ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀತಾ ಸೇರ್ಪಡೆ ಯೋಜನೆಗೆ ಯಾಕಿಷ್ಟು ಮಹತ್ವ? ಇಲ್ಲಿದೆ ಅದರ ಆಳ–ಅಗಲ...

Last Updated 17 ಸೆಪ್ಟೆಂಬರ್ 2022, 5:33 IST
ಅಕ್ಷರ ಗಾತ್ರ

ಬೆಂಗಳೂರು: ಭಾರತವು ನಮೀಬಿಯಾದ 8 ಚೀತಾಗಳನ್ನು ಶನಿವಾರ ತನ್ನ ಅರಣ್ಯ ಪ್ರದೇಶಕ್ಕೆ ಮರುಪರಿಚಯಿಸುತ್ತಿದೆ. ಇದು ಒಂದು ಕಡೆ, ಮಹತ್ವಾಕಾಂಕ್ಷೆಯ ಯೋಜನೆ ಎನಿಸಿಕೊಂಡಿದ್ದರೆ, ವಿವಾದಕ್ಕೂ ಗುರಿಯಾಗಿದೆ.

ಮಾನವ ಸಂಘರ್ಷ ಮತ್ತು ಬೇಟೆಯ ಕಾರಣಗಳಿಂದಾಗಿ ಚೀತಾಗಳ ಸಂತತಿ ಭಾರತದಲ್ಲಿ ಅಳಿದಿದೆ. ಹೀಗಾಗಿ, ವನ್ಯಧಾಮಕ್ಕೆ ಈ ಚೀತಾಗಳ ಸೇರ್ಪಡೆಯು ದೇಶದಲ್ಲಿ ಮಹತ್ವ ಪಡೆದುಕೊಂಡಿದೆ.

‘ಖಂಡಾಂತರ ಸ್ಥಳಾಂತರ ಯೋಜನೆ’ಯ ಭಾಗವಾಗಿ ಎಂಟು ಚೀತಾಗಳನ್ನು ಸೆಪ್ಟೆಂಬರ್ 17 ರಂದು ಆಫ್ರಿಕಾದ ನಮೀಬಿಯಾದಿಂದ ರಾಜಸ್ಥಾನದ ಜೈಪುರಕ್ಕೆ ಸರಕು ವಿಮಾನದಲ್ಲಿ ತರಲಾಗಿದೆ. ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ-ಪಾಲ್ಪುರ್ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಪಿಎನ್‌ಪಿ) ಅವುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ.

ಚೀತಾ ಭಾರತದಲ್ಲಿ ಸಂಪೂರ್ಣವಾಗಿ ನಾಶಗೊಂಡಿರುವ ಏಕೈಕ ದೊಡ್ಡ ಮಾಂಸಾಹಾರಿ ಪ್ರಾಣಿ ಸಂತತಿ. ಮಾನವ–ವನ್ಯಜೀವಿಗಳ ಸಂಘರ್ಷ, ಬೇಟೆ, ಆವಾಸಸ್ಥಾನದ ನಾಶದಿಂದಾಗಿ ಈ ಸಂತತಿ ದೇಶದಿಂದ ಮರೆಯಾಗಿದೆ.

ಮಧ್ಯಪ್ರದೇಶದ ಕೊರಿಯಾದ ಮಹಾರಾಜ ರಾಮಾನುಜ್ ಪ್ರತಾಪ್ ಸಿಂಗ್ ದೇವ್ ಅವರು 1947ರಲ್ಲಿ ಕೊನೆಯ ಮೂರು ಚೀತಾಗಳನ್ನು ಕೊಂದಿದ್ದರು ಎಂದು ನಂಬಲಾಗಿದೆ. 1952 ರಲ್ಲಿ ಭಾರತ ಸರ್ಕಾರವು ದೇಶದಲ್ಲಿ ಚೀತಾ ಅಳಿವಿನಂಚಿನಲ್ಲಿದೆ ಎಂದು ಅಧಿಕೃತವಾಗಿ ಘೋಷಿಸಿತು.

ಪರ vs ವಿರೋಧ

‘ಚೀತಾ ಸೇರ್ಪಡೆ ಯೋಜನೆಯು ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಮತ್ತು ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸಲಿದೆ’ ಎಂದು ಭಾರತೀಯ ವನ್ಯಜೀವಿ ಸಂಸ್ಥೆಯ ಡೀನ್ ಯಾದವೇಂದ್ರದೇವ್ ಝಾಲಾ ಅಭಿಪ್ರಾಯಪಟ್ಟಿದ್ದಾರೆ.

‘ಚೀತಾ ಒಂದು ಅದ್ಭುತವಾದ ಪ್ರಾಣಿ. ಪರಿಸರ ಪ್ರವಾಸೋದ್ಯಮಕ್ಕೆ ಇವುಗಳು ಆಯಸ್ಕಾಂತವಾಗಲಿವೆ. ಚೀತಾಗಳನ್ನು ತಂದು ಅವುಗಳ ಪುನರ್ವಸತಿ ಮಾಡಲು ಮತ್ತು ಪುನರ್ನಿರ್ಮಾಣಕ್ಕೆ ಸರ್ಕಾರ ಹಣ ಒದಗಿಸಿದರೆ, ಎಲ್ಲಾ ಜೀವವೈವಿಧ್ಯಗಳು ಅಭಿವೃದ್ಧಿ ಹೊಂದುತ್ತವೆ’ ಎಂದು ಅವರು ನ್ಯಾಷನಲ್ ಜಿಯಾಗ್ರಫಿಕ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಒಟ್ಟಾರೆ ಈ ಯೋಜನೆಯು ಚೀತಾ ಸಂತತಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಜಾಗತಿಕವಾಗಿ ಸದ್ಯ 7,100 ಚೀತಾಗಳಷ್ಟೇ ಉಳಿದಿವೆ. ಚೀತಾಗಳನ್ನು ಭಾರತಕ್ಕೆ ಮರಳಿ ತಂದಿರುವುದರಿಂದ ಅವುಗಳ ಸಂಖ್ಯೆ ಮತ್ತಷ್ಟು ಹೆಚ್ಚಿಸಲು ಸಾಧ್ಯವಾಗಲಿದೆ. ಏಳು ದಶಕಗಳ ಹಿಂದೆ ಭಾರತದಲ್ಲೂ ಕಾಣಿಸಿಕೊಳ್ಳುತ್ತಿದ್ದ ಬೆಕ್ಕಿನ ಜಾತಿಯ ಈ ಸಂತತಿ ಈಗ ಇರಾನ್‌ನಲ್ಲಿ ಮಾತ್ರ ಕಂಡುಬರುತ್ತಿದೆ ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ ಚೀತಾ ಸೇರ್ಪಡೆ ಯೋಜನೆಗೆ ಪರಿಸರ ಹೋರಾಟಗಾರರಿಂದ ಆಕ್ಷೇಪವೂ ಕೇಳಿ ಬಂದಿದೆ. ಈ ಚೀತಾಗಳನ್ನು ಒಮ್ಮೆ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಟ್ಟರೆ ಒಂದೋ ಜನರು ಕೊಲ್ಲುತ್ತಾರೆ ಅಥವಾ ಇತರ ಪ್ರಾಣಿಗಳು ಕೊಲ್ಲುತ್ತವೆ. ಇಲ್ಲವಾದರೆ, ಹಸಿವಿನಿಂದ ಸಾಯಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಚೀತಾಗಳು ಈ ಹಿಂದೆ ಭಾರತದಿಂದ ಮರೆಯಾಗಲು ಇಲ್ಲಿನ ಮಾನವ ಸಂಘರ್ಷವೇ ಪ್ರಮುಖ ಕಾರಣವಾಗಿತ್ತು. ಆದರೆ, ಆ ಸಂಘರ್ಷ ಈಗ 1950ಕ್ಕಿಂತಲೂ ಅತಿ ಕೆಟ್ಟದಾಗಿದೆ ಎಂದು ಚೀತಾಗಳ ಸಂರಕ್ಷಣಾ ತಜ್ಞ ಮತ್ತು ಸಂಶೋಧಕ ಅರ್ಜುನ್ ಗೋಪಾಲಸ್ವಾಮಿ ಹೇಳಿದ್ದಾರೆ.

ಭಾರತದಲ್ಲಿ ಚೀತಾಗಳು: ಹಿನ್ನೋಟ

1556 ರಿಂದ 1605 ರವರೆಗೆ ಭಾರತದಲ್ಲಿ ಆಳ್ವಿಕೆ ನಡೆಸಿದ ಮೊಘಲ್ ಚಕ್ರವರ್ತಿ ಅಕ್ಬರ್ ಬಳಿ 1,000 ಚೀತಾಗಳಿದ್ದವು ಎನ್ನಲಾಗಿದೆ. ಕೃಷ್ಣಮೃಗಗಳು ಮತ್ತು ಸಾರಂಗಗಳನ್ನು ಬೇಟೆಯಾಡಲು ಅವುಗಳನ್ನು ಬಳಸಲಾಗುತ್ತಿತ್ತು ಎಂದು ‘ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (ಬಿಎನ್‌ಎಚ್‌ಎಸ್)’ ಮಾಜಿ ಉಪಾಧ್ಯಕ್ಷ ದಿವ್ಯಭಾನು ಸಿನ್ಹ ಅವರ ‘ದಿ ಎಂಡ್ ಆಫ್ ಎ ಟ್ರಯಲ್ - ದಿ ಚೀತಾ ಇನ್ ಇಂಡಿಯಾದ’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಅಕ್ಬರನ ಮಗ ಜಹಾಂಗೀರನು ಪಾಲಾ ಎಂಬಲ್ಲಿ ಚೀತಾಗಳನ್ನು ಬಳಸಿ 400ಕ್ಕೂ ಹೆಚ್ಚು ಜಿಂಕೆಗಳನ್ನು ಹಿಡಿದಿದ್ದ ಎಂದು ದಿವ್ಯಬಾನು ಸಿನ್ಹಾ ಅವರ ಅದೇ ಪುಸ್ತಕದಲ್ಲಿ ಹೇಳಲಾಗಿದೆ.

ಬೇಟೆಗಾಗಿ ಚೀತಾಗಳನ್ನು ಸೆರೆಹಿಡಿಯುವುದು ಮತ್ತು ಪಂಜರಗಳಲ್ಲಿ ಕೂಡಿ ಹಾಕುವುದರಿಂದ ಅವುಗಳ ಸಂತಾನೋತ್ಪತ್ತಿಗೆ ಅಡಚಣೆ ಉಂಟಾಗುತ್ತದೆ. ಹೀಗಾಗಿಯೇ ದೇಶದಲ್ಲಿ ಅವುಗಳ ಸಂಖ್ಯೆ ಕುಸಿಯಲು ಕಾರಣವಾಯಿತು.

20ನೇ ಶತಮಾನದ ಆರಂಭದ ವೇಳೆಗೆ, ಭಾರತೀಯ ಚೀತಾಗಳ ಸಂಖ್ಯೆ ಕೇವಲ ನೂರಕ್ಕೆ ಕುಸಿದಿತ್ತು. ರಾಜಕುಮಾರರು ಆಫ್ರಿಕ ಚೀತಾಗಳನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದರು. 1918 ಮತ್ತು 1945ರ ನಡುವೆ ಸುಮಾರು 200 ಚೀತಾಗಳನ್ನು ಆಮದು ಮಾಡಿಕೊಳ್ಳಲಾಗಿತ್ತು.

‘ಮಧ್ಯ ಭಾರತದಲ್ಲಿ ಚೀತಾಯ ರಕ್ಷಣೆಗೆ ವಿಶೇಷ ಆದ್ಯತೆ ನೀಡುವಂತೆ’ 1952 ರಲ್ಲಿ ಭಾರತದಲ್ಲಿ ನಡೆದ ಮೊದಲ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಸರ್ಕಾರ ಕರೆ ನೀಡಿತ್ತು. ಚೀತಾಯನ್ನು ಸಂರಕ್ಷಿಸಲು ದಿಟ್ಟ ಕ್ರಮಗಳನ್ನು ಸರ್ಕಾರ ಸೂಚಿಸಿತ್ತು.

ತರುವಾಯ, ಏಷ್ಯಾಟಿಕ್ ಸಿಂಹಗಳಿಗೆ ಬದಲಾಗಿ ಏಷ್ಯಾಟಿಕ್ ಚೀತಾಯನ್ನು ಭಾರತಕ್ಕೆ ತರಲು 1970 ರ ದಶಕದಲ್ಲಿ ಇರಾನ್‌ನ ಶಾ ಅವರೊಂದಿಗೆ ಮಾತುಕತೆಗಳು ಪ್ರಾರಂಭವಾದವು. ಇರಾನ್‌ನ ಸಣ್ಣ ಏಷ್ಯಾಟಿಕ್ ಚೀತಾ ಮತ್ತು ಇರಾನ್ ಮತ್ತು ಆಫ್ರಿಕನ್ ಚೀತಾಗಳ ನಡುವಿನ ಆನುವಂಶಿಕ ಹೋಲಿಕೆಯನ್ನು ಗಮನದಲ್ಲಿಟ್ಟುಕೊಂಡು, ಇರಾನ್‌ನ ಚೀತಾಗಳನ್ನು ಭಾರತಕ್ಕೆ ಪರಿಚಯಿಸಲು ನಿರ್ಧರಿಸಲಾಯಿತು.

ಚೀತಾಗಳನ್ನು ದೇಶಕ್ಕೆ ತರುವ ಪ್ರಯತ್ನಗಳು 2009 ರಲ್ಲಿ ಮತ್ತೊಮ್ಮೆ ಆರಂಭವಾದವು.

2010 ಮತ್ತು 2012ರ ನಡುವೆ ಹತ್ತು ಸ್ಥಳಗಳನ್ನು ಸಮೀಕ್ಷೆ ಮಾಡಲಾಗಿದೆ. ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನವು (ಕೆಎನ್‌ಪಿ) ಚೀತಾಗಳನ್ನು ಸ್ವೀಕರಿಸಲು ಸಿದ್ಧವಾಗಿದೆ. ಏಷ್ಯಾಟಿಕ್ ಸಿಂಹಗಳನ್ನು ಮರುಪರಿಚಯಿಸಲು ಈ ಸಂರಕ್ಷಿತ ಪ್ರದೇಶದಲ್ಲಿ ಸಾಕಷ್ಟು ಹೂಡಿಕೆ ಮಾಡಲಾಗಿದೆ. ಏಷ್ಯಾಟಿಕ್‌ ಸಿಂಹಗಳೂ ಈಗ ಅಳಿವಿನಂಚಿನಲ್ಲಿರುವ ಪ್ರಭೇದವಾಗಿವೆ.

ಚೀತಾಗಳ ಮರು ಪರಿಚಯಕ್ಕಾಗಿ ಭಾರತವು ಜುಲೈನಲ್ಲಿ ನಮೀಬಿಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಎಂಟು ಚೀತಾಗಳು (ಐದು ಹೆಣ್ಣು ಮತ್ತು ಮೂರು ಗಂಡು) ಸೆಪ್ಟೆಂಬರ್ 16 ರಂದು ನಮೀಬಿಯಾದ ರಾಜಧಾನಿ ವಿಂಡ್‌ಹೋಕ್‌ನಿಂದ ಹೊರಟು ಸೆಪ್ಟೆಂಬರ್ 17 ರ ಬೆಳಿಗ್ಗೆ ಜೈಪುರ ವಿಮಾನ ನಿಲ್ದಾಣಕ್ಕೆ ಬಂದು ತಲುಪಿವೆ. ಇಂದು ಅವುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಯಾರಣ್ಯಕ್ಕೆ ಬಿಡಲಿದ್ದಾರೆ. ಇಂದು ಮೋದಿ ಅವರ ಜನ್ಮದಿನ ಕೂಡ.

ಭಾರತದಲ್ಲಿನ ಇತರ ಸ್ಥಳಾಂತರ ಘಟನೆಗಳು

ಭಾರತವು 1984 ರಲ್ಲಿ ಅಸ್ಸಾಂನ ಪೊಬಿಟೋರಾದಿಂದ ಉತ್ತರ ಪ್ರದೇಶದ ದುಧ್ವಾಕ್ಕೆ ಘೇಂಡಾಮೃಗಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಿತು. ಸಂತತಿ ಹೆಚ್ಚಿಸುವ ಉದ್ದೇಶದಿಂದ ಕಾಜಿರಂಗದ ಘೇಂಡಾಮೃಗಗಳನ್ನು ಅಸ್ಸಾಂನ ಇತರೆಡೆಗೆ ಸ್ಥಳಾಂತರಿಸಲಾಗಿತ್ತು. ಕಾಡೆಮ್ಮೆಗಳ ಸಂಖ್ಯೆಯು ಸ್ಥಳೀಯವಾಗಿ ಸಾವಿಗೀಡಾದಾಗ ಕನ್ಹಾದಿಂದ ಬಾಂಧವಗಢಕ್ಕೆ ಸ್ಥಳಾಂತರಿಸಲಾಗಿತ್ತು.

ರಾಜಸ್ಥಾನದ ಮತ್ತು ಮಧ್ಯಪ್ರದೇಶದ ನಡುವೆ ಹುಲಿ ಸಂತತಿ ವೃದ್ಧಿ ಯೋಜನೆ ಏರ್ಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT