಳಿಯುತ್ತೇನೆ ಎನ್ನುವ ನಂಬಿಕೆ ಇದೆ. ಆ ಬಗ್ಗೆ ಭ್ರಮೆಗಳಿಲ್ಲ. ಈಗ ಮೂರ್ನಾಲ್ಕು ಸಿನಿಮಾಗಳು ನನ್ನ ಮುಂದಿವೆ. ಆದರೆ ಕಿರುತೆರೆಯನ್ನು ಬಿಡುವುದಿಲ್ಲ. ಅದರಲ್ಲೂ ಈ ಪಾತ್ರವನ್ನು ನಾನೇ ಮಾಡಬೇಕು. ಇಲ್ಲಿ ನನಗೊಂದು ಐಡೆಂಟಿಟಿ ಸಿಕ್ಕಿದೆ. ಸಿನಿಮಾದಲ್ಲಿ ಗುರುತಿಸದಿದ್ದರೂ ಸೀರಿಯಲ್‌ ಮೂಲಕ ನನ್ನನ್ನು ಗುರುತಿಸಿದ್ದಾರೆ. ಅಂತಹ ಅನೇಕ ಅನುಭವಗಳು ನನಗೆ ಆಗಿವೆ. ನನಗೊಂದು ಸಮಾಜಿಕ ಮನ್ನಣೆ ಸಿಗುತ್ತಿದೆ ಎನ್ನುವುದು ಗೋಚರಿಸಿದೆ. ಸಿನಿಮಾ ಮತ್ತು ಕಿರುತೆರೆಗಳನ್ನು ನೋಡಿದಾಗ ಸಿನಿಮಾದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಲು ಹೋರಾಡಬೇಕಾಗುತ್ತದೆ. ಅದು ಅಂತಹ ಸವಾಲಿನ ಕ್ಷೇತ್ರ. ಟೀವಿಯಲ್ಲಿಯೂ ಸವಾಲುಗಳಿವೆ. ಆದರೆ ಸುಲಭವಾಗಿ ವೀಕ್ಷಕರ ಮನೆಯ ಬಾಗಿಲು ನಮಗಾಗಿ ತೆರೆಯುತ್ತದೆ. ಅವರ ಮನಸ್ಸನ್ನೂ ಸುಲಭವಾಗಿ ತಲುವ ವೇದಿಕೆಯಾಗಿದೆ. 

* ಫಿಟ್ನೆಸ್‌ ಹೆಲ್ತ್‌ ಹೇಗೆ ಕಾಪಾಡುತ್ತೀರಿ?

ಜಿಮ್‌ಗೆ ಹೋಗುತ್ತೇನೆ. ಹೊರಗಡೆಯಲ್ಲ ನನ್ನ ಬಜೆಟ್‌ಗೆ ತಕ್ಕಂತೆ ತಿನ್ನುತ್ತೇನೆ. ಅನ್ನವನ್ನು ತೀರಾ ಕಡಿಮೆ ಮಾಡಿದ್ದೇನೆ. ಹೊರಗಡೆ ಅಂದರೆ ಇಡ್ಲಿ ತಿನ್ನುವುದು ರೂಢಿ. ಆಹಾರದ ನಿರ್ವಹಣೆಯಲ್ಲಿ ತುಂಬಾ ನಿಗಾ ತೆಗೆದುಕೊಳ್ಳುತ್ತೇನೆ. ಆರೋಗ್ಯ ಮತ್ತು ಫಿಟ್ನೆಸ್‌ ಕಾಪಾಡದಿದ್ದರೆ ಕಷ್ಟ ಆಗುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)