ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಗಳ ಕಣ್ಣೀರು...

Last Updated 26 ಮೇ 2019, 10:40 IST
ಅಕ್ಷರ ಗಾತ್ರ

ಈ ಹೊಳೆ ನಮ್ಮ ಹಳ್ಳಿಯನ್ನು ಪಟ್ಟಣದಿಂದ ಬೇರ್ಪಡಿಸಿತ್ತು. ಶಾಲೆಗೆ ಹೋಗಲು ಪ್ರತಿದಿನ ಹೊಳೆ ದಾಟಿ ಹೋಗಬೇಕಿತ್ತು. ಹೊಳೆ ತುಂಬಿ ಹರಿದಾಗ ತೆಪ್ಪಗಳಲ್ಲಿ ಪ್ರಯಾಣಿಸುತ್ತಿದ್ದೆವು. ತೆಪ್ಪ ಮತ್ತೊಂದು ದಡ ತಲುಪುವವರೆಗೂ ಅವ್ವ ಅಲ್ಲೇ ನಿಂತು ಬಳಿಕ ಮನೆಗೆ ಮರಳುತ್ತಿದ್ದಳು. ಇದೇ ಹೊಳೆಯ ನೀರನ್ನೇ ನಾವು ಕುಡಿಯುತ್ತಿದ್ದೆವು. ನಾವು ಈಜು ಕಲಿತಿದ್ದು, ಮೀನು ಹಿಡಿಯುತ್ತಿದ್ದುದು ಇದೇ ಹೊಳೆಯಲ್ಲಿ. ಮಳೆಗಾಲದಲ್ಲಿ ಹೊಳೆ ಆರ್ಭಟಿಸಿದಾಗ ಅಕ್ಕಪಕ್ಕದ ಹೊಲ, ಗದ್ದೆಗಳಿಗೆ ನುಗ್ಗಿದ ನೀರು ರಾಶಿ ರಾಶಿ ಮರಳನ್ನು ಬಿಸಾಡಿ ಹೋಗುತ್ತಿತ್ತು.

ಪ್ರತಿದಿನ ಸಂಜೆ ಈ ಹೊಳೆ ದಂಡೆಯ ಮರಳಿನಲ್ಲಿ ಆಟವಾಡದಿದ್ದರೆ ನಮಗೆ ನಿದ್ದೆಯೇ ಬರುತ್ತಿರಲಿಲ್ಲ. ನಂತರ ಹದಿವಯಸ್ಸಿನಲ್ಲಿ ಮರದ ಹಲಗೆಯ ಮೇಲೆ ಹಾಲಿನ ಕ್ಯಾನ್‌ ಇಟ್ಟುಕೊಂಡು ಪ್ರವಾಹದಲ್ಲಿ ಈಜುತ್ತಾ ಹೊಳೆ ದಾಟುತ್ತಿದ್ದರೆ ಊರಿಗೆ ಊರೇ ನಿಂತು ನೋಡುತ್ತಿತ್ತು.

ಇದು ಕನಕಪುರದ ಮಗ್ಗಲಿನಲ್ಲಿರುವ ಮಳಗಾಲ ಎಂಬ ಪುಟ್ಟ ಹಳ್ಳಿಯ ಕಾಂತರಾಜ್‌ ಮತ್ತು ಪರಮೇಶ್‌ ಸಹೋದರರ ನೆನಪುಗಳು. ಆದರೆ, ಅವರು ತಮ್ಮ ಸುಂದರ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾಗ ಆ ‘ಅರ್ಕಾವತಿ’ ನಮಗೆ ನದಿಯಂತೆ ಕಾಣಲಿಲ್ಲ. ಆ ನೀರನ್ನು ಕುಡಿಯುವುದಿರಲಿ, ಜನ ಆ ನೀರಿಗೆ ಕಾಲಿಡುವುದಕ್ಕೂ ಹೇಸುತ್ತಿದ್ದರು. ಮರಳು ಖಾಲಿಯಾಗಿತ್ತು. ನೀರು ಕಪ್ಪಿಟ್ಟು ಕೊಚ್ಚೆ ಮೋರಿಗಿಂತ ಕಡೆಯಾಗಿತ್ತು. ಮಳಗಾಲ ಸಹೋದರರಿಗೆ ತಾವು ಮರಳು ಮನೆಗಳನ್ನು ಕಟ್ಟಿ ಆಡವಾಡಿದ ಆ ದಿನಗಳನ್ನು ತಮ್ಮ ಮಕ್ಕಳೊಂದಿಗೆ ಹಂಚಿಕೊಳ್ಳಲು, ಆ ನೆನಪುಗಳನ್ನು ದೃಢೀಕರಿಸಲು ಪುರಾವೆಗಳೇ ಇಲ್ಲದಂತೆ ಅಳಿಸಿಹೋಗಿತ್ತು.

1985ರಲ್ಲಿ ಅರ್ಕಾವತಿ ಸಾವನ್ನಪ್ಪಿದ ಬಳಿಕ ಮಳಗಾಲದ ಜನ ತೆರೆದಬಾವಿಗಳನ್ನು ಅವಲಂಬಿಸಿದರು. ಮುಂದಿನ ಎರಡು- ಮೂರು ವರ್ಷಗಳಲ್ಲಿ ಕೊಳವೆಬಾವಿಗಳು ಆಗಮಿಸಿದವು. ಜನ ಸಂಭ್ರಮಿಸಿದರು. ನಲ್ಲಿಯಲ್ಲಿ ನೀರು ಬಂತು. ಬದುಕು ಸುಧಾರಿಸಿತು. ಬೇಸಾಯ ಭರವಸೆ ಮೂಡಿಸಿತು. ಆದರೆ, ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ.

ಕೊಳವೆಬಾವಿಗಳಲ್ಲಿ ನೀರು ಇಳಿಮುಖವಾಯಿತು. ಯಂತ್ರಗಳು ಇನ್ನಷ್ಟು ಆಳದಲ್ಲಿ ಶೋಧಿಸಿ ಮತ್ತೆ ನೀರನ್ನು ಪತ್ತೆ ಹಚ್ಚಿದವು. ಈಗ ವರ್ಷದಿಂದ ವರ್ಷಕ್ಕೆ ಇನ್ನಷ್ಟು ಆಳಕ್ಕೆ ಕೊಳವೆಬಾವಿಗಳನ್ನು ಕೊರೆಯುವ ಕೆಲಸ ಮುಂದುವರಿದಿದೆ. ಈ ಬಾವಿಗಳು ತಾತ್ಕಾಲಿಕವಾಗಿ ನೀರಿನ ಕೊರತೆ ನೀಗಿಸಿದಂತೆ ಕಂಡರೂ ಅಲ್ಲಿನ ಜನ ಮತ್ತೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಆ ನೀರಿನಲ್ಲಿರುವ ಸೋಡಿಯಂ ಪ್ರಮಾಣ ಜನರ ಆರೋಗ್ಯವನ್ನು ಅಲುಗಾಡಿಸಿದೆ. ಜೀವಕ್ಕೆ ಬೆಲೆ ಇಲ್ಲದ ಈ ದೇಶದಲ್ಲಿ ಇದು ಅಷ್ಟೇನು ಪ್ರಮುಖ ವಿಚಾರವಾಗುವುದಿಲ್ಲ.

ಆದರೆ, ಇದು ಅರ್ಕಾವತಿ ಮತ್ತು ಮಳಗಾಲಕ್ಕೆ ಸೀಮಿತವಾದ ವಿಷಯವಲ್ಲ. ಹುಣಸೂರಿನ ಬಳಿಯ ಲಕ್ಷ್ಮಣತೀರ್ಥ ನದಿಯಲ್ಲಿ ವಿದೇಶಿ ಕಳೆಗಳು ನೀಲಿ ಹೂಗಳನ್ನು ಹಿಡಿದು ತೇಲುತ್ತಿವೆ. ಸುಂದರವಾಗಿ ಕಾಣುವ ಈ ಹೂಗಳು ವಾಸ್ತವಿಕವಾಗಿ ನದಿಯೊಂದರ ಸಾವಿನ ಸಂಕೇತಗಳು. ಚಲಿಸದ ನೀರಿನಲ್ಲಷ್ಟೇ ತಲೆಎತ್ತುವ ಈ ಸಸ್ಯ ಹರಿವ ನದಿಗಳಲ್ಲಿ ನೆಲೆ ಕಂಡುಕೊಳ್ಳುತ್ತಿರುವ ಅರ್ಥವೇನು? ಇವೆಲ್ಲ ಹೊಳೆ ತನ್ನ ಜೀವಂತಿಕೆ ಕಳೆದುಕೊಳ್ಳುತ್ತಿರುವ ಕುರುಹುಗಳಷ್ಟೆ.ಲಕ್ಷ್ಮಣತೀರ್ಥ ಮತ್ತು ಅರ್ಕಾವತಿ ಕಾವೇರಿಯ ಉಪ ನದಿಗಳು. ಹಾಗಾದರೆ, ಕಾವೇರಿಯ ಸ್ಥಿತಿ ಏನಿರಬಹುದು? ಕಾವೇರಿ ಒಂದು ಪುಟ್ಟ ನದಿ. ಸುಮಾರು 800 ಕಿ.ಮೀ. ದೂರ ಸಾಗುವ ಈ ನದಿ 8 ಕೋಟಿ ಜನರ ಬದುಕಿಗೆ ಜೀವನಾಧಾರ. ಇದರ ಒಟ್ಟು ಜಲಾನಯನ ಪ್ರದೇಶ 10,000 ಚದರ ಕಿಲೋ ಮೀಟರ್‌.

ಇದು ಕಾವೇರಿ ನದಿ ಎಂದರೆ ನಂಬುತ್ತೀರಾ?! ನೀರಿಲ್ಲದೆ ಬರಿದಾಗಿರುವ ನದಿಯ ಪಾತ್ರ. ಚಿತ್ರ: ನೇತ್ರರಾಜು
ಇದು ಕಾವೇರಿ ನದಿ ಎಂದರೆ ನಂಬುತ್ತೀರಾ?! ನೀರಿಲ್ಲದೆ ಬರಿದಾಗಿರುವ ನದಿಯ ಪಾತ್ರ. ಚಿತ್ರ: ನೇತ್ರರಾಜು

ಇದರಲ್ಲಿ ಹೆಚ್ಚಿನ ಭಾಗ ಖಾಸಗಿ ಒಡೆತನದಲ್ಲಿದೆ. ಅದರಲ್ಲೂ ಹೆಚ್ಚಿನ ಪಾಲು ಸಣ್ಣ ಹಿಡುವಳಿದಾರರ ಕಾಫಿ ತೋಟಗಳು. ಅವರಿಗೆ ಬದುಕು ಸಾಗಿಸುವುದೇ ಒಂದು ದೊಡ್ದ ಸವಾಲು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುವ ಏರುಪೇರುಗಳು ಅಥವಾ ಬ್ರೆಜಿಲ್‌ ದೇಶದಲ್ಲಿನ ಚಳಿ, ಮಳೆ ಇವರ ಬದುಕು– ಹಣೆಬರಹವನ್ನು ನಿರ್ಧರಿಸುತ್ತದೆ. ತಮ್ಮ ಬೆಳೆಗೆ ಒಳ್ಳೆಯ ಬೆಲೆ ಸಿಗದ ವರ್ಷ ತಮ್ಮ ತೋಟದಲ್ಲಿ ಬೆಳೆದ ಮರಗಳನ್ನು ಕಡಿದು ಮಾರಲೇ ಬೇಕಾದ ಪರಿಸ್ಥಿತಿ ಇವರದು. ಈ ಪರಿಸ್ಥಿತಿಗಳು ನದಿ ಪಾತ್ರದ ಮೇಲೆ ಪರಿಣಾಮ ಬೀರುತ್ತವೆ.
ಭಾರತದ ಮಟ್ಟಿಗೆ ಹೇಳುವುದಾದರೆ ನದಿಗಳ ಬಗ್ಗೆ, ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಜನ ಸಮುದಾಯದಲ್ಲಿ ಯಾವ ಕಾಳಜಿಯೂ ಇಲ್ಲ. ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ನದಿಗಳ ಕುರಿತು ಮಾತನಾಡುವುದಾದರೂ ಅಂತಿಮವಾಗಿ ಎಲ್ಲವೂ ವ್ಯಾವಹಾರಿಕವಾಗಿ ಕೊನೆಗೊಳ್ಳುತ್ತದೆ. ನದಿಗಳು ಏಕೆ ಸೊರಗುತ್ತಿವೆ? ಅವುಗಳ ಸಮಸ್ಯೆಗಳು ಏನೆಂದು ಒಮ್ಮೆಯೂ ಯೋಚಿಸುವುದಿಲ್ಲ. ನದಿಗಳ ಧ್ವನಿ ಕೇಳಿಸಿಕೊಳ್ಳುವ ವ್ಯವಧಾನವೂ ನಮಗಿಲ್ಲ. ಸರ್ಕಾರಗಳು ಜನಪ್ರಿಯ ಕಾರ್ಯಗಳಿಗೆ ಜೋತುಬಿದ್ದಿವೆ.

ನದಿಗಳ ಮೂಲ ಸಮಸ್ಯೆ ಎಂದರೆ ಗುಣಮಟ್ಟ ಕಳೆದುಕೊಳ್ಳುತ್ತಿರುವ ಅವುಗಳ ಆಯಕಟ್ಟು ಪ್ರದೇಶ. ಸೂಕ್ಷ್ಮ ಜೀವಪರಿಸರವನ್ನೊಳಗೊಂಡ ಈ ಪ್ರದೇಶ ಎಲ್ಲ ನದಿಗಳ ಜೀವಾಳ. ಹರಿಯುವ ನದಿ ಪ್ರಯಾಣದುದ್ದಕ್ಕೂ ಬಿಸಾಡಿ ಹೋಗುವ ಮರಳಿನ ರಾಶಿಗೂ ಈ ಜೀವಪರಿಸರದಲ್ಲಿ ಪ್ರಾಮುಖ್ಯತೆ ಇರುತ್ತದೆ. ಹೊಳೆಯ ಸಮೀಪದ ಭೂ ಪ್ರದೇಶಗಳಲ್ಲಿ ತೇವಾಂಶ ಹೆಚ್ಚಿಸುವುದರಲ್ಲಿ ಮರಳಿನ ಪಾತ್ರ ಹಿರಿದು. ನದಿಯಲ್ಲಿರುವ ಬಂಡೆಗಳು, ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಸಸ್ಯಸಂಕುಲ ಅಲ್ಲಿ ಜೀವಿಸುವ ಇತರ ಜೀವಿಕೋಟಿಗಳಲ್ಲೇ ಈ ನದಿಗಳ ಬದುಕಿಗೆ ಅಗತ್ಯ.

ನೈಸರ್ಗಿಕ ಸಂಪನ್ಮೂಲಗಳಿಗೆ ಮಿತಿ ಇರುತ್ತದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಯಾವ ತಂತ್ರಜ್ಞಾನದ ನೆರವಿನಿಂದಲೂ ಇದನ್ನು ವೃದ್ಧಿಸಲು ಸಾಧ್ಯವಿಲ್ಲ. ಇದೆಲ್ಲದರ ಜೊತೆಗೆ ನದಿ ನಿರ್ವಹಣೆಗೆ ವೈಜ್ಞಾನಿಕ ಒಳನೋಟಗಳು ಅತ್ಯಗತ್ಯ. ನದಿಗಳ ಜೋಡಣೆಗೆ, ಇನ್ನಷ್ಟು ಅಣೆಕಟ್ಟುಗಳಿಗೆ ಮುಖಂಡರು ಧ್ವನಿ ಎತ್ತುತ್ತಲೇ ಇದ್ದಾರೆ. ಸಮುದ್ರಕ್ಕೆ ನೀರು ಹರಿದು ಹೋಗದಂತೆ ಕ್ರಮ ತೆಗೆದುಕೊಳ್ಳುವಂತಹ ಸಲಹೆ ನೀಡುತ್ತಾರೆ. ಇವು ಅನಾಹುತಗಳನ್ನು ಸೃಷ್ಟಿಸುವ ತೀರ್ಮಾನಗಳೇ.

ನದಿಗಳು ಸಮುದ್ರ ಸೇರದಿದ್ದಲ್ಲಿ ಅವುಗಳ ಜೀವಪರಿಸರದಲ್ಲಿ ಏರುಪೇರಾಗುತ್ತದೆ. ಮೀನುಗಳ ಬದುಕು ದುಸ್ತರವಾಗುತ್ತದೆ. ಆಗ ಬೆಸ್ತರ ಸಮುದಾಯದ ಗತಿ ಏನು? ಅವರಿಗೆ‍ಪುನರ್ವಸತಿ ನೀಡಿ ಹೊಸ ಉದ್ಯೋಗ ಕಲ್ಪಿಸಲು ಸಾಧ್ಯವೇ? ಹಾಗಾಗಿ, ನದಿಗಳ ಜೀವಪರಿಸರವನ್ನು ಈಗ ಸಂರಕ್ಷಣೆ ಮಾಡುವುದೇ ಉಳಿದಿರುವ ದಾರಿ. ಅದಕ್ಕೆ ಚಿಂತನೆಗಳಲ್ಲಿ ಪ್ರಾಮಾಣಿಕತೆ ಮತ್ತು ಸ್ಪಷ್ಟತೆ ಇರಬೇಕು. ಕಾರ್ಯಸೂಚಿಗಳಲ್ಲಿ ಬದ್ಧತೆ ಇರಬೇಕು. ಸರ್ಕಾರಗಳು ಸಹ ರಾಜಕೀಯ ಲಾಭ–ನಷ್ಟವನ್ನು ಬದಿಗಿರಿಸಿ ಭವಿಷ್ಯದ ದಿನಗಳ ಬಗ್ಗೆ ಚಿಂತಿಸಬೇಕು. ಸ್ಫೋಟಗೊಂಡಿರುವ ಜನಸಂಖ್ಯೆಯ ನಿಯಂತ್ರಣದ ಮೇಲೆ ಗಮನಹರಿಸಬೇಕು. ಆಧುನಿಕ ಕೃಷಿ ಪದ್ಧತಿಯನ್ನು ಪರಿಚಯಿಸಬೇಕು. ಏಕೆಂದರೆ ಕಡೆಯವರೆಗೂ ಈ ದೇಶ ಉಸಿರಾಡುವುದು ಲಭ್ಯವಿರುವ ಸಂಪನ್ಮೂಲಗಳ ನೆರವಿನಿಂದಲೇ.

ಕೊಳವೆಬಾವಿಗಳು
ಜನ ಸಮುದಾಯ ಮತ್ತು ಸರ್ಕಾರಗಳು ಕೊಳವೆಬಾವಿಗಳನ್ನು ನೀರಿನ ಸಮಸ್ಯೆಗೆ ಪರ್ಯಾಯ ಪರಿಹಾರವೆಂದು ಪರಿಗಣಿಸಿದಂತೆ ತೋರುತ್ತಿದೆ.

ವಾಸ್ತವವಾಗಿ ಅಂತರ್ಜಲ ಎಂದಿಗೂ ಶಾಶ್ವತ ಸಂಪನ್ಮೂಲವಲ್ಲ. ಅಲ್ಲಿ ಅಡಕವಾಗಿರುವ ನೀರು ಕಾಲಾಂತರದಿಂದ ಕಣ ಕಣಗಳಾಗಿ ಜಾರಿ ಭೂಮಿಯಲ್ಲಿ ಶೇಖರಗೊಂಡಿರುವುದು. ಒಮ್ಮೆ ಅದು ಬರಿದಾದರೆ ಮತ್ತೆ ಪುನಶ್ಚೇತನಗೊಳ್ಳಲು ದೀರ್ಘ ಸಮಯಾವಧಿಯೇ ಬೇಕು. ನೀರಿನ ಕೊರತೆ ಇರುವ ನೆರೆಯ ತಮಿಳುನಾಡಿನಲ್ಲಿ ಲಭ್ಯವಿರುವ ಮಾಹಿತಿ ಈ ವಾದವನ್ನು ಪುಷ್ಟೀಕರಿಸುತ್ತದೆ. ಅಲ್ಲಿ ಕೊರೆದಿರುವ ಮೂರನೇ ಎರಡರಷ್ಟು ಭಾಗ ಕೊಳವೆಬಾವಿಗಳಲ್ಲಿ ಇಂದು ನೀರಿಲ್ಲ. ವಾಣಿಜ್ಯ ನಗರಿ ಕೊಯಮತ್ತೂರಿನಲ್ಲಿ ಹದಿನೈದು ಸಾವಿರ ಕೊಳವೆಬಾವಿಗಳು ಬರಿದಾಗಿವೆ.

ಈ ಹಿನ್ನೆಲೆಯಲ್ಲಿ ಅಂತರ್ಜಲವನ್ನು ಮನಸೋಇಚ್ಛೆ ಬಳಸಲು ಅವಕಾಶವಿಲ್ಲ. ಕೃಷಿ ಕ್ಷೇತ್ರ ಅನಿವಾರ್ಯವಾಗಿರುವುದರಿಂದ ಅತಿ ಕಡಿಮೆ ನೀರನ್ನು ಬೇಡುವ ಬೆಳೆಗಳನ್ನು ಉತ್ತೇಜಿಸಬೇಕು. ಅಂತರ್ಜಲದ ನೆರವಿನಿಂದ ತೀವ್ರಗತಿಯಲ್ಲಿ ಬೇಸಾಯ ಮುಂದುವರಿಸುವುದು ಒಳಿತಲ್ಲ. ಆ ನೀರಿನಲ್ಲಿರುವ ಉಪ್ಪಿನಾಂಶ ಕ್ರಮೇಣ ಮಣ್ಣಿನ ರಚನೆಗೆ ಧಕ್ಕೆಯುಂಟು ಮಾಡುತ್ತದೆ. ಮೂವತ್ತು ವರ್ಷಗಳಲ್ಲಿ ಆ ಭೂಮಿ ಫಲವತ್ತತೆ ಕಳೆದುಕೊಂಡು ಬಂಜರಾಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಆತಂಕದ ವಿಷಯವೇನೆಂದರೆ ಭಾರತದಲ್ಲಿ ಶೇಕಡ 40 ಭಾಗದ ಕೃಷಿಗೆ ಅಂತರ್ಜಲವೇ ಆಧಾರ. ಈ ಹಿನ್ನೆಲೆಯಲ್ಲಿ ಅಂತರ್ಜಲವನ್ನು ನಿರ್ಲಕ್ಷಿಸಬಾರದು. ಅದು ಪರಿಸರದ ಮೂಲತತ್ವಗಳಿಗೆ ವಿರುದ್ಧವಾದುದು. ಪ್ರಕೃತಿಯಲ್ಲಿ ರೂಪುಗೊಂಡಿರುವ ಯಾವುದೇ ಭೂವಿನ್ಯಾಸಕ್ಕೆ ತರ್ಕವಿರುತ್ತದೆ. ಅಲ್ಲಿ ಪ್ರತಿ ರಚನೆಗಳು ಸ್ಥಳೀಯ ಭೌಗೋಳಿಕ ಅಂಶಗಳಿಗೆ ಪೂರಕವಾಗಿರುತ್ತವೆ. ಅಲ್ಲಿ ಬೀಳುವ ಮಳೆ, ಬೀಸುವ ಗಾಳಿ, ಚಲಿಸುವ ಮೋಡಗಳು ಆ ರೂಪರೇಷೆಗಳಿಗೆ ಕಾರಣವಾಗಿರುತ್ತವೆ.

ಮರುಭೂಮಿಯಲ್ಲಿ ನೆಲೆಯೂರಿರುವ ಸಸ್ಯಸಂಕುಲವನ್ನು ನೋಡಿ. ಕನಿಷ್ಠ ಪ್ರಮಾಣದ ನೀರನ್ನು ಬಳಸಿ ಬದುಕುವ ತಂತ್ರಗಳನ್ನು ಅವು ಮೈಗೂಡಿಸಿಕೊಂಡಿವೆ. ಅದು ಅವುಗಳ ಉಳಿವಿನ ಪ್ರಶ್ನೆಯೂ ಹೌದು. ಯಾವುದೇ, ಜೀವಿಗಳು ಸಹಜ ಪರಿಸರದಲ್ಲಿ ಬದುಕುಳಿಯುವ ಒಳಗುಟ್ಟೇ ಇದು. ಈ ಎಲ್ಲ ಕಾರಣಗಳಿಂದ ಮರುಭೂಮಿ ಮರುಭೂಮಿಯಾಗಿಯೇ ಮುಂದುವರಿಯಬೇಕು. ಒಣಭೂಮಿ ಒಣಭೂಮಿಯಾಗಿಯೇ ಇರಬೇಕು. ಜೀವಪರಿಸರದ ವ್ಯವಸ್ಥೆಯನ್ನು ತಿರಸ್ಕರಿಸಿ ಮುಂದುವರಿಯುವ ಪ್ರಯತ್ನಗಳು ಅಪಾಯಗಳನ್ನು ಆಹ್ವಾನಿಸುತ್ತವೆ.

ಹೆಚ್ಚು ಮಳೆ ಬೀಳದ ರಾಜ್ಯದ ಉತ್ತರದ ಭಾಗದಲ್ಲಿ ಉರುವಲು ಸಮಸ್ಯೆ ನೀಗಿಸುವ ಸದುದ್ದೇಶದಿಂದ ಬಹಳ ಹಿಂದೆಯೇ ಮೆಕ್ಸಿಕೊ ಮರುಭೂಮಿಯ ಬಳ್ಳಾರಿ ಜಾಲಿಯನ್ನು ಪರಿಚಯಿಸಲಾಗಿದೆ. ನೀರಿಲ್ಲದ ಭೂಮಿಯಲ್ಲಿ ಸಮೃದ್ಧವಾಗಿ ಬೆಳೆಯಬಲ್ಲದೆಂಬುದಷ್ಟೇ ಅವರ ತಿಳಿವಳಿಕೆಯಾಗಿತ್ತು. ಅದು ನಿಜವೇ. ಮರುಭೂಮಿಯ ಜೀವಿಯಾದ ಈ ಜಾಲಿಗೆ ಅಧಮ್ಯ ಶಕ್ತಿ. ನೂರ ಎಪ್ಪತ್ತೈದು ಅಡಿ ಆಳಕ್ಕೆ ಬೇರುಗಳನ್ನಿಳಿಸಿ ಜಲಮೂಲವನ್ನು ಶೋಧಿಸಬಲ್ಲದು. ನಿಜವಾದ ಅರ್ಥದಲ್ಲಿ ಇದು ನೀರಿಲ್ಲದ ಭೂಮಿಯನ್ನು ಇನ್ನಷ್ಟು ಒಣಭೂಮಿಯನ್ನಾಗಿ ಪರಿವರ್ತಿಸುವ ಕಾರ್ಯ.

ಬತ್ತಿದ ಹಳದಿ ನದಿ
ಪ್ರಕೃತಿಯನ್ನು ಪಳಗಿಸಿ ಏಳಿಗೆಯ ಸೌಧ ನಿರ್ಮಿಸುವ ಚೀನಾ ದೇಶದ ಮನೋಭಾವ ಚರಿತ್ರೆಯುದ್ದಕ್ಕೂ ದಾಖಲಾಗಿದೆ. ಹಳದಿ ನದಿ (yellow river) ಚೀನಾದ ಪ್ರಮುಖ ನದಿ. ದೇಶದ ಆರ್ಥಿಕ ಸ್ಥಿತಿ ನಿಂತಿರುವುದೇ ಈ ನದಿಯ ಮೇಲೆ.

ಅಭಿವೃದ್ಧಿಯ ಹಾದಿಯಲ್ಲಿ ಸರ್ಕಾರದ ಧೋರಣೆಗಳು ನದಿಗೆ ಮಾರಕವಾಗತೊಡಗಿದವು. ಮೂರು ಸಾವಿರ ಮೈಲಿ ಸಾಗಿ ಸಮುದ್ರ ಸೇರುತ್ತಿದ್ದ ನದಿ 1972ರ ಬಳಿಕ ಸೊರಗಿತು. ಮುಂದಿನ 26 ವರ್ಷಗಳ ಕಾಲ ಸಮುದ್ರ ತಲುಪಲು ಹೆಣಗಾಡಿತು. ಈ ಅವಧಿಯಲ್ಲಿ ಚಲಚರ ಜೀವಿಗಳ ಬದುಕು ಅಸ್ತವ್ಯಸ್ತಗೊಂಡಿತು. ಮೀನುಗಾರರು ನಿರುದ್ಯೋಗಿಗಳಾದರು. ಅಕ್ಕಪಕ್ಕದ ಕೆರೆ–ಕುಂಟೆಗಳು ಬತ್ತಿದವು. ಕೃಷಿ ಚಟುವಟಿಕೆ ಸ್ಥಗಿತಗೊಂಡಿತು.

ಸರ್ಕಾರ ಅಣೆಕಟ್ಟೆಯಲ್ಲಿ ಬಂಧಿಸಿದ್ದ ನೀರಿನಲ್ಲಿ ಪ್ರತಿ ಸೆಕೆಂಡ್‌ಗೆ 13,000 ಗ್ಯಾಲನ್‌ ನೀರನ್ನು ಸಮುದ್ರಕ್ಕೆ ಬಿಡುಗಡೆ ಮಾಡುವ ತೀರ್ಮಾನ ತಳೆಯಿತು.ಚೀನಾ ಈಗ ಎಚ್ಚೆತ್ತುಕೊಂಡಿದೆ. ಅಭಿವೃದ್ಧಿ ಎಂದರೆ ಕೈಗಾರಿಕೆ, ಗಣಿಗಾರಿಕೆ, ಅಣೆಕಟ್ಟುಗಳು ಮಾತ್ರವಲ್ಲ. ಸಮಾಜಕ್ಕೆ ಶುದ್ಧವಾದ ಗಾಳಿ ನೀರನ್ನು ಒದಗಿಸುವುದು ಅಭಿವೃದ್ಧಿಯ ಸಂಕೇತವೆಂದು ಭಾವಿಸಿತು. ದೇಶದ ಭದ್ರತೆ ಇರುವುದು ಶತ್ರು ದಾಳಿಗಳಿಂದಲ್ಲ. ಭದ್ರತೆ ಇರುವುದು ಪ್ರಕೃತಿಯ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಎಂದು ಅರ್ಥ ಮಾಡಿಕೊಂಡಿತು.

ದೇಶದ ನದಿಗಳು, ಜಿನುಗುವ ಟಿಬೆಟ್‌ ಪ್ರಾಂತ್ಯವನ್ನು ಸುಸ್ಥಿತಿಯಲ್ಲಿಡಲು ತನ್ನ ಎಲ್ಲ ಕಾರ್ಯಸೂಚಿಗಳನ್ನು ಬದಲಿಸಿತು. ಇದು ಜಗತ್ತಿಗೆ ಪ್ರೇರಣೆ ನೀಡುವ ಮಾದರಿ ಎಂದೇ ಹೇಳಲಾಗುತ್ತದೆ.

ಮೊಗಲರ ಕಥೆವ್ಯಥೆ

ವಿಜಯೋತ್ಸವದ ಗುಂಗಿನಲ್ಲಿದ್ದ ಮೊಗಲರು ಪತೇಪುರ್‌ನಲ್ಲಿ ಹೊಸ ರಾಜಧಾನಿ ನಿರ್ಮಿಸಲು ತೀರ್ಮಾನಿಸಿದರು.1573ರಲ್ಲಿ ಅವರ ಕನಸಿನ ಯೋಜನೆ ಪೂರ್ಣಗೊಂಡಿತು. ಅರಮನೆಗಳ ನಗರವೆಂದೇ ಪ್ರಖ್ಯಾತವಾಯಿತು. ಅದ್ಭುತ ವಿನ್ಯಾಸದಿಂದ ರೂಪಗೊಂಡ ನಗರ ಸ್ವರ್ಗದಂತೆ ಕಂಡಿತು. ದುರಾದೃಷ್ಟಕರವೆಂದರೆ 1585ರ ವೇಳೆಗೆ ಫತೇಪುರ್ ನಿರ್ಜನ ಪ್ರದೇಶವಾಯಿತು. ನೀರಿನ ಸಮಸ್ಯೆ ತೀವ್ರಗೊಂಡಾಗ ಮೊಗಲರು ರಾಜಧಾನಿಯನ್ನು ತೊರೆಯಬೇಕಾಯಿತು. ‘The city of victory’ ಎಂಬ ಕಲ್ಪನೆಯಲ್ಲಿ ತಲೆಎತ್ತಿದ ನಗರ ಉಸಿರಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT