ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದುವುದೆಲ್ಲ ಬಿಟ್ಟು ಇರದುದರೆಡೆಗೆ...

Published 29 ಏಪ್ರಿಲ್ 2023, 21:25 IST
Last Updated 29 ಏಪ್ರಿಲ್ 2023, 21:25 IST
ಅಕ್ಷರ ಗಾತ್ರ

ಸೆಪ್ಟೆಂಬರ್‌ 17, 2022ನೇ ಇಸವಿ. ನಮೀಬಿಯಾದಿಂದ ಬಂದ ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಧಾನಿ ದೇಶಕ್ಕೆ ಅರ್ಪಿಸಿದರು. ಹಿಂದೊಮ್ಮೆ ಭಾರತದ ಕಾಡುಗಳಲ್ಲಿ ನೆಲೆಸಿ ವಿನಾಶಗೊಂಡಿತು ಎಂದು ನಂಬಿರುವ ಜೀವಿಯನ್ನು ಕಾಡಿಗೆ ಮರು ಪರಿಚಯಿಸುವುದು ಈ ಯೋಜನೆಯ ಉದ್ದೇಶ. ಪ್ರಧಾನಿ ಕಚೇರಿ ಈ ಯೋಜನೆಯನ್ನು ರೂಪಿಸಿತ್ತು. 

ಆ ಸಮಾರಂಭದಲ್ಲಿ ಹಾಜರಿದ್ದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌, ‘ಭಾರತದ ವನ್ಯಜೀವಿ ಸಂರಕ್ಷಣೆಯಲ್ಲಿ ಹೊಸ ಶಕೆ ಆರಂಭ, ಶತಮಾನದ ಅದ್ಭುತ ಚಿಂತನೆ, ಅಲ್ಲದೇ ರಾಜ್ಯದ ಪ್ರವಾಸೋದ್ಯಮ ಇದರಿಂದ ಇನ್ನಷ್ಟು ವೃದ್ಧಿಯಾಗಲಿದೆ’ ಎಂದರು. 

ಮಾಧ್ಯಮಗಳಲ್ಲಿ ಪ್ರಕಟಗೊಂಡ, ಪ್ರಸಾರಗೊಂಡ ಈ ವರದಿ ಪ್ರಾಣಿಪ್ರಿಯರಲ್ಲಿ ಸಂಚಲನ ಉಂಟು ಮಾಡಿದ್ದರೆ ಅಚ್ಚರಿ ಇಲ್ಲ. ಆದರೆ ಹೆಚ್ಚಿನ ಜೀವ ವಿಜ್ಞಾನಿಗಳಿಗೆ ಈ ಯೋಜನೆಯ ಉದ್ದೇಶ, ಪರಿಕಲ್ಪನೆ, ವಿನ್ಯಾಸ ಯಾವುದೂ ಕೂಡ ಒಪ್ಪಿಗೆಯಾಗಿರಲಿಲ್ಲ. ಅಪಸ್ವರವಿದ್ದರೂ ಮೌನವಾದರು. ರವಿ ಚಲಂ ಎಂಬ ವಿಜ್ಞಾನಿ ಮಾತ್ರ ಇದೊಂದು ಒಳನೋಟಗಳಿಲ್ಲದ, ಅವೈಜ್ಞಾನಿಕ ಯೋಜನೆ ಎಂದು ಜರಿದರು.

ಹಾಗೆ ನೋಡಿದರೆ ಚೀತಾಗಳನ್ನು ಭಾರತಕ್ಕೆ ಮತ್ತೆ ಪರಿಚಯಿಸಬೇಕೆಂಬ ಚಿಂತನೆ ಹೊಸದೇನಲ್ಲ. ಇದು ವನ್ಯಜೀವಿ ವಲಯದಲ್ಲಿ ಸುಮಾರು ಮೂವತ್ತು ವರ್ಷಗಳಿಂದ ಚರ್ಚೆಯಲ್ಲಿದ್ದ ವಿಷಯ. 2009ರಲ್ಲಿ ಕೇಂದ್ರ ಸರ್ಕಾರ ಇದಕ್ಕಾಗಿ ಯೋಜನೆಯನ್ನು ಸಿದ್ಧಪಡಿಸಿತ್ತು. ಆದರೆ ಪ್ರಯೋಗಕ್ಕೆ ಆಯ್ಕೆ ಮಾಡಿಕೊಳ್ಳಬೇಕಾದ ಪ್ರದೇಶ ಹಾಗೂ ಮತ್ತಿತರ ಸಾಧಕ–ಬಾಧಕಗಳನ್ನು ವಿಶ್ಲೇಷಿಸಿ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. 

ಇದೇನೇ ಇರಲಿ, ಚಿಮ್ಮುವ ವೇಗಕ್ಕೆ ಹೆಸರಾದ ಅದ್ಭುತ ಜೀವಿಯೊಂದನ್ನು ಮರಳಿ ನಮ್ಮ ಕಾಡಿಗೆ ಬಿಡುವುದಾದಲ್ಲಿ ಏನು ತಪ್ಪು; ಇದು ದೇಶವೇ ಹೆಮ್ಮೆ ಪಡುವ ವಿಷಯವಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಜೀವಪರಿಸರವೆಂಬುದು ಅತ್ಯಂತ ಸಂಕೀರ್ಣವಾದದ್ದು. 

ಭೂಮಿಯಲ್ಲಿ ಜೀವಿಗಳ ವಿಸ್ತರಣೆಗೆ ಭೌಗೋಳಿಕ ವೈವಿಧ್ಯ ಕಾರಣವಾಗಿರುತ್ತದೆ. ಯಾವುದೇ ಅಪರಿಚಿತ ನೆಲೆಗೆ ಜೀವಿಯೊಂದನ್ನು ಪರಿಚಯಿಸಿದಾಗ ಅವು ತಬ್ಬಿಬ್ಬಾಗುತ್ತವೆ. ಆ ನೆಲೆಯ ಭಾಷೆ ಅರ್ಥವಾಗದೆ ತತ್ತರಿಸುತ್ತವೆ. ಕ್ರಮೇಣ ಮಾನಸಿಕವಾಗಿ ಕುಸಿಯುವ ಸಾಧ್ಯತೆಗಳಿರುತ್ತವೆ. ಜೀವಪರಿಸರದ ನಾಡಿಮಿಡಿತ ಎಂದಿಗೂ ಮಾನವನ ಬೌದ್ಧಿಕ ಚತುರತೆಗೆ ಸುಲಭವಾಗಿ ದಕ್ಕುವ ವಿಷಯವಲ್ಲ.

ಈ ಹಿನ್ನೆಲೆಯಲ್ಲಿ ಜೀವಪರಿಸರದ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಮುನ್ನ ಸುದೀರ್ಘ ಅಧ್ಯಯನ ಅತ್ಯವಶ್ಯಕ. ಇಲ್ಲಿ ಕೇವಲ ಎದೆಗಾರಿಕೆ ಅಥವಾ ಭಾವನಾತ್ಮಕ ತೀರ್ಮಾನಗಳು ನೆರವಿಗೆ ಬರುವುದಿಲ್ಲ.

ಮೊದಲಿಗೆ ಚೀತಾಗಳು ನಮ್ಮ ದೇಶದ ಕಾಡುಗಳಲ್ಲಿ ಅಥವಾ ಹುಲ್ಲುಗಾವಲುಗಳಲ್ಲಿ ಸಹಜವಾಗಿ ಬದುಕಿ ಬಾಳಿದ ಪ್ರಾಣಿಗಳೇ ಎಂದು ಅರಿಯುವುದು ಮುಖ್ಯವಾಗುತ್ತದೆ. 

1947ರಲ್ಲಿ ಛತ್ತೀಸಗಡದ ಮಹಾರಾಜ ಭಾರತ ದೇಶದ ಕಡೆಯ ಚೀತಾಗಳನ್ನು ಬೇಟೆಯಾಡಿ ಕೊಂದನೆಂಬ ದಾಖಲೆಗಳಿವೆ. ಆದರೆ ಅವು ನಮ್ಮ ದೇಶದ ಜೀವಪರಿಸರದಲ್ಲಿ ಸಹಜವಾದ ಭಾಗವಾಗಿ ಸಾವಿರಾರು ವರ್ಷಗಳಿಂದ ಜೀವಿಸಿದ್ದ ಪ್ರಾಣಿಗಳು ಎನ್ನುವುದೇ ಚರ್ಚಾಸ್ಪದ. 

ಏಕೆಂದರೆ ನಮ್ಮ ದೇಶದ ಎಲ್ಲೆಡೆ ಕಂಡುಬರುವ ಬಂಡೆಗಳ ಮೇಲೆ ಬಿಡಿಸಿರುವ ಪುರಾತನ ಚಿತ್ರಗಳಲ್ಲಾಗಲೀ, ಹರಪ್ಪ ಮೊಹೆಂಜೋದಾರೊ ಕಾಲದ ಕಲೆಗಳಲ್ಲಾಗಲಿ ಅಥವಾ ನಮ್ಮ ಸಾಹಿತ್ಯ, ಪುರಾಣಗಳಲ್ಲಾಗಲಿ ಚೀತಾಗಳು ದಾಖಲಾಗಿಲ್ಲ. 

ಆದರೆ, ಮೊಗಲರ ಅವಧಿಯಲ್ಲಿ ಬಿಡಿಸಿದ ಹಲವು ಮಿನಿಯೇಚರ್‌ ಚಿತ್ರಕಲೆಗಳಲ್ಲಿ ಚೀತಾ ಪ್ರತ್ಯಕ್ಷಗೊಳ್ಳುತ್ತವೆ. ಅದರ ನಂತರ ನಮ್ಮ ರಾಜ ಮಹಾರಾಜರ ಬಳಿ ಚೀತಾಗಳಿದ್ದ ಹಲವಾರು ದಾಖಲೆಗಳು ದೊರೆಯುತ್ತವೆ. ಹಾಗಾದರೆ ಈ ಚೀತಾಗಳು ಎಲ್ಲಿಂದ ಬಂದವು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. 

ಇರಾನ್‌ನ ಶ್ರೀಮಂತರು ಹಿಂದಿನ ಕಾಲದಲ್ಲಿ ತಮ್ಮ ದೇಶದ ಕುರುಚಲು ಕಾಡುಗಳಲ್ಲಿ ಜೀವಿಸಿದ್ದ ಚೀತಾಗಳನ್ನು ಪಳಗಿಸಿ ಅವುಗಳಿಂದ ಬೇಟೆಯಾಡಿಸುವ ಹವ್ಯಾಸ ಬೆಳೆಸಿಕೊಂಡಿದ್ದರು. ಈ ರೀತಿ ಪಳಗಿದ ಚೀತಾಗಳನ್ನು 15ನೇ ಶತಮಾನದಲ್ಲಿ ಮೊಗಲರು ನಮ್ಮ ದೇಶಕ್ಕೆ ತಂದಿರಬಹುದು. ನಮ್ಮ ದೇಶದ ಮಹಾರಾಜರುಗಳಿಗೆ ಉಡುಗೊರೆಯಾಗಿ ಕೂಡ ಬಂದಿರಲು ಸಾಧ್ಯ. ಆನಂತರದ ಅವಧಿಯಲ್ಲಿ ಕೆಲವು ಚೀತಾಗಳು ನಮ್ಮ ಕುರುಚಲು ಕಾಡು ಮತ್ತು ಹುಲ್ಲುಗಾವಲುಗಳಲ್ಲಿ ಮರೆಯಾಗಿ ಸ್ವಲ್ಪ ಕಾಲ ಜೀವಿಸಿರಬಹುದೆಂಬುದು ಹಲವಾರು ವಿಜ್ಞಾನಿಗಳ ಅನಿಸಿಕೆ. 

ಹಾಗಾದಲ್ಲಿ, ನಮ್ಮ ಜೀವಪರಿಸರದ್ದಲ್ಲದ ಜೀವಿಯೊಂದನ್ನು ತಂದು ನಮ್ಮ ಕಾಡಿಗೆ ಬಿಡುವ ಪ್ರಯತ್ನ ವೈಜ್ಞಾನಿಕವಾಗಿ ಅರ್ಥ ಕಳೆದುಕೊಳ್ಳುತ್ತದೆ. 

ಇದಲ್ಲದೇ ಈ ಯೋಜನೆಯು ಜೀವವಿಜ್ಞಾನಿಗಳಲ್ಲಿ ಹಲವಾರು ಸಂಶಯಗಳನ್ನು ಬಿತ್ತಿರಬಹುದು. ಇದರಲ್ಲಿ ಕಾಡಿನ ವಿಸ್ತೀರ್ಣವೂ ಒಂದು. ‘ಕುನೊ’ ಉದ್ಯಾನದ ವಿಸ್ತೀರ್ಣ ಕೇವಲ 750 ಚ.ಕಿ.ಮೀ. ಇದು ಚೀತಾಗಳ ಅವಶ್ಯಕತೆಯನ್ನು ಪೂರೈಸುವುದಿಲ್ಲ. ಜೊತೆಗೆ ಜೀವಿಗಳು ಅಪರಿಚಿತ ನೆಲೆಗೆ ಸುಲಭವಾಗಿ ಒಗ್ಗಿಕೊಳ್ಳಲಾರವು ಹಾಗೂ ಅವುಗಳಿಗೆ ಆ ಪ್ರದೇಶದ ನಕ್ಷೆಯ ಬಗ್ಗೆ ಅರಿವಿರುವುದಿಲ್ಲ. ಅದೇ ರೀತಿ ಅಲ್ಲಿ ಜೀವಿಸಿರುವ ಉಳಿದ ಜೀವಿಗಳ ಕುರಿತೂ ಅರಿವು ಇರಲಾರದು. ಬದಲಾಗುವ ಋತುಮಾನ, ಹರಿಯುವ ಝರಿ, ಚಿಗುರುವ ಹುಲ್ಲು, ನೆಲೆಸಿರುವ ಪ್ರಾಣಿ ಸಂಕುಲಗಳ ಬಗ್ಗೆ ತಿಳಿವಳಿಕೆಯು ಅಗತ್ಯ. ಕಾಡು ಜೀವಿಗಳು ಬಲಶಾಲಿಯಾಗಿ ಕಂಡರೂ ಅತ್ಯಂತ ಸೂಕ್ಷ್ಮವಾಗಿರುತ್ತವೆ. 

ಒಮ್ಮೆ ಚಲನಚಿತ್ರ ಚಿತ್ರೀಕರಣಕ್ಕೆಂದು ಮುದುಮಲೈ ಅರಣ್ಯಕ್ಕೆ ಎರಡು ಬಿಳಿಯ ಕುದುರೆಗಳು ಬಂದಿದ್ದವು. ಅವುಗಳನ್ನು ಗಮನಿಸಿದ ಜಿಂಕೆ, ಕಡವೆಗಳೆಲ್ಲ ದಿಕ್ಕಾಪಾಲಾಗಿ ಓಡಿದ್ದನ್ನು ನಾವು ಕಂಡಿದ್ದೇವೆ. ಬಹುಶಃ ಪೊದೆಗಳ ಮರೆಯಲ್ಲಿ ಕುಳಿತಿದ್ದ ಹುಲಿ ಸಹ ಅಂಜಿರಬಹುದು. ಭಗವಂತ ತನ್ನ ಪರಮಶೌರ್ಯವನ್ನು ಕುಂದಿಸಲು ದೇವಲೋಕದಿಂದ ಈ ಭಯಾನಕ ಪ್ರಾಣಿಗಳನ್ನು ಕಳಿಸಿರಬಹುದೆಂದು ಭಾವಿಸಿರಬಹುದು. ಇದು ಉತ್ಪ್ರೇಕ್ಷೆಯ ಕಲ್ಪನೆ ಎನಿಸಿದರೂ, ಅಪರಿಚಿತ ಜೀವಿಗಳನ್ನು ಕಂಡಾಗ ಕಾಡು ಬೆಚ್ಚುತ್ತದೆ.

ಈಗ ನಮೀಬಿಯಾ ದೇಶದಿಂದ ಬಂದಿರುವ ಜೀವಿಗಳ ಹಿನ್ನೆಲೆಯನ್ನು ನೋಡಿ. ಅವುಗಳ ಬೇಟೆಯ ಪಟ್ಟಿಯಲ್ಲಿರುವುದು ಥಾಮಸನ್‌ ಗೆಜೆಲ್‌, ಸ್ಟ್ರಿಂಗ್‌ ಬಕ್‌, ಇಂಪಾಲ ಮತ್ತಿತರ ಸಸ್ಯಾಹಾರಿ ಪ್ರಾಣಿಗಳು. ಇವು ಸವನ್ನಾ ಹುಲ್ಲುಗಾವಲು ಪ್ರದೇಶಕ್ಕೆ ಸೀಮಿತ. ಆದರೆ ಕುನೊ ಉದ್ಯಾನವನದಲ್ಲಿರುವುದು ಕೃಷ್ಣಮೃಗ, ಚಿಂಕಾರ ಮತ್ತು ನೀಲ್‌ಗಾಯ್‌ಗಳು. ಇವನ್ನೆಲ್ಲ ಊಹಿಸಿಕೊಂಡಾಗ ಆಫ್ರಿಕಾದಲ್ಲಿ ವಿನಾಶದಂಚು ತಲುಪಿರುವ ಚೀತಾಗಳನ್ನು ಭಾರತಕ್ಕೆ ತಂದಿರುವುದು ಒಂದು ರೀತಿಯಲ್ಲಿ ಅನೈತಿಕ  ನಿರ್ಧಾರ. ಇನ್ನೂ ಕಠಿಣವಾಗಿ ಹೇಳಬೇಕಾದಲ್ಲಿ ಅದನ್ನು ಮರಣದಂಡನೆ ಎನ್ನಬಹುದು. 

ಹಾಗಾದರೆ ಇಂತಹ ಪ್ರಯೋಗಗಳು ಬೇರೆ ದೇಶಗಳಲ್ಲಿ ನಡೆದಿಲ್ಲವೇ ಎಂಬ ಪ್ರಶ್ನೆ ಎದುರಾಗುತ್ತದೆ. ಹೌದು, ಅಮೆರಿಕದಲ್ಲಿ ತೋಳಗಳನ್ನು, ಸೆಂಟ್ರಲ್‌ ಅಮೆರಿಕದಲ್ಲಿ, margay cat, ಜಾಗ್ವಾರ್‌, Amur leopard ಮತ್ತು ಮಿಡಲ್‌ ಈಸ್ಟ್‌ ಲೆಪರ್ಡ್‌ಗಳನ್ನು ಮರಳಿ ಕಾಡಿಗೆ ತರುವ ಪ್ರಯತ್ನ ನಡೆದಿದೆ. ಅದು ತಕ್ಕಮಟ್ಟಿಗೆ ಯಶಸ್ವಿ ಆಗಿದೆ. ಇದಕ್ಕೆ ಕಾರಣವೆಂದರೆ ಯೋಜನೆಯನ್ನು ಅನುಷ್ಠಾನಗೊಳಿಸುವ ಮುನ್ನ ನೂರಾರು ವಿಜ್ಞಾನಿಗಳು ದಶಕಗಳ ಕಾಲ ಅಧ್ಯಯನ ನಡೆಸಿ ನೀಡಿದ ವರದಿ ಮತ್ತು ಸಲಹೆಗಳು. 

ಇಲ್ಲಿ ಆಗಿರುವ ಅನಾಹುತವೆಂದರೆ, ಕುನೊ ಅರಣ್ಯದಲ್ಲಿ ದೀರ್ಘಕಾಲ ಅಧ್ಯಯನ ನಡೆಸಿದ ರವಿ ಚಲಂ ಮತ್ತು ಅವರ ಜೊತೆ ಕೆಲಸ ಮಾಡಿದ ವಿಜ್ಞಾನಿಗಳ ವರದಿಯನ್ನು ಬದಿಗೊತ್ತಿ ಈ ಯೋಜನೆಯನ್ನು ರೂಪಿಸಿರುವುದು.

ಚೀತಾ ಯೋಜನೆ ಅವೈಜ್ಞಾನಿಕ ಮತ್ತು ನಿರರ್ಥಕ ಎಂದು ವಿಜ್ಞಾನಿಗಳ ತೀರ್ಮಾನದ ಹಿಂದೆ ಇನ್ನಷ್ಟು ಕಾರಣಗಳು ಇವೆ. 

ಭಾರತದ ಕಾಡುಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅನೇಕ ಜೀವಿಗಳಿವೆ. ದೇಶದ ಹೆಮ್ಮೆಯ ಸಂಕೇತವಾದ ಇಂಡಿಯನ್‌ ಬಸ್‌ಟರ್ಡ್‌ ಹಕ್ಕಿಗಳ ಸಂಖ್ಯೆ 150ಕ್ಕೆ ಇಳಿದಿದೆ. ಇನ್ನು ಎಂಟು–ಹತ್ತು ವರ್ಷಗಳಲ್ಲಿ ಇವು ಕಣ್ಮರೆಯಾಗಬಹುದು. ಅವುಗಳ ನೆಚ್ಚಿನ ನೆಲೆಯಾದ ಹುಲ್ಲುಗಾವಲು ಪ್ರದೇಶಗಳನ್ನು ಸಂರಕ್ಷಿಸಲು ಸರ್ಕಾರ ಆಸಕ್ತಿ ತೋರುತ್ತಿಲ್ಲ. 

ಸಂರಕ್ಷಣೆಯ ಇತಿಹಾಸದಲ್ಲಿ ಯಶಸ್ವಿ ಯೋಜನೆ ಎಂದು ಮಾನ್ಯತೆ ಪಡೆದ ಹುಲಿ ಯೋಜನೆಗಳಿಗೆ ಅನುದಾನ ಪ್ರಮಾಣವನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ. ಇರುವ ಅಲ್ಪ ಸ್ವಲ್ಪ ಕಾಡನ್ನು ರೈಲ್ವೆ ಹಳಿಗಳು, ಎಕ್ಸ್‌ಪ್ರೆಸ್‌ ವೇಗಳು ಛೇದಿಸಿ ತುಂಡರಿಸುತ್ತಿವೆ. ಗಣಿಗಾರಿಕೆ ಮತ್ತಿತರ ಯೋಜನೆಗಳಿಗೆ ಕಾಡುಗಳು ನಲುಗುತ್ತಿವೆ.

ಇಂದಿನ ಪರಿಸ್ಥಿತಿಯಲ್ಲಿ ನಮ್ಮಲ್ಲಿ ಅಳಿದುಳಿದಿರುವ ಜೀವ ಪರಿಸರವನ್ನು ಉಳಿಸಿ ಸಂರಕ್ಷಿಸಿಕೊಳ್ಳುವುದು ಮೊದಲ ಆದ್ಯತೆ ಆಗಬೇಕು. ಇದಕ್ಕೆ ಪೂರಕವಾದ ಸ್ಪಷ್ಟತೆ ಮತ್ತು ಬದ್ಧತೆ ಸರ್ಕಾರಕ್ಕೆ ಇರಬೇಕು. ಆಗ ವ್ಯಯಿಸುವ ಹಣ ಮತ್ತು ಶ್ರಮಕ್ಕೆ ಅರ್ಥ ಬರುತ್ತದೆ.

ಇಂದಿನ ಜಾಗತಿಕ ಪರಿಸರದ ವಿದ್ಯಮಾನಗಳನ್ನು ಗಮನಿಸಿದಾಗ ಜೀವ ಪರಿಸರಗಳು ಭವಿಷ್ಯದ ಬದುಕಿಗೆ ಅನಿವಾರ್ಯ. ಈ ಬಗ್ಗೆ ಸಂಶೋಧನಾ ವರದಿಗಳು ಪ್ರಕಟಗೊಂಡಿವೆ. ಇದನ್ನು ಅರಿಯದಿದ್ದಾಗ, ಮುಂದಿನ ಪೀಳಿಗೆಯ ಜನ ನಮ್ಮ ಹಿರಿಯರು ಎಷ್ಟು ದಡ್ಡರಾಗಿದ್ದರು ಎಂದು ಯೋಚಿಸುವಂತಾದರೆ ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT