ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಕಿಟೆಕ್ಟ್ ಗೀಜಗ

Last Updated 23 ಅಕ್ಟೋಬರ್ 2018, 1:38 IST
ಅಕ್ಷರ ಗಾತ್ರ

ತುಮಕೂರು ಸಮೀಪದ ಬೆಳ್ಳಾವಿ ಬಳಿಯ ಹೇಮಾವತಿ ಕಾಲುವೆಯಲ್ಲಿ ಭರಪೂರ ನೀರು ಹರಿಯುತ್ತಿತ್ತು. ವಿದ್ಯಾರ್ಥಿಮಿತ್ರ ಹೊಯ್ಸಳಕಟ್ಟೆ ಮಂಜುನಾಥನೊಂದಿಗೆ ಕಾಲುವೆಗುಂಟ ಹೊರಟಿದ್ದೆ. ಕಾಲುವೆ ಬದಿಯಲ್ಲಿದ್ದ ಮರದ ಮೇಲೆ ಗೀಜಗ ಹಕ್ಕಿಯ ಚಿಲಿಪಿಲಿ ಕಲರವ ಕೇಳಿಸಿತು. ‌

ತುಸು ದೃಷ್ಟಿ ಕಿರಿದು ಮಾಡಿ ನೋಡಿದೆ. ಮರದ ಮೇಲೆ ನೇತಾಡುತ್ತಿರುವ ಗೀಜನಗೂಡು, ಅದರೊಳಗೆ ಮರಿ ಹಕ್ಕಿಯೊಂದು ಕಂಡಿತು. ತುಸು ಕಿವಿ ನೆಟ್ಟಾಗಿಸಿಕೊಂಡೆ. ಗಮನವಿಟ್ಟು ಕೇಳಿದೆ. ಹತ್ತಾರು ಗೀಜಕ ಹಕ್ಕಿಗಳ ಚಿಲಿಪಿಲಿ ಶಬ್ದ ಕಿವಿಗೆ ಬಿತ್ತು. ದೃಷ್ಟಿ ಹೊರಳಿಸಿದೆ. ಕಾಲುವೆ ಪಕ್ಕದಲ್ಲಿರುವ ಮರಗಳಲ್ಲಿ ಗೀಜಗ ಹಕ್ಕಿ ಗೂಡುಗಳು ನೇತಾಡುತ್ತಿದ್ದವು.

ಹಾಗೆ ಹಿಂಬಾಲಿಸುತ್ತಾ ಹೊರಟೆ. ಅಲ್ಲೊಂದು ಗೀಜಗ ಹಕ್ಕಿ ಗೂಡನ್ನು ನೇಯುತ್ತಿತ್ತು. ಬಹುಶಃ ಅದು ಕೊನೆ ಹಂತ ತಲುಪಿದಂತೆ ಕಾಣುತ್ತಿತ್ತು. ಏಕೆಂದರೆ ಅದು ತೂಗುತ್ತಿದ್ದ ಹುಲ್ಲಿನ ಎಳೆಯನ್ನು ಕೊಕ್ಕಲ್ಲಿ ಹಿಡಿದು ಎಳೆಯುತ್ತಿತ್ತು. ಗೂಡು ಭದ್ರವಾಗಿದೆಯೋ ಇಲ್ಲವೋ ಎಂದು ಪರಿಶೀಲಿಸುವಂತೆ ಆ ಪ್ರಕ್ರಿಯೆ ಕಾಣುತ್ತಿತ್ತು.

ಇದನ್ನೆಲ್ಲ ನೋಡಿದಾಗ ‘ಗೀಜಗ ಹಕ್ಕಿಯನ್ನು ಪ್ರಾಕೃತಿಕ ವಾಸ್ತುಶಿಲ್ಪಿ, ನೇಯ್ಗೆ ಹಕ್ಕಿ’ ಎಂದು ಕರೆಯುತ್ತಿದ್ದದು ಈ ಗುಣದಿಂದಾಗಿಯೇ ಇರಬೇಕು ಎನ್ನಿಸಿತು. ಅಷ್ಟು ಸೊಗಸಾಗಿ ತೂಗಾಡುವ ಗೂಡನ್ನು ನೇಯ್ದಿತ್ತು. ಆ ಹಕ್ಕಿ.

ಗೂಡು ಹೆಣೆಯುವ ಕೌಶಲ

ಗೀಜಗ ಗೂಡು ಕಟ್ಟುವುದನ್ನು ನೋಡಿದ್ದೇನೆ. ಅದರ ಸೊಗಸೇ ಸೊಗಸು. ಮೊದಲು ಗೂಡುಕಟ್ಟಲು ಹಸಿ ಹುಲ್ಲು, ಒಣ ಹುಲ್ಲು ತಗೊಂಡು ಬರುತ್ತದೆ. ತನ್ನ ಶಂಖುವಿನಾಕೃತಿಯ ಕೊಕ್ಕುಗಳಿಂದ ಮತ್ತು ಕಾಲುಗಳನ್ನೇ ನೇಯ್ಗೆಗೆಗೆ ಬಳಸಿಕೊಳ್ಳುತ್ತದೆ. ಮೊದಲು ಕೊಂಬೆಗೆ ತೂಗು ಹಾಕುವ ಭಾಗದಲ್ಲಿ ಹುಲ್ಲನ್ನು ಪೇರಿಸಿ ಹೆಣೆಯುತ್ತ ಮಧ್ಯಭಾಗಕ್ಕೆ ಬಂದ ಹಾಗೆ ಪಾತ್ರೆಯಂತೆ ಅಗಲಗೊಳಿಸಿ ಮತ್ತೆ ಕೆಳಭಾಗಕ್ಕೆ ಬರುತ್ತಿರುವಂತೆ, ಆಕಾರವನ್ನು ಕೊಳವೆಯಂತೆ ವಿನ್ಯಾಸಗೊಳಿಸುತ್ತದೆ. ಮಧ್ಯಭಾಗದಲ್ಲಿ ಮೊಟ್ಟೆಯಿಡಲು ಬಟ್ಟಲು ಆಕಾರದಲ್ಲಿ ಹಸಿ ಜೇಡಿಮಣ್ಣನ್ನು ಲೇಪಿಸುವ ಇದು ತನ್ನ ಸುಖ ಸಂಸಾರಕ್ಕೆ ಬೇಕಾಗುವ ಗೃಹ ಕೌಶಲಗಳನ್ನು ಹೊಂದಿದೆ. ಇದು ನಿಜಕ್ಕೂ ಜಾಣಮರಿ ಹಕ್ಕಿಯೇ.

ಅಂದ ಹಾಗೆ ಗಾಳಿಗೆ ತೂಗುಯ್ಯಾಲೆಯಂತೆ ಹೊಯ್ದಾಡುವ ಗೂಡಿನೊಳಗೆ ಹಾವುಗಳು, ರಣಹದ್ದು
ಗಳು ಸುಲಭವಾಗಿ ಪ್ರವೇಶಿಸದಂತೆ ರಕ್ಷಣಾತ್ಮಕವಾಗಿ ಗೂಡು ಕಟ್ಟುವ ಈ ಹಕ್ಕಿಯ ವಾಸ್ತು ಕೌಶಲ ಅದ್ಭುತವಾಗಿದೆ.

ಗಂಡು ಗೂಡು ಕಟ್ಟುತ್ತದೆ

ಹೆಣ್ಣು ಗೀಜಗದಲ್ಲಿ ಪ್ರೇಮ ನಿವೇದನೆ ಮಾಡಿಕೊಳ್ಳಲು, ಗಂಡು ಗೀಜಗ ತನ್ನಲ್ಲಿರುವ ಎಲ್ಲ ಶ್ರಮ ಹಾಕಿ ಗೂಡು ಕಟ್ಟುತ್ತದೆ. ಕಟ್ಟಿದ ಕೂಡಿಗೆ ತನ್ನ ಪ್ರಿಯತಮೆಯನ್ನು ಆಹ್ವಾನಿಸುತ್ತದೆ. ಆ ಗೂಡನ್ನು ತೋರಿಸಿದಾಗ ಪ್ರಿಯತಮೆ ತಲೆದೂಗಿದರೆ ಗೂಡೊಳಗೆ ಪ್ರವೇಶ. ಒಪ್ಪದಿದ್ದರೆ, ಆ ಗಂಡು ಮತ್ತೊಂದು ಗೂಡು ನಿರ್ಮಿಸಿ ಬೇರೊಂದು ಸಂಗಾತಿಯನ್ನು ಅರಸಿ ಹೊರಡುತ್ತದೆ. ಹೇಗಾದರೂ ಮಾಡಿ ಪ್ರಿಯತಮೆ ಒಲಿಸಿಕೊಂಡು ಬಂದು, ಗೂಡಿನಲ್ಲಿ ಸಂಸಾರ ಮಾಡುತ್ತದೆ. ಇದು ಗೀಜಗಗಳ ಪ್ರೀತಿ– ಪ್ರೇಮ ಪ್ರಣಯ’ದ ಕಥೆ. ಆದರೆ, ಈ ಪ್ರಕ್ರಿಯೆ ಪೂರ್ಣ ನೋಡಲು ಸಿಗಲಿಲ್ಲ. ಈ ಕಥೆಯಷ್ಟೇ, ಮರಿಗಳನ್ನು ರಕ್ಷಿಸಿಕೊಳ್ಳುವ ಈ ಹಕ್ಕಿಯ ಜಾಣತನ ಮೆಚ್ಚಬೇಕು. ಅದರಲ್ಲೂ ಹೆಣ್ಣು ಗೀಜಗ ಮೊಟ್ಟೆ ಇಟ್ಟು ಅವುಗಳಿಗೆ ಕಾವು ಕೊಡುವುದು, ಆಗುಂತಕರಿಂದ ಮೊಟ್ಟೆಗಳನ್ನು ರಕ್ಷಿಸುವ ವಿಧಾನವಂತೂ ಅದ್ಭುತ. ಇಂಥ ಗೀಜಗನ ಜೀವನ ಪ್ರಕ್ರಿಯೆ ಹಾಗೂ ಆಗುಂತಕರಿಂದ ಮೊಟ್ಟೆಗಳನ್ನು ರಕ್ಷಿಸುವ ಹೆಣ್ಣು ಗೀಜದ ಕಾರ್ಯ ವೈಖರಿಯನ್ನು ಪರಿಚಯಿಸಿದವರು ಖ್ಯಾತ ಪಕ್ಷಿತಜ್ಞ ಸಲೀಂ ಅಲಿ ಅವರು.

ಹೊತ್ತೇರುತ್ತಿರುವ ಹೊತ್ತಿನಲ್ಲಿ ಹೀಗೆ ಗೀಜಗನ ನೈಪುಣ್ಯವನ್ನು ಮೆಲುಕುಹಾಕುತ್ತಿರುವಾಗಲೇ ಎದುರಿದ್ದ ಮರದಲ್ಲಿನ ಎಲ್ಲ ಹಕ್ಕಿಗಳು ಚಿಲಿಪಿಲಿಗುಟ್ಟತ್ತ ಅಕ್ಕಪಕ್ಕದ ಮರಗಳತ್ತ ಗಾಬರಿಯಿಂದ ಹಾರಿಹೋದವು. ಏಕೆಂದರೆ, ಅಲ್ಲೇ ಖಾಲಿಯಾದ ಮರದಲ್ಲಿ ಹದ್ದು ಹೂಂಕರಿಸುತ್ತಿತ್ತು. ಆ ಅರ್ಭಟಕ್ಕೆ ಗೀಜಗಗಳು ಬೆದರಿದ್ದವು. ಆ ಹದ್ದು ಬಂದು ನಿರ್ಮಾಣ ಹಂತದಲ್ಲಿದ್ದ ಗೂಡಿನೊಳಗೆ ಇಣುಕಿ ನೋಡಿತು. ಅದೃಷ್ಟವಷಾತ್ ಪುಟ್ಟ ಮರಿಗಳು ಕಾಣಲಿಲ್ಲ ಎನ್ನಿಸುತ್ತದೆ. ಹಾಗಾಗಿ, ಅದು ಮತ್ತೆತ್ತಲೋ ಹಾರಿ ಹೋಯಿತು.

ಅದು ಹಾರಿಹೋಗಿದ್ದ ಕಂಡ ಗೀಜಗ ಹಕ್ಕಿಗಳು, ಚಿಲಿಪಿಲಿಗುಟ್ಟುತ್ತಾ ಮತ್ತೆ ತಮ್ಮ ಗೂಡಿಗೆ ಬಂದು ಇಣುಕಿ ನೋಡಿದವು. ‘ಸದ್ಯ ಹದ್ದು ಯಾವ ಮೊಟ್ಟೆಗಳನ್ನೂ ಮುಟ್ಟಿಲ್ಲ’ ಎಂದುಕೊಂಡು ಮನಸು ಹಗುರ ಮಾಡಿಕೊಂಡವು. ಮರಿ ಹಕ್ಕಿಗಳ ಜತೆ ಮುದ್ದಾಟಕ್ಕೆ ಇಳಿದವು.

ಗೀಜಗನ ಬಗ್ಗೆ ಒಂದಿಷ್ಟು..

ಗೀಜಗ ಹಕ್ಕಿಗೆ ಹಲವು ಹೆಸರುಗಳಿವೆ. ಪೆಸ್ಸಾರಿಡೇ ಕುಟುಂಬದ, ಫ್ಲೋಸಿಯಸ್ ವೈಜ್ಞಾನಿಕ ನಾಮದ ಈ ಹಕ್ಕಿ ಭಾರತದಲ್ಲಿ ಮೂರು ಪ್ರಭೇಧಗಳಲ್ಲಿ ಕಾಣಬರುತ್ತದೆ. ಫ್ಲೋಸಿಯಸ್ ಫಿಲಿಪಿನೆನ್ಸಿಸ್, ಫ್ಲೋ ಮನ್ಯಾರ್ ಮತ್ತು ಫ್ಲೋ ಬೆಂಗಾಲೆನ್ಸಿಸ್. ಈ ಮೂರು ಪ್ರಭೇದಗಳಲ್ಲಿ ಫ್ಲೋಸಿಯಸ್ ಫಿಲಿಪಿನೆನ್ಸಿಸ್ ನಮ್ಮಲ್ಲಿ ಕಂಡುಬರುವ ಸಾಮಾನ್ಯ ಗೀಜಗ.

ಭಾರತ, ಶ್ರೀಲಂಕಾ, ಬರ್ಮಾ ಹಾಗೂ ಪಾಕಿಸ್ತಾನಗಳ ಬಯಲು ಪ್ರದೇಶಗಳಲ್ಲಿ ಕಂಡುಬರುವ ಗೀಜಗ ಬಯಲು ಪ್ರದೇಶಗಳಲ್ಲಿ ಕೃಇತನ್ನ ಸಹಸದಸ್ಯರೊಂದಿಗೆ ಜೀವಿಸುವ ಸಮೂಹ ಜೀವಿ. ಒಂದು ಮರದಲ್ಲಿ ತನ್ನ ಜೊತೆ ಹತ್ತಾರು ಕುಟುಂಬಗಳೊಂದಿಗೆ ವಿಶಿಷ್ಟ ಶೈಲಿಯಲ್ಲಿ ಗೂಡು ಕಟ್ಟುವ ಹಕ್ಕಿ ಮರವನ್ನೇ ಉಯ್ಯಾಲೆ ಮಾಡಿಕೊಳ್ಳುತ್ತದೆ. ಈ ಚಾಣಾಕ್ಷತನಕ್ಕೆ ಪ್ರಕೃತಿಯೇ ತಲೆದೂಗುತ್ತದೆ. ಮೇ ತಿಂಗಳಿಂದ ಸೆಪ್ಟಂಬರ್-ಅಕ್ಟೋಬರ್ ಮಧ್ಯಭಾಗದವರೆಗೂ ಗೂಡು ಕಟ್ಟುವ ಗೀಜಗ ಕೃಷಿ ಭೂಮಿಯಲ್ಲಿ ಬೆಳೆದಿರುವ ಭತ್ತ ರಾಗಿ ಕಾಳನ್ನು ಆಹಾರವನ್ನಾಗಿ ಆಯ್ದುಕೊಳ್ಳುತ್ತದೆ. ಹಾಗೆಯೇ ಕೆಲವೊಮ್ಮೆ ಕೀಟಗಳನ್ನೂ ಸಹ ಭಕ್ಷಿಸುತ್ತದೆ.

ಚಿತ್ರಗಳು : ಲೇಖಕರವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT