ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಳ ಮೂಗಿನ ಕೋತಿ ಪ್ರೊಬೊಸ್ಕಿಸ್‌

Last Updated 9 ಜೂನ್ 2019, 14:18 IST
ಅಕ್ಷರ ಗಾತ್ರ

ವಿಶ್ವದ ಜೀವಸಂಕುಲದ ಪೈಕಿ ಹೆಚ್ಚು ಗಮನ ಸೆಳೆಯುವ ಪ್ರಾಣಿ ಮಂಗ. ಅದರ ಬುದ್ಧಿವಂತಿಕೆ ಮತ್ತು ವರ್ತನೆ ಎಲ್ಲರ ಗಮನ ಸೆಳೆಯುತ್ತದೆ. ವಿಶ್ವದಾದ್ಯಂತ ಹಲವು ಕೋತಿ ಪ್ರಭೇದಗಳನ್ನು ಗುರುತಿಸಲಾಗಿದೆ. ತನ್ನ ದೇಹಾಕೃತಿಯಿಂದಲೇ ಗಮನ ಸೆಳೆಯುವ ಅಪರೂಪದ ಕೋತಿಗಳಲ್ಲಿ ಪ್ರೊಬೊಸ್ಕಿಸ್‌ ವಿಶೇಷ ಎನಿಸುತ್ತದೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ದೊಡ್ಡಗಾತ್ರದ ಕೋತಿಗಳಲ್ಲಿ ಒಂದಾದ ಇದರ ವೈಜ್ಞಾನಿಕ ಹೆಸರು ನಸೈಲ್ಸ್ ಇರ್ವಟಸ್‌ (Nasalis larvatus). ಇದು ಸೆರ್ಕೆಪಿಚೆಸಿಡೇ (‎Cercopithecidae) ಕುಟುಂಬಕ್ಕೆ ಸೇರಿದ ಕೋತಿ.

ಹೇಗಿರುತ್ತದೆ?
ಇದು ಏಷ್ಯಾದ ಅತಿದೊಡ್ಡ ಕೋತಿ ತಳಿ. ತಿಳಿಗಂದು, ಕಪ್ಪು ಮತ್ತು ಬಿಳಿ ಬಣ್ಣದ ಕೂದಲಿನಿಂದ ಕೂಡಿದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಕೈ ಮತ್ತು ಕಾಲುಗಳ ಮೇಲೆ ಬೆಳೆಯುವ ಕೂದಲು ಬೂದು ಬಣ್ಣದಲ್ಲಿರುತ್ತವೆ. ಬೆನ್ನು, ಕತ್ತು, ಕುತ್ತಿಗೆ ಮತ್ತು ತಲೆಯಭಾಗದಲ್ಲಿ ತಿಳಿಗಂದು ಬಣ್ಣದ ಕೂದಲು ಬೆಳೆಯುತ್ತವೆ. ಉದರ ಭಾಗದಲ್ಲಿ ಬಿಳಿ ಮತ್ತು ಬೂದು ಬಣ್ಣದ ಕೂದಲು ಬೆಳೆಯುತ್ತವೆ.

ಉದರವು ಬೊಜ್ಜು ಹೊಟ್ಟೆಯಂತೆ ಕಾಣುತ್ತದೆ. ಅಂಗೈಗಳು ಕಪ್ಪು ಬಣ್ಣದಲ್ಲಿರುತ್ತವೆ. ನೀಳವಾದ ಬಾಲವನ್ನು ಹೊಂದಿರುತ್ತದೆ.ತಲೆ ಪುಟ್ಟದಾಗಿದ್ದು, ಮುಖ, ತಲೆಯನ್ನು ಕೂಡಿಸಿದಂತೆ ಒತ್ತಾಗಿ ಕೂದಲು ಬೆಳೆದಿರುವುದರಿಂದ ದೊಡ್ಡದಾಗಿ ಕಾಣುತ್ತದೆ. ಕಣ್ಣುಗಳು ಪುಟ್ಟದಾಗಿದ್ದು,ಕಂದು ಬಣ್ಣದಲ್ಲಿರುತ್ತವೆ. ಮನುಷ್ಯರ ಕಿವಿಗಳನ್ನು ಹೋಲುವ ಕಿವಿಗಳಿದ್ದು, ತಲೆಭಾಗದ ಕೂದಲು ಸಂಪೂರ್ಣ ಮುಚ್ಚಿರುತ್ತವೆ. ಬೇರೆ ಯಾವ ಕೋತಿಯಲ್ಲೂ ಕಾಣದ ವಿಚಿತ್ರ ಲಕ್ಷಣವೆಂದರೆ ಮುಖದ ತುಂಬಾ ಆವರಿಸಿದ ಇದರ ಮೂಗು. ಹೆಣ್ಣಿಗಿಂತ ಗಾತ್ರದಲ್ಲಿ ದೊಡ್ಡದಾಗಿರುವ ಗಂಡಿಗೆ ಮಾತ್ರ ನೀಳವಾದ ಈ ಮೂಗು ಬೆಳೆಯುತ್ತದೆ.

ಎಲ್ಲಿದೆ?
ಇಂಡೊನೇಷ್ಯಾದ ಬೊರ್ನೊಯೊ ಕಾಡುಗಳು ಇದರ ವಾಸಸ್ಥಾನ. ಇಲ್ಲಿನ ನದಿ ಪಾತ್ರಗಳು, ಕರಾವಳಿ ತೀರದ ಕಾಡುಗಳು, ಜೌಗು ಪ್ರದೇಶಗಳಲ್ಲೂ ಇದು ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ
ಸದಾ ಮರಗಳ ಮೇಲೆ ವಾಸಿಸುವುದಕ್ಕೆ ಇಷ್ಟಪಡುತ್ತದೆ. ಹಸಿವಾದಾಗ ಮಾತ್ರ ಆಹಾರ ಹುಡುಕುವುದಕ್ಕೆ ನೆಲದ ಮೇಲೆ ಕಾಲಿಡುತ್ತದೆ. ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಕೋತಿ. ಒಂದು ಗುಂಪಿನಲ್ಲಿ 2ರಿಂದ 7 ಹೆಣ್ಣು ಕೋತಿಗಳು ಮತ್ತು ಅದರ ಮರಿ ಇರುತ್ತದೆ. ಬಲಿಷ್ಠವಾದ ಒಂದು ಗಂಡು ಕೋತಿ ಗುಂಪಿನ ನೇತೃತ್ವ ವಹಿಸಿಕೊಂಡಿರುತ್ತದೆ. ಹಗಲಿನಲ್ಲಿ ಹೆಚ್ಚು ಚುರುಕಾಗಿದ್ದು, ರಾತ್ರಿಯಾಗುತ್ತಿದ್ದಂತೆಯೇ ನದಿ ಪ್ರದೇಶಗಳ ಬಳಿ ಇರುವ ಮರಗಳ ಮೇಲೆ ನಿದ್ರಿಸುತ್ತವೆ. ಇದಕ್ಕೆ ಚೆನ್ನಾಗಿ ಈಜುವುದು ಗೊತ್ತು. ಹೀಗಾಗಿ ನದಿಯಲ್ಲಿನ ಮೊಸಳೆಗಳಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತದೆ. ಅಪಾಯ ಎದುರಾದಾಗ ಜೋರಾಗಿ ಕಿರುಚಿ ಗುಂಪಿನ ಇತರೆ ಕೋತಿಗಳನ್ನು ಎಚ್ಚರಿಸುತ್ತದೆ.

ಆಹಾರ
ಇದು ಮಿಶ್ರಾಹಾರಿ ಕೋತಿ. ವಿವಿಧ ಬಗೆಯ ಎಲೆಗಳು, ಹಣ್ಣುಗಳು ಮತ್ತು ಕಾಳುಗಳು ಇದರ ಪ್ರಮುಖ ಆಹಾರ. ಆಗಾಗ್ಗೆ ಕೆಲವು ಬಗೆಯ ಕೀಟಗಳನ್ನೂ ಭಕ್ಷಿಸುತ್ತದೆ.

ಸಂತಾನೋತ್ಪತ್ತಿ
ಇದರ ಸಂತಾನೋತ್ಪತ್ತಿಗೆ ಯಾವುದೇ ನಿರ್ದಿಷ್ಟ ಕಾಲವಿಲ್ಲ. ಆದರೆ ಆಹಾರ ಹೆಚ್ಚಾಗಿ ಸಿಗುವಂತಹ ಸಮಯದಲ್ಲಿ ಮಾತ್ರ ಸಂತಾನೋತ್ಪತ್ತಿ ನಡೆಸುತ್ತದೆ. ಆಕರ್ಷಕ ಮೂಗು ಹೊಂದಿರುವ ಗಂಡು ಕೋತಿಯೊಂದಿಗೆ ಹೆಣ್ಣು ಕೋತಿ ಜೊತೆಯಾಗುತ್ತದೆ. ಸುಮಾರು 160 ದಿನ ಗರ್ಭ ಧರಿಸಿದ ನಂತರ ಒಂದು ಮರಿಗೆ ಜನ್ಮ ನೀಡುತ್ತದೆ. ಮರಿ ಜನಿಸಿದಾಗ ಅದರ ಮುಖ ನೀಲಿ ಬಣ್ಣದಲ್ಲಿರುತ್ತದೆ. ಬೆಳೆದಂತೆಲ್ಲಾ ಕಂದು ಬಣ್ಣಕ್ಕೆ ಬದಲಾಗುತ್ತದೆ. ಸುಮಾರು 18 ತಿಂಗಳ ನಂತರ ಮರಿ ಗುಂಪು ಬಿಟ್ಟು ಸ್ವತಂತ್ರ್ಯವಾಗಿ ಜೀವಿಸಲು ಆರಂಭಿಸುತ್ತದೆ.

ಸ್ವಾರಸ್ಯಕರ ಸಂಗತಿಗಳು
* ಸುಮಾರು 20 ಮೀಟರ್ ಆಳದವರೆಗಿನ ನೀರಿನಲ್ಲೂ ಈಜುತ್ತದೆ.
* 40 ವರ್ಷಗಳಲ್ಲಿ ಇದರ ಸಂತತಿ ಶೇ 80ರಷ್ಟು ಕ್ಷೀಣಿಸಿದೆ.
* ಪ್ರಸ್ತುತ 16,500 ನೀಳಮೂಗಿನ ಕೋತಿಗಳು ಮಾತ್ರ ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT