ಭಾನುವಾರ, ಜೂನ್ 26, 2022
21 °C

ಕಾಸ್ಮೆಟಿಕ್‌ ಸರ್ಜರಿ: ‘ದೊರೆಸಾನಿ‘ ಖ್ಯಾತಿಯ ಕಿರುತೆರೆ ನಟಿ ಚೇತನಾ ರಾಜ್‌ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಹದಲ್ಲಿದ್ದ ಕೊಬ್ಬಿನ ಅಂಶ (ಫ್ಯಾಟ್‌) ಕರಗಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಿರುತೆರೆ ನಟಿ ಚೇತನಾ ರಾಜ್‌ (22) ಅನುಮಾನಾಸ್ಪದ ರೀತಿಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿರುವುದಾಗಿ ಪೋಷಕರು ಆರೋಪಿಸಿದ್ದಾರೆ.

ಬೆಂಗಳೂರು ಉತ್ತರ ತಾಲ್ಲೂಕಿನ ಅಬ್ಬಿಗೆರೆ ನಿವಾಸಿಯಾಗಿದ್ದ ಚೇತನಾ, ಕಲರ್ಸ್‌ ಕನ್ನಡ ವಾಹಿನಿಯ ‘ಗೀತಾ’, ‘ದೊರೆಸಾನಿ’, ‘ಒಲವಿನ ನಿಲ್ದಾಣ’ ಧಾರಾವಾಹಿ ಹಾಗೂ ಕೆಲ ಸಿನಿಮಾಗಳಲ್ಲಿ ಸಹ ನಟಿಯಾಗಿ ಅಭಿನಯಿಸುತ್ತಿದ್ದರು. ದೊಡ್ಡಬಳ್ಳಾಪುರದ ಬೀರಯ್ಯನಪಾಳ್ಯದಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.

‘ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚುತ್ತಿರುವ ಬಗ್ಗೆ ಸ್ನೇಹಿತರ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದ ಚೇತನಾ, ಅವರ ಸಲಹೆಯಂತೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಮುಂದಾಗಿದ್ದರು. ನವರಂಗ್‌ ವೃತ್ತ ಬಳಿ ಇರುವ ಡಾ. ಶೆಟ್ಟೀಸ್‌ ಕಾಸ್ಮೆಟಿಕ್‌ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದರು. ಅಲ್ಲಿಯೇ ಅವರು ಮೃತಪಟ್ಟಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಶ್ವಾಸಕೋಶಗಳಲ್ಲಿ ನೀರು ತುಂಬಿ ಸಾವು: ಚೇತನಾ ಸಾವಿನ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ತಂದೆ ವರದರಾಜು, ‘ಕೊಬ್ಬಿನ ಅಂಶ ಹೆಚ್ಚಿರುವ ಕಾರಣಕ್ಕೆ ಮಗಳು ಸೋಮವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದಳು. ಈ ಬಗ್ಗೆ ನಮಗೂ ಮಾಹಿತಿ ಇರಲಿಲ್ಲ. ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದರಿಂದ ಮಗಳು ಮೃತಪಟ್ಟಿದ್ದಾಳೆ’ ಎಂದು ಆರೋಪಿಸಿದರು.

‘ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ನಮ್ಮಿಂದ ಯಾವುದೇ ಸಹಿ ಪಡೆದಿಲ್ಲ. ಸ್ನೇಹಿತನ ಜೊತೆಗೆ ಆಸ್ಪತ್ರೆಗೆ ಚೇತನಾ ಹೋಗಿದ್ದರು. ರಾತ್ರಿ 9 ಗಂಟೆಗೆ ನಮಗೆ ಮಾಹಿತಿ ಸಿಕ್ಕಿತು. ಮಗಳಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿತ್ತು. ಶಸ್ತ್ರಚಿಕಿತ್ಸೆ ವೇಳೆ ಕೊಬ್ಬಿನ ಅಂಶ ರಕ್ತನಾಳಗಳಲ್ಲಿ ಸೇರಿ, ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದ್ದರಿಂದ ಹೃದಯಾಘಾತವಾಗಿ ಚೇತನಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ, ಮಗಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಈ ಬಗ್ಗೆ ಸುಬ್ರಹ್ಮಣ್ಯನಗರ ಠಾಣೆಗೆ ದೂರು ನೀಡಲಾಗಿದೆ’ ಎಂದೂ ಹೇಳಿದರು.

ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ‘ಚೇತನಾ ಮೃತದೇಹವನ್ನು ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ಸಾವಿನಲ್ಲಿ ಅನುಮಾನ ಇರುವುದರಿಂದ, ಸದ್ಯಕ್ಕೆ ಯುಡಿಆರ್ ಮಾತ್ರ ದಾಖಲಿಸಿಕೊಳ್ಳಲಾಗಿದೆ’ ಎಂದರು.

‘ಪ್ರಕರಣ ಸಂಬಂಧ ವೈದ್ಯರ ಹೇಳಿಕೆ ಪಡೆಯಲಾಗುವುದು. ಭಾರತೀಯ ವೈದ್ಯಕೀಯ ಮಂಡಳಿಗೂ ಪತ್ರ ಬರೆಯಲಾಗುವುದು. ಮಂಡಳಿಯ ತಜ್ಞರೇ ವರದಿ ಸಿದ್ಧಪಡಿಸಿ ನಮಗೆ ನೀಡಲಿದ್ದಾರೆ. ಅದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ಪೊಲೀಸರು ಹೇಳಿದರು.

ಆರೋಪದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಆಸ್ಪತ್ರೆ ಪ್ರತಿನಿಧಿಗಳು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು