ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಡಿಕೆ ಮುಖದ’ ದೈತ್ಯ ಹದ್ದು

Last Updated 19 ಜನವರಿ 2020, 19:45 IST
ಅಕ್ಷರ ಗಾತ್ರ

ಚುರುಕಾಗಿ ಬೇಟೆಯಾಡುವುದಕ್ಕೆ ಹಾಗೂ ತೀಕ್ಷ್ಣ ದೃಷ್ಟಿಗೆ ಹೆಸರಾದ ಹಕ್ಕಿಗಳು ಕೆಲವು ಮಾತ್ರ. ಅವುಗಳಲ್ಲಿ ಹದ್ದುಗಳಿಗೆ ಅಗ್ರಸ್ಥಾನ ಸಲ್ಲಬೇಕು. ವಿಶ್ವದಾದ್ಯಂತ ಹಲವು ಹದ್ದು ಪ್ರಭೇದಗಳನ್ನು ಗುರುತಿಸಲಾಗಿದೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ‘ಮಡಿಕೆ ಮುಖದ’ ರಣಹದ್ದಿನ (Lappet Faced Vulture) ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಟೊರ್ಗೊಸ್‌ ಟ್ರಚೆಲಿಯೊಟೊಸ್‌ (Torgos tracheliotos). ಇದು ಅಸಿಪಿಟ್ರಿಡೇ (Accipitridae) ಕುಟುಂಬಕ್ಕೆ ಸೇರಿದ್ದು, ಅಸಿಪಿಟಿಫಾರ್ಮಿಸ್‌ (Accipitriformes) ಗುಂಪಿನಲ್ಲಿ ವರ್ಗೀಕರಿಸಲಾಗಿದೆ. ನ್ಯೂಬಿಯನ್ ವಲ್ಚರ್‌, ಆಫ್ರಿಕನ್ ಇಯರ್ಡ್ ವಲ್ಚರ್ ಎಂಬ ಹೆಸರುಗಳೂ ಇದಕ್ಕೆ ಇವೆ.

ಹೇಗಿರುತ್ತದೆ?

ಕಂದು–ಕಪ್ಪು ಮತ್ತು ಬಿಳಿ ಬಣ್ಣದ ಪುಕ್ಕ ದೇಹವನ್ನು ಆವರಿಸಿರುತ್ತದೆ. ದೇಹವೆಲ್ಲಾ ಬಹುತೇಕ ಕಂದು ಬಣ್ಣದ ಗರಿಗಳಿಂದ ಆವೃತವಾಗಿದ್ದು, ಅಲ್ಲಲ್ಲಿ, ಕಪ್ಪು ಹಾಗೂ ಬಿಳಿ ಬಣ್ಣದ ಪುಕ್ಕವಿರುತ್ತದೆ. ಎದೆ, ಉದರ ಹಾಗೂ ಮೊಣಕಾಲುಗಳ ವರೆಗೆ ದಟ್ಟವಾಗಿ ಬಿಳಿಬಣ್ಣದ ಪುಕ್ಕ ಬೆಳೆದಿರುತ್ತದೆ. ಉದರದ ಮೇಲೆ ತೆಳುವಾಗಿ ಅಲ್ಲಲ್ಲಿ ಕಂದು–ಕಪ್ಪು ಮಿಶ್ರಿತ ಬಣ್ಣದ ಗರಿಗಳೂ ಮೂಡಿರುತ್ತವೆ.

ದೇಹದ ಮಾಂಸ ಖಂಡಗಳು ಹಾಗೂ ರೆಕ್ಕೆಗಳು ಬಲಿಷ್ಠವಾಗಿರುತ್ತವೆ.ರೆಕ್ಕೆಗಳ ಹೊರಭಾಗ ಬಹುತೇಕ ಕಂದು ಬಣ್ಣದಲ್ಲಿದ್ದರೆ, ಒಳಗೆ ಎದೆಭಾಗದ ಅಂಚುಗಳಲ್ಲಿ ಬಿಳಿ ಬಣ್ಣವಿರುತ್ತದೆ. ಇದರ ಕತ್ತು, ಕುತ್ತಿಗೆ ಹಾಗೂ ತಲೆ ಸಂಪೂರ್ಣ ಬೋಳಾಗಿದ್ದು, ಚರ್ಮ ನೀಲಿ ಮತ್ತು ತಿಳಿಗೆಂಪು ಮಿಶ್ರಿತ ಬಣ್ಣದಲ್ಲಿರುತ್ತದೆ. ಕೆನ್ನೆಗಳು, ತಲೆ, ಕುತ್ತಿಗೆ ಮತ್ತು ಕತ್ತಿನ ಭಾಗದಲ್ಲಿರುವ ಚರ್ಮವು ಪದರ ಪದರವಾಗಿ ಸುಕ್ಕುಗಟ್ಟಿದ ಮಡಿಕೆಗಳಂತೆ ರಚನೆಯಾಗಿರುತ್ತದೆ. ಹೀಗಾಗಿಯೇ ಇದನ್ನು ಲ್ಯಾಪೆಟ್‌ ಫೇಸ್ಡ್‌ ವಲ್ಚರ್ ಎಂದು ಕರೆಯುತ್ತಾರೆ.

ಕಪ್ಪು ಮತ್ತು ಹಳದಿ ಬಣ್ಣ ಮಿಶ್ರಿತ ಇದರ ಕೊಕ್ಕು ದೃಢವಾಗಿದ್ದು, ತುದಿಯಲ್ಲಿ ಬಾಗಿರುತ್ತದೆ. ದೈತ್ಯ ಪ್ರಾಣಿಗಳ ದೇಹವನ್ನು ಕೊರೆಯುವಷ್ಟ ಶಕ್ತವಾಗಿರುತ್ತದೆ. ಕಪ್ಪು ಬಣ್ಣದ ಕಣ್ಣುಗಳು ಮಧ್ಯಮ ಗಾತ್ರದಲ್ಲಿರುತ್ತವೆ. ಕಾಲುಗಳು ದೃಢವಾಗಿದ್ದು, ಬೆರಳುಗಳು ಮತ್ತು ಉಗುರುಗಳು ನೀಳವಾಗಿ ಬೆಳೆದಿರುತ್ತವೆ. ಕುರಿ, ಜಿಂಕೆಗಳನ್ನು ಹೊತ್ತೊಯ್ಯುವಷ್ಟು ಬಲಿಷ್ಟವಾಗಿ ಇದರ ಕಾಲುಗಳು ರಚನೆಯಾಗಿರುವುದು ವಿಶೇಷ.

ವಾಸಸ್ಥಾನ

ಆಫ್ರಿಕಾ ಮತ್ತು ಏಷ್ಯಾಖಂಡದ ಹಲವು ರಾಷ್ಟ್ರಗಳಲ್ಲಿ ಇದನ್ನು ಕಾಣಬಹುದು. ಆಫ್ರಿಕಾ ಖಂಡದಲ್ಲಿ ಕಾಣಸಿಗುವ ಹದ್ದುಗಳ ಪೈಕಿ ಇದೇ ಅತಿ ದೊಡ್ಡದು. ಹುಲ್ಲುಗಾವಲು, ಬಯಲು ಕಾಡು, ಅರೆ ಮರುಭೂಮಿ, ಪೊದೆಗಿಡಗಳು ಬೆಳೆದಿರುವ ಪ್ರದೇಶ, ಸಮುದ್ರ ಮಟ್ಟದಿಂದ ಸುಮಾರು 4,500 ಮೀಟರ್‌ ಎತ್ತರದಲ್ಲಿರುವ ಪರ್ವತ ಪ್ರದೇಶಗಳಲ್ಲಿ ಇದು ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ

ಬಹುತೇಕ ಒಂಟಿಯಾಗಿ ಜೀವಿಸುತ್ತದೆ. ಆಹಾರ ಭಕ್ಷಿಸುವಾಗ ಮಾತ್ರ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಹದ್ದುಗಳೆಲ್ಲಾ ಕೂಡಿ ತಿನ್ನುತ್ತವೆ. ಒಮ್ಮೆ ಸುಮಾರು 50 ಹದ್ದುಗಳು ಗುಂಪು ಸೇರುತ್ತವೆ. ಸಂತಾನೋತ್ಪತ್ತಿ ಅವಧಿಯಲ್ಲಿ ಸಂಗಾತಿಯೊಂದಿಗೆ ಸುತ್ತುತ್ತಿರುತ್ತದೆ. ಹಗಲಿನಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇತರೆ ಪರಭಕ್ಷಕ ಪ್ರಾಣಿಗಳು ಬೇಟೆಯಾಡಿದ ಪ್ರಾಣಿಗಳ ಮಾಂಸವನ್ನೂ ಇದು ಕದಿಯುತ್ತವೆ.

ಹೆಚ್ಚು ಸದ್ದು ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಆದರೆ ಆಹಾರ ಸೇವಿಸುವಾಗ ಮಾತ್ರ ವಿವಿಧ ಬಗೆಯ ಸದ್ದುಗಳನ್ನು ಹೊರಡಿಸುತ್ತಿರುತ್ತದೆ. ಇದು ವಲಸೆ ಹೋಗುವ ಪ್ರವೃತ್ತಿ ಹಕ್ಕಿಯಲ್ಲದಿದ್ದರೂ ಸಂದರ್ಭಕ್ಕೆ ಅನುಗುಣವಾಗಿ ಆಹಾರ ಅರಸುತ್ತಾ ಕೆಲವು ಪ್ರದೇಶಗಳಿಗೆ ಹೋಗುತ್ತದೆ.

ಆಹಾರ

ಇದು ಸಂಪೂರ್ಣ ಮಾಂಸಾಹಾರಿ ಹಕ್ಕಿ. ವಿವಿಧ ಬಗೆಯ ಪ್ರಾಣಿಗಳ ಮಾಂಸ, ಕೊಳೆತ ಮಾಂಸವನ್ನು ಇದು ಭಕ್ಷಿಸುತ್ತದೆ. ಪುಟ್ಟ ಗಾತ್ರದ ಸಸ್ತನಿಗಳು, ಹಕ್ಕಿಗಳನ್ನೂ ಬೇಟೆಯಾಡಿ ಭಕ್ಷಿಸುತ್ತದೆ.

ಸಂತಾನೋತ್ಪತ್ತಿ

ವಾಸಿಸುತ್ತಿರುವ ಪ್ರದೇಶಗಳ ವಾತಾವರಣ ಹಾಗೂ ಋತುವಿಗೆ ತಕ್ಕಂತೆ ಇದು ಸಂತಾನೋತ್ಪತ್ತಿ ನಡೆಸುತ್ತದೆ. ವಯಸ್ಕ ಹಂತ ತಲುಪಿದ ಹದ್ದುಗಳು ಒಮ್ಮೆ ಜೊತೆಯಾದರೆ ಸಾಯುವವರೆಗೂ ಬಹುತೇಕ ಒಂದೇ ಸಂಗಾತಿಯೊಂದಿಗೆ ಜೊತೆಯಾಗುತ್ತದೆ.

ಸುರಕ್ಷಿತ ಪ್ರದೇಶಗಳ ಮರಗಳಲ್ಲಿ ಹಲ್ಲು ಕಡ್ಡಿಗಳನ್ನು ಬಳಸಿಕೊಂಡು ದೊಡ್ಡಗಾತ್ರದ ಗೂಡು ನಿರ್ಮಿಸಿಕೊಂಡು ಗಡಿ ಗುರುತಿಸಿಕೊಳ್ಳುತ್ತವೆ. ಹೆಣ್ಣು ಹದ್ದು ಒಂದು ಮೊಟ್ಟೆಯಿಟ್ಟು 7ರಿಂದ 8 ವಾರಗಳ ವರೆಗೆ ಮೊಟ್ಟೆಗೆ ಕಾವು ಕೊಡುತ್ತದೆ. ಮೊಟ್ಟೆಯಿಂದ ಹೊರಬಂದ ಮರಿಗಳ ಪುಕ್ಕ ಬಹುತೇಕ ಬೂದು ಬಣ್ಣದಲ್ಲಿರುತ್ತದೆ. 125ರಿಂದ 135 ದಿನಗಳಲ್ಲಿ ಸಂಪೂರ್ಣವಾಗಿ ಪುಕ್ಕ ಬೆಳೆದು ಹಾರಲು ಶಕ್ತವಾಗುತ್ತದೆ. ಪುಕ್ಕ ಬೆಳೆದ ನಂತರವೂ ಕೆಲವು ದಿನಗಳ ಕಾಲ ಪೋಷಕ ಹಕ್ಕಿಗಳ ಜತೆಯಲ್ಲಿ ಇದ್ದು, ನಂತರ ಸ್ವತಂತ್ರವಾಗಿ ಜೀವಿಸಲು ಆರಂಭಿಸುತ್ತದೆ. ಸುಮಾರು 6 ವರ್ಷಗಳಲ್ಲಿ ವಯಸ್ಕ ಹಂತ ತಲುಪುತ್ತದೆ.

ಸ್ವಾರಸ್ಯಕರ ಸಂಗತಿಗಳು

* ಆಹಾರ ಸೇವಿಸಿದ ನಂತರ, ನೀರು ಇರುವಂತಹ ಪ್ರದೇಶಗಳಿಗೆ ಹೋಗಿ ಪುಕ್ಕವನ್ನು ಶುಚಿಗೊಳಿಸಿಕೊಳ್ಳುತ್ತದೆ.

* ಗೂಡು ಕಟ್ಟಿದ ಕೂಡಲೇ ಇದು ಗೂಡಿನಲ್ಲಿ ವಾಸಿಸುವುದಿಲ್ಲ. ಮೊಟ್ಟೆಇಟ್ಟ ನಂತರವಷ್ಟೇ ಗೂಡಿನಲ್ಲಿ ವಾಸಿಸಲು ಆರಂಭಿಸುತ್ತದೆ. ಅಲ್ಲಿಯವರೆಗೂ ಹತ್ತಿರದ ಪ್ರದೇಶಗಳಲ್ಲೇ ಆಹಾರ ಅರಸುತ್ತಾ ಸುತ್ತುತ್ತದೆ.

* ವಿಶ್ವದ ಎಲ್ಲ ಹದ್ದುಗಳ ಪೈಕಿ ಇದರ ಕೊಕ್ಕು ಹೆಚ್ಚು ದೃಢವಾಗಿರುತ್ತದೆ. ಪ್ರಾಣಿಗಳ ಚರ್ಮ ಎಷ್ಟೇ ಮಂದವಾಗಿದ್ದರೂ ಕುಕ್ಕಿ ಮಾಂಸವನ್ನು ಹೆಕ್ಕುತ್ತದೆ.

* ಕತ್ತು, ಕುತ್ತಿಗೆ ಮತ್ತು ತಲೆಯ ಮೇಲೆ ಪುಕ್ಕ ಬೆಳೆಯದೇ ಇರುವುದರಿಂದ, ಅವುಗಳನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ.

ಗಾತ್ರ ಮತ್ತು ಜೀವಿತಾವಧಿ

ದೇಹದ ತೂಕ- 4.4 ರಿಂದ 9.4 ಕೆ.ಜಿ.

ದೇಹದ ಉದ್ದ- 95 ರಿಂದ115 ಸೆಂ.ಮೀ

ರೆಕ್ಕೆಗಳ ಅಗಲ-8 ರಿಂದ 9.6 ಅಡಿ

ಓಡುವ ವೇಗ- 48 ಕಿ.ಮೀ/ಗಂಟೆಗೆ

ಜೀವಿತಾವಧಿ-30 ರಿಂದ 50 ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT