ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯ ಹೂ ಕಣಿವೆ

Last Updated 25 ಜೂನ್ 2018, 20:16 IST
ಅಕ್ಷರ ಗಾತ್ರ

ಶಂಖಪುಷ್ಪ, ಗಂಧವತಿ, ಆರ್ಕಿಡ್ಸ್ ಸಮೂಹ, ನಾಣಿಹೂವು, ಕಿರಣಿ ಪುಷ್ಪ, ಮಧು ಪುಷ್ಪ, ಕೆರೆ ಕಮಲ ಸೇರಿದಂತೆ ಸುಮಾರು ಮೂವತ್ತಕ್ಕೂ ಹೆಚ್ಚು ಜಾತಿಯ ಹೂವುಗಳು ಸಾಲು ಸಾಲಾಗಿ ಇಲ್ಲಿ ಬೆಳೆಯುತ್ತಿವೆ. ಹೂವುಗಳಲ್ಲಿರುವ ಮಧು ಹೀರಲು ಮತ್ತು ಮರಿ ಮಾಡಲು ದುಂಬಿ ಹಾಗೂ ಪಕ್ಷಿಗಳ ದಂಡೇ ಮೇಳೈಸುತ್ತಿವೆ. ತಿಳಿನೀರ ಕೆರೆ ಸುತ್ತ ಹುಲುಸಾಗಿ ಬೆಳೆದು ನಿಂತಿರುವ ಈ ಹೂವಿನ ಕಣಜವನ್ನು ’ಕರಾವಳಿಯ ಹೂವಿನ ಕಣಿವೆ’ ಎಂದರೆ ಅತಿಶಯೋಕ್ತಿಯೇನಲ್ಲ.

ಕಾರವಾರದಿಂದ ಮಲ್ಲಾಪುರ ರಸ್ತೆಯಲ್ಲಿ ಸಾಗಿದರೆ ಸುಮಾರು ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿ ಕೆರವಡಿ ಎಂಬ ಊರಿದೆ. ಈ ಊರಿನಲ್ಲಿ ದೊಡ್ಡ ಕೆರೆ ಇದೆ. ಕೆರೆಯ ಸುತ್ತಲಿರುವ ಪುಷ್ಪ ರಾಶಿಯೇ ಹೂವಿನ ಕಣಿವೆಯಂತೆ ಕಾಣುತ್ತದೆ. ಜಿಲ್ಲೆಯ ಪ್ರಾಕೃತಿಕ ಸಂಪನ್ಮೂಲದ ಮಹತ್ವದ ದೃಷ್ಟಿಯಿಂದಲೂ ಕೆರವಡಿಯ ಹೂವಿನ ಕಣಿವೆ ಅಧ್ಯಯನ ಯೋಗ್ಯ.

ಇಂಥ ಹತ್ತು ಹಲವು ಕೌತುಕಗಳು ಹಸಿರು ಕಾನನದೊಳಗಿದ್ದೂ ನಮ್ಮ ಗಮನಕ್ಕೆ ಬಾರದೆ ಕಾಡು ಬೆಳದಿಂಗಳಾಗಿ ಉಳಿದು ಹೋಗುವಾಗ, ಇಂಥದ್ದೊಂದು ಕಣಿವೆ ಆಕರ್ಷಿಸುತ್ತಿದೆ. ಆದರೆ ಕಾಡಿನೊಳಗೆ ಮಾನವನ ಪ್ರವೇಶವಾದರೆ, ಅದರ ಸಹಜ ಬೆಳವಣಿಗೆಗೆ ತೊಡಕಾಗುತ್ತದೆ. ಹೀಗಾಗಿ ಇಂಥ ಪ್ರದೇಶಗಳು ಗೌಪ್ಯವಾಗಿದ್ದರೆ ಉತ್ತಮವೇನೋ ಎನ್ನಿಸುತ್ತದೆ.

ಕೆರವಡಿ ಕೆರೆ ಸುತ್ತ ತೇವಾಂಶವಿರುವ ಕಾರಣ ಜೀವ ವೈವಿದ್ಯ ಸಂತತಿಯೂ ಮೈದೆಳದಿದೆ. ಅದೇ ಕಾರಣಕ್ಕಾಗಿ ಹೂವಿನ ಕಣಿವೆಯಲ್ಲಿ ಆರ್ಕಿಡ್ ಪುಷ್ಪಗಳ ಸಂಕುಲ ಅನಾವರಣಗೊಂಡಿದೆ. ಹೀಗಿದ್ದ ಪರಿಸರದಲ್ಲಿ ಪ್ರಭೇದಗಳ ಬೆಳವಣಿಗೆ, ಹಕ್ಕಿ, ಕೀಟ ಮತ್ತು ಸಣ್ಣ ಹುಳುಗಳ ಹುಲುಸಾದ ಚಟುವಟಿಕೆಯಿಂದ ವರ್ಷದಿಂದ ವರ್ಷಕ್ಕೆ ಜೀವ ಸಂತತಿ ನೈಜವಾಗಿ ಬೆಳೆಯುತ್ತಿದೆ. ಆದ್ದರಿಂದಲೇ ಮೊದಲು ಬೆರಳೆಣಿಕೆಯಲ್ಲಿದ್ದ ಹಕ್ಕಿಗಳ ಗುಂಪು ಈಗ 50 ಸಂಖ್ಯೆಯನ್ನು ದಾಟಿದೆ.

ಇಲ್ಲಿನ ಮತ್ತೊಂದು ವಿಶೇಷವೆಂದರೆ, ಉತ್ತರಾಖಂಡ ರಾಜ್ಯದ ಹೂವಿನ ಕಣಿವೆಯಲ್ಲಿ ಕಾಣುವ ಹಲವು ಪ್ರಭೇದಗಳಿವೆ. ‌ಹಸಿರು, ಕೆಂಪು ರಂಗಿನ ಹೂವುಗಳು ಇಲ್ಲಿವೆ. ವರ್ಷದಲ್ಲಿ ಸರಾಸರಿ ಐದು ತಿಂಗಳು ಮಳೆಗಾಲ ಕಾಣುವ ಈ ಪರಿಸರ ಆಗೆಲ್ಲಾ ಮಳೆಯ ಕಾಡಾಗಿ ಬದಲಾಗುತ್ತದೆ. ಮಳೆಗಾಲ ಸೇರಿದಂತೆ ವಿವಿಧ ಕಾಲಮಾನಗಳಲ್ಲಿ ಹುಲುಸಾಗಿ ಬೆಳೆಯುವ ಸಸ್ಯ ಪ್ರಭೇದಗಳು ಕ್ರಮೇಣ ನಶಿಸುತ್ತವೆ. ನಂತರ ಹೂವು ಅರಳುವ ಸರಣಿ ಆರಂಭವಾಗುತ್ತದೆ. ಡಿಸೆಂಬರ್‌ನಿಂದ ಫೆಬ್ರುವರಿಯವರೆಗೆ ಇಲ್ಲಿ ಅರಳುವ ಜೀವ ವೈವಿಧ್ಯದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಯಬೇಕಿದೆ.

ಜಿಲ್ಲೆಯ ಖ್ಯಾತ ಛಾಯಾಗ್ರಾಹಕ ಮತ್ತು ಪಕ್ಷಿತಜ್ಞ ಆರ್.ಬೈಯಣ್ಣ, ಮುಂಜಾನೆ ಕ್ಯಾಮೆರಾ ಹಿಡಿದು ಪಕ್ಷಿಗಳ ಫೋಟೊ ತೆಗೆಯಲು ಹೊರಟಾಗ, ಮಂಜಿನ ಹನಿಗಳ ಮಾಲೆ ಆವರಿಸಿರುವ ಕೆರವಡಿಯ ಕೆರೆ ಅವರನ್ನು ಹಿಡಿದು ನಿಲ್ಲಿಸಿದೆ. ಕೆರವಡಿ ಕೆರೆ ಸುತ್ತಲಿನ ಹೂ ಕಣಿವೆಯ ಸೊಬಗನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ’ಹಕ್ಕಿಗಳ ಚಿತ್ರ ತೆಗೆಯಲು ಅಲೆದಾಡುವಾಗ ಇಂಥ ಅಚ್ಚರಿಯ ಸ್ಥಳಗಳು ಕಣ್ಣಿಗೆ ಬೀಳುತ್ತವೆ. ಕ್ಯಾಮೆರಾದಲ್ಲಿ ಸೆರೆಯಾಗುತ್ತವೆ ’ ಎನ್ನುತ್ತಾರೆ ಬೈಯಣ್ಣ. ಇಲ್ಲಿವರೆಗೂ ಸುಮಾರು ಮೂನ್ನೂರಕ್ಕೂ ಹೆಚ್ಚು ಹಕ್ಕಿಗಳ ಚಿತ್ರೀಕರಣ ಮಾಡಿರುವ ಅವರು, ಸಹ್ಯಾದ್ರಿ ಮಡಿಲಿಗೆ ಹೊಸದಾಗಿ ಸೇರ್ಪಡೆಯಾಗಿರುವ ಕರಾವಳಿ ಹೂ ಕಣಿವೆಯನ್ನು ಪರಿಚಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT