ಶನಿವಾರ, ಜೂನ್ 25, 2022
22 °C
ಕಸ್ತೂರಿರಂಗನ್ ವರದಿ ನಿರ್ಧಾರದ ಗಡುವಿಗೆ ಎರಡು ವಾರಗಳಷ್ಟೆ ಬಾಕಿ

ಒಳನೋಟ: ಪರಿಸರ–ಬದುಕಿನ ಸಿಕ್ಕುಗಳು

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಡಾ.ಕಸ್ತೂರಿರಂಗನ್ ವರದಿ ಜಾರಿಗೊಳಿಸುವ ಕುರಿತು ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಎರಡು ವಾರಗಳಷ್ಟೇ ಬಾಕಿ ಉಳಿದಿವೆ. ಅಂತಿಮ ಅಧಿಸೂಚನೆ ಹೊರಬೀಳುವ ಗಳಿಗೆ ಹತ್ತಿರ ಬರುತ್ತಿದ್ದಂತೆ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಜನರು ಆತಂಕಕ್ಕೆ ಈಡಾಗಿದ್ದಾರೆ.

ಡಿಸೆಂಬರ್‌ 31ರ ಒಳಗೆ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠ ತಾಕೀತು ಮಾಡಿತ್ತು. ಇದುವರೆಗೆ ನಾಲ್ಕು ಬಾರಿ ಕರಡು ಅಧಿಸೂಚನೆ ಹೊರಡಿಸಿದ್ದರೂ ರಾಜ್ಯ ಸರ್ಕಾರ ಜವಾಬ್ದಾರಿಯುತ ತೀರ್ಮಾನ ತೆಗೆದುಕೊಳ್ಳದೇ ಸಾರಾಸಗಟಾಗಿ ವರದಿ ತಿರಸ್ಕರಿಸುತ್ತಾ ಬಂದಿದೆ. ಅರ್ಹ ಗ್ರಾಮಗಳನ್ನು ಸೇರಿಸಿ, ಅರಣ್ಯದಂಚಿನ ಒಂದಷ್ಟು ಗ್ರಾಮಗಳನ್ನು ಹೊರಗಿಟ್ಟು ವ್ಯಾಪ್ತಿ ಗುರುತಿಸುವ ಕೆಲಸವನ್ನೂ ಮಾಡಿಲ್ಲ. ಅಂತಿಮ ಅಧಿಸೂಚನೆ ಜಾರಿಗೊಳಿಸುವ ಒತ್ತಡದಲ್ಲಿರುವ ಕೇಂದ್ರ ಸರ್ಕಾರವು ವರದಿಯಿಂದ ತನ್ನ ಭೂಭಾಗ ಕೈಬಿಡುವ ರಾಜ್ಯ ಸರ್ಕಾರದ ವಿನಂತಿ ಮನ್ನಿಸುವುದೋ ಅಥವಾ ವರದಿಯಲ್ಲಿ ಗುರುತಿಸಿದ ಎಲ್ಲ ಪ್ರದೇಶಗಳನ್ನೂ ಸೇರಿಸಿ ಆದೇಶ ಹೊರಡಿಸುವುದೋ ಎನ್ನುವುದೇ ಸದ್ಯದ ಚರ್ಚೆಯ ವಿಷಯವಾಗಿದೆ.

ಎಂಟು ವರ್ಷಗಳ ಹಿಂದೆ ತಯಾರಿಸಲಾಗಿದ್ದ ಈ ವರದಿಯಿಂದ ಪಶ್ಚಿಮ ಘಟ್ಟದ ಜನರು ಭಯಭೀತ
ರಾಗಿದ್ದಾರೆ. ಪಶ್ಚಿಮಘಟ್ಟದ ಅರಣ್ಯದ ಜತೆಗೇ ಬೆಸೆದುಕೊಂಡು ಬದುಕು ರೂಪಿಸಿಕೊಂಡಿರುವ ಜನರಿಗೆ ಪರಿಸರ ಸೂಕ್ಷ್ಮ ಪ್ರದೇಶದ ಹಿತಾಸಕ್ತಿ ಕಾಪಾಡುವ ವರದಿಯ ಅನುಷ್ಠಾನ ಪಥ್ಯವಾಗುತ್ತಿಲ್ಲ. ವರದಿ ಜಾರಿಯಿಂದ ತಮ್ಮ ವ್ಯಾಪ್ತಿಯ ಪರಿಸರದ ಅನನ್ಯತೆ, ಜೀವ ವೈವಿಧ್ಯಕ್ಕೆ ಮತ್ತಷ್ಟು ಸಂರಕ್ಷಣೆ ದೊರಕುತ್ತದೆ ಎಂಬ ಭರವಸೆ ಮೂಡಿಸುವ ಪ್ರಯತ್ನಗಳೂ ನಡೆದಿಲ್ಲ.

ವರದಿ ಜಾರಿಯಾದರೆ ನಿತ್ಯ ಹರಿದ್ವರ್ಣದ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಅಭಿವೃದ್ಧಿ, ಜನಜೀವನಕ್ಕೆ ಮಾರಕವಾಗಲಿದೆ. ಜನರನ್ನು ಒಕ್ಕಲೆಬ್ಬಿಸಲಾಗುವುದು, ಕೃಷಿ, ತೋಟಗಾರಿಕೆಗೂ ನಿರ್ಬಂಧ ಹೇರಲಾಗುವುದು. ಕೀಟನಾಶಕ, ರಾಸಾಯನಿಕ ಗೊಬ್ಬರ ಬಳಕೆಗೆ, ಏಕ ಜಾತಿಯ ಅಡಿಕೆ, ಕಾಫಿ ಬೆಳೆ, ಅಡಿಕೆ ಕೊಳೆರೋಗಕ್ಕೆ ಸಿಂಪಡಿಸುವ ಬೋರ್ಡೊ ದ್ರಾವಣ ಬಳಕೆಯೂ ಸಾಧ್ಯವಾಗುವುದಿಲ್ಲ. ರಸ್ತೆ, ಆಸ್ಪತ್ರೆ, ಶಾಲೆ ನಿರ್ಮಾಣ ಸೇರಿ ಸಾಮುದಾಯಿಕ ಕೆಲಸಗಳಿಗೂ ತೊಡಕಾಗಲಿದೆ ಎನ್ನುವುದು ಮಲೆನಾಡಿಗರ ತಳಮಳಕ್ಕೆ ಕಾರಣವಾಗಿದೆ.

‘ವಿರೋಧ ವ್ಯಕ್ತಪಡಿಸಿದ ಹಳ್ಳಿಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವರದಿಯ ಕುರಿತು ಅರಿವು ಮೂಡಿಸುವ ಪ್ರಯತ್ನಗಳು ಆಗಲಿಲ್ಲ. ಎಲ್ಲರಿಗಿಂತ ಮೊದಲು ಸಚಿವರು, ಸಂಸದರು, ಶಾಸಕರೇ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಘೋಷಿಸುತ್ತಾ ರಾಜಕೀಯ ಲಾಭದ ಲೆಕ್ಕಾಚಾರಕ್ಕೆ ಇಳಿದರು. ಅರಿವು ಮೂಡಿಸುವ ಜವಾಬ್ದಾರಿ ನಿಭಾಯಿಸಬೇಕಾದ ಅಧಿಕಾರಿಗಳು, ಅದಕ್ಕಾಗಿ ನೇಮಕವಾದ ಸಮಿತಿಗಳು ಹಳ್ಳಿಗಳಿಗೇ ಕಾಲಿಡಲಿಲ್ಲ. ಜನರು ವರದಿ ವಿರೋಧಿಸಲು ಇಂತಹ ನಡೆಗಳೇ ಪ್ರಮುಖ ಕಾರಣ’ ಎನ್ನುವುದು ಪರಿಸರವಾದಿಗಳ ವಾದ.

ರಾಜಕೀಯ ಲಾಭದ ವಿಷಯ: ದಶಕದಿಂದ ಈಚೆಗೆ ಕಸ್ತೂರಿರಂಗನ್ ವರದಿ ರಾಜಕೀಯ ಪಕ್ಷಗಳಿಗೂ ಲಾಭ–ನಷ್ಟದ ಲೆಕ್ಕಾಚಾರದ ಸರಕಾಗಿದೆ. ‘ವರದಿ ಜಾರಿಗೆ ಅವಕಾಶ ನೀಡುವುದಿಲ್ಲ’ ಎಂದು ಚುನಾವಣೆಯ ಸಮಯದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಜನರಿಗೆ ಭರವಸೆ ನೀಡಿದ್ದವು.

ಕಸ್ತೂರಿರಂಗನ್ ವರದಿ ಜಾರಿ ಕುರಿತು ಹಸಿರು ಪೀಠ ಆದೇಶ ನೀಡಿದಾಗಲೆಲ್ಲ ಎಲ್ಲ ಸರ್ಕಾರಗಳೂ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ. ಕೇಂದ್ರ ಸರ್ಕಾರ 2014ರಿಂದ ಇಲ್ಲಿಯವರೆಗೂ ನಾಲ್ಕು ಬಾರಿ ಕರಡು ಅಧಿಸೂಚನೆ ಹೊರಡಿಸಿದೆ. ಪ್ರತಿ ಬಾರಿಯೂ ರಾಜ್ಯ ಸರ್ಕಾರ ಅಧಿಸೂಚನೆ ವಿರೋಧಿಸಿದೆ.

ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ವ್ಯಾಪ್ತಿಯ 59,940 ಚ.ಕಿ.ಮೀ ಪ್ರದೇಶವನ್ನು ಕಸ್ತೂರಿರಂ‌ಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ. ಕರ್ನಾಟಕದ ಶಿವಮೊಗ್ಗ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಹಾಸನ, ಕೊಡಗು, ಮೈಸೂರು, ಚಾಮರಾಜ ನಗರ ಜಿಲ್ಲೆಗಳ 20,668 ಚ.ಕಿ.ಮೀ ಪಶ್ಚಿಮಘಟ್ಟದ ಪ್ರದೇಶ, ಅಲ್ಲಿನ 1,576 ಗ್ರಾಮಗಳು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಡುತ್ತವೆ.

ವರದಿಯಲ್ಲಿ ಶೇ 50ಕ್ಕಿಂತ ಹೆಚ್ಚು ನೈಸರ್ಗಿಕ ಭೂ ಪ್ರದೇಶ ಗಣನೆಗೆ ತೆಗೆದುಕೊಂಡ 858 ಗ್ರಾಮಗಳ ವಿಸ್ತೀರ್ಣ 13.09 ಲಕ್ಷ ಹೆಕ್ಟೇರ್‌ನಷ್ಟಿದೆ. ಸಚಿವ ಸಂಪುಟ ಉಪ ಸಮಿತಿ ತೀರ್ಮಾನದ ಅನ್ವಯ 594 ಗ್ರಾಮಗಳ 5,94,835 ಹೆಕ್ಟೇರ್‌ಗೂ ಹೆಚ್ಚು ಪ್ರದೇಶವನ್ನು ಪರಿಸರ ಸೂಕ್ಷ್ಮ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದರೂ, ವರದಿ ಜಾರಿ ಬೇಡ ಎನ್ನುವ ನಿಲುವಿಗೆ ರಾಜ್ಯ ಅಂಟಿಕೊಂಡಿದೆ.

ದೊಡ್ಡ ಯೋಜನೆಗಳಿಗೆ ತಡೆ: ವರದಿಯು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ, ಮರಳು ತೆಗೆಯುವುದು, ಬೃಹತ್ ಜಲ, ಪವನ ವಿದ್ಯುತ್ ಯೋಜನೆಗಳು, ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ನೀಡಿಲ್ಲ. ಗಣಿಗಾರಿಕೆ ಮತ್ತಿತರ ಪರಿಸರ ವಿರೋಧಿ ಚಟುವಟಿಕೆಗಳನ್ನು ಹಂತಹಂತವಾಗಿ ಕಡಿಮೆ ಮಾಡುತ್ತಾ ವರದಿ ಜಾರಿಯಾದ 5 ವರ್ಷಗಳ ಒಳಗೆ ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ಸೂಚಿಸಿದೆ.

ಒಕ್ಕಲೆಬ್ಬಿಸುವ ಅಂಶ ಇಲ್ಲ: ವರದಿಯಲ್ಲಿ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಡುವ ಯಾವ ಗ್ರಾಮಗಳನ್ನೂ ಸ್ಥಳಾಂತರಿಸುವ ಪ್ರಸ್ತಾವವಿಲ್ಲ. ಅಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಅಂಶಗಳಿಲ್ಲ. ಕಾಡಿನ ಉತ್ಪನ್ನ ಸಂಗ್ರಹಿಸಲು, ಕಟ್ಟಿಗೆ, ಎಲೆ, ತರಗು ತರಲು, ಈಗಿರುವ ಭೂಮಿಯ ಒಡೆತನ ಅನುಭವಿಸಲು, ಉಳುಮೆ ಮಾಡಲು, ಬೆಳೆ ಬೆಳೆಯಲು ವಿರೋಧ ವ್ಯಕ್ತಪಡಿಸಿಲ್ಲ. ಸ್ಥಳೀಯ ಆಡಳಿತ, ಜನರ ಸಹಭಾಗಿತ್ವದಲ್ಲೇ ಪರಿಸರ ಪ್ರವಾಸೋದ್ಯಮ, ಪ್ರಕೃತಿ ವಿನಾಶವಿಲ್ಲದ ಬದುಕು ನಡೆಸಲು ಅವಕಾಶ ನೀಡಿದೆ. 

20 ಸಾವಿರ ಚ.ಮೀಗಿಂತ ದೊಡ್ಡದಾದ ಕಟ್ಟಡ ನಿರ್ಮಾಣ, ರಸ್ತೆಗಳ ವಿಸ್ತರಣೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೊದಲು ಸ್ಥಳೀಯ ಗ್ರಾಮ ಸಭೆಯ ಅನುಮತಿ ಪಡೆಯುವುದು ಕಡ್ಡಾಯ. ನೈಸರ್ಗಿಕ, ಸಾವಯವ ಪದ್ಧತಿ ಕೃಷಿಗೆ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದೆ. ಕೆಂಪು ವಲಯದ ದೊಡ್ಡ ಕೈಗಾರಿಕೆಗಳ ಬದಲು ಆಹಾರ, ಹಣ್ಣು ಮತ್ತಿತರ ಕೃಷಿ, ಪರಿಸರ ಪೂರಕ ಸಂಸ್ಕರಣಾ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದೆ. ಚೆಕ್‌ಡ್ಯಾಂ ನಿರ್ಮಾಣ, ಕಿರು ನೀರಾವರಿಗೆ ಅವಕಾಶ ನೀಡಿದೆ. ಆದರೆ, ಜೀವಿಗಳಿಗೆ ತೊಂದರೆಯಾಗದಂತೆ ಶೇ 30ರಷ್ಟು ಹರಿವು ಖಾತ್ರಿ ಪಡಿಸಲು, ನದಿ ತಿರುವುಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಲು ಸಲಹೆ ನೀಡಿದೆ. 

ಅಂತಿಮ ಅಧಿಸೂಚನೆ ಬಾಕಿ

ಮಾಧವ ಗಾಡ್ಗೀಳ್ ವರದಿಯನ್ನು 2011ರಲ್ಲಿ  ತಿರಸ್ಕರಿಸಿದ ಕೇಂದ್ರ ಸರ್ಕಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ.ಕೃಷ್ಣಸ್ವಾಮಿ ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯಲ್ಲಿ 10 ಸದಸ್ಯರನ್ನು ಒಳಗೊಂಡ ಮತ್ತೊಂದು ಸಮಿತಿ ರಚಿಸಿತ್ತು. ಸಮಿತಿ 15 ಏಪ್ರಿಲ್‌ 2013ರಂದು ವರದಿ ಸಲ್ಲಿಸಿತ್ತು. ವರದಿ ಅಂಗೀಕರಿಸಿದ ಸರ್ಕಾರ 14 ಮಾರ್ಚ್ 2014ರಂದು ಮೊದಲ ಕರಡು ಅಧಿಸೂಚನೆ ಹೊರಡಿಸಿತ್ತು. ಇದುವರೆಗೂ ನಾಲ್ಕು ಬಾರಿ ಅಧಿಸೂಚನೆ ಹೊರಡಿಸಿದೆ. ಅಂತಿಮ ಅಧಿಸೂಚನೆಯಷ್ಟೇ ಬಾಕಿ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು