ಬುಧವಾರ, ಜೂನ್ 3, 2020
27 °C

33 ವರ್ಷಗಳ ಹಿಂದೆ ‘ರಾಮಾಯಣ’ ಧಾರಾವಾಹಿಯಲ್ಲಿ ನಟಿಸಿದ್ದ ರಾಮ–ಸೀತೆ ಮುಂದೇನಾದರು?!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವ ಶ್ರೀರಾಮನನ್ನು ಸ್ಮರಣೆಗೆ ತಂದುಕೊಳ್ಳುವವರು, ರಮಾನಂದ ಸಾಗರ್ ನಿರ್ದೇಶನದ ‘ರಾಮಾಯಣ’ ಧಾರಾವಾಹಿಯಲ್ಲಿ ರಾಮನ ಪಾತ್ರ ನಿಭಾಯಿಸಿದ್ದ ಅರುಣ್ ಗೋವಿಲ್ ಅವರ ನಗುಮುಖವನ್ನೂ ನೆನಪು ಮಾಡಿಕೊಳ್ಳಬಹುದು.

ಈ ಧಾರಾವಾಹಿ ಮೊದಲು ಪ್ರಸಾರವಾಗಿ 33 ವರ್ಷಗಳು ಸಂದಿದ್ದರೂ, ಅರುಣ್ ಅವರ ಮುಖವು ವೀಕ್ಷಕರ ಮನಸ್ಸಿನಲ್ಲಿ ಇಂದಿಗೂ ಅಯೋಧ್ಯೆಯ ರಾಜಕುಮಾರ ಎಂದೇ ಅಚ್ಚೊತ್ತಿ ಕುಳಿತಿದೆಯಂತೆ. ಈ ವಿಚಾರವನ್ನು ಅರುಣ್ ಅವರೇ ಹಂಚಿಕೊಂಡಿದ್ದಾರೆ.

‘ರಾಮಾಯಣ’ ಧಾರಾವಾಹಿಯು ಈಗ ದೂರದರ್ಶನ ವಾಹಿನಿಯಲ್ಲಿ ಮರುಪ್ರಸಾರ ಆಗುತ್ತಿದೆ. 1987–88ರಲ್ಲಿ ಮೊದಲು ಪ್ರಸಾರ ಆಗಿದ್ದ ಈ ಧಾರಾವಾಹಿಯಲ್ಲಿ ದೀಪಿಕಾ ಚಿಖಾಲಿಯಾ ಅವರು ಸೀತೆಯ ಪಾತ್ರ ನಿಭಾಯಿಸಿದ್ದರು. ವಾಲ್ಮೀಕಿ ರಾಮಾಯಣ ಹಾಗೂ ತುಳಸೀದಾಸರ ರಾಮಚರಿತಮಾನಸ ಆಧರಿಸಿ ಈ ಧಾರಾವಾಹಿಯ ಕಥೆಯನ್ನು ಸಿದ್ಧಪಡಿಸಲಾಗಿತ್ತು.

ಈ ಧಾರಾವಾಹಿ ಅದೆಷ್ಟು ಜನಪ್ರಿಯವಾಗಿತ್ತೆಂದರೆ ಅರುಣ್, ದೀಪಿಕಾ ಹಾಗೂ ಲಕ್ಷ್ಮಣನ ಪಾತ್ರ ನಿಭಾಯಿಸಿದ ಸುನಿಲ್ ಲಹ್ರಿ ಅವರನ್ನು ಜನ ದೇವರಂತೆ ಕಾಣುತ್ತಿದ್ದರು! ಗೋವಿಲ್ ಅವರು ರಮಾನಂದ ಸಾಗರ್ ಅವರ ‘ವಿಕ್ರಮ್ ಮತ್ತು ಬೇತಾಳ’ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದರು. ಅದಾದ ನಂತರ ಅರುಣ್ ಅವರಿಗೆ ರಾಮಾಯಣದಲ್ಲಿ ರಾಮನ ಪಾತ್ರ ನಿಭಾಯಿಸುವ ಅವಕಾಶ ದೊರೆಯಿತು.

‘ರಾಮನ ಪಾತ್ರಕ್ಕಾಗಿ ನಾನು ಆಡಿಷನ್ ಕೊಟ್ಟಿದ್ದೆ. ಆದರೆ, ಆರಂಭದಲ್ಲಿ ನಾನು ಯಶಸ್ಸು ಕಾಣಲಿಲ್ಲ. ಏನಾಯಿತು ಎಂಬುದು ನನಗೆ ಗೊತ್ತಿಲ್ಲ. ಮೇಕಪ್‌ ಮಾಡಿಕೊಂಡು ನಾನು ಫೊಟೊಶೂಟ್ ಮಾಡಿಸಿಕೊಂಡೆ. ಆದರೆ ನಾನು ಶ್ರೀರಾಮನಂತೆ ಕಾಣಿಸುತ್ತಿರಲಿಲ್ಲ. ಅದಾದ ನಂತರ, ನನ್ನ ಮುಖದಲ್ಲಿ ಒಂದು ನಗು ಬೇಕು ಎಂದು ತೀರ್ಮಾನಿಸಲಾಯಿತು. ಆ ನಗು ಎಲ್ಲವನ್ನೂ ಸರಿಮಾಡಿತು’ ಎಂದು ಅರುಣ್ ಅವರು ನೆನಪಿಸಿಕೊಳ್ಳುತ್ತಾರೆ.

ಈ ಧಾರಾವಾಹಿಯಲ್ಲಿ ನಟಿಸಿದ ನಂತರ ಅರುಣ್ ಅವರು ಕೆಲವು ಸಮಸ್ಯೆಗಳನ್ನೂ ಕಾಣಬೇಕಾಯಿತು! ‘ರಾಮಾಯಣದ ನಂತರ ನನ್ನ ಸಿನಿಮಾ ವೃತ್ತಿ ಬಹುತೇಕ ಅಂತ್ಯವಾಯಿತು. ಆ ಧಾರಾವಾಹಿಯಲ್ಲಿ ನಟಿಸುವುದಕ್ಕಿಂತ ಮೊದಲು ನಾನು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೆ. ನಾನು ಶ್ರೀರಾಮ ಪಾತ್ರದ ಪ್ರಭಾವಳಿಯಿಂದ ಹೊರಬರಲು ಯತ್ನಿಸಿದೆ. ಆದರೆ ಅದು ಫಲ ಕೊಡಲಿಲ್ಲ’ ಎಂದು ಅರುಣ್ ಹೇಳುತ್ತಾರೆ. ‘ನಾನು ರಾಮನಾಗಬೇಕು ಎಂಬುದು ದೇವರ ಇಚ್ಛೆ ಆಗಿತ್ತು ಅನಿಸುತ್ತದೆ. ಎಷ್ಟು ಜನರಿಗೆ ಇಂಥದ್ದೊಂದು ಅವಕಾಶ ಸಿಕ್ಕಿದೆ, ಹೇಳಿ? ಜನ ನನ್ನನ್ನು ಅರುಣ್ ಗೋವಿಲ್ ಎಂದು ಕರೆಯುವುದಿಲ್ಲ. ಅವರು ನನ್ನನ್ನು ರಾಮ ಎಂದು ಕರೆಯುತ್ತಾರೆ’ ಎಂದು ಅರುಣ್ ಹೇಳುತ್ತಾರೆ.

ದೀಪಿಕಾ ಪಯಣ ಭಿನ್ನವಾಗಿತ್ತು...

ಸೀತೆಯ ಪಾತ್ರಕ್ಕೆ ಜೀವ ತುಂಬಿದ್ದ ದೀಪಿಕಾ ಅವರಿಗೆ ‘ರಾಮಾಯಣ’ ಧಾರಾವಾಹಿಯು ಅವಕಾಶಗಳ ಹೆಬ್ಬಾಗಿಲನ್ನು ತೆರೆದುಕೊಟ್ಟಿತು. ಈ ಧಾರಾವಾಹಿಯಲ್ಲಿ ನಟಿಸಿದ ನಂತರ ದೀಪಿಕಾ ಅವರು ಪ್ರಾದೇಶಿಕ ಸಿನಿಮಾ ರಂಗದ ಕಡೆ ಮುಖ ಮಾಡಿದರು. ಇದಾದ ನಂತರ ರಾಜಕೀಯ ರಂಗದಲ್ಲಿ ಹಾಗೂ ತಮ್ಮ ಪತಿಯ ವಾಣಿಜ್ಯ ವಹಿವಾಟಿನಲ್ಲಿ ಕೂಡ ಅವರು ಅದೃಷ್ಟ ಪರೀಕ್ಷೆ ನಡೆಸಿಕೊಂಡರು.

ಈಗ ದೀಪಿಕಾ ಅವರು ಸಿನಿಮಾ ರಂಗಕ್ಕೆ ಮರಳಿ ಬಂದಿದ್ದಾರೆ. 2019ರಲ್ಲಿ ‘ಬಾಲಾ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ‘ಧಾರಾವಾಹಿಯ ನಂತರ ಹದಿನೈದು ವರ್ಷ ನನಗೆ ಉಸಿರಾಡಲೂ ಸಮಯ ಸಿಗದಷ್ಟು ಕೆಲಸ ಇತ್ತು. ಕಳೆದ 8–10 ವರ್ಷಗಳಿಂದ ನಾನು ಬೆಳೆಯಲು ಯತ್ನಿಸುತ್ತಿದ್ದೇನೆ, ಇನ್ನಷ್ಟು ಅರ್ಥಪೂರ್ಣವಾದ ಕೆಲಸಗಳನ್ನು ಹುಡುಕಿಕೊಳ್ಳಲು ಯತ್ನಿಸುತ್ತ ಇದ್ದೇನೆ. ನಾನು ಬಿಡಿಸಿದ ಕಲಾಕೃತಿಗಳ ಪ್ರದರ್ಶನ ಆಯೋಜಿಸಲು ಶುರು ಮಾಡಿದ್ದೇನೆ’ ಎಂದು ದೀಪಿಕಾ ಹೇಳುತ್ತಾರೆ.

‘ಕಳೆದ ಮೂರು ವರ್ಷಗಳಿಂದ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೇನೆ. ಗುಜರಾತಿ ಭಾಷೆಯ ಎರಡು ಸಿನಿಮಾಗಳಲ್ಲಿ ನಟಿಸಿದ್ದೇನೆ. ಇನ್ನೊಂದು ಹಿಂದಿ ಸಿನಿಮಾ ಕೈಯಲ್ಲಿದೆ. ಒಳ್ಳೆಯ ಸ್ಕ್ರಿಪ್ಟ್‌ಗಳಿಗಾಗಿ ಕಾಯುತ್ತ ಇದ್ದೇನೆ’ ಎಂದರು. ಅರುಣ್ ಅವರಿಗೆ ಎದುರಾದ ಸಮಸ್ಯೆ ದೀಪಿಕಾ ಅವರಿಗೆ ಎದುರಾಗಲಿಲ್ಲ. ಅವರು ‘ಸೀತೆ’ಯ ಪಾತ್ರದ ಚೌಕಟ್ಟಿನಿಂದ ಹೊರಬರುವುದು ಕಷ್ಟವಾಗಲಿಲ್ಲ.

‘ಅರುಣ್ ಮತ್ತು ಸುನಿಲ್ ಪಾಲಿಗೆ ಅವರು ನಿಭಾಯಿಸಿದ ‍ಪಾತ್ರಗಳೇ ದೊಡ್ಡ ಮಿತಿ ಕೂಡ ಆಗಿದ್ದವು. ಅವರ ಪಾಲಿಗೆ ವೃತ್ತಿ ಬದುಕು ಅಂತಿಮ ಹಂತಕ್ಕೆ ಬಂದಂತೆ ಆಗಿತ್ತು. ಆದರೆ ನನ್ನ ಪಾಲಿಗೆ ಸೀತೆ ಪಾತ್ರ ಎಂಬುದು ವೃತ್ತಿಯ ಆರಂಭ ಎಂಬಂತೆ ಇತ್ತು’ ಎಂದು ದೀಪಿಕಾ ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು