ಬುಧವಾರ, ಸೆಪ್ಟೆಂಬರ್ 29, 2021
19 °C

ಹೆಬ್ಬೆಟ್ಟಿನ ಗಾತ್ರದ ಲೌಡ್‌ಸ್ಪೀಕರ್‌ ಕೀಟ!

ಮಂಜುನಾಥ್‌ ಎಲ್‌.ಕೆ. Updated:

ಅಕ್ಷರ ಗಾತ್ರ : | |

Prajavani

ಮೋಡ ಗವ್ವನೆ ಕವಿದರೆ ಸಾಕು, ಎತ್ತರದ ಮರಗಳ ರೆಂಬೆ-ಕೊಂಬೆಗಳಲ್ಲಿ ವಿಚಿತ್ರ ಕೂಗುಗಳು ಕೇಳಿಸಲು ಆರಂಭವಾಗುತ್ತವೆ. ಮರಗಳೇ ಪೀಪಿ ಊದುತ್ತಿವೆಯೇನೋ, ಶಿಳ್ಳೆ ಹೊಡೆಯುತ್ತಿವೆಯೇನೋ ಎಂಬ ಶಂಕೆ ಕಾಡುತ್ತದೆ. ಮರದ ಬುಡದ ಸುತ್ತಲೂ, ಕಣ್ಣಿಗೆ ನಿಲುಕಿದಷ್ಟು ಎತ್ತರದಲ್ಲಿ ಸೂಕ್ಷ್ಮವಾಗಿ ಹುಡುಕಿದರೂ ಪತ್ತೆಯಾಗದ ಸ್ವರವದು.

‘ಮಲೆನಾಡಿನ ಹಿನ್ನೆಲೆ ಗಾಯಕ’ನಂತೆ ಸದಾ ಹಾಡುವ ಈ ಕೀಟವನ್ನು ಗುರುತಿಸಲು ‘ಶಬ್ಧವೇದಿ ವಿದ್ಯೆ’ ಅಗತ್ಯವೇ. ಸಾಮಾನ್ಯವಾಗಿ ಜೀರುಂಡೆ, ಇರಿಂಟಿ ಎಂದು ಇವುಗಳನ್ನು ಕರೆಯಲಾಗುತ್ತದೆ. ಇದರ ಸೀಟಿಯನ್ನು ಕೇಳಿದವರ ಸಂಖ್ಯೆಗೆ ಹೋಲಿಸಿದರೆ ನೋಡಿದವರ ಸಂಖ್ಯೆ ಬೆರಳೆಣಿಕೆ. ಯಾರಾದರೂ ನೋಡಲು ಬಂದರೆ, ಗಾಯನವನ್ನು ನಿಲ್ಲಿಸದೆ ಮರದ ಹಿಂದಕ್ಕೆ ಸರಿದು ಮರೆಯಾಗುತ್ತದೆ. ತೀರ ಉಪದ್ರವೆನಿಸಿತು ಎಂದಾದರೆ ರಪ್‌ ಎಂದು ಹಾರಿಹೋಗಿ ಬೇರೆ ಯಾವುದೋ ಮರದಲ್ಲಿ ಕುಳಿತುಕೊಳ್ಳುತ್ತದೆ.

ಜಾಗತಿಕವಾಗಿ ಸಿಕಾಡಾಸ್‌ ಎಂದು ಗುರುತಿಸಿಕೊಂಡಿರುವ ಈ ಕೀಟ ಸುಮಾರು 3,000 ಪ್ರಭೇದಗಳನ್ನು ಒಳಗೊಂಡಿದೆ. ಜಗತ್ತಿನ ಎಲ್ಲ ಕಾಡುಗಳಲ್ಲಿ ಕಾಣಸಿಗುವ ಸಿಕಾಡಾಸ್‌ಗಳು ಅಲ್ಲಿನ ಪ್ರಾಕೃತಿಕ ಗುಣಲಕ್ಷಣಗಳಿಗೆ ತಕ್ಕಂತೆ ಭಿನ್ನತೆಯನ್ನು ಹೊಂದಿರುತ್ತವೆ. ಸ್ವರದಲ್ಲೂ ವಿಭಿನ್ನತೆ ಇರುತ್ತದೆ. ಸಂಗಾತಿಯನ್ನು ಆಕರ್ಷಿಸಲು ನಡೆಸುವ ಗಾಯನವಿದು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಪಾಯದ ಸೂಚನೆ ನೀಡಲು ವಿಭಿನ್ನ ಧ್ವನಿಯನ್ನು ಹೊರಡಿಸುತ್ತವೆ.

ಹಾಗಂತ ಇವುಗಳೇನು ಕೊರಳಿಂದ ಸ್ವರ ಹೊರಡಿಸುವುದಿಲ್ಲ, ಹಿಂಬದಿಯಲ್ಲಿ ಉಬ್ಬಿಕೊಂಡ ಟೊಳ್ಳು ಹೊಟ್ಟೆಯೊಳಗಿಂದ ಒಂದೇ ಉಸಿರಿನಲ್ಲಿ ಮೂಡಿಸುವ ಸಿಳ್ಳು ಇದಾಗಿದೆ. ಹೊಟ್ಟೆಯೊಳಗಿನ ವಿಶೇಷ ಪದರಗಳನ್ನು ಜೋರಾಗಿ ಅದುರಿಸುವುದರಿಂದ ಶಬ್ದ ಉತ್ಪಾದನೆಯಾಗುತ್ತದೆ. ಹಿಂಬದಿಯ ತುದಿಯಲ್ಲಿರುವ ಸಣ್ಣ ತೂತಿನಿಂದ ದೊಡ್ಡ ಧ್ವನಿಯಾಗಿ ಝೇಂಕರಿಸುತ್ತದೆ. ಇದೇ ಭಾಗದಲ್ಲಿ ಲೈಂಗಿಕ ಸಂಪರ್ಕ, ಮೊಟ್ಟೆ ಇಡುವ ಪ್ರಕ್ರಿಯೆ ಏರ್ಪಡುತ್ತದೆ.


ಲ್ಯಾಂಡಿಂಗ್‌ಗೆ ಕ್ಷಣಗಣನೆ... ಊಟ ಅರಿಸಿ ಮರದತ್ತ ಹಾರಿಬಂದ ಕೀಟ

ಹೆಬ್ಬೆರಳು ಗಾತ್ರದ ಸಿಕಾಡಾಸ್‌ಗಳು 12-17 ವರ್ಷಗಳ ಕಾಲ ಬದುಕುತ್ತವೆ ಎಂದರೆ ಅಚ್ಚರಿಯಾಗದೆ ಇರದು. ಎರಡು ದೊಡ್ಡ ಕಣ್ಣುಗಳ ನಡುವೆ ಮೂರು ಸಣ್ಣ ಕಣ್ಣುಗಳನ್ನು ಹೊಂದಿರುವ ಸಿಕಾಡಾಸ್‌ ಜೀವಿತಾವಧಿಯ ಬಹುಪಾಲು ದಿನಗಳನ್ನು ಮಣ್ಣಿನ ಅಡಿಯಲ್ಲಿ ಕಳೆಯುತ್ತವೆ. ಮರಗಳ ತೊಗಟೆ ಅಡಿಯಲ್ಲಿ, ಕಾಂಡಗಳ ಅಡಿಯಲ್ಲಿ ಒಂದು ಹೆಣ್ಣು ಸಿಕಾಡಾಸ್‌ ಸುಮಾರು 400 ಮೊಟ್ಟೆಗಳನ್ನು ಇರಿಸುತ್ತದೆ. ಪ್ರತ್ಯೇಕ ಸ್ಥಳಗಳಲ್ಲಿ ಗುಂಪು ಗುಂಪಾಗಿ ಮೊಟ್ಟೆಗಳನ್ನು ಜೋಡಿಸಿಡುತ್ತದೆ. ಇದಾದ 6-10 ವಾರಗಳಲ್ಲಿ ಮೊಟ್ಟೆ ಬಿರಿದು ಹುಳುಗಳು ಹೊರಗೆ ಬರುತ್ತವೆ. ಮರದ ಬುಡದಲ್ಲೇ ನೆಲ ಸೇರುವ ಹುಳುಗಳು ಸುಮಾರು ಒಂದು ಮೀಟರ್‌ ಆಳ ಗುಂಡಿ ತೆಗೆದು ಒಳಗೆ ಸೇರಿಕೊಳ್ಳುತ್ತವೆ. ಮರದ ಬೇರುಗಳಲ್ಲಿನ ಸತ್ವಭರಿತ ದ್ರವವನ್ನು ಹೀರಿಕೊಳ್ಳುತ್ತ ಬದುಕು ಆರಂಭಿಸುತ್ತವೆ. ಹುಳಗಳ ಮೈಮೇಲಿನ ಚಿಪ್ಪು ಕರಗಿ, ರೆಕ್ಕೆಗಳು ಮೂಡಿ, ಲೈಂಗಿಕ ಕ್ರಿಯೆ ನಡೆಸುವಷ್ಟು ದೊಡ್ಡದಾದ ಮೇಲೆ ನೆಲದಡಿಯಿಂದ ಹೊರಗೆ ಬರುತ್ತವೆ. ಮರದಿಂದ ಮರಕ್ಕೆ ಹಾರುತ್ತ, ಸಂಧ್ಯಾಕಾಲಕ್ಕೆ ಅಥವಾ ಸುರಿಯುವ ಸೋನೆ ಮಳೆಗೆ ಹಿನ್ನೆಲೆ ಗಾಯನ ನೀಡಲು ಆರಂಭಿಸುತ್ತವೆ.

ಹೀಗೆ ಮಣ್ಣಿನಿಂದ ಹೊರಬಂದ ಪ್ರಾಯಕ್ಕೆ ಬಂದ ಕೀಟಗಳು 4-6 ವಾರಗಳಲ್ಲಿ ಸಾಯುತ್ತವೆ. ಅಷ್ಟರಲ್ಲಿ ಸಂಗಾತಿಯನ್ನು ಹುಡುಕಿ, ವಂಶಾಭಿವೃದ್ಧಿ ಮಾಡಲು ದೊಡ್ಡ ಸ್ವರದಲ್ಲಿ ಸಿಕಾಡಾಸ್‌ಗಳು ಕಿರಿಚಾಡುತ್ತಿರುತ್ತವೆ. ಒಂದು ಎಕರೆ ಪ್ರದೇಶದಲ್ಲಿ 15 ಲಕ್ಷ ಸಿಕಾಡಾಸ್‌ಗಳು ಇರುವ ಸಾಧ್ಯತೆ ಇದೆ. ಆದರೆ ಲೋಕಸ್ಟ್‌ ಎಂಬ ರಾಕ್ಷಸ ಮಿಡತೆಗಳಂತೆ ಇವುಗಳೇನು ಗುಂಪಾಗಿ ದಾಳಿ ನಡೆಸುವುದಿಲ್ಲ. ಇಂತಹ ಸಾವಿರಾರು ಕೀಟಗಳು ದೊಡ್ಡ ಮರದ ಬೇರಿನ ರಸವನ್ನು ಹೀರಿದರೆ ಗಂಭೀರ ಎನಿಸುವುದಿಲ್ಲ. ಆದರೆ ದೊಡ್ಡ ದೊಡ್ಡ ಮರಗಳು ಇಲ್ಲದಿದ್ದಾಗ ಅನಿವಾರ್ಯವಾಗಿ ಸಿಕಾಡಾಸ್‌ಗಳು ರೈತರ ಬೆಳೆಗಳ ಬೇರಿನ ಮೇಲೆ ಅವಲಂಬಿತವಾಗುತ್ತವೆ. ಇದರಿಂದ ಕೃಷಿ ಬೆಳೆಗಳಿಗೆ ಹೆಚ್ಚು ಹಾನಿ ಆಗಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು