ನಿಲ್ಲು ನಿಲ್ಲೇ ಪತಂಗ...

7
ಜುಲೈ 21ರಿಂದ 29ರವರೆಗೆ ರಾಷ್ಟ್ರೀಯ ಪತಂಗ ವಾರ

ನಿಲ್ಲು ನಿಲ್ಲೇ ಪತಂಗ...

Published:
Updated:
Deccan Herald

ಶಿಡ್ಲಘಟ್ಟ: ರಾಷ್ಟ್ರೀಯ ಪತಂಗ ವಾರವೆಂದು ದೇಶದೆಲ್ಲೆಡೆ ಜುಲೈ 21ರಿಂದ 29ರ ವರೆಗೂ ಆಚರಿಸಲಾಗುತ್ತಿದೆ. ಶಿಡ್ಲಘಟ್ಟ ತಾಲ್ಲೂಕು ರೇಷ್ಮೆಯಿಂದಲೇ ತನ್ನ ಹಿರಿಮೆ ಪಡೆದಿದೆ. ರೇಷ್ಮೆಯ ಮೂಲ ರೇಷ್ಮೆ ಪತಂಗ. ಹಾಗಾಗಿ ಶಿಡ್ಲಘಟ್ಟಕ್ಕೂ ಪತಂಗಕ್ಕೂ ಅವಿನಾಭಾವ ಸಂಬಂಧ.

ಪತಂಗವು ಚಿಟ್ಟೆಯ ಹತ್ತಿರದ ಸಂಬಂಧಿ. ಎರಡೂ ಲೆಪಿಡಾಪ್ಟೆರಾ ವರ್ಗಕ್ಕೆ ಸೇರಿದವು. ಆದರೆ ಪತಂಗಗಳು ನಿಶಾಚರಜೀವಿಗಳು. ಅವುಗಳಲ್ಲಿ ಕೆಲವು ಮುಸ್ಸಂಜೆ ಬೆಳಕಲ್ಲಿ ತಮ್ಮ ಚಟುವಟಿಕೆ ನಡೆಸಿದರೆ, ಇನ್ನು ಕೆಲವು ಹಗಲುವಾಸಿಗಳು.

ಕೆಲ ಪತಂಗಗಳ ಕಂಬಳಿ ಹುಳುಗಳು ಕೃಷಿಗೆ ಹಾನಿ ಮಾಡಿದರೆ, ಕೆಲವು ಲಾಭದಾಯಕ. ರೇಷ್ಮೆ ಪತಂಗದ ಹುಳು ಬೆಳೆಸಿ ಅದರ ಗೂಡಿನಿಂದ ರೇಷ್ಮೆ ನೂಲು ತೆಗೆಯುವುದು ಲಾಭದಾಯಕ ಉದ್ಯಮ.

ಪತಂಗ ಬೆಳಕಿಗೆ ಆಕರ್ಷಿತವಾಗುತ್ತದೆ. ಪ್ರಕಾಶಮಾನ ವಸ್ತುವನ್ನು ಸುತ್ತುತ್ತದೆ. ಇದಕ್ಕೆ ಕಾರಣ ಚಂದ್ರನ ಬೆಳಕನ್ನು ತನ್ನ ಸಂಚಾರ ನಿರ್ದೇಶಿಸಲು ಬಳಸುವುದು ಅಥವಾ ದೃಷ್ಟಿ ವ್ಯತ್ಯಾಸಗೊಳ್ಳುವ ಕಾರಣವೂ ಇರಬಹುದು. ರಾತ್ರಿ ಅರಳುವ ಹೂಗಳ ಪರಾಗಸ್ಪರ್ಶಕ್ಕೆ ಪತಂಗ ಬೇಕೇ ಬೇಕು.

ಓಲಿಯಾಂಡರ್‌ ಹಾಕ್‌ ಪತಂಗ

‘ಚಿಟ್ಟೆಗಳು ಮತ್ತು ಪತಂಗಗಳು ಒಂದೇ ಜಾತಿಯವು. ಆದರೆ ಕೆಲವು ವ್ಯತ್ಯಾಸಗಳಿರುತ್ತವೆ. ಚಿಟ್ಟೆಗಳು ಹಗಲು ಜೀವಿಗಳಾದರೆ, ಪತಂಗಗಳು ನಿಶಾಚರಿಗಳು. ಚಿಟ್ಟೆಗಳು ರೆಕ್ಕೆಗಳನ್ನು ಮೇಲಕ್ಕೆ ಮಡಿಚುತ್ತವೆ. ಆದರೆ ಪತಂಗಗಳು ವಿಮಾನದ ರೆಕ್ಕೆಗಳಂತೆ ಅಡ್ಡಡ್ಡ ಅಗಲಿಸಿರುತ್ತವೆ. ಚಿಟ್ಟೆಗಳ ಮೈ ಬಡಕಲು, ಮೀಸೆ ಅನ್ನೋದು ಬೆಂಕಿಕಡ್ಡಿ ಥರಾ. ಪತಂಗಗಳದ್ದು ಟೊಣಪ ಮೈ. ಹಂಚಿಕಡ್ಡಿ ಮೀಸೆ. ನಿಶಾಚರ ಜೀವಿಗಳಾದ ಈ ಪತಂಗಗಳನ್ನು ನೋಡುವುದೇ ವಿರಳ. ಕಂಬಳಿ ಹುಳುಗಳು ಚೆನ್ನಾಗಿ ಎಲೆತಿಂದು ಬೆಳೆದ ಮೇಲೆ ಪ್ಯೂಪಾ ಆಗುವಾಗ ಮಣ್ಣಲ್ಲಿ ಎಲೆಗಳ ಮರೆ ಸೇರಿಬಿಡುತ್ತವೆ.

ಭಾರತದಲ್ಲಿ 10 ಸಾವಿರಕ್ಕೂ ಅಧಿಕ ರೀತಿಯ ಪತಂಗಗಳಿವೆ. ತಾಲ್ಲೂಕಿನಲ್ಲೂ ವೈವಿಧ್ಯಮಯ ಪತಂಗಗಳನ್ನು ಕಾಣಬಹುದು. ಪತಂಗಗಳು ಸಾಕಷ್ಟು ಇವೆ.  ಅದರ್ಥ ಪರಿಸರ ವ್ಯವಸ್ಥೆ ಆರೋಗ್ಯವಾಗಿದೆ ಎಂದರ್ಥ. ಶಾಲಾ ಕಾಲೇಜುಗಳಲ್ಲಿ ಪತಂಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಈ ಭಾಗದಲ್ಲಿರುವ ಪತಂಗ ಪ್ರಭೇದಗಳನ್ನು ಗುರುತಿಸುವುದು, ಈ ರಾಷ್ಟ್ರೀಯ ಪತಂಗ ವಾರದ ಮುಖ್ಯ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಪತಂಗಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ವಿಶ್ವದ 40 ರಾಷ್ಟ್ರಗಳಲ್ಲಿ ನಡೆಯುತ್ತಿದೆ’ ಎಂದು ಉಪನ್ಯಾಸಕ ಅಜಿತ್‌ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !