ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ವಿ ಸೀರಿಯಲ್‌ ಶೂಟಿಂಗ್ ಸದ್ಯಕ್ಕಿಲ್ಲ

Last Updated 7 ಮೇ 2020, 4:05 IST
ಅಕ್ಷರ ಗಾತ್ರ

ಒಂದೂವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಧಾರಾವಾಹಿಗಳ ಚಿತ್ರೀಕರಣವನ್ನು‌ ಮೇ 11ರಿಂದ ಆರಂಭಿಸಲು ರಾಜ್ಯ ಸರ್ಕಾರಹಸಿರು ನಿಶಾಸನೆ ತೋರಿತ್ತು. ಆದರೆ,ಕೊರೊನಾ ಭೀತಿ ಮತ್ತು ಪೂರ್ವ ಸಿದ್ಧತೆ ಮಾಡಿಕೊಂಡಿರದ ಕಾರಣಕ್ಕಾಗಿ ಇದೇ 25ರಿಂದ ಚಿತ್ರೀಕರಣ ಆರಂಭಿಸಲು ಕರ್ನಾಟಕ ಟೆಲಿವಿಷನ್‌ ಅಸೋಷಿಯನ್‌ ತೀರ್ಮಾನಿಸಿದೆ.

ಕಿರುತೆರೆ ಉದ್ಯಮದಲ್ಲಿ ಸಾವಿರಾರು ಮಂದಿ ಕಾರ್ಮಿಕರು ತೊಡಗಿಕೊಂಡಿದ್ದು, ಇವರಲ್ಲಿಲೈಟ್‌ ಬಾಯ್‌, ಸಹಾಯಕರು, ಮೇಕಪ್‌ ಮನ್‌ಗಳು, ಕ್ಯಾಮೆರಾಮನ್‌ಗಳು ಇವರಲ್ಲಿ ಬಹುತೇಕರು ಬೇರೆ ಬೇರೆ ಊರಿನವರು ಆಗಿದ್ದಾರೆ. ಲಾಕ್‌ಡೌನ್‌ನಿಂದಾಗಿ ಅವರಲ್ಲಿ ಬಹಳಷ್ಟು ಮಂದಿ ಸ್ವಂತ ಊರುಗಳಿಗೆ ಮರಳಿದ್ದಾರೆ. ಅವರೆಲ್ಲರೂ ತಕ್ಷಣಕ್ಕೆ ಬರಲು ಸಾಧ್ಯವೇ? ಬಂದರೂ ನೇರವಾಗಿ ಶೂಟಿಂಗ್‌ ಸೆಟ್‌ಗೆ ಹೋಗಬಹುದೇ? ಅಥವಾ ರೆಡ್‌ ಜೋನ್‌, ಯಲ್ಲೋ ಜೋನ್‌ಗಳಿಂದ ಬಂದವರು ಸ್ವಯಂ ಹೋಂ ಕ್ವಾರಂಟೈನ್‌ ಆಗಬೇಕೆ? ಎನ್ನುವ ಪ್ರಶ್ನೆಗಳೂ ನಿರ್ದೇಶಕರು ಮತ್ತು ನಿರ್ಮಾಪಕರನ್ನು ಕಾಡುತ್ತಿದ್ದವು. ಈ ಕಾರಣಕ್ಕಾಗಿ ಚಿತ್ರೀಕರಣ ಮುಂದೂಡಲಾಗಿದೆ.

ಸಿದ್ಧತೆ ಏನೇನು

ಸರ್ಕಾರ ಅನುಮತಿ ನೀಡಿದರೂ ನಾವಂತು ಲಾಕ್‌ಡೌನ್‌ 3.0 ಮುಗಿಯುವುದಕ್ಕಿಂತ ಮುಂಚೆ ಚಿತ್ರೀಕರಣ ಆರಂಭಿಸದಿರಲು ನಿರ್ಧರಿಸಿದ್ದೇವೆ. ದಿನದಿನವು ಕೋವಿಡ್‌–19 ಸಂಖ್ಯೆ ನೋಡಿದರೆ ತಂತಿ ಮೇಲಿನ ನಡಿಗೆಯಂತೆ ಕಾಣಿಸುತ್ತದೆ. ಕೊರೊನಾ ರೋಗಿಗಳ ಸಂಖ್ಯೆ ಇದೇ 18ರೊಳಗೆ ಇಳಿಮುಖ ಆಗಲಿದೆನ್ನುವುದು ನಮ್ಮ ನಿರೀಕ್ಷೆ. ಲೈಟ್‌ ಬಾಯ್‌, ಮೇಕಪ್‌ ಮನ್‌, ಕಲಾವಿದರು, ತಂತ್ರಜ್ಞರು ಹೀಗೆ ಎಲ್ಲರ ಆರೋಗ್ಯವೂ ಮುಖ್ಯ.ನಮ್ಮ ತಂಡದ ಪ್ರಮುಖ ಕಲಾವಿದೆ ಗಾನವಿ ಸೇರಿ ಕೆಲವು ಕಲಾವಿದರು ಅವರ ಊರುಗಳಲ್ಲಿದ್ದಾರೆ. ಅವರೆಲ್ಲರೂ ಮರಳಿ ಬರಬೇಕು. ವಾತಾವರಣಸುರಕ್ಷಿತ ಇದೆ ಎಂದ ಮೇಲೆ ಶೂಟಿಂಗ್‌ ಶುರು.ಶೂಟಿಂಗ್‌ ಶುರು ಮಾಡಿ ಒಂದೆರಡು ವಾರಗಳಲ್ಲಂತೂ ವೀಕ್ಷಕರಿಗೆ ಹೊಸ ಸಂಚಿಕೆ ಉಣಬಡಿಸುತ್ತೇವೆ ಎನ್ನುತ್ತಾರೆ ಹಿರಿಯ ನಿರ್ದೇಶಕ ಟಿ.ಎನ್‌. ಸೀತಾರಾಮ್‌.

‘ಲಾಕ್‌ಡೌನ್‌ ಮುಗಿಯುವುದಕ್ಕೂ ಮೊದಲೇ ಚಿತ್ರೀಕರಣ ಆರಂಭಿಸುವುದು ವೈಯಕ್ತಿಕವಾಗಿ ನನಗೂ ಇಷ್ಟ ಇಲ್ಲ. ಆದರೆ, ಮಧ್ಯಮ ವರ್ಗದವರ ಬದುಕಿನ ಪ್ರಶ್ನೆ ಇದರಲ್ಲಿ ಇದೆ. ಚಿತ್ರೀಕರಣಕ್ಕಾಗಿ ಒಂದಿಷ್ಟು ರೆಸಾರ್ಟ್‌ಗಳು, ಫಾರ್ಮ್‌ಹೌಸ್‌ಗಳನ್ನು ಹುಡುಕಿದ್ದೇವೆ. ಸರ್ಕಾರದ ಗೈಡ್‌ಲೈನ್ಸ್‌ ಎದುರು ನೋಡುತ್ತಿದ್ದೇವೆ’ಎನ್ನುತ್ತಾರೆ ‘ರಂಗನಾಯಕಿ’ ಧಾರಾವಾಹಿ ನಿರ್ದೇಶಕ ಕೆ.ಎಸ್‌. ರಾಮ್‌ ಜೀ.

‘ಸ್ಕ್ರಿಪ್ಟ್‌ನಲ್ಲೂ ಬದಲಾವಣೆ ಮಾಡಿಕೊಂಡಿದ್ದು, ಮಕ್ಕಳು ಮತ್ತು ವಯಸ್ಸಾದವರ ಪಾತ್ರಗಳನ್ನು ಕೈಬಿಟ್ಟಿದ್ದೇನೆ. ಕಾಲವಿದರು ಒಟ್ಟಿಗೆ ಸೇರಿ ಸಂಭ್ರಮಿಸುವ ದೃಶ್ಯ ಮತ್ತು ಮದುವೆಯ ಸನ್ನಿವೇಶಗಳನ್ನು ಕೈಬಿಟ್ಟಿದ್ದೇನೆ’ ಎನ್ನುತ್ತಾರೆ ಅವರು.

‘ಲಾಕ್‌ಡೌನ್‌ ಮುಗಿದ ನಂತರ ಪರಿಸ್ಥಿತಿ ನೋಡಿ ಚಿತ್ರೀಕರಣ ಶುರು ಮಾಡುವುದು ಒಳ್ಳೆಯದು. ಕಲಾವಿದರು, ತಂತ್ರಜ್ಞರಿಗೂ ಸಮಸ್ಯೆಯಾಗಬಾರದು ಹಾಗೆಯೇ ನಿರ್ಮಾಪಕನೂ ತೊಂದರೆಗೆ ಸಿಲುಕಬಾರದು. ಯಾರಿಗಾದರೂ ಒಬ್ಬರಿಗೆ ಸೋಂಕು ಕಾಣಿಸಿದರೆ ಇಡೀ ತಂಡವನ್ನು ಕ್ವಾರಂಟೀನ್‌ ಮಾಡುತ್ತಾರೆ. ಚಿತ್ರೀಕರಣ ಸ್ಥಗಿತಗೊಳ್ಳುತ್ತದೆ’ ಎನ್ನುವುದು‘ಸಿಲ್ಲಿ ಲಲ್ಲಿ’ ಧಾರಾವಾಹಿ ನಿರ್ಮಾಪಕಸಿಹಿಕಹಿ ಚಂದ್ರು ಆತಂಕ.

‘ಚಿತ್ರೀಕರಣದ ವೇಳೆ ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಕಾಯ್ದುಕೊಳ್ಳುವುದು ಖಂಡಿತಾ ಸಾಧ್ಯವಿಲ್ಲ. ಇದರಲ್ಲಿ ರಿಸ್ಕ್‌ ಫ್ಯಾಕ್ಟ್‌ ಹೆಚ್ಚು. ಬದುಕು ಕೂಡ ಅಷ್ಟೇ ಅನಿವಾರ್ಯ. ಚಿತ್ರೀಕರಣ ಶುರು ಮಾಡಿದ ಮೇಲೆಪ್ರೊಡಕ್ಷನ್‌ ಹೌಸ್‌ಗಳು ಎಲ್ಲದಕ್ಕೂ ಹೊಣೆ’ ಎನ್ನುವುದು‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿ ಖ್ಯಾತಿಯ ನಿರ್ದೇಶಕ ವಿನು ಬಳಂಜ ಅನಿಸಿಕೆ.

‘ಸದ್ಯಕ್ಕೆ ಶೂಟಿಂಗ್‌ ಆರಂಭಿಸುವುದು ಸುಲಭವಲ್ಲ. ಚಿತ್ರೀಕರಣ, ಊಟದ ವೇಳೆ ಅಂತರ ಕಾಯ್ದುಕೊಳ್ಳುವುದು ಕಷ್ಟ. ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೂ ಚಿತ್ರೀಕರಣ ಆರಂಭಿಸದಿರುವುದೇ ಒಳಿತು’ ಎನ್ನುತ್ತಾರೆ ‘ಜೊತೆಜೊತೆಯಲಿ’ ಧಾರಾವಾಹಿ ಖ್ಯಾತಿ ನಟ ಅನಿರುದ್ಧ್.

‘ಕೊರೊನಾ ನಂತರ ಜನರು ಸಿನಿಮಾ, ಧಾರಾವಾಹಿ, ಕಿರುಚಿತ್ರ, ರಿಯಾಲಿಟಿ ಶೋಗಳನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವ ಬಗ್ಗೆ ತುಂಬಾ ಕುತೂಹಲವಿದೆ. ಚಿತ್ರೀಕರಣದಲ್ಲಿ ಭಾಗವಹಿಸುವಂತೆ ಈವರೆಗೆ ನನಗೆ ಸೂಚನೆ ಬಂದಿಲ್ಲ’ ಎನ್ನುತ್ತಾರೆ ‘ಕನ್ನಡತಿ’ ಧಾರಾವಾಹಿಯ ನಾಯಕಿ ರಂಜನಿ ರಾಘವನ್.

‘ವೀಕೆಂಡ್‌ ಸೀರಿಯಲ್‌ ಚಿತ್ರೀಕರಣಕ್ಕೆ ಹೋಗಬೇಕಿತ್ತು. ‌ಇದು ನಿಜಕ್ಕೂ ರಿಸ್ಕ್‌ ಎನಿಸಿತ್ತು. ಅಷ್ಟರಲ್ಲಿ ನಿರ್ಮಾಪಕರು ಚಿತ್ರೀಕರಣ ಮುಂದೂಡಿರುವ ಮಾಹಿತಿ ಕೊಟ್ಟರು’ ಎನ್ನುತ್ತಾರೆ ‘ಪಾಪ ಪಾಂಡು’ ಧಾರಾವಾಹಿಯ ಶ್ರೀಹರಿ ಪಾತ್ರಧಾರಿ ಸೌರಭ್‌ ಕುಲಕರ್ಣಿ.

25ರಿಂದ ಚಿತ್ರೀಕರಣ: ಕೆಟಿವಿಎ

ಧಾರಾವಾಹಿಗಳ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿರುವುದಕ್ಕೆ ಆಭಾರಿಯಾಗಿದ್ದೇವೆ.ಬಹಳಷ್ಟು ಕಾರ್ಮಿಕರು, ತಂತ್ರಜ್ಞರು ಒಂದೆಡೆ ಇಲ್ಲದಿರುವ ಕಾರಣ ಮತ್ತು ಎಲ್ಲರ ಆರೋಗ್ಯ ಹಿತದೃಷ್ಟಿಯಿಂದ ಧಾರಾವಾಹಿಗಳ ಚಿತ್ರೀಕರಣವನ್ನು ಮೇ 25ರಿಂದ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಅಸೋಷಿಯೇಷನ್‌ ಅಧ್ಯಕ್ಷ ಎಸ್‌.ವಿ. ಶಿವಕುಮಾರ್‌ ತಿಳಿಸಿದ್ದಾರೆ.

ಅಲ್ಲದೆ, ಕೆಲವು ಚಾಲ್ತಿಯಲ್ಲಿದ್ದ ಧಾರಾವಾಹಿಗಳ ಚಿತ್ರೀಕರಣ ಲಾಕ್‌ಡೌನ್‌ನಿಂದ ಅರ್ಧದಲ್ಲೇ ನಿಂತಿವೆ. ಸದ್ಯದ ಸ್ಥಿತಿಗೆ ಅನುಗುಣವಾಗಿ ಮಾರ್ಪಡಿಸಿಕೊಂಡು ಚಿತ್ರೀಕರಣ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಹಾಗಾಗಿ ಕೆಲವು ವಾಹಿನಿಗಳು, ನಿರ್ಮಾಪಕರು, ತಂತ್ರಜ್ಞರ ಜೊತೆ ಚರ್ಚಿಸಿದ ನಂತರಚಿತ್ರೀಕರಣ ಮುಂದೂಡಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT