ಏರೋಪ್ಲೇನ್‌ ಬಾವಲಿಗಳು

7

ಏರೋಪ್ಲೇನ್‌ ಬಾವಲಿಗಳು

Published:
Updated:

ಕಗ್ಗತ್ತಲಿನಲ್ಲಿ ಕಾಣದಂತೆ ಕರಗಿಹೋಗುವ ಮರ–ಗಿಡ, ಎಲೆ–ಕೀಟ ಏನೊಂದಕ್ಕೂ ಡಿಕ್ಕಿ ಹೊಡೆಯದ ಬಾವಲಿಗಳು ಏರೋಪ್ಲೇನ್‌ಗಳಂತೆ ಆರಾಮವಾಗಿ ಹಾರಾಟ ನಡೆಸುವುದು ಜೀವಜಗತ್ತಿನ ಒಂದು ದೊಡ್ಡ ಕೌತುಕ. ಹಗಲೆಲ್ಲ ತಲೆಕೆಳಗಾಗಿ ನೇತು ಹಾಕಿಕೊಳ್ಳುವ ಅವುಗಳು, ರಾತ್ರಿಯಾದೊಡನೆ ಪರಕಾಯ ಪ್ರವೇಶಿಸಿದಂತೆ, ಎಷ್ಟೊಂದು ಚಟುವಟಿಕೆಗಳಿಗೆ ಇಳಿದುಬಿಡುತ್ತವೆ. ತಮ್ಮ ಪಯಣದ ಹಾದಿಯಲ್ಲಿ ಏನಾದರೂ ಅಡೆತಡೆ ಎದುರಾದರೆ ಸರಕ್ಕನೆ ಪಕ್ಕಕ್ಕೆ ಸರಿದು, ನವಿರಾದ ರೆಕ್ಕೆಗಳಿಗೆ ಏನೂ ಸೋಕದಂತೆ ಪಾರಾಗುವ ಈ ಜೀವಿಗಳ ಚತುರತೆಗೆ ಬೇರೆ ಸಾಟಿ ಉಂಟೇ?

ಭೀಮಗಡದ ಕನ್ಯೆಕಾಡಿನಲ್ಲೋ, ಕೋಲಾರದ ಮಾವಿನ ತೋಪಿನಲ್ಲೋ, ಹಂಪಿಯ ಗುಹೆಯಲ್ಲೋ ಅಥವಾ ಮೈಸೂರಿನ ಪಾಳುಬಿದ್ದ ಕಟ್ಟಡದಲ್ಲೋ ಇರುವ ತಮ್ಮ ‘ಮನೆ’ಗಳಿಂದ ಅವುಗಳು ಕತ್ತಲಾದೊಡನೆ ಥಟ್‌ ಅಂತ ರೆಕ್ಕೆ ಬಿಚ್ಚಿ, ಅಷ್ಟೊಂದು ಸುರಕ್ಷಿತವಾಗಿ ವಿಹಾರ ನಡೆಸುವುದಾದರೂ ಹೇಗೆ? ಅದು ಹೋಗಲಿ, ನಾವೊಂದು ವೇಳೆ ರಾತ್ರಿಯೂಟಕ್ಕೆ ಕುಳಿತಾಗ ಬೆಳಕು ಮಾಯವಾದರೆ ಊಟವನ್ನೇ ನಿಲ್ಲಿಸಿಬಿಡುವುದಿಲ್ಲವೇ? ಆದರೆ, ಈ ಬಾವಲಿಗಳು ಊಟಕ್ಕೆ ಬಾಯಿ ತೆರೆಯಬೇಕೆಂದರೆ ಕತ್ತಲು ಕವಿಯಲೇಬೇಕು. ರಾತ್ರಿಯೊಂದಿಗೆ ಅಷ್ಟೊಂದು ಪ್ರೀತಿಯ ಬಂಧನಕ್ಕೆ ಸಿಲುಕಿರುವ ಅವುಗಳಿಗೆ ಗಾಢ ಅಂಧಕಾರದಲ್ಲೂ ಅಲ್ಲಿರುವ ವಸ್ತುಗಳನ್ನು ಗುರುತಿಸುವಂತಹ ಅತೀಂದ್ರಿಯ ಶಕ್ತಿ ಏನಾದರೂ ಇದೆಯೇ?

ನಮಗೆಲ್ಲ ಕಾಡುವ ಈ ಪ್ರಶ್ನೆ ಜೀವಶಾಸ್ತ್ರಜ್ಞರೂ ಆಗಿದ್ದ ಇಟಲಿಯ ಪಾದ್ರಿ ಲಾಸೆರೊ ಸ್ಪಲಾನಿ ಅವರನ್ನೂ ಕಾಡಿತ್ತು. ಅವರು ನಡೆಸಿದ ಪ್ರಯೋಗದ ಕುರಿತು ಪೂರ್ಣಚಂದ್ರ ತೇಜಸ್ವಿಯವರು ನೀಡುವ ವಿವರಣೆಯಂತೂ ಚಪ್ಪರಿಸಿ ಓದುವಂತಿದೆ.

ಚರ್ಚಿನ ಗೋಪುರದ ಮೇಲಿದ್ದ ಗಂಟೆಯ ಸಂದು ಗೊಂದುಗಳಲ್ಲಿ ಸೇರಿದ್ದ ಬಾವಲಿಗಳಲ್ಲಿ ಕೆಲವನ್ನು ಹಿಡಿದು ತಂದ ಸ್ಪಲಾನಿ, ಅವುಗಳ ಮೇಲೆ ಒಂದು ಪ್ರಯೋಗವನ್ನೂ ಮಾಡಿದರು. ಅದೇನೆಂದರೆ ಬಾವಲಿಗಳ ರೆಪ್ಪೆಗಳಿಗೆ ಮೇಣ ಮೆತ್ತಿ, ಅವುಗಳು ಕಣ್ಣು ಬಿಡಲಾಗದಂತೆ ನೋಡಿಕೊಂಡರು. ತಂತಿಗಳನ್ನೂ ದಾರಗಳನ್ನೂ ಅಡ್ಡಡ್ಡ ಕಟ್ಟಿದ್ದ ಕೋಣೆಯಲ್ಲಿ ಅವುಗಳನ್ನು ಬಿಟ್ಟರು. ಏನಾಶ್ಚರ್ಯ! ಕಣ್ಣಿದ್ದ ಬಾವಲಿಗಳಂತೆಯೇ ಅವುಗಳು ಹಾರಾಡಿದವು; ಅದೂ ಕೋಣೆಯಲ್ಲಿದ್ದ ಯಾವೊಂದು ಗೋಜಲಿನಲ್ಲೂ ಸಿಲುಕದಂತೆ!

ಕಣ್ಣುಗಳ ಅಗತ್ಯವೇ ಇಲ್ಲದೆ ಈ ಸಸ್ತನಿಗಳು ಚಲಿಸಬಲ್ಲವು ಎಂದು ಸ್ಪಲಾನಿ ಷರಾ ಬರೆದರು. ಮುಂದೆ ಸ್ವಿಟ್ಸರ್ಲೆಂಡ್‌ನ ಚಾರ್ಲಸ್‌ ಜೂರ್ನೆ ಎಂಬ ವಿಜ್ಞಾನಿ, ಪಾದ್ರಿಯ ಪ್ರಯೋಗವನ್ನೇ ತುಸು ವಿಸ್ತರಿಸಿ, ಬಾವಲಿಗಳ ಕಿವಿಗಳಿಗೂ ಮೇಣ ಮೆತ್ತಿ ಬಿಟ್ಟರು. ಆಗ ಅವುಗಳು ಕುರುಡರ ರೀತಿ ಯದ್ವಾತದ್ವಾ ಹಾರಾಡಿ ಕಿಟಕಿ, ಬಾಗಿಲು, ಗೋಡೆಗಳಿಗೆಲ್ಲ ಡಿಕ್ಕಿ ಹೊಡೆಯತೊಡಗಿದವು. ಬಾವಲಿಗಳಿಗೆ ಕಿವಿಯೇ ಕಣ್ಣಿನ ರೀತಿ ಕೆಲಸ ಮಾಡುತ್ತೆ ಎಂದು ಜೂರ್ನೆ ಘೋಷಿಸಿದರು.

ನಾವು ಗೋಡೆಗೆ ಒಗೆದ ರಬ್ಬರ್‌ ಚೆಂಡು ಪುಟಿದು ವಾಪಸ್‌ ಬಂದಾಗ ಕ್ಯಾಚ್‌ ಮಾಡುವಂತೆ, ಬಾವಲಿಗಳು ಮೊದಲು ಬಾಯಿಯಿಂದ ಧ್ವನಿ ಹೊರಡಿಸಿ, ಬಳಿಕ ಪ್ರತಿಫಲಿತವಾಗಿ ಬಂದ ಶಬ್ದದ ನೆರವಿನಿಂದ ದಾರಿಯನ್ನು ಗುರುತಿಸಿಕೊಳ್ಳುತ್ತವೆ ಎಂದು ಶೋಧಿಸಿದವರು ಡೆನ್ಮಾರ್ಕ್‌ನ ಸೇವಿನ್‌ ಜೆಗ್ರಾಫ್‌. ಪುತ್ರಿ ಸುಶ್ಮಿತಾಗೆ ಕಥೆ ಹೇಳಲು ತೇಜಸ್ವಿಯವರು ನ್ಯಾಶನಲ್‌ ಜಿಯಾಗ್ರಫಿಕ್‌ ಸೇರಿದಂತೆ ಸಿಕ್ಕ ಸಿಕ್ಕಲೆಲ್ಲ ತಡಕಾಡಿ ಅಪರೂಪದ ಮಾಹಿತಿಯನ್ನು ಹೆಕ್ಕಿ ತೆಗೆದಿದ್ದರು. ಆ ವಿವರಗಳೆಲ್ಲ ‘ಏರೋಪ್ಲೇನ್‌ ಚಿಟ್ಟೆ’ ಕೃತಿಯಲ್ಲಿ ಮೂರು ಕಥೆಗಳಾಗಿವೆ.

ಬಾವಲಿಗಳ ಕುರಿತು ನಮ್ಮ ದೇಶದಲ್ಲಿ, ಅದರಲ್ಲೂ ರಾಜ್ಯದಲ್ಲಿ, ಅಧ್ಯಯನ ನಡೆಸಿದವರು ತುಂಬಾ ಕಡಿಮೆ. ಆದರೆ, ಬೆಳಗಾವಿಯ ರಾಹುಲ್‌ ಖನೋಲ್ಕರ್‌ ಹಾಗೂ ಕಾಗವಾಡದ ಇನ್ವೆಂಟಿಕೊ ಅಗ್ರಿಟೆಕ್‌ ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕ ರವಿ ಉಮದಿ ಅವರಿಗೆ ಈ ನಿಶಾಚಾರಿಗಳ ಬಗೆಗೆ ಬಲು ಆಸಕ್ತಿ. ಜಗತ್ತಿನಲ್ಲಿ ಇದುವರೆಗೆ ನಡೆದ ಸಂಶೋಧನೆಗಳ ಮಾಹಿತಿಯನ್ನೆಲ್ಲ ಗುಡ್ಡೆ ಹಾಕಿಕೊಂಡು ರಾಜ್ಯವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕಾಣಸಿಗುವ ಬಾವಲಿಗಳ ಕುರಿತು ಅಧ್ಯಯನ ನಡೆಸಿದವರು ಅವರು. ಈ ಅಪರೂಪದ ಜೀವಿಗಳ ಬೆನ್ನುಬಿದ್ದು ಹಲವು ರಾತ್ರಿಗಳನ್ನು ನಿದ್ರೆಯಿಲ್ಲದೆ ಕಳೆದವರು.

ಬಾವಲಿಗಳ ಹಾರುವ ಕೌಶಲವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಉಮದಿ, ‘ಹಾರುವಾಗ ದಾರಿಯನ್ನು ಗುರುತಿಸಲು ಅವುಗಳು ಬಾಯಿಯಿಂದ ಪ್ರತಿ ಸೆಕೆಂಡಿಗೆ ಸರಾಸರಿ ಅರವತ್ತು ಸಲ ಶ್ರವಣಾತೀತ ತರಂಗಗಳನ್ನು ಎಸೆದು ಉತ್ತರವನ್ನು ಪಡೆಯುತ್ತವೆ’ ಎನ್ನುತ್ತಾರೆ. ನಿಫಾ ವೈರಾಣುವಿನ ಸಂಬಂಧ ಇತ್ತೀಚೆಗೆ ಗುಲ್ಲು ಎದ್ದಾಗ ಈ ವೈರಾಣುವನ್ನು ಪಸರಿಸುತ್ತಿರುವ ಜೀವಿಗಳಲ್ಲಿ ಬಾವಲಿಗಳೂ ಸೇರಿವೆ ಎಂದು ಆರೋಪಿಸಲಾಯಿತು. ಪರೋಪಕಾರಿಗಳಾದ ಇವುಗಳನ್ನು ದೂಷಿಸುವುದು ತರವಲ್ಲ. ಕ್ರಿಮಿಕೀಟಗಳನ್ನು ಭಕ್ಷಿಸುವುದಲ್ಲದೆ ಪರಾಗಸ್ಪರ್ಶಕ್ಕೂ ನೆರವಾಗುವ ಇವು ನಿಜಕ್ಕೂ ರೈತನ ಮಿತ್ರನಾಗಿವೆ. ಮಣ್ಣಿನ ಫಲವತ್ತತೆ ಕಾಪಾಡಲು ಜೇಡ, ಹಲ್ಲಿ, ಕಪ್ಪೆ, ಹಾವುಗಳಂತೆ ಬಾವಲಿಗಳೂ ಬೇಕು ಎಂದು ಉಮದಿ ವಿವರಿಸುತ್ತಾರೆ.

ನಮ್ಮ ಭೀಮಗಡದಲ್ಲಿ ಕಾಣಸಿಗುವುದು ಜೀನಸ್‌ ಅಟೊಮಾಪ್ಸ್‌ ಎಂಬ ಅಪರೂಪದ ಪ್ರಭೇದದ ಬಾವಲಿ. ಅವುಗಳ ಸಂಖ್ಯೆ ಶರವೇಗದಲ್ಲಿ ಕಣ್ಮರೆಯಾಗುತ್ತಿದ್ದು, ಜೀವವಿಜ್ಞಾನಿಗಳು ಇದನ್ನು ವಿನಾಶದ ಅಂಚಿನಲ್ಲಿರುವ ಪ್ರಭೇದ ಎಂದು ಗುರುತಿಸಿದ್ದಾರೆ. ‘ಇಂಡಿಯನ್‌ ಫ್ಲೈಯಿಂಗ್‌ ಫಾಕ್ಸ್‌’ ಎಂದು ಕರೆಯಿಸಿಕೊಳ್ಳುವ ಬಾವಲಿಗಳು ನಮ್ಮಲ್ಲಿ ಸಾಮಾನ್ಯವಾಗಿವೆ. ಗೊತ್ತೆ? ಹಣ್ಣುಗಳನ್ನು ಮೃಷ್ಟಾನ್ನ ಭೋಜನದಂತೆ ಸವಿಯುವ ಆಸಾಮಿಗಳು ಇವಾಗಿವೆ.

ರಾತ್ರಿಯ ಸಹಜತೆಗೆ ಭಂಗ ತರುವಂತಹ ಬೆಳಕಿನ ಹೊಳೆ ಹರಿಸುವ ಬೆಂಗಳೂರಿನಲ್ಲೂ ಬಾವಲಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲೇ ಇದೆ. ಅದರಲ್ಲೂ ಸ್ಯಾಂಕಿ ಕೆರೆ ಅವುಗಳ ಪಾಲಿನ ಸ್ವರ್ಗವಾಗಿದ್ದು, ಅಲ್ಲಿ ಕಿಕ್ಕಿರಿದು ತುಂಬಿವೆ. ಈ ಮಹಾನಗರವೊಂದರಲ್ಲೇ 15–20 ಪ್ರಭೇದಗಳ ಬಾವಲಿಗಳಿದ್ದು, ಪರಿಸರ ಸಂರಕ್ಷಣೆಗೆ ಸದ್ದಿಲ್ಲದಂತೆ ತಮ್ಮಿಂದಾದ ನೆರವು ನೀಡುತ್ತಿವೆ. ಪರಾಗಸ್ಪರ್ಶದ ಜತೆಗೆ ತಾವು ಹಾಕುವ ಹಿಕ್ಕೆಯಿಂದ ಸಸಿಗಳು ಬೆಳೆಯಲು ಬೇಕಾದ ಪೋಷಕಾಂಶವನ್ನು ಅವುಗಳು ಒದಗಿಸುತ್ತವೆ.

ಮಾವಿನ ತೋಟಗಳ ಬೀಡು ಕೋಲಾರ ಜಿಲ್ಲೆಯಲ್ಲೂ ಈ ಸಸ್ತನಿಗಳ ಸಂಖ್ಯೆ ಹೆಚ್ಚಾಗಿದೆ. ರಾಜ್ಯದ ಹಳ್ಳಿ–ಹಳ್ಳಿಗಳ ಪಾಳುಬಿದ್ದ ಕಟ್ಟಡ, ಬಾವಿ ಇಲ್ಲವೆ ಮರಗಳಲ್ಲಿ ಇವುಗಳು ಕಂಡು ಬರುತ್ತವೆ. ವ್ಯಕ್ತಿಯೊಬ್ಬ ಕಟ್ಟಿದ ಮನೆಯಲ್ಲಿ ಮಗ, ಮೊಮ್ಮಗ, ಮರಿಮೊಮ್ಮಗ... ಹೀಗೆ ಅವನ ವಂಶದ ಮುಂದಿನ ಪೀಳಿಗೆಗಳು ವಾಸಿಸುವಂತೆ ಬಾವಲಿಗಳು ಸಹ ಹಲವು ಪೀಳಿಗೆಗಳವರೆಗೆ ಒಂದೇ ಸ್ಥಳದಲ್ಲಿ ಉಳಿಯುತ್ತವೆ. ಅವುಗಳ ಆವಾಸಸ್ಥಾನಗಳಿಗೆ ತೊಂದರೆ ಆಗದಿದ್ದರೆ ಇದ್ದ ‘ಮನೆ’ ಬಿಟ್ಟು ಬೇರೆಡೆ ಕದಲುವುದಿಲ್ಲ. ಒಂದೊಂದು ಕಾಲೊನಿಯಲ್ಲೂ (ಬಾವಲಿಗಳ ಬಿಡಾರ) ಅವುಗಳು ನೂರಾರು, ಸಾವಿರಾರು ಸಂಖ್ಯೆಯಲ್ಲಿ ಇರುತ್ತವೆ. ಕೂಡು ಕುಟುಂಬ, ಸಹಜೀವನದ ಧರ್ಮವನ್ನು ಚಾಚೂ ತಪ್ಪದಂತೆ ಪಾಲಿಸುತ್ತವೆ. ರಾತ್ರಿಯಲ್ಲಿ ಊಟಕ್ಕಾಗಿ ಹಾರಾಟ, ಹಗಲಿನಲ್ಲಿ ಸಂಪೂರ್ಣ ವಿಶ್ರಾಂತಿ. ಅವುಗಳದು ತೃಪ್ತ ಹಾಗೂ ಸರಳ ಜೀವನ ಎನ್ನುತ್ತಾರೆ ರಾಹುಲ್‌.

ಆಹಾರ ಅರಿಸಿಕೊಂಡು ಹೋದಾಗ ಮಾತ್ರ ಅದು ಪಕ್ಕಾ ಬೇಟೆಗಾರನಂತೆ. ತಾನು ಹೊರಡಿಸುವ ಶ್ರವಣಾತೀತ ತರಂಗಗಳಿಂದ ಬೇಟೆಯ ಸುಳಿವು ಸಿಕ್ಕೊಡನೆ ಕ್ಷಣಮಾತ್ರದಲ್ಲಿ ದಿಕ್ಕು ಬದಲಿಸಿ ಅದರತ್ತ ತಿರುಗುವ ಬಾವಲಿ ಲಬಕ್ಕನೆ ರೆಕ್ಕೆಯೊಳಗೆ ಅದನ್ನು ಎಳೆದುಕೊಂಡು ಗುಳುಂ ಮಾಡುತ್ತದೆ. ಇಂತಹ ಕೌಶಲದ ಬಲೆಯೊಳಗೆ ಸಿಗದಂತೆ ರಕ್ಷಿಸಿಕೊಳ್ಳುವ ಶಕ್ತಿಯನ್ನು ಪ್ರಕೃತಿ ಕೆಲವು ಕೀಟಗಳಿಗೆ ಕೊಟ್ಟಿದೆ ಎನ್ನುವುದು ತೇಜಸ್ವಿಯವರ ಬರಹದಲ್ಲಿ ಬರುವ ವಿವರಣೆ.

ಕೆಲವು ಬಗೆಯ ಸೂಕ್ಷ್ಮ ಕ್ರಿಮಿಕೀಟಗಳಿಗೆ ಮಕಮಲ್ಲಿನ ರೀತಿಯ ರೋಮಗಳ ಹೊದಿಕೆ ಇರುತ್ತದೆ. ಅವುಗಳಿಗೆ ತಾಗಿದ ಶ್ರವಣಾತೀತ ಶಬ್ದಗಳು ಪ್ರತಿಫಲಿಸುವುದೇ ಇಲ್ಲವ. ಹೀಗಾಗಿ ಶಬ್ದಗಳನ್ನು ಹೊರಡಿಸಿದ ಜೀವಿಗಳಿಗೆ ಬೇಟೆ ಇರುವುದೇ ಗೊತ್ತಾಗುವುದಿಲ್ಲ. ಇನ್ನು ಕೆಲವು ಕೀಟಗಳಿವೆ. ಈ ಬೇಟೆಗಾರ ಧ್ವನಿ ಪ್ರಸಾರವನ್ನು ಮಾಡುತ್ತಾ, ಸಂಕೇತಗಳನ್ನು ಪಡೆಯುತ್ತಾ ಬಂದೊಡನೆ ಅವುಗಳಿಗೆ ಗೊತ್ತಾಗಿ ಬಿಡುತ್ತದೆ. ತಕ್ಷಣ ಅವು ರೆಕ್ಕೆ ಮಡಚಿಕೊಂಡು ತುಪ್ಪನೆ ನೆಲಕ್ಕೆ ಬಿದ್ದುಬಿಡುತ್ತವೆ. ಬಾವಲಿಗಳು ನೆಲಕ್ಕೆ ಇಳಿಯದ ಕಾರಣ ಆ ಕೀಟಗಳು ಬಚಾವ್‌ ಆಗುತ್ತವೆ. ಬಾಯಾರಿಕೆ ಆದಾಗಲೂ ಬಾವಲಿಗಳು ಭೂಮಿಗೆ ಇಳಿಯುವುದಿಲ್ಲ. ನೀರಿನ ಮೇಲ್ಮೈಗೆ ನಾಲಿಗೆ ಚಾಚಿ ಕುಡಿದು ಹಾರುತ್ತವೆ.

ಇಂತಹ ಬಾವಲಿಗಳ ವಿಸ್ಮಯ ಲೋಕವನ್ನು ಕಣ್ತುಂಬಿಕೊಳ್ಳಬೇಕೇ? ಅವುಗಳ ಕೌತುಕದ ಜಗತ್ತಿನೊಳಗೆ ಇನ್ನಷ್ಟು ಇಣುಕಬೇಕೇ? ತೇಜಸ್ವಿಯವರ ಜನ್ಮದಿನದ ನೆಪದಲ್ಲಿ ಅವರ ಅಭಿಮಾನಿಗಳು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಸೆ. 8ರಿಂದ ಹತ್ತು ದಿನಗಳವರೆಗೆ ಆಯೋಜಿಸಿರುವ ಪ್ರದರ್ಶನದ ವೀಕ್ಷಣೆಗೆ ನೀವೊಮ್ಮೆ ಬರಲೇಬೇಕು.

***

ವಿದ್ಯಾರ್ಥಿಗಳೇ ಬನ್ನಿ...

‘ನಿಸರ್ಗ’ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಈಶ್ವರ ಪ್ರಸಾದ್‌ ತೇಜಸ್ವಿಯವರ ಅಪ್ಪಟ ಅಭಿಮಾನಿ. ಪ್ರತಿವರ್ಷ ತೇಜಸ್ವಿಯವರ ಜನ್ಮದಿನದ ನೆಪದಲ್ಲಿ ಅವರ ಆಸಕ್ತಿಯ ವಿಸ್ಮಯಕಾರಿ ವಿಷಯವೊಂದನ್ನು ಇಟ್ಟುಕೊಂಡು ಪ್ರದರ್ಶನ ಏರ್ಪಡಿಸುತ್ತಾ, ಜನರಲ್ಲಿ, ವಿಶೇಷವಾಗಿ ವಿದ್ಯಾರ್ಥಿ ಸಮುದಾಯದಲ್ಲಿ ಪರಿಸರದ ಆಸಕ್ತಿಯನ್ನು ಕೆರಳಿಸುತ್ತಾ ಬಂದಿದ್ದಾರೆ ಅವರು. ಬಿ.ಎಲ್‌. ಶಂಕರ್‌ ಅವರಿಂದ ಸಿಗುತ್ತಿರುವ ಸಹಕಾರವನ್ನು ವಿನೀತರಾಗಿ ನೆನೆಯುತ್ತಾರೆ.

ತಿಪ್ಪಗೊಂಡನಹಳ್ಳಿ ಕೆರೆಯ ದಂಡೆಯಲ್ಲಿ ಸ್ಫೂರ್ತಿವನ ನಿರ್ಮಾಣ ಮಾಡಿ, ಆರು ಸಾವಿರ ಗಿಡಗಳನ್ನೂ ಬೆಳೆಸಿದ್ದಾರೆ ಪ್ರಸಾದ್‌. ‘ಪ್ರದರ್ಶನಕ್ಕೆ ಬಂದ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡುವ ಜತೆಗೆ ಪ್ರಮಾಣಪತ್ರವನ್ನೂ ಕೊಡುತ್ತೇವೆ ಎಂದು ತಿಳಿಸಿದರೂ ಬಹುತೇಕ ಕಾಲೇಜುಗಳಿಂದ ನೀರಸ ಪ್ರತಿಕ್ರಿಯೆ ಸಿಕ್ಕಿದೆ’ ಎಂಬ ವಿಷಾದದ ಭಾವ ಅವರಲ್ಲಿದೆ.

ಪ್ರದರ್ಶನದ ಕುರಿತು ಮಾಹಿತಿಗೆ: 94480 77019

ಬರಹ ಇಷ್ಟವಾಯಿತೆ?

 • 26

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !