ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಿಣಿ–2 ಧಾರಾವಾಹಿ: ರಿಯಲ್‌ ಆಗಿತ್ತು ‘ರೀಲ್‌’ ಆರತಕ್ಷತೆ!

Last Updated 8 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

‘ಝೀ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ–2 ಧಾರಾವಾಹಿಯ ಜೋಡಿ ತ್ರಿಶೂಲ್‌ ಹಾಗೂ ಶಿವಾನಿ ಅವರ ಮದುವೆ ವೀಕ್ಷಕರ ಅಪೇಕ್ಷೆಯಂತೆಯೇ ತೆರೆಯ ಮೇಲೆ ನಡೆಯಿತು.

ಆದರೆ, ಈ ಜೋಡಿ ಬಗ್ಗೆ ವೀಕ್ಷಕರ ಮನದಲ್ಲೇನಿದೆ ಎಂದು ವಾಹಿನಿಗೆ ಹಾಗೂ ಧಾರಾವಾಹಿ ತಂಡಕ್ಕೆ (ಅರ್ಜುನ್‌ ಆರ್ಟ್ಸ್‌) ತಿಳಿಯಬೇಕಿತ್ತು. ಅದಕ್ಕೆಂದೇ ಮಾಡಿದ ಪ್ರಯೋಗ ಈ ಧಾರಾವಾಹಿಯ ತ್ರಿಶೂಲ್‌– ಶಿವಾನಿಯ ‘ಆರತಕ್ಷತೆ’.

‘ಧಾರಾವಾಹಿಯ ಪ್ರಚಾರಕ್ಕೆ ತಂತ್ರಗಳೇನೋ ಹೊಸತಲ್ಲ. ಆದರೆ, ಪೂರ್ಣ ಪ್ರಮಾಣದ ಮದುವೆಯ ಆರತಕ್ಷತೆಯ ರೀತಿಯಲ್ಲೆ ಆಯೋಜಿಸಿ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗುವ ಪ್ರಯೋಗ ಮಾಡಿದೆವು’ ಎಂದರು ತಂಡದ ಮೇಲುಸ್ತುವಾರಿ ಮಹೇಶ್‌ರಾವ್‌.

ಧಾರಾವಾಹಿಯ ನಿರಂತರ ವೀಕ್ಷಕರನ್ನೇ ‘ಆರತಕ್ಷತೆ’ಗೆ ಆಮಂತ್ರಿಸಲಾಗಿತ್ತು. ವಿವಾಹ ಮಂಟಪದ ಅದ್ದೂರಿ ಅಲಂಕಾರ, ಸಾಲಾಗಿ ಬಂದು ಶುಭಹಾರೈಸಿ ಸೆಲ್ಫಿ ತೆಗೆಸಿಕೊಳ್ಳುವವರ ದಂಡು ಸೇರಿತ್ತು. ಸಾಲದ್ದಕ್ಕೆ ಮದುವೆಯ ಭೋಜನವೂ ಇತ್ತು. ‘ಮದುಮಕ್ಕಳ’ ಪೋಷಕರು ಊಟದ ಹಾಲ್‌ಗೆ ಬಂದು ಅತಿಥಿಗಳನ್ನು ವಿಚಾರಿಸುವ ಪರಿಯಂತೂ ಇದು ನೈಜ ಮದುವೆಯೇ ಇರಬೇಕು ಅಂದುಕೊಳ್ಳುವವರೆಗೆ ನಡೆಯಿತು.

ವಿಷಯ ಇಷ್ಟಕ್ಕೇ ನಿಲ್ಲಲಿಲ್ಲ. ಬಂದವರೆಲ್ಲಾ ಜೋಡಿ ಪಕ್ಕ ನಿಂತ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ತ್ರಿಶೂಲ್‌ ಹಾಗೂ ಶಿವಾನಿ ಮದುವೆಗೆ ನಾನು ಹೋಗಿದ್ದೆ ಎಂದೆಲ್ಲಾ ಬರೆದುಕೊಂಡರು. ನೂರಾರು ಜನರು ಜಾಲತಾಣದಲ್ಲಿ ಶುಭಹಾರೈಸಿದ್ದೂ ಆಯಿತು. ಕೊನೆಗೆ ಆ ಪಾತ್ರಧಾರಿ ಜೋಡಿ ತ್ರಿಶೂಲ್‌ (ನಿನಾದ್‌ ಹರಿತ್ಸ), ಶಿವಾನಿ (ನಮ್ರತಾ ಗೌಡ) ಯುಟ್ಯೂಬ್‌ನಲ್ಲಿ ಕಾಣಿಸಿಕೊಂಡು ಅದು ಧಾರಾವಾಹಿಗಷ್ಟೇ ನಡೆದ ಮದುವೆ. ನಮ್ಮದು ನಟನೆ ಅಷ್ಟೇ ಎಂದು ಹೇಳಿಕೊಳ್ಳಬೇಕಾಯಿತು.

‘ಈ ಪರಿಕಲ್ಪನೆ ಹೊಳೆದದ್ದು ಝೀ ವಾಹಿನಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶ್ರೀರಾಮ್‌ ಅವರಿಗೆ. ಅದನ್ನು ಜಾರಿಗೆ ತಂದದ್ದು ವಾಹಿನಿಯ ಬ್ಯುಸಿನೆಸ್‌ ಹೆಡ್‌ ರಾಘವೇಂದ್ರ ಹುಣಸೂರು. ಸಾಥ್‌ ಕೊಟ್ಟದ್ದು ಧಾರಾವಾಹಿಯ ತಂಡ. ವಾಹಿನಿಯ ಡಿಜಿಟಲ್‌ ವೇದಿಕೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಇದರ ಚಿತ್ರಗಳು ಪ್ರಸಾರವಾಗಲಿವೆ’ ಎಂದರು ಮಹೇಶ್‌ ರಾವ್‌.

ರಾಜ್ಯದ 6 ಕಡೆಗಳಲ್ಲಿ ಇಂಥ ‘ಆರತಕ್ಷತೆ’ ಆಯೋಜಿಸುವ ಯೋಜನೆ ಇತ್ತು. ಆದರೆ, ಕೋವಿಡ್‌ ಕಾರಣಕ್ಕಾಗಿ ಕೈಬಿಡಬೇಕಾಯಿತು. ಮುಂದೆ ದಾವಣಗೆರೆಯಲ್ಲಿ ಇದೇ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT