ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಾನ್ವೇಷಣೆ: ಚತುರ ಬೇಟೆಗಾರ ಕೆಂದಲೆ ಕಳ್ಳಿಪೀರ

Last Updated 28 ಜೂನ್ 2022, 2:50 IST
ಅಕ್ಷರ ಗಾತ್ರ

ಕಳ್ಳಿಪೀರ ಹಕ್ಕಿಗಳು ಹಾರಾಟದಲ್ಲಿರುವಾಗಲೇ ಬೇಟೆಯಾಡು ವುದರಲ್ಲಿ ನಿಷ್ಣಾತರು. ತಮ್ಮ ಉನ್ನತ ಬಣ್ಣದ ರೆಕ್ಕೆಗಳಿಂದ ಆಕರ್ಷಕವಾಗಿರುತ್ತವೆ. ದಕ್ಷಿಣ ಭಾರತದಲ್ಲಿ ಕಾಣಸಿಗುವ ಆರು ಪ್ರಭೇದಗಳಲ್ಲಿ ಕೆಂದಲೆ ಕಳ್ಳಿಪೀರ (ಕೆಂದಲೆ ಪತ್ರಂಗ) ತನ್ನ ವರ್ಣಸಂಯೋಜನೆಯಲ್ಲಿ ಅನನ್ಯ. ಇದನ್ನು ಆಂಗ್ಲಭಾಷೆಯಲ್ಲಿ ಚೆಸ್ಟನಟ್ ಹೆಡೆಡ್ ಬೀ ಈಟರ್ (Chestnut-headed Bee-eater) ಎಂದೂ ಮತ್ತು ಪ್ರಾಣಿಶಾಸ್ತ್ರೀಯವಾಗಿ ಮೆರೊಪ್ಸ್ ಲೆಸ್ಚೆನ್ವೌಲ್ಟಿ (Merops leschenaulti) ಎಂದು ಗುರುತಿಸಲಾಗಿದೆ.

ಗುಣಲಕ್ಷಣಗಳು: ಸುಂದರವಾದ ಹಕ್ಕಿ. ಗಾತ್ರದಲ್ಲಿ ಪಿಕಳಾರ (ಬುಲ್ ಬುಲ್) ಹಕ್ಕಿಗಿಂತ ಸಣ್ಣದು (20 ಸೆಂಮೀ.). ನೀಲಿ-ಮಿಶ್ರಿತ ಹಸಿರು ಮೈ ಬಣ್ಣ. ತಲೆ, ಹಿಂಗತ್ತು ಮತ್ತು ಬೆನ್ನಿನ ಮೇಲ್ಭಾಗ ಕೆಂಪು-ಮಿಶ್ರಿತ ಗಾಢಕಂದು ಬಣ್ಣದ್ದಾಗಿರುವುದು ವಿಶೇಷ. ಕುತ್ತಿಗೆ ಮತ್ತು ಕೆನ್ನೆ ಹಳದಿ ಬಣ್ಣದ್ದಾಗಿರುತ್ತದೆ. ಕುತ್ತಿಗೆಯಲ್ಲಿ ಸರದಂತೆ ಕಾಣುವ ಅಡ್ಡ ಕಪ್ಪುಗೆರೆ. ಚೂಪಾದ , ಕಪ್ಪು ಬಣ್ಣದ ಮತ್ತು ತುಸು ಬಾಗಿದ ಕೊಕ್ಕು (ಚಿತ್ರ- 1). ಗಂಡು-ಹೆಣ್ಣುಗಳಲ್ಲಿ ಕಾಣುವಂತಹ ವ್ಯತ್ಯಾಸಗಳಿಲ್ಲ. ಸಣ್ಣ ಗುಂಪುಗಳಲ್ಲಿ ವಾಸ.

ಆವಾಸ: ದಕ್ಷಿಣ ಭಾರತದ ದಟ್ಟ ಕಾಡುಗಳಲ್ಲಿ ವಾಸಿಸುತ್ತವೆ. ಪಶ್ಚಿಮ ಘಟ್ಟಗಳಲ್ಲಿ, ಬೆಟ್ಟದ ತಪ್ಪಲಿನಲ್ಲಿ, ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮತ್ತು ಎಲೆ ಉದುರುವ ಕಾಡುಗಳಲ್ಲಿ ಕಾಣಸಿಗುತ್ತವೆ. ಮರಗಳಲ್ಲಿ ಕುಳಿತು ಆಗಾಗ್ಗೆ ಪರ‍್ರನೆ ಹಾರಿ ಗಾಳಿಯಲ್ಲಿ ತೇಲುವುದನ್ನು ನೋಡಬಹುದು. ಟಿ……..ಟ್ವಿ..,....., ಟಿ……..ಟ್ವಿ..,....., ಎಂಬಂತಹ ಕೂಗು.

ಆಹಾರ ಮತ್ತು ಬೇಟೆ ವಿಧಾನ: ಕೀಟಗಳೇ ಪ್ರಮುಖ ಆಹಾರ. ಚಿಟ್ಟೆ, ಜೇನು ನೊಣ, ದುಂಬಿ, ಡ್ರಾಗನ್ ಫ್ಲೈ, ಸಿಕಾಡ, ಮಿಡತೆ ಮುಂತಾದವುಗಳನ್ನು ಹಾರಾಡುತ್ತಲೆ ಬೇಟೆಯಾಡುವ ಚಾಣಾಕ್ಷತನವಿದೆ. ಹಾರುತ್ತಿರುವ ಕೀಟಗಳನ್ನು ಮಿಂಚಿನ ವೇಗದಲ್ಲಿ ಗುರುತಿಸಿ ಕೂಡಲೇ ಗಾಳಿಯಲ್ಲಿ ಹಾರಿ ತನ್ನ ಕೊಕ್ಕಿನಲ್ಲಿ ಭದ್ರವಾಗಿ ಹಿಡಿದು ಮರದ ಕೊಂಬೆ ಅಥವಾ ತಂತಿಯ ಮೇಲೆ ಕುಳಿತುಕೊಳ್ಳುತ್ತದೆ. ಹಿಡಿದ ಕೀಟವನ್ನು ತಾನು ಕುಳಿತ ಕೊಂಬೆಯ ಮೇಲೆ ಆಚೆ-ಈಚೆ ಬಡಿಯುತ್ತದೆ. ಈ ಆಘಾತದಿಂದ ಸುಮಾರಾಗಿ ಸಾವಿನಂಚಿಗೆ ಸಾಗುತ್ತಿರುವ ಕೀಟವನ್ನು ಮೇಲೆ ಹಾರಿಸಿ ಗಬಕ್ಕನೆ ಹಿಡಿದು ನುಂಗುತ್ತದೆ (ಚಿತ್ರ -2). ಮತ್ತೊಂದು ಬೇಟೆಗೆ ಮತ್ತೆ ಸಜ್ಜಾಗುತ್ತದೆ.

ಸಂತಾನಾಭಿವೃದ್ಧಿ: ಫೆಬ್ರುವರಿಯಿಂದ ಮೇ ತಿಂಗಳವರೆಗೆ ಪ್ರಜನನ ಕಾಲ. ಸಾಮಾನ್ಯವಾಗಿ ಏಕಪತಿ/ಪತ್ನಿ ವೃತಸ್ಥ ಹಕ್ಕಿಗಳಿವು. ನದಿ-ಕೆರೆ ತೀರ ಅಥವಾ ಕಾಡುಗಳಲ್ಲಿ ಮರಳು/ಮಣ್ಣಿನಲ್ಲಿ ಉದ್ದವಾದ ಸುರಂಗ ಮಾಡಿ ಗೂಡಾಗಿ ಪರಿವರ್ತಿಸುತ್ತವೆ. ಸಮೂಹದಲ್ಲಿ ಸಂತಾನಾಭಿವೃದ್ಧಿ. ಒಂದು ಸಲಕ್ಕೆ ಐದರಿಂದ ಆರರವರೆಗೆ ಅಚ್ಚ ಬಿಳಿ ಬಣ್ಣದ ಗುಂಡಗಿನ ಮೊಟ್ಟೆಗಳನ್ನಿಡುತ್ತವೆ. ತಂದೆ-ತಾಯಿಯರಿಬ್ಬರೂ ಮರಿಗಳ ಪೋಷಣೆ ಮಾಡುವುವು.

ಇದು ಕರ್ನಾಟಕದ ಕಾಡುಗಳಲ್ಲಿ ಕಾಣಸಿಗುವ ವಿಶಿಷ್ಟ ಪ್ರಭೇದ. ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಮೈಸೂರು, ದಾವಣಗೆರೆ ಮತ್ತಿತರ ಜಿಲ್ಲೆಗಳಲ್ಲಿ ಗುರುತಿಸಲಾಗಿದೆ. ಅವಶ್ಯಕತೆಗೆ ತಕ್ಕಂತೆ ಸ್ಥಳೀಯವಾಗಿ ವಲಸೆ ಹೋಗುತ್ತವೆ. ಸದ್ಯಕ್ಕೆ ಉತ್ತಮ ಸಂಖ್ಯೆಯಲ್ಲಿದ್ದರೂ ನಿರಂತರ ಕಾಡು ನಾಶದಿಂದ ಇವುಗಳ ಸಂತತಿ ಕಡಿಮೆಯಾಗುವ ಸಾಧ್ಯತೆಗಳಿವೆ. ಕೃಷಿಯಲ್ಲಿ ಯಥೇಚ್ಛವಾಗಿ ಬಳಸುತ್ತಿರುವ ಕೀಟನಾಶಕಗಳು, ಕೀಟಗಳ ಮೂಲಕ ಈ ಹಕ್ಕಿಗಳ ದೇಹ ಸೇರುತ್ತಿದ್ದು, ಇದೂ ಕೂಡ ಈ ಪ್ರಭೇದ ಅಳಿಯಲು ಕಾರಣವಾಗುತ್ತಿದೆ. ಅರಣ್ಯ ನಾಶ ತಡೆಗಟ್ಟುವುದು, ಆವಾಸ ಸ್ಥಾನಗಳನ್ನು ಸಂರಕ್ಷಿಸುವುದು ಮತ್ತು ಕೃಷಿಯಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆ ಕಡಿಮೆ ಮಾಡುವುದು.. ಇವೆಲ್ಲ ಈ ಪ್ರಭೇದ ರಕ್ಷಣೆಗಿರುವ ತಕ್ಷಣದ ಉಪಕ್ರಮಗಳು.

ಚಿತ್ರ: ಲೇಖಕರದ್ದು

(ಲೇಖಕರು: ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT