ಭಾನುವಾರ, ಜನವರಿ 17, 2021
17 °C

ಗಿಡಗಳಿಗೂ ಚಳಿ ಕಾಡುತ್ತಿದೆ...

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

Prajavani

ಚಳಿಗಾಲ ಆರಂಭವಾಗಿ ಬಹಳ ದಿನಗಳೇ ಕಳೆದಿವೆ. ವಾತಾವರಣ ಬದಲಾವಣೆಯ ಪರಿಣಾಮ ಹೂ ಗಿಡಗಳ ಮೇಲೂ ಆಗುವುದು ಸಹಜ. ನಿರ್ಲಕ್ಷ್ಯ ವಹಿಸಿದರೆ ಪರಿಶ್ರಮದಿಂದ ಬೆಳೆಸಿದ ಗಿಡಗಳು ಸೊರಗಿ ನಾಶವಾಗುವ ಅಪಾಯವೂ ಇದೆ.

ಬೆಂಗಳೂರು, ಮೈಸೂರು, ಕೊಡಗು, ಉತ್ತರ ಒಳನಾಡಿನ ಕೆಲವೆಡೆ ಈ ಬಾರಿ ಎಂದಿಗಿಂತ ಹೆಚ್ಚು ಚಳಿ ಇದೆ. ಕರಾವಳಿ, ಮಲೆನಾಡಿನ ಭಾಗಗಳಲ್ಲಿ ಅಕಾಲಿಕ ಮಳೆಯೂ ಸುರಿದಿದೆ. ಇಂಥ ಪ್ರತಿಕೂಲ ಹವಾಮಾನದ ಸನ್ನಿವೇಶದಲ್ಲಿ ಹೂವು, ಅಲಂಕಾರಿಕ ಗಿಡಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಒಳ್ಳೆಯದು.

ಪ್ರತಿದಿನ ಗಮನಿಸಿ
ನೀವು ಬೆಳೆಸಿದ ಗಿಡ/ ಹೂವಿನ ಸಸಿ/ ಬಳ್ಳಿಗಳನ್ನು ಪ್ರತಿದಿನ ಗಮನಿಸಿ. ಅಂಗಳದಲ್ಲಿ ಸುತ್ತಾಡುವ ಹೊತ್ತಿನಲ್ಲೇ ಈ ಕೆಲಸ ಮಾಡಬಹುದು. ಸುಂದರವಾಗಿ ಬೆಳೆದಿದ್ದರೆ ಆ ಸಣ್ಣ ಬೆಳವಣಿಗೆಯೂ ನಿಮ್ಮ ಮನಸ್ಸಿಗೆ ಖುಷಿ ಕೊಡಬಲ್ಲದು. ಸೊರಗಿದಂತಿದ್ದರೆ, ಬಣ್ಣ ಬದಲಾಗಿರುವುದು, ಎಲೆ/ ಕಾಂಡವನ್ನು ಕೀಟ ಕೊರೆದಿರುವುದು ಕಂಡುಬಂದರೆ ಚಿಕಿತ್ಸೆಗೆ ಮುಂದಾಗಲೂ ಇದು ಸಹಕಾರಿ.

ಪ್ರಥಮ ಚಿಕಿತ್ಸೆ
ಎಲೆಗಳು ಕೊಳೆತಿದ್ದರೆ ಅವುಗಳನ್ನು ಕಿತ್ತುಬಿಡಿ. ಟೊಂಗೆಗೆ ಕೀಟ ಬಾಧೆ ಇದ್ದರೆ ಆ ಭಾಗವನ್ನೂ ಕತ್ತರಿಸಬೇಕಾಗಬಹುದು. ಶಿಲೀಂದ್ರ, ಹುಳುಗಳ ಬಾಧೆ ಇದ್ದರೆ ಬೇವಿನ ಎಣ್ಣೆ, ನೀರು, ಸಾಬೂನು ಮತ್ತು ನುಸಿ ಉಂಡೆಯ (ನ್ಯಾಫ್ತಲೀನ್‌ ಗೋಲಿಗಳು) ಪುಡಿ ಬೆರೆಸಿದ ದ್ರಾವಣ ಸಿದ್ಧಪಡಿಸಿ ಬಾಧಿತ ಭಾಗಕ್ಕೆ ಸಿಂಪಡಿಸಿ. ದಿನ ಬಿಟ್ಟು ದಿನ ಈ ಕೆಲಸ ಮಾಡಿ. ಸಾಧಾರಣ ಕೀಟ, ಹುಳುಗಳು, ಅವುಗಳ ಮೊಟ್ಟೆ, ಶಿಲೀಂಧ್ರವು ಈ ದ್ರಾವಣ ಸಿಂಪಡಿಸುವುದರಿಂದ ನಾಶವಾಗುತ್ತವೆ. ಗಿಡದ ಮೇಲೂ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ.

ನವೀಕರಿಸಲು ಸಕಾಲ
ಕೈತೋಟದ ಮಣ್ಣನ್ನು ಅಗೆದು ಸಡಿಲಗೊಳಿಸುವುದು, ಕೊಟ್ಟಿಗೆ ಗೊಬ್ಬರ ಹಾಕುವುದು, ಕಳೆ ಕೀಳುವುದು, ಅಡ್ಡಾದಿಡ್ಡಿ ಬೆಳೆದ ಕೊಂಬೆಗಳನ್ನು ಕತ್ತರಿಸುವುದು, ಪುಟ್ಟ ಕೈ ತೋಟ ಸ್ವಚ್ಛ ಮಾಡಲು ಇದು ಸಕಾಲ. ನಿರಂತರ ನಿರ್ವಹಣೆ ಮಾಡುವವರಾಗಿದ್ದರೆ ಚಳಿಗಾಲದಲ್ಲಿ ಹೂವಿನ ಗಿಡಗಳನ್ನು ಹೊಸದಾಗಿ ನೆಡಬಹುದು.

ಹೊದಿಕೆ ಬಳಸಿ
ವಿಪರೀತ ಮಂಜು ಸುರಿಯುವ ಪ್ರದೇಶದಲ್ಲಿದ್ದರೆ (ಘಟ್ಟ ಪ್ರದೇಶ, ಬೆಟ್ಟದ ತಪ್ಪಲು ಇತ್ಯಾದಿ) ಗಿಡಗಳಿಗೆ ನೇರವಾಗಿ ಮಂಜು ಹನಿ ತಾಕದಂತೆ ರಕ್ಷಣಾ ಹೊದಿಕೆ ಹೊದೆಸುವುದು ಒಳ್ಳೆಯದು. ಹಳೆಯ ಸೀರೆ, ಗೋಣಿ ತಾಟು, ಮಲ್ಚಿಂಗ್‌ ಶೀಟ್‌ ಅಥವಾ ಹಸಿರು ಮನೆಗೆ ಬಳಸುವ ತೆಳ್ಳನೆಯ ಪರದೆಯಂಥ ಶೀಟ್‌ಗಳನ್ನು ಗಿಡಗಳ ಮೇಲೆ ನೇರವಾಗಿ ಅಥವಾ ಪುಟ್ಟ ಚಪ್ಪರದಂತೆ ಹೊದೆಸಬಹುದು. ಹೀಗೆ ಮಾಡುವ ಮೂಲಕ ಮಂಜಿನ ವಿಪರೀತ ಥಂಡಿಯಿಂದ ಕಾಯಿಗಳು ಮುರುಕಾಗುವುದು, ಗಿಡ ಸೊರಗುವುದನ್ನು ತಪ್ಪಿಸಬಹುದು. ಅಲ್ಪಮಟ್ಟಿಗೆ ಗಿಡಗಳಿಗೆ ಇದು ಬೆಚ್ಚನೆಯ ವ್ಯವಸ್ಥೆಯಂತೆ ಕೆಲಸ ಮಾಡುತ್ತದೆ. ಮಂಜು ಕರಗಿ ಸೂರ್ಯನ ಬೆಳಕು ಕಾಣಿಸುತ್ತಿದ್ದಂತೆಯೇ ಈ ಹೊದಿಕೆ ತೆಗೆಯಬೇಕು. ಸೂಕ್ಷ್ಮ ಪ್ರಕೃತಿಯ ಗಿಡಗಳನ್ನು ಕುಂಡದಲ್ಲಿಟ್ಟು ಬೆಳೆಸುವುದು ಉತ್ತಮ.

ಹೇಗಿದ್ದರೂ ಬಹುತೇಕರು ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆ ಅಥವಾ ಸಂಜೆಯ ಕನಿಷ್ಠ ಒಂದು ಗಂಟೆ ಮೀಸಲಿಟ್ಟರೂ ಗಿಡಗಳ ಆರೈಕೆಯಲ್ಲಿ ನೆಮ್ಮದಿ ಕಾಣಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು