ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಮಂಗಸಂದ್ರ ಭಾಗದಲ್ಲಿ ಜಿಂಕೆಗಳ ವಾಸ!

ಬಂಡೆಗಳಿಂದ ಕೂಡಿದ ಬೆಟ್ಟಗಳ ಸಾಲು ವನ್ಯಜೀವಿಗಳ ಆವಾಸ ಸ್ಥಾನವಾಗುತ್ತಿದೆಯೇ?
Last Updated 11 ನವೆಂಬರ್ 2020, 2:53 IST
ಅಕ್ಷರ ಗಾತ್ರ

‘ಮೊನ್ನೆ ಆ ಕರ್ಪೂರ್‌ ತೋಪಿಂದ (ನೀಲಗಿರಿ ತೋಪು) ಎರಡು ಜಿಂಕೆಗಳು ಚಂಗನೆ ಹಾರಿ ಆ ಕಡೆ ಓಡಿ ಹೋದ್ವು. ಅದನ್ನು ನೋಡೋದಕ್ಕೆ ಎರಡು ಕಣ್ಣು ಸಾಕಾಗ್ಲಿಲ್ಲ...’

ಕೋಲಾರ ತಾಲ್ಲೂಕಿನ ಮಂಗಸಂದ್ರ ಗ್ರಾಮದ ಕುರಿಗಾಹಿ ಶಾಂತಮ್ಮ ಹೇಳಿದ ಸಂಗತಿ ಕೇಳಿ ಆಶ್ಚರ್ಯವಾಗಿತ್ತು. ನಮ್ಮ ಊರಿನ ಸುತ್ತಮುತ್ತ ಜಿಂಕೆಗಳಿವೆಯೇ? ಬಹುಪಾಲು ಬಂಡೆ ಕಲ್ಲುಗಳಿಂದಲೇ ಕೂಡಿರುವ ನಮ್ಮೂರಿನ ಬೆಟ್ಟದಲ್ಲಿ ನವಿಲು, ಕಾಡುಹಂದಿ, ಮುಳ್ಳುಹಂದಿ ಸೇರಿದಂತೆ ಕೆಲ ಪ್ರಾಣಿಗಳು ವಾಸವಾಗಿರುವುದು ಗೊತ್ತಿರುವ ಸಂಗತಿ. ಆದರೆ, ಜಿಂಕೆಗಳ ಆವಾಸ ಸ್ಥಾನವಾಗಿ ಮಾರ್ಪಡುತ್ತಿರುವ ವಿಷಯ ಅಚ್ಚರಿ ಜೊತೆಗೆ ಸಂತಸವನ್ನೂ ಉಂಟು ಮಾಡಿತ್ತು.

ನಾವು ಚಿಕ್ಕವರಿದ್ದಾಗ ಕೋಲಾರದ ಬೆಟ್ಟದಲ್ಲಿ ನವಿಲು, ಜಿಂಕೆ, ಕಾಡುಹಂದಿ,ನರಿ, ತೋಳ, ಚಿರತೆ ಸೇರಿದಂತೆ ಅನೇಕ ಜೀವಿಗಳು ಇರುವುದಾಗಿ ಹಿರಿಯರು ಹೇಳುತ್ತಿದ್ದರು. ಆದರೆ, ಜಿಂಕೆಗಳು ಕಾಣಿಸಿದ್ದು ಕಡಿಮೆ. ಕೋಲಾರದಿಂದ 6 ಕಿ.ಮೀ ದೂರದಲ್ಲಿರುವ ಮಂಗಸಂದ್ರದ ಬೆಟ್ಟ ಹಾಗೂ ಅದೇ ಗ್ರಾಮಕ್ಕೆ ಹೊಂದಿಕೊಂಡಂತಿರುವ ಕಲ್ಲಂಡೂರು ಗ್ರಾಮದ ಬೆಟ್ಟದ ಸಾಲಿನಲ್ಲಿ ಆಗೆಲ್ಲಾ ಜಿಂಕೆಗಳು ಕಂಡುಬಂದ ಉದಾಹರಣೆ ಇಲ್ಲ.

ಜೀವವೈವಿಧ್ಯ ತಾಣವಾಗಿ ಕೋಲಾರದ ಅಂತರಗಂಗೆ ಬೆಟ್ಟವನ್ನು ಘೋಷಿಸಲು ಕರ್ನಾಟಕ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ. ಕೋಲಾರ ಬೆಟ್ಟದ ಆಸುಪಾಸು ಇರುವ ಮಂಗಸಂದ್ರ, ಕಲ್ಲಂಡೂರು, ಅರಾಭಿಕೊತ್ತನೂರು, ಚಿಕ್ಕಅಯ್ಯೂರು ಬೆಟ್ಟಗಳ ಸಾಲು, ವನ್ಯಜೀವಿಗಳ ವಾಸಸ್ಥಾನಕ್ಕೆ ಪೂರಕ ವಾತಾವರಣವಾಗಿ ಸೃಷ್ಟಿಯಾಗುತ್ತಿರುವುದು ಗೋಚರಿಸುತ್ತಿದೆ. ಕುರಿಗಾಹಿ ಶಾಂತಮ್ಮ ಅವರ ಕಣ್ಣಿಗೆ ಜಿಂಕೆಗಳು ಕಂಡಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ.

ಈ ಬೆಟ್ಟಗಳ ಸಾಲಿನಲ್ಲಿ ಈ ಹಿಂದೆಯೂ ಅನೇಕ ಜೀವಿಗಳು ವಾಸವಾಗಿದ್ದವು. ಆದರೆ, ಕೃಷಿ ಚಟುವಟಿಕೆ, ಪ್ರಾಣಿಗಳ ಬೇಟೆ, ಗಣಿಗಾರಿಕೆಯಂತಹ ಮಾನವನ ಹಸ್ತಕ್ಷೇಪದಿಂದಾಗಿ ವನ್ಯಜೀವಿಗಳ ಸಂತತಿ ಕ್ಷೀಣಿಸಿತ್ತು. ಬೆಟ್ಟದಿಂದ ಕಾಡುಹಂದಿ, ಮುಳ್ಳುಹಂದಿ ರಾತ್ರಿ ವೇಳೆ ಆಗೊಮ್ಮೆ ಈಗೊಮ್ಮೆ ಬಂದು ಬೆಳೆಯನ್ನು ನಾಶ ಮಾಡುತ್ತಿದ್ದವು. ಅವುಗಳ ಹೆಜ್ಜೆ ಗುರುತುಗಳನ್ನೂ ನಾನು ಕಂಡಿದ್ದೆ. ಆದರೆ, ಅವು ಕಣ್ಣಿಗೆ ಬಿದ್ದಿರಲಿಲ್ಲ. ನವಿಲುಗಳ ಒಂದು ತಂಡ ಸಂಜೆ ವೇಳೆ ಕೆಲವೊಮ್ಮೆ ತೋಟದ ಕಡೆ ಬರುತ್ತಿದ್ದವು. ಎಮ್ಮೆ, ಕುರಿ, ಆಡು ಮೇಯಿಸಲು ಬೆಟ್ಟಕ್ಕೆ ಹೋಗುತ್ತಿದ್ದ ಕುರಿಗಾಯಿಗಳು, ‘ನರಿ, ನರಿ’ ಎಂದು ಕೂಗುತ್ತಿದ್ದರು. ಇದರಿಂದ, ಬೆಟ್ಟಕ್ಕೆ ಎಮ್ಮೆ ಮೇಯಿಸಲು ಅಥವಾ ತೋಟದಲ್ಲಿ ಕೆಲಸ ಮಾಡಲು ಭಯಪಡುತ್ತಿದ್ದ ದಿನಗಳೂ ಉಂಟು.

ಈ ಬೆಟ್ಟಗಳ ತುಂಬೆಲ್ಲಾ ಲಂಟಾನಾದಂತಹ ಕಳೆಗಿಡಗಳೇ ಆವರಿಸಿದ್ದವು. ಹೇಳಿಕೊಳ್ಳುವಂತಹ ಯಾವ ಮರಗಳೂ ಇರಲಿಲ್ಲ; ಈಗಲೂ ಸಹ. ಕೆಲವರುಉರುವಲಿಗಾಗಿ ಆ ಕಳೆಗಿಡಗಳನ್ನೇ ಕಡಿದು ಮನೆಗೆ ಸಾಗಿಸುತ್ತಿದ್ದರು. ಕುರಿಗಾಹಿಗಳು ಸಹ ಸೌದೆ ತರಲು ಪೈಪೋಟಿಗೆ ಬೀಳುತ್ತಿದ್ದರು. ಹೀಗಾಗಿ, ಮಂಗಸಂದ್ರ, ಕಲ್ಲಂಡೂರು ಬೆಟ್ಟಗಳಲ್ಲಿ ಜನರ ಓಡಾಟ ಹೆಚ್ಚಾಗಿ ಇರುತ್ತಿತ್ತು. ಆದರೆ, ಹೆಚ್ಚಿನ ಹಾಲು ಕೊಡುವ ಸೀಮೆ ಹಸುಗಳ ಪ್ರಭಾವದಿಂದಾಗಿ ಎಮ್ಮೆಗಳನ್ನು ಮಾರಲಾರಂಭಿಸಿದರು. ಸೌದೆ ಜಾಗದಲ್ಲಿ ಅಡುಗೆ ಅನಿಲ ಸ್ಥಾನ ಪಡೆಯಿತು. ಹೀಗಾಗಿ, ಬೆಟ್ಟದ ಕಡೆ ಮುಖ ಹಾಕುವವರು ಕಡಿಮೆಯಾದರು.

ಇತ್ತ, ಕೊಳವೆಬಾವಿಗಳಲ್ಲಿ ನೀರು ಕಡಿಮೆ ಆಗುತ್ತಿದ್ದಂತೆ ಅನೇಕರು ಕೃಷಿಯನ್ನು ತೊರೆದರು. ಇರುವ ಜಾಗದಲ್ಲಿ ನೀಲಗಿರಿ ಮರಗಳನ್ನು ಬೆಳೆಸಲಾರಂಭಿಸಿದರು. ಅನೇಕ ರೈತರ ಮಕ್ಕಳು ಉದ್ಯೋಗ ಅರಸಿ ಬೆಂಗಳೂರಿಗೆ ಮುಖ ಮಾಡಿದರು. ತೋಟದ ಕಡೆಗೆ ಹೋಗುವವರು ಕಡಿಮೆಯಾದರು. ಇನ್ನು, ಬೆಟ್ಟದ ಕಡೆಗೆ ಹೋಗುವವರ ಸಂಖ್ಯೆ ತೀರ ಕಡಿಮೆಯಾಯಿತು. ಬೆಟ್ಟದಲ್ಲಿ ಜನರು ಓಡಾಡಿದ್ದ ದಾರಿಯ ಗುರುತುಗಳು ಕಾಲಕಳೆದಂತೆ ಅಳಿಸಿಹೋದವು. ಅಲ್ಲದೆ, ಕಾಡುಪ್ರಾಣಿಗಳ ಬೇಟೆಗೂ ಕಡಿವಾಣ ಬಿದ್ದಿತ್ತು. ಹಾಗೆಂದು ಪೂರ್ಣ ಪ್ರಮಾಣದಲ್ಲಿ ಇದಕ್ಕೆ ಕಡಿವಾಣ ಬಿದ್ದಿದೆ ಎಂದಲ್ಲ. ಈಗಲೂ ಅಲ್ಲಲ್ಲಿ ಕಾಡುಹಂದಿಯ ಬೇಟೆಗಳು ನಡೆಯುತ್ತಿರುವುದು ವರದಿಯಾಗುತ್ತಿವೆ.

ಈಗ ನಮ್ಮ ಬೆಟ್ಟದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿದೆ. ಇದು ವನ್ಯಪ್ರೇಮಿಗಳಿಗೆ ಸಂತಸವನ್ನು ಉಂಟು ಮಾಡುತ್ತದೆ. ಆದರೆ, ರೈತರ ಪಾಲಿಗೆ ಕೆಲ ಪ್ರಾಣಿಗಳು ಕಂಟಕಪ್ರಾಯವಾಗಿವೆ. ನವಿಲುಗಳನ್ನು ನೋಡಿ ಖುಷಿಪಡುತ್ತಿದ್ದ ರೈತರು, ಈಗ ಗುಂಪುಗುಂಪಾಗಿ ಬರುವ ನವಿಲುಗಳಿಂದ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಕಾಡುಹಂದಿಗಳು ಬೆಳೆಯನ್ನು ತಿಂದು ಹಾಳು ಮಾಡುತ್ತಿದ್ದು, ಇದರಿಂದ ರೈತರು ಕಂಗೆಟ್ಟಿದ್ದಾರೆ.

ಏನೇ ಇರಲಿ, ನಮ್ಮ ಭಾಗದಲ್ಲಿ ಜಿಂಕೆಗಳು ಕಂಡುಬಂದಿರುವುದು ಒಳ್ಳೆಯ ಸಂಗತಿ. ಪ್ರತಿಯೊಂದು ಜೀವಿಗೂ ತನ್ನದೇ ಆದ ಬದುಕಿನ ಹಕ್ಕು ಇರುತ್ತದೆ. ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದನ್ನು ಮನುಷ್ಯ ಕಲಿಯಬೇಕಿದೆ. ಕಾಡನ್ನು ಬೆಳೆಸುವ ಕಡೆಗೆ ಸಾಗಬೇಕಿದೆ.

‘ಕ್ಯಾಮೆರಾ ಟ್ರ್ಯಾಪಿಂಗ್‌ ಅಳವಡಿಕೆಗೆ ಕ್ರಮ’

‘ಕೋಲಾರದ ಅಂತರಗಂಗೆಯೂ ಸೇರಿದಂತೆ ಸುತ್ತಮುತ್ತಲಿನ ಬೆಟ್ಟಗಳ ಸಾಲಿನಲ್ಲಿರುವ ಅರಣ್ಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ನಿಗಾವಹಿಸಿ ಸಂರಕ್ಷಣೆ ಮಾಡುತ್ತಿದ್ದಾರೆ. ಅಲ್ಲದೆ, ವನ್ಯಜೀವಿಗಳ ಬಗ್ಗೆ ಜನರಿಗೆ ಇರುವ ಜಾಗೃತಿಯಿಂದಾಗಿಯೂ ಪ್ರಾಣಿಗಳ ಸಂಖ್ಯೆ ಹೆಚ್ಚುತ್ತಿರಬಹುದು. ಮಂಗಸಂದ್ರ ಭಾಗದಲ್ಲಿ ಜಿಂಕೆಗಳಿರುವ ಬಗ್ಗೆ ಮಾಹಿತಿ ಇರಲಿಲ್ಲ. ಕ್ಯಾಮೆರಾ ಟ್ರ್ಯಾಪಿಂಗ್‌ ಅಳವಡಿಸಿ ನಿಗಾವಹಿಸಲು ಸಿಬ್ಬಂದಿಗೆ ಸೂಚಿಸುತ್ತೇನೆ’ ಎಂದು ಕೋಲಾರ ಉಪಅರಣ್ಯ ಸಂರಕ್ಷಣಾಧಿಕಾರಿ ಈ.ಶಿವಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT