ಮಂಗಳವಾರ, ಮೇ 18, 2021
29 °C

ಧಾರಾವಾಹಿ ನಟನೊಂದಿಗೆ ಮಾತುಕತೆ: ‘ಬ್ರಹ್ಮಗಂಟು’ ತಂದ ಹರ್ಷ

ವಿದ್ಯಾಶ್ರೀ ಎಸ್‌. Updated:

ಅಕ್ಷರ ಗಾತ್ರ : | |

Prajavani

‘ನನಗೆ ಇಂಥದ್ದೇ ‍ಪಾತ್ರ ಮಾಡಬೇಕು ಎಂಬ ಯಾವುದೇ ಕನಸುಗಳಿಲ್ಲ. ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ. ನೆಗೆಟಿವ್‌ ಶೇಡ್‌ನಲ್ಲಿ ನಟಿಸುವಾಗ ಉತ್ಸಾಹ ಹೆಚ್ಚಾಗಿಯೇ ಇರುತ್ತದೆ’ ‌ಹೀಗೆ ಚುರುಕಿನಿಂದಲೇ ಮಾತು ಆರಂಭಿಸಿದವರು ‘ಬ್ರಹ್ಮಗಂಟು’ ಧಾರಾವಾಹಿಯ ದತ್ತ ಪಾತ್ರಧಾರಿ ಹರ್ಷ ಗೌಡ.

ಹಾಸನ ಮೂಲದ ಇವರು ಪ್ಯಾರಾಮೆಡಿಕಲ್‌ ಕೋರ್ಸ್‌ ಪೂರೈಸಿದ್ದಾರೆ. ಆಕಸ್ಮಿಕವಾಗಿ ನಟನೆಯ ಅಂಗಳಕ್ಕೆ ಇಳಿದರೂ, ಇಲ್ಲಿಯ ಖುಷಿಯನ್ನು ಭದ್ರವಾಗಿ ಕಡೆಯವರೆಗೂ ಕಾಪಿಟ್ಟುಕೊಳ್ಳುವುದು ಹರ್ಷ ಅವರ ಕನಸು. 

‘ಎಂದೂ ನಟನೆಯ ಕನಸು ಕಂಡಿರಲಿಲ್ಲ. ಶಾಲೆಯಲ್ಲಿಯೂ ಚಿಕ್ಕ, ಪುಟ್ಟ ಫ್ಯಾಷನ್‌ ಶೋ, ನಾಟಕಗಳಲ್ಲಿ ಅಭಿನಯಿಸಿದ್ದೆ. ಅದರ ಹೊರತು ಬೇರೆ ಯಾವುದೇ ಅನುಭವಗಳು ನನಗಿರಲಿಲ್ಲ. ನನ್ನ ಸಂಬಂಧಿಯೊಬ್ಬರು ಸಿನಿಮಾ ನಿರ್ದೇಶನ ಮಾಡುತ್ತಾರೆ. ಶಿಕ್ಷಣ ಪೂರೈಸಿ ಅವರೊಂದಿಗೆ ಬೆಂಗಳೂರಿಗೆ ಬಂದೆ. ಅವರೇ ಬಣ್ಣದ ಲೋಕಕ್ಕೆ ಪ್ರವೇಶಿಸುವ ಯೋಚನೆಯನ್ನು ನನ್ನಲ್ಲಿ ಬಿತ್ತಿದರು. ಸರಿ, ಪ್ರಯತ್ನಿಸಿಯೇ ಬಿಡೋಣವೆಂದು ಅವಕಾಶ ಅರಸಲು ಪ್ರಾರಂಭಿಸಿದೆ’ ಎಂದು ನಟನೆಯ ಮೊದಲ ಹೆಜ್ಜೆಗಳನ್ನು ಹರ್ಷ ನೆನಪು ಮಾಡಿಕೊಳ್ಳುತ್ತಾರೆ.

‘ಪುಟ್ಟ ಊರಿನಿಂದ ಬಂದವನು ನಾನು. ಈ ಮಹಾನಗರಿಯಲ್ಲಿ ಅವಕಾಶಕ್ಕಾಗಿ ಕ್ಯಾಮೆರಾ ಮುಂದೆ ನಿಂತಾಗ ಸಹಜವಾಗಿಯೇ ಹಿಂಜರಿಕೆ ಆಗುತ್ತಿತ್ತು. ಐದಾರು ಬಾರಿ ಆಡಿಷನ್‌ ಕೊಟ್ಟ ನಂತರವೇ ಆಯ್ಕೆಯಾದೆ. ‘ಬದುಕು’ ನನ್ನ ಮೊದಲ ಧಾರಾವಾಹಿ. ‘ಅಮ್ಮ ನಿನಗಾಗಿ’, ‘ಮನೆ ದೇವ್ರು’... ಹೀಗೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಸಿನಿಮಾಗಳಿಗೂ ಬಣ್ಣ ಹಚ್ಚಿದ್ದೇನೆ. ಆದರೆ ಜನಪ್ರಿಯತೆ ದೊರಕಿದ್ದು ‘ಬ್ರಹ್ಮಗಂಟು’ ಧಾರಾವಾಹಿಯ ಮೂಲಕ. ಜನ ನನ್ನನ್ನು ಗುರುತಿಸುವುದು ‘ದತ್ತ’ ಎಂಬ ಪಾತ್ರದ ಮೂಲಕ. ಒಳ್ಳೆ ತಂಡ, ಒಳ್ಳೆಯ ಪಾತ್ರ ದೊರಕಿದ್ದು ನನ್ನ ಅದೃಷ್ಟ’ ಎಂದು ಖುಷಿಯನ್ನು ಹಂಚಿಕೊಳ್ಳುತ್ತಾರೆ ಅವರು. 

‘ಈ ಪಾತ್ರಕ್ಕೂ ನನಗೂ ಸಾಕಷ್ಟು ಸಾಮ್ಯತೆ ಇದೆ. ನಾನು ಸೌಮ್ಯ ಸ್ವಭಾವದವನು. ಮಾತು ಕಡಿಮೆ. ಹತ್ತಿರದವರು ಜಗಳವಾಡುವಾಗ ಅವರನ್ನು ಸಮಾಧಾನಿಸುವ ಕಲೆಯನ್ನು ಚೆನ್ನಾಗಿ ಬಲ್ಲೆ. ಜೊತೆಗೆ ಕ್ರೀಡೆಯಲ್ಲಿಯೂ ನನಗೆ ವಿಪರೀತ ಆಸಕ್ತಿ. ದತ್ತ ಕೂಡ ಇದೇ ಸ್ವಭಾವದವನು. ಹಾಗಾಗಿ, ಈ ಪಾತ್ರ ನನಗೆ ಆಪ್ತವೆನ್ನಿಸಿದೆ’ ಎನ್ನುತ್ತಾರೆ ಅವರು. 

ನಟನೆಯ ಹೊರತು ವರ್ಕೌಟ್‌ ಮಾಡುವುದೆಂದರೆ ಹರ್ಷಗೆ ಇಷ್ಟ. ವ್ಯಾಯಾಮ ಮನಸ್ಸು ಮತ್ತು ದೇಹ ಚಟುವಟಿಕೆಯಿಂದಿರಲು ನೆರವಾಗುತ್ತದೆ ಎಂಬ ಸಿದ್ಧಾಂತವನ್ನು ನಂಬಿದವರು ಇವರು. ಪ್ರತಿದಿನ ಒಂದೂವರೆ ಗಂಟೆ ದೇಹದಂಡನೆ ಮಾಡುತ್ತಾರೆ. ಆಹಾರದ ವಿಷಯದಲ್ಲಿಯೂ ಹರ್ಷ ಚ್ಯೂಸಿ. ಆದರೆ, ಬಿರಿಯಾನಿ ಎದುರಿಗಿದ್ದರೆ ಡಯೆಟ್‌ ಮರೆತೇ ಹೋಗುತ್ತದೆ ಎನ್ನುತ್ತಾರೆ.

‘ಬಿಗ್‌ಬಾಸ್ ಖ್ಯಾತಿಯ‌ ಜಯಶ್ರೀ ರಾಮಯ್ಯ ಅವರ ಜೊತೆಗೆ ಆಲ್ಬಂ ಸಾಂಗ್‌ವೊಂದನ್ನು ಮಾಡುತ್ತಿದ್ದೇನೆ. ಇನ್ನೊಂದು ಸಿನಿಮಾದ ಚಿತ್ರೀಕರಣವೂ ಮುಂದಿನ ವಾರದಿಂದ ಪ್ರಾರಂಭವಾಗಲಿದೆ. ಬೆಳಿಗ್ಗೆ ಹೋಗಿ ಸಂಜೆ ಬರುವ ಕೆಲಸಕ್ಕಿಂತ ಸೃಜನಾತ್ಮಕವಾಗಿ ಏನಾದರೂ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು. ಹಾಗಾಗಿಯೇ ಬಣ್ಣದ ಲೋಕ ನನ್ನನ್ನು ಸೆಳೆಯಿತು. ಅಭಿನಯದ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಬೇಕು. ಈ ಲೋಕದಲ್ಲಿ ಮಿನುಗಬೇಕು’ ಎಂಬ ಆದಮ್ಯ ಕನಸನ್ನು ಹರ್ಷ ಹಂಚಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು