ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ಸಸಿಗಳ ಬಸ್‌!

Last Updated 4 ಜೂನ್ 2019, 20:01 IST
ಅಕ್ಷರ ಗಾತ್ರ

ಗಿಡಗಳನ್ನು ಬೆಳೆಸಿ ಪರಿಸರ ಉಳಿಸಿ, ಮನೆಗೊಂದು ಮರ.. ಸರ್ಕಾರದಿಂದ ಗಿಡ ನೇಡುವ ಹತ್ತಾರು ಯೋಜನೆಗಳಿವೆ. ಆರಂಭದಲ್ಲಿ ಎಲ್ಲರೂ ಇಂಥ ಅಭಿಯಾನಗಳಲ್ಲಿ ಭಾಗಿಯಾದರು ಆದರೆ ನೆಟ್ಟ ಸಸಿಗಳಿಗೆ ಪ್ರತಿನಿತ್ಯ ನೀರುಣಿಸುವರಾರು? ಇದನೆಲ್ಲಾ ಯೋಚಿಸಿ ಸಮಯ ವ್ಯರ್ಥ ಮಾಡುವದಕ್ಕಿಂತ ಇದೇ ಜೂನ್ 05, ವಿಶ್ವ ಪರಿಸರ ದಿನದ ಅಂಗವಾಗಿ ಎಲ್ಲರೂ ತಮ್ಮ ಮನೆಯ ಮುಂದೆ ಒಂದು ಗಿಡ ನೆಟ್ಟು ಅದು ದೊಡ್ಡದಾಗುವ ತನಕ ಪ್ರತಿದಿನ ನೀರುಣಿಸುತ್ತೇನೆ ಎಂದು ಶಪಥಮಾಡಿ. ಒಂದು ಸಣ್ಣ ಆಂದೋಲನ ನಮ್ಮಿಂದಲೇ ಪ್ರಾರಂಭವಾಗಲಿ.

ಇದು ಬಿಎಮ್‌ಟಿಸಿ ಚಾಲಕನೊಬ್ಬನ ಪರಿಸರ ಕಾಳಜಿಯ ಮಾತು. ಈ ಚಾಲಕ ಬರಿಯ ಬಾಯಿ ಮಾತಿನಲ್ಲಿ ಇದನ್ನು ಹೇಳಿದ್ದರೆ ಸ್ವಾರಸ್ಯ ಇರುತ್ತಿರಲಿಲ್ಲ. ಆದರೆ ಇವರು ಇದನ್ನು ಅಕ್ಷರಶಃ ಪಾಲಿಸಿಕೊಂಡು ಬರುತ್ತಿದ್ದಾರೆ. ತಾವು ಕಾರ್ಯ ನಿರ್ವಹಿಸುತ್ತಿರುವ ಬಸ್ಸಿನಲ್ಲಿ ಸಸಿಗಳನ್ನು ನೆಟ್ಟು ಪರಿಸರದೊಂದಿಗೆ ಇದ್ದ ತಮ್ಮ ಬದ್ಧತೆಯನ್ನು ಮೆರೆದಿದ್ದಾರೆ. ಇವರ ಹೆಸರು ನಾರಾಯಣಪ್ಪ. ‘ನಾನು ಒಬ್ಬ ಸಾಮಾನ್ಯ ಬಸ್‌ ಚಾಲಕ. ಬಾಲ್ಯದಿಂದಲೂ ನನಗೆ ಗಿಡ ನೆಡುವುದೆಂದರೆ ತುಂಬಾ ಇಷ್ಟ. ನನ್ನೂರು ಮುಳಬಾಗಿಲಿನಲ್ಲಿ ಗಿಡ ನೆಟ್ಟು ಅದಕ್ಕೆ ನೀರು ಹಾಕಿ ಬೆಳೆಸುತ್ತಿದ್ದೆ. ಉದ್ಯೋಗವನ್ನರಸಿ ಬೆಂಗಳೂರಿಗೆ ಬರಬೇಕಾಯಿತು. ಇಲ್ಲಿ ಬಂದರೆ ಮಾಲಿನ್ಯ ಅದರ ಉನ್ನತ ಮಟ್ಟಕ್ಕೆ ತಲುಪಿತ್ತು. ಮಾಲಿನ್ಯ ನಿಯಂತ್ರಣದ ಪ್ರಯತ್ನಗಳಿಗೆ ನನ್ನದೇ ಆದ ಕೊಡುಗೆಯನ್ನೂ ಸೇರಿಸಬೇಕು ಎಂಬ ಆಸೆ ಮೂಡಿತು. ಆಗ ಹೊಳೆದಿದ್ದೇ ಬಸ್‌ನಲ್ಲಿ ಸಸಿ ನೆಟ್ಟು ಬೆಳೆಸುವ ಮೂಲಕ ಜನಜಾಗೃತಿ ಮೂಡಿಸಬಹುದಲ್ಲ ಎನ್ನುವ ಆಲೋಚನೆ.

‘ಬಸ್‌ನಲ್ಲಿ ಗಿಡ ಬೆಳೆಸುವುದರಿಂದ ಸಮಾಜದಲ್ಲಿ ಪರಿಸರ ಸಂಬಂಧಿ ಒಂದು ಸಣ್ಣ ಬದಲಾವಣೆ ತರಲು ಸಾಧ್ಯ ಎನ್ನುವ ನಿಟ್ಟಿನಲ್ಲಿ ಈ ಕೆಲಸವನ್ನು ಎರಡು ವರ್ಷಗಳ ಹಿಂದೆ ಪ್ರಾರಂಭ ಮಾಡಿದೆ. ನನ್ನ ಈ ಪ್ರಯತ್ನಕ್ಕೆ ಹಲವರು ಸಹಮತ ವ್ಯಕ್ತಪಡಿಸಿದರು. ಘಟಕದಲ್ಲಿನ ಎಲ್ಲ ಸಹೋದ್ಯೋಗಿಗಳೂ ಸಾಥ್ ನೀಡಿದರು. ಎರಡು ವರ್ಷಗಳ ಹಿಂದೆ ನಾನು ಕೇವಲ ನಾಲ್ಕು ಗಿಡಗಳನ್ನು ನೆಟ್ಟಿದ್ದೆ ಆದರೆ ಇಂದು ನನ್ನ ಬಸ್ಸಿನಲ್ಲಿ 25 ಕ್ಕಿಂತ ಹೆಚ್ಚು ಗಿಡಗಳು ಸುಮಾರು 4 ಅಡಿಗಿಂತ ಹೆಚ್ಚು ಉದ್ದ ಬೆಳೆದು ನಿಂತಿವೆ. ದಿನಾಲು ಮುಂಜಾನೆ ಹಾಗೂ ರಾತ್ರಿ ಮನೆಗೆ ಹೋಗುವ ಮುನ್ನ ಗಿಡಗಳಿಗೆ ನೀರುಣಿಸುತ್ತೇನೆ. ನಾನು ರಜೆಯಲ್ಲಿದ್ದಾಗ ಬಸ್ಸಿನ ಕಂಡಕ್ಟರ್ ನೀರು ಹಾಕಿ ಪೋಷಣೆ ಮಾಡುತ್ತಾರೆ. ನನ್ನ ಈ ಪ್ರಯತ್ನಕ್ಕೆ ಇಂದಿರಾನಗರದ ಎಲ್ಲ ಕಾರ್ಮಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರು ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಕೆಲವು ಪ್ರಯಾಣಿಕರು ಸಸಿಗಳನ್ನು ನನಗೆ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಕೆಲವರು ಇದಕ್ಕೆ ನೀರುಣಿಸುತ್ತಾರೆ ಕೂಡಾ ಎನ್ನುತ್ತಾರೆ ಚಾಲಕ ನಾರಾಯಣಪ್ಪ.

‘ನನ್ನ ಈ ಸಣ್ಣ ಪ್ರಯತ್ನದಿಂದ ನಮ್ಮ ಬಸ್ಸಿನ ತುಂಬ ತಂಪಾದ ವಾತಾವರಣ ಸೃಷ್ಟಿಯಾಗಿರುತ್ತದೆ. ನನ್ನನ್ನು ನೋಡಿ ನಮ್ಮ ಡಿಪೊ ಮ್ಯಾನೇಜರ್ ಕೂಡಾ ಅವರ ಕಚೇರಿಯಲ್ಲಿ ಖುದ್ದಾಗಿ ಗಿಡಗಳನ್ನು ಬೆಳೆಸುತ್ತಿದ್ದಾರೆ’ ಎಂದು ಹೆಮ್ಮೆಯಿಂದ ಬೀಗುತ್ತಾರೆ ನಾರಾಯಣಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT