Bigg Boss 9: ದೀಪಾವಳಿ ದಿನವೇ ಹೊತ್ತಿಕೊಂಡ ಬೆಂಕಿ- ಸಂಬರಗಿ-ರಾಜಣ್ಣ ಕುಸ್ತಿ

ಬೆಂಗಳೂರು: ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಹಬ್ಬದ ದಿನವೇ ಸದಸ್ಯರ ನಡುವೆ ಬೆಂಕಿ ಹೊತ್ತಿಕೊಂಡಿದೆ. ಅದು ಎಷ್ಟರಮಟ್ಟಿಗೆ ಎಂದರೆ ಒಬ್ಬರನ್ನೊಬ್ಬರು ಏಕವಚನದಲ್ಲಿ ಬೈದಾಡಿಕೊಂಡು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಈ ವಾರ ಮನೆಯ ಸದಸ್ಯರಿಗೆ ದೀಪಾವಳಿ ಹಬ್ಬದ ಹಿನ್ನೆಲೆಯುಲ್ಲಿ ಅವರವರ ಮನೆಯಿಂದ ಗಿಫ್ಟ್ ಬಂದಿವೆ. ಆಟಗಾರರು ಟಾಸ್ಕ್ ಆಡಿ ಗೆದ್ದ ಬಳಿಕ ಗಿಫ್ಟ್ ಪಡೆಯಬಹುದು ಎಂದು ಬಿಗ್ ಬಾಸ್ ಹೇಳಿದ್ದರು. ಅಲ್ಲದೆ, ಹೆಚ್ಚು ಟಾಸ್ಕ್ ಆಡಿ ಗೆದ್ದವರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುತ್ತಾರೆ ಎಂದೂ ಹೇಳಿದ್ದರು. ಈ ವಿಚಾರವಾಗಿ ಗೊಂದಲ ಉಂಟಾಗಿತ್ತು. ಬಿಗ್ ಬಾಸ್ ಸ್ಪಷ್ಟನೆ ಬಳಿಕವೂ ತಂಡದ ಸದಸ್ಯರಲ್ಲಿ ಪರಸ್ಪರ ಹೊಂದಾಣಿಕೆ ಕಾಣದೆ ಜಗಳ ಮುಂದುವರಿದಿತ್ತು.
ನಾಯಕಿ ಸಾನ್ಯಾ ಎಡವಟ್ಟು..
ಹೌದು, ತಮ್ಮ ಗಿಫ್ಟ್ ಗೆಲ್ಲಲು ತಾವೇ ಟಾಸ್ಕ್ ಆಡಬಹುದು ಎಂಬ ನಿಯಮ ಬಿಗ್ ಬಾಸ್ ಹೇಳಿದ್ದರೂ ಸಹ ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದ ಸಾನ್ಯಾ, ನೀವು ಗಿಫ್ಟ್ ಗೆಲ್ಲಲು ನಿಮ್ಮ ಪರವಾಗಿ ಬೇರೆ ಸದಸ್ಯರು ಟಾಸ್ಕ್ ಆಡಬೇಕೆಂದು ಹೇಳಿದ್ದರು. ಇದೇ ಎಡವಟ್ಟು ಮುಂದೆ ಅನರ್ಥಕ್ಕೆ ದಾರಿಮಾಡಿಕೊಟ್ಟಿತು.
ಮೊದಲಿಗೆ ಪ್ರಶಾಂತ್ ಸಂಬರಗಿ ಮತ್ತು ಅಮೂಲ್ಯ ಪರವಾಗಿ ದೀಪಿಕಾ ದಾಸ್ ಟಾಸ್ಕ್ ಆಡಿದ್ದರು. ಆದರೆ, ಈ ಇಬ್ಬರೂ ಆಟದಲ್ಲಿ ಗೆಲುವು ಸಾಧಿಸಲಿಲ್ಲ. ಹೀಗಾಗಿ, ಅಮೂಲ್ಯ ಮತ್ತು ಸಂಬರ್ಗಿಗೆ ಭಾರಿ ನಿರಾಸೆಯಾಯಿತು.
ಈ ಮಧ್ಯೆ, ರೂಪೇಶ್ ರಾಜಣ್ಣ ಪರ ಆಡಿದ ಅನುಪಮಾ ಗೌಡ ಮತ್ತು ನೇಹಾ ಗೌಡ ಅವರು ದಿವ್ಯಾ ಉರುಡುಗ ಪರ ಆಡಿ ಗೆದ್ದು ಗಿಫ್ಟ್ ಪಡೆಯುವಂತೆ ಮಾಡಿದರು.
ಈ ಸಂದರ್ಭ ತಮ್ಮ ಆಟವನ್ನು ತಾವೇ ಆಡಿ ಗೆದ್ದು ಗಿಫ್ಟ್ ಪಡೆಯೋಣ ಎಂಬ ಚರ್ಚೆ ಆರಂಭವಾಯಿತು. ನಮ್ಮ ಟಾಸ್ಕ್ ಬೇರೆಯವರು ಆಡಬೇಕೆಂದು ಬಿಗ್ ಬಾಸ್ ಹೇಳಿಲ್ಲ ಎಂಬ ವಾದ ಮುಂದಿಟ್ಟರು. ಈ ಸಂದರ್ಭ ರಾಜಣ್ಣ ನನ್ನ ಟಾಸ್ಕ್ ಬೇರೆಯವರಿಗೆ ಬಿಟ್ಟುಕೊಟ್ಟಿದ್ದೆ. ಹೀಗಾಗಿ, ನನಗೆ ಎರಡನೇ ಅವಕಾಶ ಕೊಡಿ. ಇಲ್ಲವಾದರೆ ಕ್ಯಾಪ್ಟನ್ಸಿ ಟಾಸ್ಕ್ ಆಡುವ ಅವಕಾಶ ಸಿಗುವುದಿಲ್ಲ ಎಂದು ಹೇಳಿದರು.
ಈ ಮಾತನ್ನು ಕೇಳಿದ ಅರುಣ್ ಸಾಗರ್, ನೀನು ಮನೆಯಿಂದ ಬಂದ ಗಿಫ್ಟ್ ಪಡೆದಿದ್ದೀಯಾ.. ಕ್ಯಾಪ್ಟನ್ಸಿ ಟಾಸ್ಕ್ ಸಹ ಆಡಬೇಕೆಂಬ ದುರಾಸೆ ಏಕೆ ಎಂದು ಕೇಳಿದರು. ಇದು ದುರಾಸೆ ಅಲ್ಲ ನಾನು ನಾಮಿನೇಟ್ ಆಗಿದ್ದೇನೆ. ಕ್ಯಾಪ್ಟನ್ ಆದರೆ ಇಮ್ಯುನಿಟಿ ಸಿಗುತ್ತೆ ಎಂದು ಹೇಳಿದರು. ಇದಕ್ಕೊಪ್ಪದ ಸಂಬರಗಿ, ನನಗೆ ಮನೆಯ ಗಿಫ್ಟ್ ಸಹ ಸಿಕ್ಕಿಲ್ಲ. 3 ಅವಕಾಶ ಕೊಡಿ ಎಂದು ಆಗ್ರಹಿಸಿದರು. ತನ್ನ ತಪ್ಪು ಒಪ್ಪಿಕೊಂಡ ಕ್ಯಾಪ್ಟನ್ ಸಾನ್ಯಾ ನನ್ನ ಟಾಸ್ಕ್ ಬೇರೆಯವರಿಗೆ ಬಿಟ್ಟುಕೊಡುವುದಾಗಿ ಘೋಷಿಸಿದರು.
ಆದರೂ ಮನೆಯಲ್ಲಿ ಗೊಂದಲ ಮುಂದುವರಿದಿತ್ತು. ಮಾತಿನ ಚಕಮಕಿ ತೀವ್ರಗೊಂಡಿದೆ. ಒಂದು ಹಂತದಲ್ಲಿ ರಾಜಣ್ಣ ಮತ್ತು ಸಂಬರಗಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಲೇ ರಾಜಣ್ಣ ಎಂದು ಕರೆದ ಸಂರ್ಗಿ ವಿರುದ್ಧ ರೂಪೇಶ್ ರಾಜಣ್ಣ ಮುಗಿಬಿದ್ದಿದ್ದಾರೆ. ಸಂಬರಗಿ ಯುದ್ದಕ್ಕೆ ತಯಾರು ಎಂಬಂತೆ ಕೆಕ್ಕರಿಸಿ ಜಗಳಕ್ಕೆ ಇಳಿದಿದ್ದಾರೆ. ಮುಂದೆ ಏನಾಯ್ತು ಎಂಬುದಕ್ಕೆ ಬುಧವಾರದ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.