ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುಪಟು ನೈಲ್‌ ಲೆಕ್ವಿ

Last Updated 21 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ನೈಲ್‌ ತೀರದ ಲೆಕ್ವಿಯು ಆಫ್ರಿಕಾದ ಜಿಂಕೆಗಳಲ್ಲಿಯೇ ಅಳಿವಿನಂಚಿನಲ್ಲಿರುವ ತಳಿ. ಇದರ ವೈಜ್ಞಾನಿಕ ಹೆಸರು ಕೋಬಸ್ (Kobus). ಇದು ಅರ್ಟಿಡಾಟಿಲಾ (Artiodactyla) ಗುಂಪಿಗೆ ಸೇರಿದ್ದು, ಬೊವಿಡಾ
( Bovidae) ಕುಟುಂಬಕ್ಕೆ ಸೇರಿದೆ. ಇದರ ಬಗ್ಗೆ ಇಂದಿನ ಪ್ರಾಣಿ ಪ್ರಪಂಚದಲ್ಲಿ ತಿಳಿದುಕೊಳ್ಳೋಣ.

ಎಲ್ಲಿರುತ್ತದೆ?

ದಕ್ಷಿಣ ಸೂಡಾನ್‌ ಮತ್ತು ಯುಥೋಪಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ದಟ್ಟ ಹುಲ್ಲುಗಾವಲು ಪ್ರದೇಶ, ತೊರೆ ಇರುವ ಪ್ರದೇಶಗಳೆಂದರೆ ಇದಕ್ಕಿಷ್ಟ. ಯುಥೋಪಿಯಾದ ನೈರುತ್ಯ ಪ್ರದೇಶ್ಯ, ಗಾಂಬೆಲ್ಲ ರಾಷ್ಟ್ರೀಯ ಉದ್ಯಾನದಲ್ಲಿ ನೋಡಬಹುದು.

ಹೇಗಿರುತ್ತದೆ?

ಕೆನ್ನೆಯ ಭಾಗದಲ್ಲಿ ಗಾಢವಾದ ಕೂದಲುಗಳಿದ್ದು, ಮೈ ಸಂಪೂರ್ಣ ತುಪ್ಪಳದಿಂದಲೇ ಕೂಡಿರುತ್ತದೆ. ಇದರ ಬಣ್ಣವು ಕಪ್ಪಗಿದ್ದು, ಬೆನ್ನ ಮಧ್ಯ ಭಾಗದಲ್ಲಿ ಬಿಳಿ ಬಣ್ಣದ ತುಪ್ಪಳವಿರುತ್ತದೆ. ಹೆಣ್ಣು ಲೆಕ್ವಿಗಳ ಮೈ ಬಣ್ಣವು ತಿಳಿ ಹಳದಿ ಬಣ್ಣದಲ್ಲಿದ್ದು, ಕೋಡುಗಳು ಇರುವುದಿಲ್ಲ. ಪ್ರಾಯದಲ್ಲಿರುವ ಗಂಡು ಲೆಕ್ವಿಗಳ ಬಣ್ಣವು ತಿಳಿ ಅರಿಶಿನ ಬಣ್ಣದಲ್ಲಿಯೇ ಇರುತ್ತದೆ. ವಯಸ್ಸಾದಂತೆ ಇದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕಣ್ಣಿನ ಭಾಗದಲ್ಲಿ ಬಿಳಿ ಮಚ್ಚೆಯಂತೆ ಕಾಣುತ್ತದೆ.

ಆಹಾರ ಪದ್ಧತಿ

ನೈಲ್್ ಲೆಕ್ವಿಯು ಸೊಪ್ಪು ತಿಂದು ಬದುಕುವ ಪ್ರಾಣಿ. ಸಾಮಾನ್ಯವಾಗಿ ಆಳವಾದ ನೀರಿನಲ್ಲಿ ಬೆಳೆದ ಸೊಪ್ಪುಗಳು, ಸಸ್ಯಗಳೆಂದರೆ ಇದಕ್ಕಿಷ್ಟ. ಆಹಾರ ಯಥೇಚ್ಛವಾಗಿ ಸಿಗುವ ಸಮಯದಲ್ಲಿ ಇದು ಕಾಡಿನಲ್ಲಿ ಬೆಳೆಯುವ ಸೊಂಪಾದ ಹುಲ್ಲು ತಿನ್ನುತ್ತದೆ. ಆಳವಾದ ಕೊಳದಲ್ಲಿ ಇಳಿದು ಈಜುವ ಸಾಮರ್ಥ್ಯ ಇರುವುದರಿಂದ ಜಲಸಸ್ಯಗಳನ್ನು ಹುಡುಕಿ ತಿನ್ನುತ್ತದೆ.

ಸಂತಾನೋತ್ಪತ್ತಿ

ಗಂಡು ಲೆಕ್ವಿಯು ಬಹು ಹೆಣ್ಣಿನೊಂದಿಗೆ ಸಂಗ ಬೆಳೆಸುತ್ತದೆ. ವರ್ಷದ ಯಾವ ತಿಂಗಳಿನಲ್ಲಿಯಾದರೂ ಸಂತಾನೋತ್ಪತ್ತಿ ನಡೆಸುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಮತ್ತು ಮೇ ತಿಂಗಳಲ್ಲಿ ಸಂತಾನೋತ್ಪತ್ತಿ ಹೆಚ್ಚು ನಡೆಸುತ್ತದೆ. ತನ್ನ ಗಡಿಯನ್ನು ಪರಸ್ಪರ ಸಂವಹನದಿಂದಲೇ ಗುರುತಿಸಿಕೊಳ್ಳುತ್ತದೆ. ಹೆಣ್ಣು ಲೆಕ್ವಿಯ ಪ್ರೀತಿ ಗಳಿಸಲು ಗಂಡು ಲೆಕ್ವಿಗಳು ನೀರಿಗಿಳಿದು ಕೋಡುಗಳ ಮೂಲಕ ಕಾದಾಡುತ್ತವೆ. ಏಳರಿಂದ 9 ತಿಂಗಳ ಕಾಲ ಗರ್ಭ ಧರಿಸುತ್ತದೆ. ಒಂದು ಮರಿಗೆ ಜನ್ಮ ನೀಡುತ್ತದೆ. ಆಗಷ್ಟೆ ಹುಟ್ಟಿದ ಮರಿಯನ್ನು ಎರಡರಿಂದ ಮೂರು ವಾರಗಳ ಕಾಲ ದಟ್ಟ ಪೊದೆಯಲ್ಲಿ ಅಡಗಿಸಿಡಲಾಗುತ್ತದೆ. ಬೇಟೆಗಾರ ಪ್ರಾಣಿಯಿಂದ ರಕ್ಷಣೆ ಒದಗಿಸಲು ಹೀಗ ಮಾಡಲಾಗುತ್ತದೆ. ಆರು ತಿಂಗಳ ಕಾಲ ಈ ಮರಿಯು ತಾಯಿಯ ಆರೈಕೆಯಲ್ಲಿಯೇ ಬೆಳೆಯುತ್ತದೆ.ನಂತರ ಪೋಷಕ ಲೆಕ್ವಿಗಳಿಂದ ದೂರವಿದ್ದು ಸ್ವತಂತ್ರಗೊಳ್ಳುತ್ತದೆ. ಗಂಡು ಮತ್ತು ಹೆಣ್ಣು ಲೆಕ್ವಿಯು 2 ವರ್ಷದ ಹೊತ್ತಿಗೆ ಪ್ರಾಯಕ್ಕೆ ಬರುತ್ತದೆ.

ಜೀವನಕ್ರಮ ಮತ್ತು ವರ್ತನೆ

ಮುಂಜಾನೆ ಮತ್ತು ಗೋಧೂಳಿ ಸಮಯದಲ್ಲಿ ಇದು ಹೆಚ್ಚಾಗಿ ಕ್ರಿಯಾಶೀಲವಾಗಿರುತ್ತದೆ. ಇದು ಸಾಮಾನ್ಯವಾಗಿ ಗುಂಪು ಮಾಡಿಕೊಂಡು ಜೀವನ ಸಾಗಿಸುತ್ತದೆ. 50 ಹೆಣ್ಣು ಲೆಕ್ವಿ ಇರುವ ಗುಂಪಿಗೆ ಒಂದು ಗಂಡು ಲೆಕ್ವಿ ಇರುತ್ತದೆ. ಹೆಣ್ಣು ಲೆಕ್ವಿ, ಆಗಷ್ಟೆ ಹುಟ್ಟಿದ ಮರಿ, ಪ್ರಾಯಕ್ಕೆ ಬಾರದ ಗಂಡು ಲೆಕ್ವಿ, ಪ್ರಾಯಕ್ಕೆ ಬಂದ ಹೆಣ್ಣು ಮತ್ತು ಗಂಡು ಲೆಕ್ವಿ ಹೀಗೆ ನಾನಾ ಆಧಾರದ ಮೇಲೆ ಗುಂಪು ಮಾಡಿಕೊಂಡು ಜೀವನ ನಡೆಸುತ್ತದೆ. ಗಂಡು ಲೆಕ್ವಿಯು ಆಗಾಗ ಗಡಿ ಕಾಯುವ ಕೆಲಸವನ್ನು ಮಾಡುತ್ತದೆ. ಎದುರಾಳಿಯನ್ನು ಕಂಡರೆ ದೊಡ್ಡದಾಗಿ ಸದ್ದು ಹೊರಡಿಸಿ, ಇತರರನ್ನು ಎಚ್ಚರಿಸುವ ಕೆಲಸ ಮಾಡುತ್ತದೆ. ದನಿಯ ಜೋರಿಗೆ ಹೋಲಿಸಿದರೆ ಹೆಣ್ಣು ಲೆಕ್ವಿಯ ದನಿ ತುಂಬಾ ಗಡಸಾಗಿರುತ್ತದೆ. ಉತ್ತಮ ಈಜುಪಟುವಾಗಿದ್ದು, ಎಂಥ ಆಳವಾದ ನೀರಿನಲ್ಲಿಯೂ ಈಜುವ ಸಾಮರ್ಥ್ಯವನ್ನು ಹೊಂದಿದೆ.

ಸ್ವಾರಸ್ಯಕರ ಸಂಗತಿಗಳು
ಗಂಡು ಲೆಕ್ವಿಯ ಕೋಡು ಸುಮಾರು 87 ಸೆಂ.ಮೀ ಉದ್ದದವರೆಗೆ ಬೆಳೆಯಬಲ್ಲದು

ಪ್ರಾಣಿ ಸಂಗ್ರಹಾಲಯದಲ್ಲಿಟ್ಟರೆ ಸುಮಾರು 21ವರ್ಷಗಳ ಕಾಲ ಬದುಕಬಲ್ಲದು.

ಇದು ಕೂಗುವ ಶಬ್ದವು ಕಪ್ಪೆಯ ವಟಗುಟ್ಟುವ ಶಬ್ದಕ್ಕೆ ಸಾಮ್ಯತೆ ಇದೆ.

ಗಾತ್ರ

60 ರಿಂದ 120 ಕೆ.ಜಿ.

ಜೀವಿತಾವಧಿ‌

10 ರಿಂ 12 ವರ್ಷ

ಉದ್ದ

135 ರಿಂದ 165 ಸೆಂ.ಮೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT