ಬುಧವಾರ, ಫೆಬ್ರವರಿ 8, 2023
18 °C

ರಾಜಕೀಯಕ್ಕೆ ಬರುತ್ತೇನೆ.. ಸದ್ಯದಲ್ಲೇ ‘ಶುಗರ್ ಡ್ಯಾಡಿ’ ಪುಸ್ತಕ ಬಿಡುಗಡೆ: ಸಂಬರಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 8ರ ಟಾಪ್ 5ರಲ್ಲಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಅವರು ಸದ್ಯದಲ್ಲೇ ‘ಶುಗರ್ ಡ್ಯಾಡಿ’ ಎಂಬ ಪುಸ್ತಕ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಲೈವ್ ಸಂವಾದದಲ್ಲಿ ಭಾಗವಹಿಸಿದ್ದ ಅವರು, ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತಮ್ಮ ಅನುಭವ ಮತ್ತು ತಮ್ಮ ವೃತ್ತಿಜೀವನದ ಕುರಿತಾದ ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡರು.

ಬಿಗ್ ಬಾಸ್ ಮುಗಿಯಿತು. ಮುಂದೆ ಏನು? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಉದ್ಯಮವನ್ನು ವಿಸ್ತರಿಸಲು ಬಯಸುತ್ತೇನೆ. ಸದ್ಯದಲ್ಲೇ ‘ಶುಗರ್ ಡ್ಯಾಡಿ’ಎಂಬ ಪುಸ್ತಕ ಬಿಡುಗಡೆ ಮಾಡುವುದಾಗಿ ಹೇಳಿದರು. ಡ್ರಗ್ಸ್ ಚಟದ ಕುರಿತ ಕೆಲವು ವಿಷಯಗಳನ್ನೊಳಗೊಂಡ ಪುಸ್ತಕ ಇದಾಗಿರುತ್ತದೆ ಎಂದು ಹೇಳಿದರು.

ಈ ಹಿಂದೆ ‘ಶುಗರ್ ಡ್ಯಾಡಿ’ ಎಂದು ಟ್ವೀಟ್ ಮಾಡಿದಾಗ ಭಾರೀ ಸುದ್ದಿಯಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಪುಸ್ತಕ ಆ ಕುರಿತಾಗಿದ್ದಲ್ಲ ಎಂದು ಹೇಳಿದರು. ಆ ವಿವಾದದ ಸಂದರ್ಭ ಸ್ವತಃ ಮುಖ್ಯಮಂತ್ರಿಗಳು ನನಗೆ ಕರೆ ಮಾಡಿ  ಮಾತನಾಡಿದರು ಎಂದು ತಿಳಿಸಿದರು. ನಾನು ಟ್ವೀಟ್ ಮಾಡಿದ್ದ ಶುಗರ್ ಡ್ಯಾಡಿ ಎಂಬ ಪದ ಆ ತಿಂಗಳಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಆಗಿತ್ತು. ಹಾಗಾಗಿ, ಆ ಹೆಸರನ್ನು ಇಟ್ಟಿರುವೆ. ಅಕ್ಟೋಬರ್‌ನಲ್ಲಿ ಪುಸ್ತಕ ಬಿಡುಗಡೆ ಮಾಡುವುದಾಗಿ ಹೇಳಿದರು. ಆದರೆ, ಪ್ರಶಾಂತ್ ಸಂಬರಗಿ ಆ ಪುಸ್ತಕದ ಮೂಲಕ ಮತ್ತೆ ಸುದ್ದಿಗೆ ಬರುತ್ತಾರಾ ಎಂಬ ಕುತೂಹಲ ಇಲ್ಲದಿಲ್ಲ. 
 
ಇದೇವೇಳೆ, ಸ್ಯಾಂಡಲ್‌ವುಡ್ ಡ್ರಗ್ಸ್ ಹಗರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವುಗಳನ್ನು ಬಹಿರಂಗಪಡಿಸಿದ ಬಳಿಕ ನನ್ನ ನೇರ ನುಡಿಯ ಬಗ್ಗೆ ಜನಮೆಚ್ಚಿಕೊಂಡಿದ್ದಾರೆ. ನನ್ನ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳು ದಾಖಲಾಗಿವೆ. ಆದರೆ, ಅದಕ್ಕೆಲ್ಲ ಹೆದರುವುದಿಲ್ಲ. ಸದ್ಯದಲ್ಲೇ ಮತ್ತೊಂದು ಪತ್ರಿಕಾಗೋಷ್ಠಿ ನಡೆಸುವುದಾಗಿ ಹೇಳಿದರು.

ಇದನ್ನೂ ಓದಿ.. ತೆಳು ಉಡುಗೆಯಲ್ಲಿ ಬಿಸಿ ಏರಿಸಿದ ಕಂಗನಾ ರನೌತ್

ಡ್ರಗ್ಸ್ ಬಗ್ಗೆ ಹಾಡು: ಡ್ರಗ್ಸ್ ಜಾಲದಲ್ಲಿ ಸಿಲುಕಿ ತಮ್ಮ ಶಕ್ತಿ ಕಳೆದುಕೊಳ್ಳುತ್ತಿರುವ, ತಮ್ಮ ಯೌವ್ವನ ಕಳೆದುಕೊಳ್ಳುತ್ತಿರುವ ಯುವಜನರಿಗಾಗಿ ಡ್ರಗ್ಸ್ ಹಾವಳಿ ಕುರಿತಂತೆ ಒಂದು ಹಾಡನ್ನು ಸಿದ್ಧಪಡಿಸಿದ್ದು ನವೆಂಬರ್ 1 ರಂದು ರಿಲೀಸ್ ಮಾಡುವುದಾಗಿ ಸಂಬರಗಿ ಹೇಳಿದ್ದಾರೆ. ಇದರಲ್ಲಿ ಡ್ರಗ್ಸ್ ಪೀಡಿತ ಯುವಕರ ಪುನಶ್ಚೇತನದ ಕುರಿತಾದ 15 ಕಥೆಗಳಿರುತ್ತವೆ ಎಂದು ಹೇಳಿದ್ದಾರೆ. ಭಾರತದ 8 ಭಾಷೆಗಳಲ್ಲಿ ಹಾಡನ್ನು ನನ್ನ ಸ್ವಂತ ದುಡ್ಡಲ್ಲಿ ನಿರ್ಮಾಣ ಮಾಡಿದ್ದೇನೆ. ಕನ್ನಡದ ಗೀತೆಯನ್ನು ನಾನೇ ಹಾಡಿದ್ದೇನೆ. ಡ್ರಗ್ಸ್ ಹಾವಳಿ ಹೆಚ್ಚಿರುವ ಪಂಜಾಬ್‌ನಲ್ಲಿ ಹಾಡು ರಾರಾಜಿಸಬೇಕು. ಹಲವು ಹಿರಿಯ ಕಲಾವಿದರು, ಸಾಮಾಜಿಕ ಕೆಲಸಗಳನ್ನು ನೃತ್ಯದ ಮೂಲಕ ಪ್ರಸ್ತುತಪಡಿಸಲಾಗಿದೆ. ವಿ. ನಾಗೇಂದ್ರ ಪ್ರಸಾದ್ ಅವರು ಗೀತರಚನೆ ಮಾಡಿದ್ದಾರೆ ಎಂದು ಹೇಳಿದರು.

ರಾಜಕೀಯಕ್ಕೆ ಎಂಟ್ರಿ ಪಕ್ಕಾ: ಈಗಾಗಲೇ ಒಂದು ರಾಜಕೀಯ ಪಕ್ಷದ ಪ್ರಣಾಳಿಕೆ ಮತ್ತು ನೀತಿ ನಿರೂಪಣೆ ತಂಡದಲ್ಲಿ ಇದ್ದೇನೆ. ಮುಂಬರುವ ದಿನಗಳಲ್ಲಿ ರಾಜಕೀಯಕ್ಕೆ ಬರುವುದು ಪಕ್ಕಾ. ಏಕೆಂದರೆ, ನಮ್ಮ ಯಾವುದೇ ನೀತಿ, ಹೋರಾಟಕ್ಕೆ ರಾಜಕೀಯ ಬೆಂಬಲವಿಲ್ಲದಿದ್ದರೆ ಅದು ಎಲ್ಲಿಯೋ ಕಳೆದುಹೋಗುತ್ತದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು