ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಾತಿ ಅರಸಿ ತೆರಳಿದ್ದ ‘ಕುಶ’ ವರ್ಷದ ಬಳಿಕ ಸೆರೆ

ಸಂಗಾತಿ ನೆನೆದು ರೋದಿಸುತ್ತಿರುವ ಆನೆ, ಅರಣ್ಯ ಸಿಬ್ಬಂದಿಗಳ ನಿರಂತರ ಪ್ರಯತ್ನ ಯಶಸ್ವಿ
Last Updated 1 ಏಪ್ರಿಲ್ 2021, 14:08 IST
ಅಕ್ಷರ ಗಾತ್ರ

ಕುಶಾಲನಗರ: ಕೊಡಗಿನ ಪ್ರಮುಖ ಪ್ರವಾಸಿ ತಾಣ ದುಬಾರೆ ಸಾಕಾನೆ ಶಿಬಿರದಿಂದ ಸಂಗಾತಿ ಅರಸಿ, ವರ್ಷದ ಹಿಂದೆ ಕಾಡಿಗೆ ತೆರಳಿದ್ದ ‘ಕುಶ’ ಎಂಬ ಗಂಡಾನೆಯನ್ನು ಮಂಗಳವಾರ ಮುಂಜಾನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಸಾಕಾನೆ ಶಿಬಿರದಲ್ಲಿ ಕಟ್ಟಿಹಾಕಿದ್ದ ‘ಕುಶ’ ಆನೆಗೆ ಮದವೇರಿ ಸರಪಳಿ ಕಿತ್ತುಕೊಂಡು ಸಂಗಾತಿ ಅರಸಿಕೊಂಡು ಕಾಡಿಗೆ ತೆರಳಿತ್ತು. ದುಬಾರೆ ಸಾಕಾನೆಗಳು ಮದವೇರಿದ್ದ ವೇಳೆ ಕಾಡಿಗೆ ಹೋಗಿ, ಹೆಣ್ಣಾನೆಗಳ ಸಂಘ ಮಾಡಿ, ಮತ್ತೆ ಶಿಬಿರಕ್ಕೆ ಹಿಂತಿರುಗುವುದು ಸಾಮಾನ್ಯ. ಆದರೆ, ಕಾಡಿಗೆ ಹೋಗಿದ್ದ ‘ಕುಶ’ ಮಾತ್ರ ಶಿಬಿರಕ್ಕೆ ಮರಳದೇ ಕಾಡಾನೆಗಳ ಸಂಘ ಮಾಡಿ ಅವುಗಳೊಂದಿಗೆ ಕಾಡಿನಲ್ಲಿಯೇ ವಾಸ್ತವ್ಯ ಮಾಡಿತ್ತು.

ತಿಂಗಳು ಕಳೆದರೂ ಶಿಬಿರಕ್ಕೆ ಬಾರದ ಕಾರಣ, ಅರಣ್ಯ ಸಿಬ್ಬಂದಿ, ಮಾವುತರು ಮರಳಿ ಶಿಬಿರಕ್ಕೆ ಕರೆ ತರಲು ನಿರಂತರ ಪ್ರಯತ್ನ ನಡೆಸಿದ್ದರು. ‘ಕುಶ’ ಕೂಡ ಸಂಗಾತಿ ಬಿಟ್ಟು ಶಿಬಿರಕ್ಕೆ ಮರಳಲು ಮನಸ್ಸು ಮಾಡಿರಲಿಲ್ಲ. ಶಿಬಿರದ ಆಸುಪಾಸಿನ ಅರಣ್ಯ ಪ್ರದೇಶದಲ್ಲಿಯೇ ಅಲೆದಾಟ ನಡೆಸುತ್ತಿದ್ದರೂ, ಶಿಬಿರದ ಕಡೆ ತಿರುಗಿಕೂಡ ಕುಶ ನೋಡುತ್ತಿರಲಿಲ್ಲ. ಆನೆಯನ್ನು ಪತ್ತೆಹಚ್ಚಿದರೂ ಕರೆತರಲು ಸಂಗಾತಿ ಹೆಣ್ಣಾನೆ ಕೂಡ ಬಿಡುತ್ತಿರಲಿಲ್ಲ. ‘ಕುಶ’ ಆನೆ ಹತ್ತಿರ ಹೋದರೆ ಹೆಣ್ಣಾನೆ ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸುತ್ತಿತ್ತು. ಕುಶ, ಸಿಬ್ಬಂದಿಯ ಕಣ್ಣು ತಪ್ಪಿಸಿ ಕಾಡಿನಲ್ಲಿ ಅಲೆದಾಡುತ್ತಿತ್ತು.

ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ‌ಹಾಗೂ ಡಿಎಫ್ಒ ಪ್ರಭಾಕರನ್ ಮಾರ್ಗದರ್ಶನದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿ ಆನೆ ಪತ್ತೆ ಹಚ್ಚಲು ಕ್ರಮ‌ ಕೈಗೊಂಡು ಆನೆ ಸೆರೆ ಹಿಡಿಯಲು ಕ್ರಮ ಕೈಗೊಂಡಿದ್ದರು.

ದುಬಾರೆ ಶಿಬಿರದ ಸಾಕಾನೆಗಳಾದ ‘ಪ್ರಶಾಂತ್’, ‘ಧನಂಜಯ’, ‘ಸುಗ್ರೀವ’ ಮತ್ತು ‘ಲಕ್ಷ್ಮಣ’ ಸಹಾಯದಿಂದ ಮಂಗಳವಾರ ಬೆಳಿಗ್ಗೆ 5 ಗಂಟೆ ಸಮಯದಲ್ಲಿ ಕುಶಾಲನಗರ ವಲಯದ ಮೀನುಕೊಲ್ಲಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳೊಂದಿಗಿದ್ದ ಕುಶನನ್ನು ಬೇರ್ಪಡಿಸಿ, ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸಂಗಾತಿಯಿಂದ ಬಲವಂತವಾಗಿ ಬೇರ್ಪಡಿಸಿ, ಕುಶನನ್ನು ಬಂಧಿಸಲ್ಪಟ್ಟಿದ್ದು, ಇದೀಗ ಕುಶ ಸಂಗಾತಿ ನೆನೆದು ರೋಧಿಸುತ್ತಿದ್ದಾನೆ.

ಕುಶ ಆನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ಮುಜೀಬ್, ಉಪ ವಲಯ ಅರಣ್ಯಾಧಿಕಾರಿ ಕೆ.ಪಿ.ರಂಜನ್, ಕೆ.ಎಸ್.ಸುಬ್ರಾಯ ನೇತೃತ್ವದಲ್ಲಿ ಸಾಕಾನೆ ಶಿಬಿರದ ಮಾವುತರು, ಕಾವಾಡಿಗರು ಹಾಗೂ ಮೀನುಕೊಲ್ಲಿ ಶಾಖೆಯ ಅರಣ್ಯ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT