ಗುರುವಾರ , ಜುಲೈ 29, 2021
20 °C
‌ಪ್ರಿಯಕರ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಎಫ್‌ಐಆರ್

ವಿಷ ಕುಡಿದು ಕಿರುತೆರೆ ಸಹನಟಿ ಚಂದನ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರೋಪಿ ದಿನೇಶ್ ಜೊತೆ ಚಂದನಾ

ಬೆಂಗಳೂರು: ತನ್ನನ್ನು ಪ್ರೀತಿಸುತ್ತಿದ್ದ ಪ್ರಿಯಕರ ಮದುವೆಯಾಗದೆ ವಂಚಿಸಿದನೆಂಬ ಕಾರಣಕ್ಕೆ ನೊಂದಿದ್ದರು ಎನ್ನಲಾದ ಕಿರುತೆರೆ ಸಹ ನಟಿ ವಿ.ಕೆ. ಚಂದನಾ (29) ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ತಾವರಕೆರೆ ಮುಖ್ಯರಸ್ತೆಯ ಕೃಷ್ಣಮೂರ್ತಿ ಲೇಔಟ್‌ನಲ್ಲಿರುವ ಮನೆಯಲ್ಲಿ ವಾಸವಿದ್ದ ಚಂದನಾ, ಮೇ 30ರಂದು ಲೈವ್ ವಿಡಿಯೊ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಂದನಾ ಪ್ರಿಯಕರ ದಿನೇಶ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಸುದ್ದಗುಂಟೆಪಾಳ್ಯ ಪೊಲೀಸರು ಹೇಳಿದರು.

‘ರೂಪದರ್ಶಿಯಾಗಿದ್ದ ಚಂದನಾ, ರಂಗಭೂಮಿ ಹಾಗೂ ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದರು. ಚುಕ್ಕಿ ಎಂದೇ ಖ್ಯಾತಿ ಪಡೆದಿದ್ದರು. ಜೊತೆಗೆ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಸಹ ಮಾಡುತ್ತಿದ್ದರು. ಅವರ ಆತ್ಮಹತ್ಯೆ ಸಂಬಂಧ ತಂದೆ ಕುಮಾರೇಗೌಡ ದೂರು ನೀಡಿದ್ದಾರೆ.’

‘ಚಂದನಾ ಹಾಗೂ ಸಹೋದ್ಯೋಗಿಯೇ ಆಗಿದ್ದ ಆರೋಪಿ ದಿನೇಶ್ ಐದು ವರ್ಷಗಳಿಂದ ಹಿಂದೆ ಪರಿಚಯವಾಗಿದ್ದರು. ನಂತರ, ಸಲುಗೆ ಬೆಳೆದು ಪ್ರೀತಿಸಲಾರಂಭಿಸಿದ್ದರು. ಪ್ರವಾಸ, ಹೋಟೆಲ್ ಎಂದು ಹಲವೆಡೆ ಸುತ್ತಾಡಿದ್ದರು. ಅವರಿಬ್ಬರ ನಡುವೆ ದೈಹಿಕ ಸಂಪರ್ಕವೂ ಇತ್ತು. ಈ ಸಂಗತಿ ದೂರಿನಲ್ಲಿದೆ’ ಎಂದೂ ಪೊಲೀಸರು ತಿಳಿಸಿದರು.

‘ಚಂದನಾ ಇತ್ತೀಚೆಗೆ ಗರ್ಭ ಧರಿಸಿದ್ದರು. ಮದುವೆಯಾಗುವುದಾಗಿ ಹೇಳಿದ್ದ ಆರೋಪಿ, ಒತ್ತಾಯದಿಂದಲೇ ಗರ್ಭಪಾತ ಮಾಡಿಸಿದ್ದ. ಜೊತೆಗೆ, ₹5 ಲಕ್ಷ ಪಡೆದಿದ್ದ. ಚಂದನಾ ಅವರನ್ನು ಕ್ರಮೇಣ ದೂರ ಮಾಡಲು ಯತ್ನಿಸಿದ್ದ ಆರೋಪಿ, ಮದುವೆಯಾಗುವುದಿಲ್ಲವೆಂದು ಹೇಳಿದ್ದ. ಈ ಬಗ್ಗೆ ಆತನ ಕುಟುಂಬಸ್ಥರಿಗೆ ಹೇಳಿದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ನೊಂದು ಚಂದನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ದೂರಿನಲ್ಲಿ ತಂದೆ ಆರೋಪಿಸಿದ್ದಾರೆ’ ಎಂದೂ ಹೇಳಿದರು.

ಆಸ್ಪತ್ರೆಯಲ್ಲಿ ಸಾವು: ‘ನಾನು ಸತ್ತರೆ ನಿನಗೆ ಒಳ್ಳೆಯದು ಎಂದು ಹೇಳುತ್ತಿದ್ದೀಯಾ. ನನ್ನ ಸಾವಿಗೆ ನೀನೆ ಕಾರಣ ದಿನೇಶ್’ ಎಂದು ಹೇಳಿ ಲೈವ್ ವಿಡಿಯೊ ಮಾಡಿ ಚಂದನಾ ವಿಷ ಕುಡಿದು ಮನೆಯಲ್ಲೇ ಬಿದ್ದಿದ್ದರು. ವಿಡಿಯೊ ನೋಡಿದ್ದ ಸ್ನೇಹಿತರು ಮನಗೆ ಹೋಗಿ ಚಂದನಾ ಅವರನ್ನು ಲೈಫ್ ಕೇರ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಅಸುನೀಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು