ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಹಗಳೇಕೆ ಸಾಯುತ್ತಿವೆ?

Last Updated 3 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಗಿರ್ ರಾಷ್ಟ್ರೀಯ ಉದ್ಯಾನ ಸಿಂಹಗಳಿಂದಲೇ ವಿಶ್ವದಾದ್ಯಂತ ವಿಖ್ಯಾತ. ಗುಜರಾತ್‌ನ ಜುನಾಗಢ ಜಿಲ್ಲೆಯಲ್ಲಿದೆ ಇದು. ‘ಫೀಲಿಡೀ’ ಕುಟುಂಬದ ದೊಡ್ಡ ಬೆಕ್ಕು ಎಂದು ಪ್ರಸಿದ್ಧವಾಗಿರುವ ‘ಪ್ಯಾಂಥೆರಾ ಲಿಯೋ ಪರ್ಸಿಕಾ’ ಸಿಂಹಗಳಿಗೆ ಗಿರ್ ಪ್ರಶಸ್ತವಾಗಿದೆ. ಸುಮಾರು ಆರು ಸಾವಿರ ವರ್ಷಗಳ ಹಿಂದೆ ಪರ್ಷಿಯಾದಿಂದ ಸಿಂಹಗಳು ಭಾರತಕ್ಕೆ ವಲಸೆ ಬಂದವೆಂದು ಹೇಳುತ್ತಾರೆ. ಇಂಗ್ಲೆಂಡ್, ಫ್ರಾನ್ಸ್, ಜರ್ಮನಿಗಳಲ್ಲಿ ಸಿಂಹಗಳ ಪಳೆಯುಳಿಕೆಗಳಿವೆ. ಇತಿಹಾಸಪೂರ್ವ ಕಾಲದಲ್ಲಿ ಮಧ್ಯ ಯೂರೋಪಿನಲ್ಲಿದ್ದ ಮೂಲ ಸಿಂಹಗಳು ಏಷ್ಯಾ, ಆಫ್ರಿಕಾಗಳಿಗೆ ವಲಸೆ ಹೊರಟವೆಂದು ಹೇಳುತ್ತಾರೆ. ಈಗ ಭಾರತದ ‘ಗಿರ್’ ಅಭಯಾರಣ್ಯ, ಆಫ್ರಿಕಾದಲ್ಲಿ ಮಾತ್ರ ಸಿಂಹಗಳು ವಾಸಿಸುತ್ತಿವೆ.

ಈಗ ಏಷ್ಯಾಟಿಕ್ ಸಿಂಹಗಳು ಗುಜರಾತಿನ ಗಿರ್ ಅರಣ್ಯದಲ್ಲಿ ಮಾತ್ರ ನೆಲೆಸಿವೆ. 1960ರಲ್ಲಿ ಸುಮಾರು 180 ಸಿಂಹಗಳಿದ್ದವು. 2015ರ ಗಣತಿ 523 ಸಿಂಹಗಳಿವೆ ಎಂದು ಅಂದಾಜಿಸಿತ್ತು. ಆ ಸಂದರ್ಭದಲ್ಲಿ 109 ಗಂಡು, 201 ಹೆಣ್ಣು, 73 ಮಧ್ಯಪ್ರಾಯದವು ಮತ್ತು 140 ಮರಿಗಳಿದ್ದವು. ಈಗ ಸುಮಾರು 600 ಏಷ್ಯಾಟಿಕ್ ಸಿಂಹಗಳಿವೆ ಎಂದು ತಿಳಿದುಬಂದಿದೆ. ಅವುಗಳ ವಾಸಸ್ಥಾನ ಬೆಟ್ಟ ಸಾಲು, ಗಿಡಮರಗಳಿಂದ ತುಂಬಿದ ಕಣಿವೆಗಳು, ವಿಶಾಲವಾದ ಹುಲ್ಲುಗಾವಲು, ಮೈದಾನ ಪ್ರದೇಶಗಳು, ಅಲ್ಲಲ್ಲಿ ಬಂಡೆಗಳಿಂದ ಕೂಡಿದೆ.

ಇಲ್ಲಿ ಪುರಾತನ ಕಾಲದ ಕಂಕೈ ಮಾತಾ ಹಾಗೂ ತುಳಸೀಶ್ಯಾಮರ ಗುಡಿಗಳಿವೆ. ಗಂಧಕದ ಬಿಸಿ ನೀರಿನ ಚಿಲುಮೆಗಳಿವೆ. ಈ ಭಾಗದಲ್ಲಿ ಸಿಹಿನೀರಿನ ಮೊಸಳೆಗಳನ್ನು, ಪಕ್ಷಿಗಳನ್ನು ಕಂಡು ಲ್ಯಾಂಡ್‍ಸ್ಕೇಪ್ ಚಿತ್ರಗಳನ್ನು ತೆಗೆಯಬಹುದು. ಈ ಅರಣ್ಯದಲ್ಲಿ ಸುಮಾರು 400ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಇವೆ ಎಂದು ಹೇಳುತ್ತಾರೆ. ಕಾಡು ಪಾರಿವಾಳಗಳು, ಸ್ಯಾಂಡ್ ಗ್ರೌಸ್, ಗೂಬೆ, ಗಿಡುಗ, ಹದ್ದು, ಕಿಂಗ್‍ಫಿಶರ್, ನೀಲಕಂಠ ಮುಂತಾದ ಪಕ್ಷಿಗಳನ್ನು ಕಾಣಬಹುದು.

19ನೇ ಶತಮಾನದಲ್ಲಿ 3000 ಚದರ ಕಿ.ಮೀ. ವಿಸ್ತೀರ್ಣವಿದ್ದ ಅರಣ್ಯ ಈಗ 1,412 ಚದರ ಕಿ.ಮೀ.ಗೆ ಇಳಿದಿದೆ. ಇಷ್ಟು ವಿಸ್ತೀರ್ಣವಿದ್ದರೂ ಇದರ ಒಳಗೆ ಹಾಗೂ ಸುತ್ತಮುತ್ತ ಹಳ್ಳಿಗಳು ಇವೆ. ಜನ, ಜಾನುವಾರುಗಳ ದೆಸೆಯಿಂದಾಗಿ ಗಿರ್ ಅರಣ್ಯದ ಮೂಲ ವಾಸಸ್ಥಾನ ಉಡುಗುತ್ತಾ ಬಂದು ಈಗ ಸಿಂಹಗಳಿಗಾಗಿ 258 ಚದರ ಕಿ.ಮೀ. ಮಾತ್ರ ನೆಲೆಯಾಗಿ ಉಳಿದಿದೆ.

ಸಿಂಹಗಳೇಕೆ ಸಾಯುತ್ತಿವೆ?

1901ರಲ್ಲಿ ಲಾರ್ಡ್ ಕರ್ಜನ್ ಗಿರ್ ಅರಣ್ಯಕ್ಕೆ ಸಿಂಹದ ಬೇಟೆಗೆಂದು ಬಂದಾಗ ಕಡಿಮೆ ಸಿಂಹಗಳು ಇದ್ದಿದ್ದನ್ನು ಕಂಡು ಈ ಸಿಂಹಗಳನ್ನು ರಕ್ಷಿಸಬೇಕೆಂದು ಜುನಾಗಢದ ಅಂದಿನ ನವಾಬ ಸರ್ ಮಹಮ್ಮದ್ ರಸೂಲ್ ಖಾನ್‍ಜೀ ಅವರಿಗೆ ಸಲಹೆ ನೀಡಿದ. ವಿಷಯ ತಿಳಿದ ತಕ್ಷಣ ನವಾಬರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದರು. ಆಗ ಅವರು ಕೈಗೊಂಡ ಕ್ರಮಗಳು ಭಾರತದ ಪ್ರಥಮ ವನ್ಯಜೀವಿ ಸಂರಕ್ಷಣಾ ಪ್ರಯತ್ನವೆಂದು ಖ್ಯಾತವಾಗಿದೆ. ನಂತರ ಸಿಂಹಗಳ ಸಂಖ್ಯೆ ವೃದ್ಧಿಸುತ್ತಾ ಬಂತು.

ಸಿಂಹಗಳ ಬೇಟೆ ನಿಷೇಧಿಸಿದ ನವಾಬರ ಕ್ರಮ ಸ್ವಾತಂತ್ರ್ಯದ ನಂತರವೂ ಮುಂದುವರೆಯಿತು. 1965ರಲ್ಲಿ ಗಿರ್ ಅರಣ್ಯದ ಒಟ್ಟು 1,412 ಚದರ ಕಿ.ಮೀ. ಪ್ರದೇಶದ ಸುಮಾರು 258 ಚದರ ಕಿ.ಮೀ. ಅರಣ್ಯ ಸಂಪೂರ್ಣ ಸಂರಕ್ಷಿತ ಪ್ರದೇಶವೆಂದೂ, ರಾಷ್ಟ್ರೀಯ ಉದ್ಯಾನವನವೆಂದೂ ಘೋಷಿತವಾಯಿತು. ಉಳಿದ ಅಂದಾಜು 1,153 ಚದರ ಕಿ.ಮೀ. ಪ್ರದೇಶವನ್ನು ಅಭಯಾರಣ್ಯವೆಂದು ಘೋಷಿಸಲಾಗಿದೆ. ಸಿಂಹಗಳ ಸಂರಕ್ಷಣೆ ಅನಿವಾರ್ಯ ಎಂದು ಕೇಂದ್ರ ಸರ್ಕಾರ 1972ರಲ್ಲಿ ಗಿರ್‌ನಲ್ಲಿ ‘ಸಿಂಹ ಯೋಜನೆ’ ಆರಂಭಿಸಿತು. ನಂತರದ ವರ್ಷಗಳಲ್ಲಿ ಸಿಂಹಗಳ ಸಂತಾನಾಭಿವೃದ್ಧಿ ಹೆಚ್ಚಾಗುತ್ತಿದೆ.

ಮಾಲ್‍ಧಾರಿ ಸಮುದಾಯದ ಜನ ‘ಗಿರ್’ನಲ್ಲಿ ಸಿಂಹಗಳ ಜೊತೆ ವಾಸಿಸುತ್ತಿದ್ದಾರೆ. ತಲೆಮಾರುಗಳಿಂದ ಇವರು ಇಲ್ಲೇ ಹಳ್ಳಿಗಳನ್ನು ನಿರ್ಮಿಸಿಕೊಂಡು, ಜಾನುವಾರುಗಳನ್ನು ಸಾಕಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಅವರು ಸಸ್ಯಾಹಾರಿಗಳಾದ್ದರಿಂದ ಆಹಾರಕ್ಕಾಗಿ ವನ್ಯಪ್ರಾಣಿಗಳನ್ನು ಕೊಲ್ಲುವುದಿಲ್ಲ.

ಸಿಂಹಗಳ ಸಂಖ್ಯೆಗೆ ಅನುಗುಣವಾಗಿ ಕಾಡು ಇಲ್ಲದೆ ಅವುಗಳ ಆವಾಸ ಸ್ಥಾನ ಕಡಿಮೆಯಾಗುತ್ತಿದೆ. ಅವುಗಳಿಗೆ ಬೇಟೆಗೆ ಬೇಕಾದ ಜೀವ ಸಂಕುಲ ಕಡಿಮೆಯಾಗುತ್ತಿದೆ. ಕಾಡಿನಲ್ಲಿ ಗಣಿಗಾರಿಕೆ, ಕಾರ್ಖಾನೆಗಳು, ವ್ಯವಸಾಯ ಹಾಗೂ ಇತರೆ ಕಾರಣಗಳಿಂದಲೂ ಸಿಂಹಗಳ ಆವಾಸಸ್ಥಾನ ಕಡಿಮೆಯಾಗುತ್ತಿದೆ. ಕಾಡಿನಲ್ಲಿ ಹಾಗೂ ಕಾಡಿನ ಸುತ್ತಲಿನ ಹಳ್ಳಿಗಳಲ್ಲಿ ದನ, ಕುರಿಸಾಕಣೆ, ನಾಯಿ ಸಾಕಣೆ ವೈರಾಣು ಹರಡಲು ಕಾರಣವಾಗಿವೆ. ಏಷ್ಯಾಟಿಕ್ ಸಿಂಹಗಳ ಸಂರಕ್ಷಣೆಯ ದೃಷ್ಟಿಯಿಂದ ವೈದ್ಯಕೀಯ ನೆರವು, ಸಿಂಹ ಮತ್ತು ಇತರೆ ಪ್ರಾಣಿಗಳ ನಿರಂತರ ತಪಾಸಣೆ, ಸಾಕು ಪ್ರಾಣಿಗಳಿಗೆ ನಿರ್ಬಂಧ, ಸಿಂಹಗಳ ಸ್ಥಳಾಂತರ ಕ್ರಮಗಳ ತುರ್ತು ಇದೆ.

ಈಗ ಈ ಸಿಂಹಗಳಿಗೆ ವೈರಾಣುಗಳಿಂದ ಕುತ್ತು ಬಂದಿದೆ. ಈ ಮಾರಣಹೋಮಕ್ಕೆ ವೈರಾಣುಗಳೇ ಕಾರಣ. ಮತ್ತೊಂದೆಡೆ ಸಿಂಹಗಳ ನಡುವೆ ಕಾದಾಟ. ಈ ವೈರಾಣು 1994ರಲ್ಲಿ ಆಫ್ರಿಕಾದ ಸೆರೆಂಗೆಟೆ ರಾಷ್ಟ್ರೀಯ ಉದ್ಯಾನದಲ್ಲಿ ಸಾವಿರಕ್ಕೂ ಅಧಿಕ ಸಿಂಹಗಳನ್ನು ಬಲಿ ತೆಗೆದುಕೊಂಡಿತ್ತು. ಇದಕ್ಕೆ ಕಾರಣ ಹುಡುಕಿದಾಗ ಕ್ಯಾನೈನ್ ಡಿಸ್‍ಟೆಂಪರ್ (ಸಿಡಿವಿ) ಎಂಬ ವೈರಾಣು ಸುಮಾರು ಶೇಕಡ 30ರಷ್ಟು ಸಿಂಹಗಳನ್ನು ಬಲಿಪಡೆದ ವಿಷಯ ಗೊತ್ತಾಯಿತು. ಈಗ ಸಾಸನ್ ಗಿರ್ ಅರಣ್ಯದಲ್ಲಿ 23 ಸಿಂಹಗಳು ಬಲಿಯಾಗಿವೆ. ಈ ವೈರಾಣುವಿನ ಜೊತೆಗೆ, ಚಿಗಟಗಳಿಂದ ಹರಡುವ ಪ್ರೋಟೋಜೊಂವಲ್ ಇನ್‌ಫೆಕ್ಷನ್ ಬೆಬಿಸಿಯೋಸಿಸ್ ಎಂಬ ಪರಾವಲಂಬಿ ಸೋಂಕು ಸಿಂಹಗಳ ಕೆಂಪು ರಕ್ತಕಣಗಳನ್ನು ಕ್ಷೀಣಗೊಳಿಸುತ್ತದೆ. ಇದರಿಂದ ಸಿಂಹಗಳ ಶಕ್ತಿ ಕುಂದುತ್ತದೆ, ಸೋಮಾರಿಗಳಾಗುತ್ತವೆ. ಕೆಲವೊಮ್ಮೆ ಸಿಂಹಗಳ ಹಿಂದಿನ ಕಾಲುಗಳನ್ನು ಪಾರ್ಶ್ವವಾಯುವಿನಿಂದ ನಿಷ್ಕ್ರಿಯಗೊಳಿಸುತ್ತದೆ.

ಸಿಡಿವಿ ಸಿಂಹಗಳ ಹೊಟ್ಟೆ ಮತ್ತು ಕರುಳು, ಉಸಿರಾಟ, ನರಗಳ ಕಾರ್ಯ ಚಟುವಟಿಕೆ ಮೇಲೆ ಪರಿಣಾಮ ಬೀರಿ ಜ್ವರ, ಕಣ್ಣಿನ ಉರಿಯೂತ ಉಂಟುಮಾಡುತ್ತದೆ. ಇದು ಅತ್ಯಂತ ಮಾರಕ. ಸಿಂಹಗಳು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಸಿಡಿವಿ ಕುಂದಿಸುತ್ತದೆ. ಈ ಸೋಂಕು ಕಾಡುನಾಯಿ, ನಾಯಿ, ಜಾನುವಾರು ಮತ್ತು ಹಸಿರು ಹುಲ್ಲಿನಿಂದ ಹರಡುತ್ತದೆ. ಸಿಡಿವಿ ಜೊತೆಗೆ ಬೇರೆ ಸಣ್ಣ ಕಾಯಿಲೆಗಳು ಬಂದರೂ ಅದನ್ನು ಎದುರಿಸುವ ಶಕ್ತಿಯಿಲ್ಲದೆ ಸಾವನ್ನಪ್ಪುತ್ತವೆ. ವೈರಾಣುಗಳ ಹೊರತಾಗಿ ಸಿಂಹಗಳು ತಮ್ಮ ಗುಂಪುಗಳ ನಡುವೆ ಕಾದಾಟ ನಡೆಸಿಯೂ ಸಾಯುತ್ತವೆ. ಒಂದು ಗುಂಪಿನಲ್ಲಿ ಸುಮಾರು 15 ಹೆಣ್ಣು ಸಿಂಹಗಳು, ಒಂದೆರಡು ಗಂಡು ಸಿಂಹಗಳು, ಮಧ್ಯವಯಸ್ಕ ಸಿಂಹಗಳು ಹಾಗೂ ಮರಿಗಳು ಇರುತ್ತವೆ.

ಸಿಂಹಗಳು ಗುಂಪಾಗಿ ಜೀವಿಸುವವು. ಬೇರೆ ಗುಂಪಿನ ಸಿಂಹಗಳಿಗೆ ತಮ್ಮ ಆವಾಸಸ್ಥಾನದಲ್ಲಿ ಇರಗೊಡುವುದಿಲ್ಲ. ಹೆಣ್ಣುಗಳು ಬೆದೆಗೆ ಬಂದಾಗ, ಕೆಲವೊಮ್ಮೆ ಬೇರೆ ಪ್ರದೇಶದ ಗಂಡು ಸಿಂಹಗಳು ಇನ್ನೊಂದು ಗುಂಪಿಗೆ ಬಂದು ಅಲ್ಲಿರುವ ಗಂಡಿನೊಡನೆ ಕಾದಾಡುವುದೂ ಇದೆ.

ಒಂದು ಸಿಂಹ ಬಲಿಷ್ಠವಾಗಿದ್ದರೆ, ಅದು ಗುಂಪಿನ ಒಡೆಯ, ಗಂಡು ಸಿಂಹದೊಡನೆ ಸೆಣೆಸಿ, ಗಾಯಗೊಳಿಸಿ ಸಾಯಿಸಿದರೆ ಅಥವಾ ಓಡಿಸಿದರೆ ಆ ಸಿಂಹವೇ ಗುಂಪಿನ ಒಡೆಯನಾಗುತ್ತದೆ. ಈ ಕಾರಣದಿಂದಲೂ ಹಲವು ಸಿಂಹಗಳು ಅಸುನೀಗುತ್ತವೆ.

ಸಿಂಹಗಳು ಕೆಲವೊಮ್ಮೆ ಆಹಾರ ಲಭಿಸದಿದ್ದಾಗ ಅರಣ್ಯದ ಸುತ್ತಲಿರುವ, ಅರಣ್ಯದಲ್ಲಿರುವ ಹಳ್ಳಿಗಳ ದನ–ಕರು, ಆಡು, ಮೇಕೆಗಳನ್ನು ಹಿಡಿದು ತಿನ್ನುತ್ತವೆ. ಆಗ ಮಾನವ–ಪ್ರಾಣಿ ಸಂಘರ್ಷ ಏರ್ಪಟ್ಟು, ಮನುಷ್ಯನಿಗೆ ಕೆಲವು ಸಿಂಹಗಳು ಬಲಿಯಾಗುತ್ತವೆ. ‘ಗಿರ್’ನಲ್ಲಿ ಸಿಂಹಗಳು ಸೇರಿದಂತೆ ಇತರ ವನ್ಯಜೀವಿಗಳು, ಮನುಷ್ಯರು ಹಾಗೂ ಜಾನುವಾರುಗಳು ಒಟ್ಟಿಗೇ ಇರುವುದರಿಂದ ಆಹಾರದ ಕೊರತೆ ಉಂಟಾಗುತ್ತದೆ. ಆಹಾರಕ್ಕಾಗಿ ಜಾನುವಾರುಗಳ ಮೇಲೆ ಆಕ್ರಮಣ ಮಾಡುವ ಸಿಂಹಗಳನ್ನು ಸಿಟ್ಟಿನಿಂದ ಕೊಲ್ಲುವುದು, ಕಳ್ಳ ಬೇಟೆ,ವನ್ಯಪ್ರದೇಶದ ಒತ್ತುವರಿ, ರೈಲು ಸಂಚಾರ ಕೂಡ ಸಿಂಹ ಮತ್ತು ಇತರ ವನ್ಯಜೀವಿಗಳ ಜೀವನಕ್ಕೆ ಕುತ್ತು ತಂದಿವೆ.

‘ಗಿರ್‌’ನಲ್ಲಿ ಕೆಲವು ಸಿಂಹಗಳು ವೈರಾಣು ಸಮಸ್ಯೆಯಿಂದ ಮೃತಪಟ್ಟಿವೆ. ಇನ್ನು ಕೆಲವು ಕಾದಾಟದಲ್ಲಿ ಆದ ಗಾಯಗಳಿಂದ ಮೃತಪಟ್ಟಿವೆ. ಸೆಪ್ಟೆಂಬರ್‌ ತಿಂಗಳಲ್ಲಿ 18– 20 ದಿನಗಳಲ್ಲಿ ಸತ್ತಿರುವ ಎಲ್ಲ ಸಿಂಹಗಳು ಒಂದೇ ಗುಂಪಿನದ್ದಾಗಿವೆ (ಸೇಮ್ ಪ್ರೈಡ್). ಇಡೀ ಗುಂಪು ನಶಿಸುವುದರಲ್ಲಿದೆ. ಕೆಲವು ಸಿಂಹಗಳು ವೈದ್ಯಕೀಯ ಶುಶ್ರೂಷೆ ವೇಳೆ ಸತ್ತಿವೆ. ಗುಜರಾತ್ ಸರ್ಕಾರ ಸಿಂಹಗಳನ್ನು ಸ್ಥಳಾಂತರಿಸಲು ಒಪ್ಪುತ್ತಿಲ್ಲ. ಕೆಲ ಸಿಂಹಗಳನ್ನು ಸ್ಥಳಾಂತರಿಸಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ. ಆದರೆ ಗುಜರಾತ್ ಸರ್ಕಾರ, ಸಿಂಹಗಳನ್ನು ಸ್ಥಳಾಂತರಿಸಿದರೆ ತನ್ನ ಪ್ರವಾಸೋದ್ಯಮದ ಆದಾಯ ಕಡಿಮೆಯಾಗುತ್ತದೆ ಎಂದು ಪುನಃ ಸುಪ್ರೀಂ ಕೋರ್ಟ್ ಮೊರೆಹೋಗಿದೆ. ಇದು ಇತ್ಯರ್ಥವಾಗಬೇಕಿದೆ. ಸಿಂಹಗಳ ಸುರಕ್ಷತೆಯ ದೃಷ್ಟಿಯಿಂದ ಕೆಲವು ಸಿಂಹಗಳನ್ನಾದರೂ ಸ್ಥಳಾಂತರಿಸಿ ರಕ್ಷಿಸಬಹುದು.

ಗಿರ್‌ನಲ್ಲಿ ಸಿಂಹಗಳ ಸಂಖ್ಯೆ ಹೆಚ್ಚಿದ್ದರೂ ಒಂದೇ ವಂಶವಾಹಿ ತಳಿಗಳಿಂದ ಹುಟ್ಟಿದ ಮರಿಗಳು ಸದೃಢತೆ, ಆರೋಗ್ಯ ಮತ್ತು ಇತರೆ ಸಮಸ್ಯೆಗಳನ್ನು ಎದುರಿಸುತ್ತಿವೆ.

**

ಗಿರ್‌ ಸಿಂಹಧಾಮಕ್ಕೆ ಹೋಗುತ್ತೀರಾ?

* ಸಂದರ್ಶನಕ್ಕೆ ಉತ್ತಮ ಕಾಲ: ಡಿಸೆಂಬರ್‌ನಿಂದ ಏಪ್ರಿಲ್

* ಜೂನ್‌ನಿಂದ ಅಕ್ಟೋಬರ್‌ವರೆಗೆ ಅರಣ್ಯದೊಳಗೆ ಪ್ರವೇಶವಿಲ್ಲ

* ಸಫಾರಿ ಸಮಯ: ಬೆಳಗ್ಗೆ ಏಳರಿಂದ ಹನ್ನೊಂದು ಗಂಟೆ. ಮಧ್ಯಾಹ್ನ ಮೂರರಿಂದ ಐದೂ ಮೂವತ್ತರವರೆಗೆ.

* ಹತ್ತಿರದ ಊರುಗಳು: ಜುನಾಗಢ–60 ಕಿ.ಮೀ., ಅಮರೋಲಿ– 60 ಕಿ.ಮೀ., ವೇರಾವಲ್– 43 ಕಿ.ಮೀ.

* ವಸತಿಗೆ ಅರಣ್ಯ ಇಲಾಖೆಯ ವಸತಿ ಗೃಹವಿದೆ.

* ಗಿರ್‌ನಲ್ಲಿ ಸಾಕಷ್ಟು ಖಾಸಗಿ ಹೋಟೆಲ್‌ಗಳಿವೆ.

* ಹತ್ತಿರದ ವಿಮಾನ ನಿಲ್ದಾಣ ಕೇಷಡ್: 90 ಕಿ.ಮೀ. ವೇರಾವಲ್ ಮೂಲಕ. ಅಹಮದಾಬಾದ್: 360 ಕಿ.ಮೀ.

* ಜುನಾಗಢಕ್ಕೆ ಬಂದು ಬಸ್ ಅಥವಾ ಟ್ಯಾಕ್ಸಿಯ ಮೂಲಕ ಗಿರ್ ತಲುಪಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT