ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಣದ ಸೊಬಗಿನ ಹಿಂದಿನ ಕೈಗಳ ಕಾಣಾ!

Last Updated 26 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಶೈಲಾ ಪಟಗಾರ ಮತ್ತು ವಿನೋದ ಮರಾಟಿ. ಈ ಹೆಸರುಗಳನ್ನು ನೀವು ಕೇಳದೇ ಇರಬಹುದು. ಆದರೆ ಒಂದೆರಡು ವರ್ಷಗಳಲ್ಲಿ ಯಾಣಕ್ಕೆ ಪ್ರವಾಸ ಕೈಗೊಂಡಿದ್ದರೆ ಖಾಕಿ ಸಮವಸ್ತ್ರದಲ್ಲಿರುವ ಈ ಇಬ್ಬರು ಮಹಿಳೆಯರನ್ನು ಮಾತ್ರ ನೋಡದೆ ಇದ್ದಿರಲಾರಿರಿ.

ಏಕೆಂದರೆ, ಈ ಮಹಿಳೆಯರು ಯಾಣದ ಪ್ರವೇಶದ್ವಾರದಿಂದ ಅವಳಿ ಶಿಲೆಗಳವರೆಗೆ ಕಾಲುಹಾದಿಗುಂಟ ಬಿದ್ದಿರುವ ನೀರಿನ ಬಾಟಲ್, ತಿಂದು ಮುದುರಿದ ಕುರಕಲು ತಿಂಡಿಯಂತಹ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕುತ್ತಾ, ಸ್ವಚ್ಛಗೊಳಿಸುತ್ತಿರುತ್ತಾರೆ. ಕೈಯಲ್ಲೊಂದು ಕಬ್ಬಿಣದ ಕೊಕ್ಕೆ ಹಿಡಿದು, ಬೆಳಗ್ಗಿನಿಂದ ಸಂಜೆಯವರೆಗೂ ಅತ್ತಿಂದಿತ್ತ ಇತ್ತಿಂದತ್ತ ಅಡ್ಡಾಡುತ್ತಾ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ.

ಕೆಲಸ ಸರಳವಾಗಿ ಕಾಣಬಹುದು. ಆದರೆ ನಮ್ಮ ಸುತ್ತಲಿನ ನೂರಾರು ಪ್ರವಾಸಿ ತಾಣಗಳ ಪೈಕಿ ಇಂದು ಪ್ಲಾಸ್ಟಿಕ್ ಹಾವಳಿ ತೀರಾ ಕಡಿಮೆಯಿರುವುದು ಕತಗಾಲ ಅರಣ್ಯ ವಲಯಕ್ಕೆ ಸೇರುವ ಯಾಣದಲ್ಲಿ. ಅದಕ್ಕೆ ಕಾರಣ ಈ ಹೆಣ್ಮಕ್ಕಳ ಶ್ರದ್ಧೆ ಮತ್ತು ಬದ್ಧತೆ.

ಶೈಲಾ ಮತ್ತು ವಿನೋದ ಇಬ್ಬರೂ ಯಾಣದ ಸ್ಥಳೀಯರು. ಗ್ರಾಮ ಅರಣ್ಯ ಸಮಿತಿಯಿಂದ ಇವರು ನೇಮಕಗೊಂಡಿರುವುದೇ ಯಾಣವನ್ನು ಪ್ಲಾಸ್ಟಿಕ್‍ಮುಕ್ತವನ್ನಾಗಿ ಇರಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿರುವ ಯಾಣಕ್ಕೆ ಪ್ರತಿವರ್ಷ ಏನಿಲ್ಲವೆಂದರೂ ಒಂದು ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಯಾಣದ ನಿತ್ಯಹರಿದ್ವರ್ಣ ಕಾಡು, ಕಲ್ಮಶರಹಿತ ಗಾಳಿ, ಅಲ್ಲಲ್ಲಿ ಜಿನುಗುವ ನೀರಿನ ಒರತೆ, ಕಪ್ಪುಮಣ್ಣಿನ ಮೇಲೆ ಒಪ್ಪವಾಗಿ ಹರಡಿಕೊಂಡಿರುವ ಮೆತ್ತಗಿನ ಹುಲ್ಲು, ಎಂತಹ ಒತ್ತಡದ ಮನಸ್ಸುಗಳನ್ನೂ ಕ್ಷಣಕಾಲ ನಿರಾಳವಾಗಿಸಬಲ್ಲ ತಂಪು ತಂಪು ವಾತಾವರಣ, ಎಲ್ಲಕ್ಕೂ ಕಿರೀಟವಿಟ್ಟಂತೆ ಆಕಾಶದತ್ತ ಚಾಚಿಕೊಂಡು ನೋಡುಗರನ್ನು ನಿಬ್ಬೆರಗಾಗಿಸುವಂತೆ ನಿಂತಿರುವ ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರಗಳೆಂಬ ಕಡುಕಪ್ಪು ಅವಳಿ ಶಿಲೆಗಳು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇಷ್ಟು ಖುಷಿಯಿಂದ ಬರುವ ಪ್ರವಾಸಿಗರಿಗೆ ಇಂತಹ ರಮಣೀಯ ಪರಿಸರಕ್ಕೆ ಧಕ್ಕೆಯಾಗುವಂತಹ ತ್ಯಾಜ್ಯಗಳನ್ನೆಲ್ಲ ಎಸೆದು ಹೋಗುವ ಮನಸ್ಸಾದರೂ ಹೇಗೆ ಬರುತ್ತದೆ ಎಂಬುದೇ ಅಚ್ಚರಿಯ ಪ್ರಶ್ನೆ.

‘ದಿನಕ್ಕೆ ಕನಿಷ್ಠ ಐದು ಕೆ.ಜಿ. ಪ್ಲಾಸ್ಟಿಕ್ ಸಂಗ್ರಹವಾಗುತ್ತದೆ. ವಾರಾಂತ್ಯಗಳಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗಿರುವುದರಿಂದ ಈ ಪ್ರಮಾಣ ಇಮ್ಮಡಿಯಾಗುವುದೂ ಇದೆ’ ಎನ್ನುತ್ತಾರೆ ಶೈಲಾ ಪಟಗಾರ. ‘ಪ್ಲಾಸ್ಟಿಕ್ ಎಸೀಬೇಡಿ ಅಂತ ಕಂಡವರನ್ನೆಲ್ಲ ಬೇಡಿಕೊಳ್ಳುತ್ತೇವೆ. ಆದರೆ ಕಿವಿಗೆ ಹಾಕಿಕೊಳ್ಳುವವರು ಕಡಿಮೆ. ಬಿದ್ದ ಪ್ಲಾಸ್ಟಿಕ್ ಹೆಕ್ಕಿ ಮುಂದಕ್ಕೆ ಹೋಗುತ್ತಿದ್ದ ಹಾಗೆ ಅಲ್ಲೇ ಮತ್ತೆ ಕಸ ಎಸೆಯುತ್ತಾರೆ. ಅಷ್ಟೇ ಅಲ್ಲ, ಅಲ್ಲೊಂದು ಪ್ಲಾಸ್ಟಿಕ್ ಉಳಿದುಕೊಂಡಿದೆ ನೋಡಿ, ಹೆಕ್ಕಿಕೊಳ್ಳಿ ಎಂದು ನಮಗೇ ತಿಳಿ ಹೇಳುವವರೂ ಇದ್ದಾರೆ’ ಎಂದು ನೆನಪಿಸಿಕೊಳ್ಳುತ್ತಾರೆ ವಿನೋದ.

ಯಾಣದ ಶಿಲೆಗಳತ್ತ ಸಾಗುವ ಹಾದಿಯುದ್ದಕ್ಕೂ ಸ್ವಚ್ಛತೆ ಕಾಪಾಡುವಂತೆ ಪ್ರವಾಸಿಗರನ್ನು ಕೋರುವ ಹತ್ತಾರು ಫಲಕಗಳನ್ನು ಅರಣ್ಯ ಇಲಾಖೆ ಸ್ಥಾಪಿಸಿದೆ. ಹೆಜ್ಜೆಗೊಂದರಂತೆ ಕಸದ ಬುಟ್ಟಿಗಳನ್ನು ಇಟ್ಟಿದೆ. ಆದರೆ ಅವುಗಳತ್ತ ಗಮನ ಕೊಡುವವರು ಮಾತ್ರ ವಿರಳ.

2017ರ ಆರಂಭದಲ್ಲಿ ನೇಮಕಗೊಂಡ ಶೈಲಾ-ವಿನೋದ ಇಬ್ಬರೂ ದಿನಕ್ಕೆ ಹತ್ತು-ಹದಿನೈದು ಕಿಲೋಮೀಟರ್ ಓಡಾಡುತ್ತಲೇ ಈವರೆಗೆ ಮೂರು ಟನ್ ಆದರೂ ಪ್ಲಾಸ್ಟಿಕ್‍ ಸಂಗ್ರಹಿಸಿರಬಹುದು. ಭೂಮಿಗೆ ಸೇರಬಹುದಾಗಿದ್ದ ಇಷ್ಟು ದೊಡ್ಡ ಪ್ರಮಾಣದ ಪ್ಲಾಸ್ಟಿಕ್ ಅನ್ನು ಈ ಹೆಣ್ಮಕ್ಕಳು ತಡೆಹಿಡಿದಿದ್ದಾರೆ ಎಂಬುದೇ ಹೆಮ್ಮೆಯ ಸಂಗತಿ. ಇವರು ಸಂಗ್ರಹಿಸಿದ ಕಸವನ್ನು ಪ್ರತಿ ವಾರಾಂತ್ಯದಲ್ಲಿ ಕುಮಟಾ ನಗರಸಭೆಯ ವಾಹನಗಳು ಕೊಂಡೊಯ್ದು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತವೆ.

ಅರಿವು ಮೂಡಿಸುವ ಕೆಲಸವಾಗಲಿ

‘ಈ ಮಹಿಳೆಯರಿಗೆ ಗ್ರಾಮ ಅರಣ್ಯ ಸಮಿತಿ ಪುಟ್ಟ ಸಂಭಾವನೆ ಕೊಡುತ್ತದೆ. ಆದರೆ ಇವರ ಕೆಲಸ, ಶ್ರದ್ಧೆ, ಬದ್ಧತೆ ಮತ್ತು ನಿರಂತರತೆಯ ಎದುರು ಆ ಸಂಭಾವನೆ ಏನೇನೂ ಅಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿಯೊಬ್ಬರು.

‘ಆದರೆ ಪ್ಲಾಸ್ಟಿಕ್ ಹೆಕ್ಕುವ ಜತೆಗೆ, ಪ್ಲಾಸ್ಟಿಕ್ ಅಥವಾ ತ್ಯಾಜ್ಯ ಎಸೆಯದಂತೆ ಪ್ರವಾಸಿಗರಿಗೆ ತಿಳಿ ಹೇಳುವ ಕೆಲಸವನ್ನೂ ಇವರು ಮಾಡಬೇಕು. ನಮ್ಮ ಒಂದೊಂದು ಪ್ರವಾಸಿ ತಾಣಗಳಲ್ಲೂ ಇಂತಹ ಯೋಜನೆ ಜಾರಿಗೆ ಬಂದರೆ ಅದರ ಒಟ್ಟಾರೆ ಪರಿಣಾಮ ನಿಜಕ್ಕೂ ತುಂಬ ವಿಭಿನ್ನವಾಗಿರಬಹುದು’ ಎನ್ನುತ್ತಾರೆ ಅವರು.

‘ವಾಸ್ತವವಾಗಿ ನಾವು ಪ್ರಕೃತಿಗಾಗಿ ಹೊಸದೇನನ್ನೂ ಮಾಡಬೇಕಿಲ್ಲ. ಅದು ಸಹಜವಾಗಿ ತನ್ನ ಪಾಡಿಗೆ ತಾನು ಇರಲು ಅವಕಾಶ ಮಾಡಿಕೊಟ್ಟರೆ ಸಾಕು. ಆದರೆ ಪ್ರವಾಸಿಗರಿಗೆ ಈ ವಿಷಯ ಅರ್ಥವೇ ಆಗುವುದಿಲ್ಲ. ಈ ಇಬ್ಬರು ಮಹಿಳೆಯರ ನಿಸ್ವಾರ್ಥ ಸೇವೆ ಖಂಡಿತ ಪ್ರಶಂಸಾರ್ಹ’ ಎನ್ನುತ್ತಾರೆ ಯಾದಗಿರಿ ಜಿಲ್ಲೆಯ ಮಂಜಲಾಪುರದಿಂದ ಬಂದ ಪ್ರವಾಸಿ ಪರಶುರಾಮ ಐಕೂರು.

ಯಾಣದಂತಹ ರಮಣೀಯ ತಾಣಗಳು ಅಂದಗೆಡಿಸಿಕೊಳ್ಳುತ್ತಿ ರುವುದು ವಿದ್ಯಾವಂತ ಮಂದಿಯಿಂದಲೇ ಎಂಬುದು ಗುಬ್ಬಿ ತಾಲ್ಲೂಕಿನ ಕಡಬದ ಪ್ರವಾಸಿ ಪಿ. ಕವಿತ ಅವರ ಅಭಿಮತ. ‘ನಿರ್ದಿಷ್ಟವಾಗಿ ವಾರಾಂತ್ಯಗಳಲ್ಲಿ ಇಂತಹ ಪ್ರದೇಶಗಳಿಗೆ ಭೇಟಿ ನೀಡುವುದು ವಿದ್ಯಾವಂತ ಉದ್ಯೋಗಸ್ಥ ಮಂದಿಯೇ. ಅವರು ತಮ್ಮ ಕನಿಷ್ಟ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳದಿರುವುದು ಮಾತ್ರ ವಿಚಿತ್ರ. ಬರೀ ಕಾನೂನು-ನಿಯಮಗಳಿಂದ ಏನು ತಾನೇ ಸಾಧಿಸಲು ಸಾಧ್ಯ? ಬದಲಾಗಬೇಕಿರುವುದು ಜನರ ಮನಸ್ಥಿತಿ’ ಎನ್ನುತ್ತಾರೆ ಅವರು.

ಪ್ಲಾಸ್ಟಿಕ್ ತ್ಯಾಜ್ಯ ವಿಷಯವಾಗಿ ರಾಜ್ಯ ಮತ್ತು ದೇಶದಲ್ಲಿರುವ ನೂರಾರು ಪ್ರಸಿದ್ಧ ಪ್ರವಾಸಿ ಹಾಗೂ ಚಾರಣ ತಾಣಗಳು ಎಚ್ಚೆತ್ತು ಕೊಳ್ಳು
ವುದು ಇಂದಿನ ಅನಿವಾರ್ಯತೆ. ಹೊಸದೇನನ್ನು ಮಾಡ ಲಾಗದಿದ್ದರೂ ಅರಣ್ಯ ಇಲಾಖೆ ಪೋಷಿಸಿರುವ ಯಾಣದ ಸಿದ್ಧ ಮಾದರಿ
ಯೊಂದನ್ನು ಅಳವಡಿಸಿಕೊಳ್ಳುವುದು ಅಂತಹ ಕಷ್ಟವೇನೂ ಆಗಲಾರದು.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT