ಶುಕ್ರವಾರ, ಸೆಪ್ಟೆಂಬರ್ 18, 2020
28 °C

ಹಾಡುತ, ಕುಣಿಯುತ ಬಾಲ ಕೋಗಿಲೆ...

ಅಭಿಲಾಷ ಬಿ.ಸಿ Updated:

ಅಕ್ಷರ ಗಾತ್ರ : | |

Prajavani

ಪ್ರೈಜ್‌ ಟ್ಯಾಗ್ ತಗೆಯದ ಹೊಚ್ಚ ಹೊಸ ಕನ್ನಡಕ ತೊಟ್ಟು, ಹೆಚ್ಚು ಕಡಿಮೆ ತನ್ನಷ್ಟೇ ಉದ್ದದ ಮೈಕ್‌ ಹಿಡಿದು, ವೇದಿಕೆ ಏರುವ ಏಳು ವರ್ಷ ವಯಸ್ಸಿನ ಈ ಪೋರ ಶೃತಿ ತಪ್ಪದಂತೆ ಗಾಯನದೊಂದಿಗೆ ಕುಣಿಯುತ, ಅಭಿನಯಿಸುತ, ರಂಜಿಸುವ ಮೋಡಿಗಾರ. 

‘ಕಲರ್ಸ್‌ ಸೂಪರ್’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ಹಾಡುತ್ತಿರುವ ಬಾಲ ಕೋಗಿಲೆ ‘ಅರ್ಜುನ್‌ ಇಟಗಿ’ಯ ವಿಶಿಷ್ಟ ಶೈಲಿಯನ್ನು ಮೆಚ್ಚದವರಿಲ್ಲ.

‘ಹೋಗುಮ, ಹೋಗುಮಾ, ಲಾಂಗು ಡ್ರೈವು ಹೋಗುಮಾ’ ಎನ್ನುತ್ತಾ ಕನ್ನಡ ಕೋಗಿಲೆಯ ವೇದಿಕೆ ಹತ್ತಿದ್ದ ಈತ ಮೊನ್ನೆ ಅಮ್ಮಂದಿರ ದಿನದಂದು ಹಾಡಿದ ‘ಅಮ್ಮಾ ನಾ ಫೇಲಾದೆ, ಅಮೆರಿಕ ಪಾಲಾದೆ’  ಹಾಡಿನವರೆಗೆ ಒಂದಕ್ಕಿಂತ ಮತ್ತೊಂದು ಜನಪ್ರಿಯವಾಗಿವೆ. ಜನಪದ ಗೀತೆಗಳ ಸುತ್ತಿನಲ್ಲಿ ಹಾಡಿದ ‘ನನ ಗೆಳತಿ, ನನ ಗೆಳತಿ ನನ ನೋಡಿ ನೀ ನಗತಿ’ ಗೀತೆಯನ್ನು ಕೇಳಿದವರೆಲ್ಲಾ ಗುನುಗುವಂತೆ ಹಾಡಿದ್ದ.

ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಅರ್ಜುನ್‌ ಎರಡನೇ ತರಗತಿ ವಿದ್ಯಾರ್ಥಿ. ಶಾಸ್ತ್ರೀಯವಾಗಿ ಸಂಗೀತ ಕಲಿಯದ ಈತನಿಗೆ ತಂದೆಯೇ ಸ್ಫೂರ್ತಿ. ರಂಗಭೂಮಿ ಹಾಗೂ ಸಂಗೀತದಲ್ಲಿ ಒಲವು ಹೊಂದಿರುವ ಅರ್ಜುನ್‌ ತಂದೆ ಚೆನ್ನಬಸಪ್ಪ ಮಗನ ಆಸಕ್ತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. 

ಅರ್ಜುನನ ಪ್ರತಿಭೆಯ ಅನಾವರಣಕ್ಕೆ ಅವರ ತಂದೆ ಖರೀದಿಸಿದ್ದ ಸೌಂಡ್‌ ಬಾಕ್ಸ್‌ ಮತ್ತು ಮೈಕ್‌ ಮೊದಲ ವೇದಿಕೆಯಾಗಿತ್ತು. ಯಲಬುರ್ಗಾದಲ್ಲಿ ಜೆರಾಕ್ಸ್‌ ಅಂಗಡಿ ‌ಇಟ್ಟುಕೊಂಡಿರುವ ಚೆನ್ನಬಸಪ್ಪ ಅವರು ಬಿಡುವಿನ ವೇಳೆಯಲ್ಲಿ ಹಾಡುಗಳನ್ನು ಹಾಡಿ ರಂಜಿಸುತ್ತಿದ್ದರು. ಇದನ್ನೇ ಅನುಸರಿಸಿದ ಅರ್ಜುನ್‌ ಸಹ ಅಂಗಡಿಯಲ್ಲೇ ಮೈಕ್‌ ಹಿಡಿದು ಹಾಡಲಾರಂಭಿಸಿದ. ‘ಬೊಂಬೆ ಹೇಳುತೈತೆ’ ಸಾರ್ವಜನಿಕವಾಗಿ ಈತ ಹಾಡಿದ ಮೊದಲ ಹಾಡು. ನಂತರ ಕೆಲ ಸಮಾರಂಭಗಳಲ್ಲಿ ಅನೇಕ ಗೀತೆಗಳಿಗೆ ದನಿಯಾಗಿದ್ದಾನೆ. 

ಮಗನ ಆಸಕ್ತಿಗೆ ನೀರೆರೆಯಲು ಪಣತೊಟ್ಟ ಚೆನ್ನಬಸಪ್ಪ ಅವರಿಗೆ ವೇದಿಕೆಗಳ ಕೊರತೆ ಕಾಡತೊಡಗಿತು. ಛಲಬಿಡದ ಅವರು ಅರ್ಜುನ್‌ ಇಟಗಿ ಹೆಸರಿನಲ್ಲಿ ಫೇಸ್‌ಬುಕ್‌ ಪೇಜ್‌ನ್ನು ತೆರೆದರು. ಮನೆಯ ಕೋಣೆಯೊಂದನ್ನು ವೇದಿಕೆ ರೂಪದಲ್ಲಿ ಸಜ್ಜುಗೊಳಿಸಿ ಮಗನ ಕೈಗೆ ಮೈಕ್‌ ನೀಡಿ ಹಾಡಿಸಿದರು. ಮೊಬೈಲ್‌ನಲ್ಲಿಯೇ ಅದನ್ನು ಚಿತ್ರೀಕರಿಸಿ ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದರು. ಕೆಲವೇ ದಿನಗಳಲ್ಲಿ ಫಾಲೋವರ್ಸ್‌ಗಳ ಸಂಖ್ಯೆ 10 ಸಾವಿರ ದಾಟಿತು. ಫೇಸ್‌ಬುಕ್‌ನಲ್ಲಿ ಅರ್ಜುನ್‌ನ ಅಭಿಮಾನಿಯೊಬ್ಬರು ನೀಡಿದ ಸಲಹೆಯಂತೆ ಹುಬ್ಬಳ್ಳಿಯಲ್ಲಿ ನಡೆದ ಕನ್ನಡ ಕೋಗಿಲೆ ಆಡಿಷನ್‌ಗೆ ಕರೆದೊಯ್ದ ಚನ್ನಬಸಪ್ಪ ಮಗನಿಗೊಂದು ಬೃಹತ್ ವೇದಿಕೆ ದೊರಕಿಸಿಕೊಡುವಲ್ಲಿ ಸಫಲರಾದರು.

ಈಗಲೂ ಪ್ರತಿವಾರ ಕಾರ್ಯಕ್ರಮ ಆಯೋಜಕರು ನೀಡುವ ಗೀತೆಯನ್ನು ಅಚ್ಚುಕಟ್ಟಾಗಿ ಮಗನಿಗೆ ಕಲಿಸುವ ಜವಾಬ್ದಾರಿಯನ್ನು ಸ್ವತಃ ಚೆನ್ನಬಸಪ್ಪ ಅವರೇ ವಹಿಸಿಕೊಂಡಿದ್ದಾರೆ. 

ವರನಟ ರಾಜ್‌ಕುಮಾರ್‌ ಅವರ ಅಭಿಮಾನಿಯಾಗಿರುವ ಅರ್ಜುನ್‌, ಅವರಂತೆಯೇ ಮೇರುನಟ ಹಾಗೂ ಅಪ್ರತಿಮ ಗಾಯಕನಾಗಬೇಕು ಎನ್ನುವ ಕನಸು ಹೊತ್ತಿದ್ದಾನೆ. ಹಾಗಾಗಿಯೇ ಆತ ಹಾಡಿರುವ ಗೀತೆಗಳಲ್ಲಿಯೇ ‘ಯಾರೇ ಕೂಗಾಡಲಿ’ ಆವನ ಮೆಚ್ಚಿನ ಗೀತೆ. 

‘ಮಗನಿಗೆ ಯಾವುದೇ ಹಾಡನ್ನು ಕಲಿಸುವಾಗ ಮೊದಲು ಸಾಹಿತ್ಯದ ಅರ್ಥವನ್ನು ಹೇಳುತ್ತೇನೆ. ಅದನ್ನು ಗ್ರಹಿಸುವ ಆತ ತಾನಾಗಿಗೇ ಅಭಿನಯಿಸುತ್ತಾ ಹಾಡುತ್ತಾನೆ’ ಎನ್ನುತ್ತಾ ಮಗನ ಗ್ರಹಿಕೆಯ ಸಾಮರ್ಥ್ಯವನ್ನು ಮೆಚ್ಚಿಕೊಳ್ಳುವ ಚೆನ್ನಬಸಪ್ಪ ಅವರು, ಅರ್ಜುನ ಮಿಮಿಕ್ರಿ, ಸಂಗೀತ, ನೃತ್ಯ, ನಟನೆ ಯಾವುದರಲ್ಲಿ ತೊಡಗಿಸಿಕೊಂಡರು ಪ್ರೋತ್ಸಾಹಿಸುವ ಹುಮ್ಮಸ್ಸಿನಲ್ಲಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು