ಗುರುವಾರ , ಫೆಬ್ರವರಿ 25, 2021
19 °C

ಧುಮ್ಮಿಕ್ಕುವ ಜಲಪಾತ ಜೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶ್ವವಿಖ್ಯಾತ ಜೋಗವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದೆ. ಪ್ರತಿ ಸೆಕೆಂಡಿಗೆ 34 ಲಕ್ಷ ಟನ್‌ ನೀರು ಬೀಳುತ್ತದೆ. ದೇಶದಲ್ಲಿಯೇ ದೊಡ್ಡ ಪ್ರಮಾಣದ ಜಲವಿದ್ಯುತ್‌ ಪೂರೈಸುವ ಪ್ರದೇಶವೂ ಇದಾಗಿದೆ. ಜೀವನದಲ್ಲಿ ಒಮ್ಮೆಯಾದರೂ ನೋಡು ಜೋಗದ ಗುಂಡಿ ಎಂಬ ಕವಿ ಮಾತೊಂದಿದೆ. ಇಂಥ ಸುಂದರ ಜೋಗದ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯೋಣ. 

* ನಾಲ್ಕು ಜಲಪಾತಗಳೂ ಸೇರಿ ಒಂದು ಜಲಪಾತವಾಗಿ ರೂಪುಗೊಂಡಿದೆ. ರಾಜ, ರಾಣಿ, ರೋರೆರ್‌, ರಾಕೆಟ್‌. ಮಳೆಗಾಲದಲ್ಲಿ ತುಂಬಿ ಹರಿಯುವ ಜೋಗವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ನಿತ್ಯ ಭೇಟಿ ನೀಡುತ್ತಾರೆ. 

* ಶರಾವತಿ ನದಿಯೇ ಜೋಗ ಜಲಪಾತಕ್ಕೆ ಮೂಲ. 929 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ನಯಾಗರ ಜಲಪಾತದ ನೀರಿನ ಮೊತ್ತ ಜೋಗದ್ದಕ್ಕಿಂತ ಅಧಿಕವಾಗಿದ್ದರೂ, ಅದರ ಎತ್ತರ ಜೋಗದಷ್ಟು ಇಲ್ಲ. 

* ನಾಲ್ಕು ಪ್ರತ್ಯೇಕ ಬಿರುಕುಗಳಿಂದ ನದಿ ರಭಸದಿಂದ ಬೀಳುತ್ತದೆ. ಅದು ಧುಮುಕುವ ಠೀವಿ ಮನಮೋಹಕವಾದ್ದು. ಜಲಪಾತದ ನಾಲ್ಕು ಕವಲುಗಳ ಪೈಕಿ ರಾಜಾ ಸುಮಾರು 829 ಅಡಿ ಆಳಕ್ಕೆ ಧುಮುಕುತ್ತದೆ. ರಾಜಾ ಬೀಳುತ್ತಿರುವಂತೆಯೇ ಸ್ವಲ್ಪ ಕೆಳಗೆ, ಬಂಡೆಯ ಬಿರುಕಿನಿಂದ ಹರಿದು ಬೀಳುವ ರೋರರ್ ಜಲಪಾತವನ್ನು ಅಪ್ಪಿಕೊಂಡು, ಅದರೊಂದಿಗೆ ಕೆಳಗೆ ಬೀಳುತ್ತದೆ. 

* ಮೂರನೇಯ ಜಲಪಾತ ರಾಕೆಟ್ ಬಂಡೆಯ ಮೇಲಿನಿಂದ ಹಲವು ಧಾರೆಗಳಲ್ಲಿ ಚಿಮ್ಮಿ ತಳಕ್ಕೆ ಕುಪ್ಪಳಿಸುತ್ತದೆ. ರಾಣಿ ಜಲಪಾತ (ಲೇಡಿ ಬ್ಲಾಂಚೆ) ಬೀಳುವ ರಭಸದಿಂದೇಳುವ ನೊರೆಯಿಂದ ಸೊಗಸುಗಾತಿಯಂತೆ ಪ್ರಪಾತಕ್ಕೆ ಇಳಿಯುತ್ತದೆ.

* ಜಲಪಾತದ ಬಂಡೆಯ ಅಂಚುಗಳಲ್ಲಿರುವ ಪೊಟರೆಗಳಲ್ಲಿ ಕಾಡು ಪಾರಿವಾಳಗಳು ಮನೆ ಮಾಡಿಕೊಂಡು ಪ್ರಪಾತದ ಬಳಿ ಗುಂಪುಗುಂಪಾಗಿ ಹಾರುತ್ತಿರುತ್ತವೆ. ಈ ಜಲಪಾತದ ಭೋರ್ಗರೆತ ಮೌನವನ್ನು ಸೀಳಿ, ನಾದ ಅಲೆಯನ್ನು ಹೊರಡಿಸುತ್ತದೆ. ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಜೋಗವೂ ಒಂದು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು