ಶುಕ್ರವಾರ, ಆಗಸ್ಟ್ 6, 2021
22 °C

ಗಾಡ್‌ಮ್ಯಾನ್‌ ವೆಬ್‌ ಸರಣಿ ಪ್ರಸಾರ ಸದ್ಯಕ್ಕಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೀ5 ಒಟಿಟಿ ವೇದಿಕೆ ಮೂಲಕ ಜೂನ್‌ 12ರಂದು ಪ್ರಸಾರ ಆಗಬೇಕಿದ್ದ ‘ಗಾಡ್‌ಮ್ಯಾನ್‌’ ವೆಬ್‌ ಸರಣಿಯ ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ಚೆನ್ನೈನಲ್ಲಿ ದೂರು ದಾಖಲಾಗಿದೆ. ಈಗ, ಈ ಸರಣಿಯ ಪ್ರಸಾರವನ್ನು ತಡೆಹಿಡಿದಿರುವುದಾಗಿ ಜೀ5 ಸಂಸ್ಥೆ ಹೇಳಿದೆ.

ಈ ವೆಬ್‌ ಸರಣಿಯ ಟ್ರೇಲರ್‌ ಬಿಡುಗಡೆ ಆದ ನಂತರ, ‘ಇದರಲ್ಲಿನ ಸಂಭಾಷಣೆಯೊಂದು ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡುವಂತೆ ಇದೆ’ ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಇದರಲ್ಲಿನ ಒಂದು ಸಂಭಾಷಣೆಯಲ್ಲಿ ಪಾತ್ರವೊಂದು ‘ವೇದಗಳನ್ನು ಬ್ರಾಹ್ಮಣ ಮಾತ್ರ ಓದಬೇಕು ಎಂದು ಯಾವ ಶಾಸ್ತ್ರ ಹೇಳುತ್ತದೆ’ ಎಂದು ಪ್ರಶ್ನಿಸಿತ್ತಂತೆ. ಹಾಗೆಯೇ, ಕೆಲವು ದೃಶ್ಯಗಳು ಮತ್ತು ಸಂಭಾಷಣೆಗಳು ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದವು, ಅವರ ಭಾವನೆಗಳಿಗೆ ಧಕ್ಕೆ ತರುವಂತೆ ಇದ್ದವು ಎಂಬ ತಕರಾರು ಕೂಡ ಬಂದಿತ್ತು.

ವಿವಾದ ಸೃಷ್ಟಿಯಾಗಿರುವ ಕಾರಣ, ಈ ಸರಣಿಯ ಟ್ರೇಲರ್‌ಅನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

‘ಗಾಡ್‌ಮ್ಯಾನ್‌’ ಸರಣಿಗೆ ಸಂಬಂಧಿಸಿದ ಪೋಸ್ಟರ್‌ನಲ್ಲಿ, ಒಬ್ಬಳು ಮಹಿಳೆ, ಒಬ್ಬ ಕೇಸರಿ ವಸ್ತ್ರಧಾರಿ ಹಾಗೂ ಇನ್ನೊಬ್ಬ ತ್ರಿಶೂಲ ಹಿಡಿದಿರುವ ವ್ಯಕ್ತಿ ಇದ್ದಾರೆ. ‘ಈ ಸರಣಿಯಲ್ಲಿ ಇರುವ ಕಥೆಯು, ಒಬ್ಬ ಕಳ್ಳ ಹೇಗೆ ನಕಲಿ ದೇವಮಾನವನಾಗಿ ಬದಲಾಗುತ್ತಾನೆ ಎಂಬುದರ ಕುರಿತಾದದ್ದು. ಇದರಲ್ಲಿ ಮಠಗಳ ರಾಜಕೀಯದ ಕುರಿತು, ಅವು ಹೇಗೆ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ಚರ್ಚೆ ಇದೆ. ಅದಕ್ಕೆ ಸಂಬಂಧಿಸಿದಂತೆಯೇ ಸಂಭಾಷಣೆ ಇದೆ. ಬ್ರಾಹ್ಮಣ ಸಮುದಾಯ ಅಥವಾ ಹಿಂದೂ ಧರ್ಮದ ಬಗ್ಗೆ ಕಹಿ ಭಾವನೆ ಮೂಡುವಂತೆ ಆಗಬೇಕು ಎಂಬ ಉದ್ದೇಶ ನಮಗಿಲ್ಲ’ ಎಂದು ಸರಣಿಯ ನಿರ್ಮಾಪಕ ಆರ್. ಇಳಂಗೊ ಹೇಳಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ.

‘ಸರಣಿಯ ಒಂದು ಪಾತ್ರದ ಮಾತುಗಳನ್ನು ನನ್ನ ಅನಿಸಿಕೆ ಎಂದು ಭಾವಿಸಬಾರದು. ಈ ರೀತಿ ಭಾವಿಸುವುದಾದರೆ, ಮುಂದೆ ಯಾವ ಪಾತ್ರದ ಮೂಲಕವೂ ಏನನ್ನೂ ಹೇಳಿಸಲು ಆಗುವುದಿಲ್ಲ. ಸೃಜನಶೀಲ ಅಭಿವ್ಯಕ್ತಿಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುವುದು ಸ್ವಾಗತಾರ್ಹ. ಆದರೆ, ಅದು ದ್ವೇಷದ ಅಭಿಯಾನ ಆಗಬಾರದು’ ಎಂದು ನಿರ್ದೇಶಕ ಬಾಬು ಯೋಗೇಶ್ವರನ್ ಹೇಳಿರುವುದಾಗಿಯೂ ‘ದಿ ಹಿಂದೂ’ ವರದಿ ಮಾಡಿದೆ.

‘ತಮಿಳು ಕಾರ್ಯಕ್ರಮ ಗಾಡ್‌ಮ್ಯಾನ್‌ಗೆ ಸಂಬಂಧಿಸಿದಂತೆ ಬಂದಿರುವ ಪ್ರತಿಕ್ರಿಯೆಗಳ ಆಧಾರದಲ್ಲಿ, ನಾವು ಈ ಹಂತದಲ್ಲಿ ಈ ಕಾರ್ಯಕ್ರಮದ ಬಿಡುಗಡೆಯನ್ನು ಅಮಾನತಿನಲ್ಲಿ ಇರಿಸುವ ತೀರ್ಮಾನಕ್ಕೆ ಬಂದಿದ್ದೇವೆ. ಯಾವುದೇ ಸಮುದಾಯಕ್ಕೆ ನೋವು ಉಂಟುಮಾಡುವ ಉದ್ದೇಶ ನಿರ್ಮಾಪಕರಿಗೆ, ಜೀ5ಗೆ ಇರಲಿಲ್ಲ’ ಎಂದು ಜೀ5 ಟ್ವೀಟ್ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು