ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಕಾರ್ಯಸೂಚಿ: ಸಂಕಲ್ಪದ ಅಗತ್ಯ

ಪರಿಸರಪ್ರೀತಿ ಜೀವನಧರ್ಮವಾಗಲಿ
Last Updated 4 ಜೂನ್ 2019, 19:01 IST
ಅಕ್ಷರ ಗಾತ್ರ

ಜಗತ್ತಿಗೆ ಮತ್ತೊಂದು ಪರಿಸರ ದಿನ ಬಂದಿದೆ. ಗಿಡ ನೆಡುತ್ತೇವೆ, ಫೋಟೊ ತೆಗೆಸಿಕೊಳ್ಳುತ್ತೇವೆ. ನೆಟ್ಟ ಗಿಡ ನಾಳೆ ಚಿಗುರೊಡೆಯಿತೋ ಇಲ್ಲವೋ ಎಂದು ನೋಡುವ ವ್ಯವಧಾನ ನಮಗಿಲ್ಲ. ಮುಂದಿನ ವರ್ಷ ಅದೇ ಗುಂಡಿಯಲ್ಲಿ ಮತ್ತೆ ಗಿಡ ನೆಡುತ್ತೇವೆ. ಕಳೆದ ವರ್ಷ ನೆಟ್ಟ ಗಿಡ ಅದೃಷ್ಟವಶಾತ್‌ ದೊಡ್ಡದಾಗಿದ್ದರೆ, ಈ ಬಾರಿ ಸ್ವಲ್ಪ ಆಚೆಗೆ ಇನ್ನೊಂದು ಗಿಡ ನೆಟ್ಟರಾಯಿತು ಎಂಬ ಸಮಾಧಾನ.

ಪರಿಸರ ಅಂದರೆ ಇಷ್ಟೇನಾ? ಗಿಡ ನೆಟ್ಟ ಪ್ರಮಾಣಕ್ಕಿಂತ, ಬೆಳೆದ ಮರಗಳ ಮಾರಣಹೋಮ ಅದೆಷ್ಟೋ ದೊಡ್ಡ ಪ್ರಮಾಣದಲ್ಲಿ ನಡೆದಿದೆಯಲ್ಲವೇ? ಯಾರದೋ ಮೇಲಿನ ಸಿಟ್ಟಿಗೆ ಕಾಡಿಗೆ ಬೆಂಕಿ ಹಚ್ಚುತ್ತಿರುವುದು ನಿಜವಲ್ಲವೇ? ಕಾಡುಗಳಲ್ಲಿ ಬೆಳೆದು ನಿಂತ ಮರಗಳು ಸದ್ದಿಲ್ಲದೆ ಮಿಲ್ಲುಗಳಾಚೆ ಸಾಗುತ್ತಿರುವುದು ಸುಳ್ಳೇ? ಬೃಹತ್‌ ಯೋಜನೆಗಳಿಗಾಗಿ ಕಾಡುಗಳು ಬಟಾ ಬಯಲಾಗುತ್ತಿವೆಯಲ್ಲ? ಇಂತಹ ಪ್ರಶ್ನೆಗಳು ಎದುರಾದಾಗ ನೆನಪಾಗುವುದು ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್‌.ಶೇಷನ್‌, ಲೋಕಾಯುಕ್ತ ನ್ಯಾಯಮೂರ್ತಿಗಳಾದ ವೆಂಕಟಾಚಲ, ಸಂತೋಷ್‌ ಹೆಗ್ಡೆ ಮೊದಲಾದವರು. ಚುನಾವಣಾ ಆಯೋಗಕ್ಕೆ ಅಷ್ಟೊಂದು ಶಕ್ತಿ ಇದೆ
ಎಂದು ತೋರಿಸಿಕೊಟ್ಟವರು ಶೇಷನ್‌. ಲೋಕಾಯುಕ್ತ ಸಂಸ್ಥೆಯು ಭ್ರಷ್ಟರಿಗೆ ಸಿಂಹಸ್ವಪ್ನ ಎಂಬುದನ್ನು ತೋರಿಸಿಕೊಟ್ಟವರು ನ್ಯಾಯಮೂರ್ತಿಗಳಾದ ವೆಂಕಟಾಚಲ ಹಾಗೂ ಸಂತೋಷ್‌ ಹೆಗ್ಡೆ. ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೂ ಅಂತಹುದೇ ಶಕ್ತಿ ಇದೆ ಎಂಬುದನ್ನು ತೋರಿಸಿಕೊಡುವ ದಿನ ಯಾವಾಗ ಬರುತ್ತದೋ, ಅಂದು ಪರಿಸರ ದಿನಕ್ಕೂ ಮಹತ್ವ ಬಂದಿದೆ ಎಂದು ಎದೆತಟ್ಟಿ ಹೇಳಬಹುದು.

ಇಷ್ಟಕ್ಕೂ ಜಾಗತಿಕ ಮಟ್ಟದಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿದ್ದು 47 ವರ್ಷಗಳ ಹಿಂದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1972ರಲ್ಲಿ ಸ್ವೀಡನ್ನಿನ ಸ್ಟಾಕ್‌ ಹೋಮ್‌ನಲ್ಲಿ ‘ಮಾನವ ಪರಿಸರ’ ಅಂತರರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿತು. ಅಲ್ಲಿಪರಿಸರ ಸಂರಕ್ಷಣೆ ಕುರಿತು ಹಲವಾರು ಚರ್ಚೆಗಳು ನಡೆದವು.ಪ್ರತಿವರ್ಷ ಜೂನ್ ಐದನ್ನು ‘ವಿಶ್ವ ಪರಿಸರ ದಿನ’ವನ್ನಾಗಿ ಆಚರಿಸಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲಾಯಿತು. ಅಲ್ಲಿಂದೀಚೆಗೆ ಈ ದಿನಾಚರಣೆ ನಡೆದು ಬಂದಿದೆ.

ವಿಶೇಷವೆಂದರೆ, ಇದೇ ಸಮ್ಮೇಳನದಲ್ಲಿ26 ಘೋಷಣೆಗಳನ್ನು ಹೊರಡಿಸಲಾಯಿತು. ಅವುಗಳಲ್ಲಿ ಮುಖ್ಯವಾದುದು 21ನೇ ಘೋಷಣೆ. ‘ಅಜೆಂಡಾ 21’ ಎಂದೇ ಜಗದ್ವಿಖ್ಯಾತವಾಗಿರುವ ಈ ಘೋಷಣೆ ಮಾಡಿದ ಪರಿಣಾಮ ಮಾತ್ರ ಬಹಳ ದೊಡ್ಡದು. ಪರಿಸರ ಮತ್ತು ಅಭಿವೃದ್ಧಿ ಹೇಗೆ ಜತೆ ಜತೆಗೆ ಸಾಗಬೇಕು, ಅಂದರೆ ಸುಸ್ಥಿರ ಅಭಿವೃದ್ಧಿಗೆ ಜಗತ್ತು ಹೇಗೆ ಗಮನ ಹರಿಸಬೇಕು ಎಂಬುದನ್ನು ಮೊದಲ ಬಾರಿಗೆ ಸೂಚಿಸಿದ ಜಾಗತಿಕ ಸಮಾವೇಶ ಅದಾಗಿತ್ತು. ಇದರ ಫಲವಾಗಿ ಭಾರತ ಸಹಿತ ಸದಸ್ಯ ರಾಷ್ಟ್ರಗಳು ತಮ್ಮ ದೇಶಗಳಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಪ್ರತ್ಯೇಕವಾದ, ಕಠಿಣಕಾನೂನುಗಳನ್ನು ರೂಪಿಸಲು ಮುಂದಾದವು.

ಭಾರತದಲ್ಲಿ ಅದುವರೆಗೆ ಪರಿಸರ ಕುರಿತ ಕಾಳಜಿ ಎಂಬುದು ದೊಡ್ಡ ವಿಚಾರವೇ ಆಗಿರಲಿಲ್ಲ. ಸಂವಿಧಾನದಲ್ಲಿ ಸಹ ಅದರ ಉಲ್ಲೇಖ ಇರಲಿಲ್ಲ. ಸಂಸತ್‌ ಸಹ ಯಾವುದೇ ಬಗೆಯ ವಿಶೇಷ ಮತ್ತು ನಿಶ್ಚಿತ ಕಾನೂನುಗಳನ್ನೂ ರೂಪಿಸಿರಲಿಲ್ಲ. ಸ್ಟಾಕ್‌ಹೋಮ್‌ ‘ಅಜೆಂಡಾ 21’ ಫಲವಾಗಿ 1974ರಲ್ಲಿ ಜಲಮಾಲಿನ್ಯ ತಡೆಗಟ್ಟುವ ಕಾಯ್ದೆ ಭಾರತದಲ್ಲಿ ರೂಪುಗೊಂಡಿತು.

1976ರಲ್ಲಿ ಭಾರತದ ಸಂವಿಧಾನದಲ್ಲೇ ಪರಿಸರ ಸಂರಕ್ಷಣೆಯ ಪ್ರಸ್ತಾವ ಸೇರಿಸುವ ಕ್ರಮಕ್ಕೆ ನಾಂದಿ ಹಾಡಲಾಯಿತು. ಸಂವಿಧಾನಕ್ಕೆ 42ನೇ ತಿದ್ದುಪಡಿ ತರುವ ಮೂಲಕ ಪರಿಸರ ಕಾಳಜಿಯ ಬದ್ಧತೆಯನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಪ್ರದರ್ಶಿಸಿದರು.
ಸಂವಿಧಾನದಲ್ಲಿ ವಿಧಿ 48-ಎ ಅನ್ನು ಸೇರಿಸುವ ಮೂಲಕ ಸರ್ಕಾರಗಳು ಪರಿಸರ, ಅರಣ್ಯ ಮತ್ತು ವನ್ಯಜೀವಿಗಳ
ಸಂರಕ್ಷಣೆಗೆ ಹೆಚ್ಚು ಒತ್ತು ನೀಡುವಂತೆ ತಾಕೀತು ಮಾಡಲಾಯಿತು. ಬಳಿಕ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಒಂದಾದ ಮೇಲೊಂದರಂತೆ ಕಾಯ್ದೆಗಳು ಬಂದವು. ಅವುಗಳಲ್ಲಿ ಮುಖ್ಯವಾದವು, 1980ರ ಅರಣ್ಯ ಸಂರಕ್ಷಣಾ ಕಾಯ್ದೆ, 1981ರ ವಾಯುಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ, 1986ರ ಪರಿಸರ ಸಂರಕ್ಷಣೆ ಕಾಯ್ದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿರಿಯೊ ಘೋಷಣೆ, ಜೈವಿಕ ವೈವಿಧ್ಯ ಸಮಾವೇಶ, ಕಾರ್ಟಗೇನಾ ಒಪ್ಪಂದ, ಮಾಲ್ಮೊ ಘೋಷಣೆ, ಜೊಹಾನ್ಸ್‌ಬರ್ಗ್‌ಘೋಷಣೆ ಮೊಳಗಿದವು. ಹಲವಾರು ಅಂತರರಾಷ್ಟ್ರೀಯ ಸಮಾವೇಶಗಳಲ್ಲಿ ಪರಿಸರ ವಿಚಾರಗಳಾದ ಶುದ್ಧ ಜಲ, ಗಾಳಿ, ಜೈವಿಕ ವೈವಿಧ್ಯ, ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಿ, ಹಲವಾರು ನಿಯಮಗಳನ್ನು ರೂಪಿಸುವಂತೆ ಸದಸ್ಯ ರಾಷ್ಟ್ರಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು.

ವಿಷಾದವೆಂದರೆ, ಈ ಎಲ್ಲಾ ನಿರ್ದೇಶನಗಳು ಶಾಸನಗಳ ಬಿಳಿಹಾಳೆಗಳಲ್ಲಷ್ಟೇ ವಿಜೃಂಭಿಸುತ್ತಿರುವುದು. ಇವುಗಳ ವ್ಯವಸ್ಥಿತ ಅನುಷ್ಠಾನ ಆಗದಿರುವುದು ಜಾಗತಿಕ ಮಟ್ಟದಲ್ಲಿ ದೊಡ್ಡ ಸಮಸ್ಯೆ. ಹಲವು ಘೋಷಣೆಗಳನ್ನು ಶ್ರೀಮಂತ ರಾಷ್ಟ್ರಗಳೇ ಗಾಳಿಗೆ ತೂರುವ ಮೂಲಕ ಬಡ ರಾಷ್ಟ್ರಗಳನ್ನು ಅಣಕಿಸುತ್ತಿವೆ.

ಜಗತ್ತಿನಲ್ಲಿಅನುಭವಿಸುವ ಎಲ್ಲ ಬಗೆಯ ಮಾನವ ಮೂಲಭೂತ ಹಕ್ಕುಗಳೂ ಈ ‘ಮಾನವ ಪರಿಸರ ಹಕ್ಕಿನ’ ಮೇಲೆ ಅವಲಂಬಿತವಾಗಿವೆ. ಹಾಗಾಗಿಯೇ ಭಾರತದ ಸುಪ್ರೀಂ ಕೋರ್ಟ್‌ ಹಲವಾರು ಪ್ರಕರಣಗಳಲ್ಲಿ, ಪರಿಸರ ಹಕ್ಕು ಸಹ ಮಾನವ ಹಕ್ಕುಗಳ ಒಂದು ಭಾಗ ಎಂದಿದೆ. ಪರಿಸರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಶೀಘ್ರಗತಿಯಲ್ಲಿ ವಿಲೇವಾರಿ ಮಾಡಲು ಹಸಿರು ನ್ಯಾಯಮಂಡಳಿಗಳನ್ನೂ ಸ್ಥಾಪಿಸಲಾಗಿದೆ. ಇಷ್ಟೆಲ್ಲಾ ಕಾನೂನುಗಳು, ಅಂತರರಾಷ್ಟ್ರೀಯ ಒಡಂಬಡಿಕೆಗಳು, ನೀತಿಗಳುಹಾಗೂ ನ್ಯಾಯಾಲಯಗಳ ನಿರ್ದೇಶನಗಳಿದ್ದರೂಪರಿಸರ ಮಾಲಿನ್ಯ ಅತಿ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿದೆ.

ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣಹೋಮ, ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ, ಭಾರಿ ಪ್ರಮಾಣದಲ್ಲಿ ಕಟ್ಟಡಗಳ ನಿರ್ಮಾಣ, ವಾಹನಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ, ತ್ಯಾಜ್ಯಗಳ ಅವೈಜ್ಞಾನಿಕ ವಿಲೇವಾರಿ, ಜನಸಂಖ್ಯಾ ಸ್ಫೋಟ, ಅತಿಯಾದ ಪ್ಲಾಸ್ಟಿಕ್‌ ಬಳಕೆ... ಪರಿಸರ ನಾಶಕ್ಕೆ ಕಾರಣವಾಗುವ ಅಂಶಗಳಪಟ್ಟಿ ಬೆಳೆಯುತ್ತದೆ. ಪರಿಸರ ಮಾಲಿನ್ಯದ ದುಷ್ಪರಿಣಾಮದ ಸರಪಳಿ ದೊಡ್ಡದು. ಅದು ಇಂದಿಗೇ ಕೊನೆಗೊಳ್ಳುವ ಮಾತಲ್ಲ. ಮುಂದಿನ ಪೀಳಿಗೆಗೂ ನಾವು ಬಿಟ್ಟು ಹೋಗುತ್ತಿರುವ ಕರಾಳ ಬಳುವಳಿ. ಪರಿಸರ ಹಾನಿಯಿಂದ ರೋಗಗಳು ಹೆಚ್ಚುತ್ತಿವೆ. ಪರಿಣಾಮವಾಗಿ ಔಷಧ ತಯಾರಿಕೆ ಘಟಕಗಳು ಬಲಗೊಳ್ಳುತ್ತಿವೆ.

ಇಂಥ ಗಂಭೀರ ವಿಷಯಗಳ ಬಗ್ಗೆ ತೋರಿಕೆಯ ಕಾಳಜಿಯಿಂದ ಪ್ರಯೋಜನವಿಲ್ಲ. ಜನರಿಗೆ ಮನದಟ್ಟು ಮಾಡಿಕೊಡುವ ಕೆಲಸ ಆಗಬೇಕು. ಪರಿಸರವನ್ನು ಸ್ವಚ್ಛ ವಾಗಿಡುವಲ್ಲಿ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸರ್ಕಾರಗಳ ಪಾತ್ರ ಮಹತ್ತರವಾದುದು. ಅದು ಸಾಂಕೇತಿಕ ಆಗಬಾರದು. ಎಲ್ಲ ಬಗೆಯ ಮಾಲಿನ್ಯ ತಡೆಗೆ ಪ್ರತಿ ಹಂತದಲ್ಲೂ ಬದ್ಧತೆ ತೋರಬೇಕು. ಕಾನೂನು ಕಟ್ಟಲೆಗಳ ಅನುಷ್ಠಾನ ಬಿಗಿಯಾಗಬೇಕು. ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳುವ ಕೆಲಸ ಬಿರುಸು ಪಡೆಯಬೇಕು. ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ತಗ್ಗಿಸಬೇಕು. ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧ ಆಗಬೇಕು. ಇಂತಹ ಕ್ರಮಗಳಿಂದ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣಗೊಳಿಸಲು ಸಾಧ್ಯ.

ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಹೆಚ್ಚಿನ ಬಲ ತುಂಬಬೇಕು. ಅವುಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವಾಗಿಸಬೇಕು. ಬದ್ಧತೆಯುಳ್ಳವರನ್ನು ಮಂಡಳಿಗಳ ಮುಖ್ಯಸ್ಥರನ್ನಾಗಿ ನೇಮಿಸಬೇಕು. ರಾಜಕೀಯ ಮಧ್ಯಪ್ರವೇಶಕ್ಕೆ ಅವಕಾಶ ಇರಬಾರದು. ಇಂತಹ ಸಂಕಲ್ಪ ತೊಡುವ ಮೂಲಕ ಸರ್ಕಾರಗಳು ಪರಿಸರ ದಿನವನ್ನು ಅರ್ಥಪೂರ್ಣಗೊಳಿಸಬೇಕು.

ಲೇಖಕ: ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT