ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿಗರಿ’ ಮಾರ್ಗದಲ್ಲಿ ಹಸಿರು ವನರಾಶಿ

Last Updated 5 ಫೆಬ್ರುವರಿ 2019, 12:57 IST
ಅಕ್ಷರ ಗಾತ್ರ

‘ಚಿಗರಿ’ ಸಂಚರಿಸುವ ತ್ವರಿತ ಬಸ್ ಸಂಚಾರ ವ್ಯವಸ್ಥೆ (ಬಿಆರ್‌ಟಿಎಸ್‌) ಮಾರ್ಗದಲ್ಲಿ ಇಷ್ಟು ದಿನಗಳ ಕಾಲ ನೀಲಿ ಹಾಗೂ ನೇರಲೆ ಬಣ್ಣದ ಚಿಗರಿ ಸಂಚರಿಸುವುದನ್ನಷ್ಟೇ ನೋಡಿದ್ದೆವು. ಆದರೆ ಇನ್ನು ಮುಂದೆ ಈ ಮಾರ್ಗ ಹಸಿರು ವನರಾಶಿಯಿಂದ ಕಂಗೊಳಿಸಲಿದೆ. ಅದಕ್ಕಾಗಿ ಬಿಆರ್‌ಟಿಎಸ್‌ ಜತೆ ಅರಣ್ಯ ಇಲಾಖೆ ಜತೆಗೂಡಿ ಯೋಜನೆ ಸಿದ್ಧಪಡಿಸಿದ್ದು, ಅದು ನೇಚರ್‌ ಫಸ್ಟ್ ಎಂಬ ಪರಿಸರ ಸಂರಕ್ಷಣೆ ಸಂಸ್ಥೆ ಮೂಲಕ ಸಾಕಾರಗೊಳ್ಳುತ್ತಿದೆ.

ಹುಬ್ಬಳ್ಳಿ –ಧಾರವಾಡ ಅವಳಿ ನಗರದ ನಡುವೆ ಕಳೆದ ಹಲವು ವರ್ಷಗಳಿಂದ ನಡೆಯುತ್ತಲೇ ಇದ್ದ ಬಿಆರ್‌ಟಿಎಸ್ ಯೋಜನೆ ಅಂತಿಮವಾಗಿ ಕಾರ್ಯರೂಪಕ್ಕೆ ಬಂದಿದೆ. ಪರೀಕ್ಷಾರ್ಥ ಬಸ್ಸುಗಳ ಸಂಚಾರ ಆರಂಭವಾಗಿದ್ದು, ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಈ ಯೋಜನೆಗಾಗಿ ನೆಲಕಚ್ಚಿದ 4,800 ಮರಗಳ ಕುರಿತು ಪರಿಸರವಾದಿಗಳು ಮತ್ತು ಮೂಲ ಧಾರವಾಡಿಗರಲ್ಲಿ ಅಸಮಾಧಾನ ಮಡುಗಟ್ಟಿತ್ತು.

ಆದರೆ ಸದ್ಯ ಯೋಜನೆಯ ಈ ಮಾರ್ಗದಲ್ಲಿ 8.5 ಕಿ.ಮೀ. ಉದ್ದದಲ್ಲಿ ಸುಮಾರು 2,800 ಗಿಡಗಳು ನೆಡುತ್ತಿರುವ ವಿಷಯ ಅವಳಿ ನಗರದ ಜನತೆಯಲ್ಲಿ ಸಂತಸ ಮೂಡಿಸಿದೆ. ಇದಕ್ಕಾಗಿ ಬಿಆರ್‌ಟಿಎಸ್ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಯೋಜನೆ ರೂಪಿಸಿವೆ. ಬಿಆರ್‌ಟಿಎಸ್‌ ಮಾರ್ಗವನ್ನು ತ್ವರಿತ ಸಂಚಾರಕ್ಕೆ ಮಾತ್ರವಲ್ಲ; ಅವಳಿ ನಗರದ ಸೌಂದರ್ಯ ಮತ್ತು ಇಲ್ಲಿನ ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲೂ ಯೋಜನೆ ರೂಪಿಸಲಾಗಿದೆ.

ಇದರ ಪರಿಣಾಮವಾಗಿ ಅತಿ ಹೆಚ್ಚು ಆಮ್ಲಜನಕ ನೀಡುವ ಅಪರೂಪದ ಸಸ್ಯರಾಶಿಗಳು ಈ ಮಾರ್ಗ ಮಧ್ಯೆ ನಳನಳಿಸಲಿವೆ. ಧಾರವಾಡದ ಗಾಂಧೀನಗರದಿಂದ ಹಿಡಿದು ಹುಬ್ಬಳ್ಳಿಯ ನವೀನ್ ಹೋಟೆಲ್‌ವರೆಗೂ ರಸ್ತೆ ಮಧ್ಯದಲ್ಲಿ ಸುಮಾರು 1,600 ಮರಗಳು ಮತ್ತು ರಸ್ತೆಯ ಎರಡೂ ಬದಿಗಳಲ್ಲಿ 1,200 ಮರಗಳು ಹಸಿರು, ನೆರಳು ಮತ್ತು ಶುದ್ಧ ಗಾಳಿ ನೀಡಲಿವೆ.

ಹಸಿರಿಗಾಗಿ ಮೀಸಲಿಟ್ಟಿದ್ದು ₹3.8 ಕೋಟಿ

ಅವಳಿ ನಗರದ ನಡುವಿನ ಈ ಮಾರ್ಗದಲ್ಲಿ ಹಸಿರು ಮೂಡಿಸುವ ಸಲುವಾಗಿ ಬಿಆರ್‌ಟಿಎಸ್ ಸಂಸ್ಥೆ ₹3.8 ಕೋಟಿ ಹಣವನ್ನು ಮೀಸಲಿಟ್ಟಿದೆ. ಬಿಆರ್‌ಟಿಎಸ್ ಮೂಲಕ ಅರಣ್ಯ ಇಲಾಖೆಗೆ ವಹಿಸಲಾದ ಈ ಜವಾಬ್ದಾರಿಗೆ ಪೂರಕವಾಗಿ ಟೆಂಡರ್ ಕೂಡ ಕರೆಯಲಾಗಿತ್ತು. ಆದರೆ ಅದಕ್ಕೆ ಯಾರೂ ಅರ್ಜಿ ಹಾಕಿರಲಿಲ್ಲ. ನಂತರ ತುಂಡುಗುತ್ತಿಗೆ ಆಧಾರದಲ್ಲಿ ಇಲಾಖೆಯು ಈ ಪಥದಲ್ಲಿ ಹಸಿರುಹಾಸು ಮೂಡಿಸುವ ಸಲುವಾಗಿ ಪ್ರತಿಷ್ಠಿತ ನೇಚರ್ ಫಸ್ಟ್ ಪರಿಸರ ಸಂಸ್ಥೆಗೆ ಜವಾಬ್ದಾರಿ ವಹಿಸಿತು.

ಇದರ ಪರಿಣಾಮವಾಗಿ ಈ ಮಾರ್ಗದ 8.5 ಕಿ.ಮೀ. ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಮ್ಲಜನಕ ನೀಡುವ, ಸುಗಂಧ ಬೀರುವ, ತರಹೇವಾರಿ ಬಣ್ಣಗಳ ಹೂವುಗಳನ್ನು ಅರಳಿಸುವ ಮತ್ತು ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಸಾವಿರಾರು ಗಿಡಗಳು ಮನಸ್ಸನ್ನು ಅರಳಿಸಿವೆ.

ಇವುಗಳಲ್ಲಿ ಹೇರಳ ಆಮ್ಲಜನಕ ನೀಡುವ ಕೋನಾಕಾರ್ಪಸ್‌, ಪಗೋಡಾ, ಓಲಿಸ್ಟೋನಿಯಾ ಸೇರಿದಂತೆ ಹಲವು ರೆಡಿಮೇಡ್ ಮರಗಳನ್ನೇ ಇಲ್ಲಿ ನೆಡಲಾಗುತ್ತಿದೆ. ಜತೆಗೆ ಫಿಷ್‌ಟೈಲ್ ಪಾಮ್‌, ಫೈಕಸ್ ಬೆಂಜಮಿನ್‌ ಎಂಬ ಪುಟ್ಟ ಗಾತ್ರದ ಆಲದ ಮರಗಳು ಬಿಆರ್‌ಟಿಎಸ್ ಮಾರ್ಗದ ಅಂದ ಹೆಚ್ಚಿಸಲಿವೆ. ಅದರಲ್ಲೂ ಪಗೋಡಾ ಎಂಬ ಅಂದದ ಮರದ ಆಯಸ್ಸೇ ಒಂದು ಸಾವಿರ ವರ್ಷ. ಎತ್ತರಕ್ಕೆ ತ್ರಿಕೋನಾಕೃತಿಯಲ್ಲಿ ಬೆಳೆಯುವ ಈ ಮರದಿಂದ ಹೇರಳ ಆಮ್ಲಜನಕ ಲಭ್ಯವಾಗಲಿದೆ.

ಈ ಮರಗಳ ನಡುವಿನ ಅಂತರದಲ್ಲಿ ಬಿಳಿ, ಹಳದಿ, ನೀಲಿ, ಕೆಂಪು ಹೀಗೆ ಹಲವು ಬಗೆಯ ಹೂವುಗಳನ್ನು ಬಿಡುವ ಆಲಂಕಾರಿಕ ಹೂವುಗಳ್ಳುಳ್ಳ ಗಿಡಗಳನ್ನು ನೆಡಲಾಗುತ್ತಿದೆ. ಗಿಡ ಬೆಳೆಸುವ ಗುತ್ತಿಗೆ ಪಡೆದ ನೇಚರ್ ಫಸ್ಟ್ ಸಂಸ್ಥೆ ಈಗಾಗಲೇ ಗುಜರಾತ್, ಆಂಧ್ರ ಪ್ರದೇಶಗಳ ಹಲವು ಬೃಹತ್ ಯೋಜನೆಗಳನ್ನು ನಿರ್ವಹಿಸಿದ ಅನುಭವ ಹೊಂದಿದೆ. ಇಷ್ಟು ಮಾತ್ರವಲ್ಲ; ಹಳಿಯಾಳ ಮಾರ್ಗದಲ್ಲಿರುವ ನೇಚರ್ ಫಸ್ಟ್ ಇಕೊ ವಿಲೇಜ್‌ ಸ್ಥಾಪಿಸಿ, ಮಳೆನೀರು ಸಂಗ್ರಹಕ್ಕಾಗಿ ನೆಕ್‌ಲೆಸ್ ಮಾದರಿಯ ಬೃಹತ್ ಸಂಗ್ರಹಾಗಾರಗಳ ಪುಂಜವನ್ನು ರಚಿಸಿ ಗಮನ ಸೆಳೆದಿದೆ.

ಇದರ ಮುಖ್ಯಸ್ಥ ಪಿ.ವಿ.ಹಿರೇಮಠ ಅವರು ತಮ್ಮ ಯೋಜನೆ ಕುರಿತು ಮಾಹಿತಿ ನೀಡಿ, ‘ರಸ್ತೆ ಮಧ್ಯದ ಈ ಜಾಗ ಸುಮಾರು 3.3 ಮೀಟರ್ ಅಗಲ ಇದೆ. ಹೀಗಾಗಿ 8.5ಕಿ.ಮೀ ಉದ್ದದವರೆಗೂ ಲೆಕ್ಕ ಹಾಕಿದರೆ 7.1ಎಕರೆ ಜಾಗ ಸಿಗಲಿದೆ. ವರ್ಷದಲ್ಲಿ ಸರಾಸರಿ 400ಮಿ.ಲೀ. ಮಳೆಯಾಗುತ್ತದೆ ಎಂದುಕೊಂಡರೆ, ಅರಣ್ಯ ಇಲಾಖೆ ಮತ್ತು ಬಿಆರ್‌ಟಿಎಸ್‌ ಸಹಯೋಗದಲ್ಲಿ ಕೈಗೊಂಡಿರುವ ಈ ಯೋಜನೆಯಲ್ಲಿ ಈ ಮಾರ್ಗದಲ್ಲೇ ಸುಮಾರು 12ರಿಂದ 13ಕೋಟಿ ಲೀಟರ್‌ನಷ್ಟು ನೀರು ಸಂಗ್ರಹಿಸುವಂತೆ ಯೋಜನೆ ರೂಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಹಸಿರಿಗಾಗಿ ಮೀಸಲಿಟ್ಟಿರುವ ಈ ಜಾಗದಲ್ಲಿ ಎರಡೂ ಬದಿ 1.5 ಅಡಿ ಜಾಗವನ್ನು ಕೇವಲ ಹುಲ್ಲುಹಾಸಿಗೆ ಮೀಸಲಿಡಲಾಗಿದೆ. ಅದನ್ನು ಇಳಿಜಾರು ರೂಪದಲ್ಲಿ ಹಾಕಲಾಗಿದೆ. ಇದರಿಂದ ಮಳೆ ನೀರು ಇಲ್ಲೇ ಇಂಗಲು ಸಹಾಯವಾಗುತ್ತದೆ. ಜತೆಗೆ ರಸ್ತೆ ದಾಟುವವರು ಸುಲಭವಾಗಿ ದಾಟಬಹುದು ಮತ್ತು ಬರುವ ವಾಹನಗಳಿಗೂ ರಸ್ತೆ ದಾಟುವವರ ಸ್ಪಷ್ಟ ಚಿತ್ರಣ ದೊರೆಯಲಿದೆ. ಮಧ್ಯದ ಈ ಹಸಿರು ಪಥದ ಎರಡೂ ತುದಿಗಳಲ್ಲಿ ಕೇಬಲ್‌ ಹಾದು ಹೋಗಿರುವುದರಿಂದ ನಾಳೆದಿನ ದುರಸ್ತಿಗಾಗಿ ಗಿಡಗಳನ್ನು ಹಾಳು ಮಾಡುವುದು ತಪ್ಪಲಿದೆ. ಇಂಥ ಪ್ರಯತ್ನ ವಿದೇಶಗಳಲ್ಲೂ ಆಗಿಲ್ಲ’ ಎಂದು ಹಿರೇಮಠ ತಿಳಿಸಿದರು.

ಜೀವ ಸಂಕುಲಕ್ಕೆ ಪೂರಕ

ವಾಹನಗಳು ತಿರುಗಲು ಅನುಕೂಲವಾಗುವಂತೆ ಮಾಡಿರುವ ಜಂಕ್ಷನ್‌ಗಳಲ್ಲಿ ಸುಮಾರು 30 ಅಡಿಗಳಷ್ಟು ಜಾಗವನ್ನು ಕೇವಲ ಹುಲ್ಲುಹಾಸಿಗೆ ಮೀಸಲಿಡಲಾಗಿದೆ. ಇದರ ಉದ್ದೇಶ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗುವವರು ಸುಲಭವಾಗಿ ಮತ್ತು ಯಾವುದಾದರೂ ವಾಹನ ಹಾದುಹೋಗುತ್ತಿದೆಯೇ ಎಂಬುದನ್ನು ನೋಡಿಕೊಂಡು ದಾಟಲು ಅನುಕೂಲವಾಗಲಿದೆ.

‘ಮರಗಳ ನಡುವೆ ಹಲವಾರು ಕಿರು ಆಲದ ಮರದ ಗಿಡಗಳನ್ನು ಹಾಕಲಾಗಿದೆ. ಇವುಗಳು ಹಕ್ಕಿಗಳಿಗೆ ಗೂಡು ಕಟ್ಟಿ, ಸಂತಾನೋತ್ಪತ್ತಿಗೆ ಅನುಕೂಲವಾಗಲಿದೆ. ಸಸ್ಯಗಳು ಇದ್ದಲ್ಲಿ ಅಲ್ಲಿ ಹುಳ, ಚಿಟ್ಟೆಗಳು ಇರುತ್ತವೆ. ಅವುಗಳನ್ನು ತಿನ್ನಲು ಹಕ್ಕಿಗಳು ಬರಲಿವೆ. ಹೀಗಾಗಿ ಇದರಿಂದ ಇಡೀ ಪರಿಸರವೇ ಹೆಚ್ಚು ಆರೋಗ್ಯಕರವಾಗಿರಲಿದೆ’ ಎನ್ನುವುದು ಪಿ.ವಿ.ಹಿರೇಮಠ ಅವರ ಅನುಭವದ ಮಾತು.

‘ರಸ್ತೆಯ ಎರಡೂ ಪಕ್ಕದಲ್ಲೂ ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಹೀಗಾಗಿ 12ರಿಂದ 15 ಅಡಿ ಎತ್ತರದ ರೆಡಿಮೇಡ್ ಗಿಡಗಳನ್ನೇ ತರಿಸಿ ನೆಡಲಾಗುತ್ತಿದೆ. ಒಂದು ಮಳೆಗಾಲ ಕಳೆಯುತ್ತಿದ್ದಂತೆ ಗಿಡಗಳು ಹೆಚ್ಚು ಆಕರ್ಷಕವಾಗಿ ಮತ್ತು ಹೂವುಗಳೊಂದಿಗೆ ಕಂಗೊಳಿಸಲಿವೆ. ಒಟ್ಟು 12ರಿಂದ 15 ಹೂವು ಬಿಡುವ ಮತ್ತು ಆಲಂಕಾರಿಕ ಗಿಡಗಳನ್ನೇ ಇಲ್ಲಿ ಬಳಸಲಾಗಿದೆ’ ಎಂದು ವಿವರಿಸಿದರು.

‘ಗಿಡಗಳ ನಿರ್ವಹಣೆಗೆ ಮತ್ತು ಮಿತನೀರು ಬಳಕೆ ಉದ್ದೇಶದಿಂದ ಈ ಮಾರ್ಗದಲ್ಲಿ ಮೂರು ಕೊಳವೆಭಾವಿ ಕೊರೆಯಿಸಲು ಅನುಮತಿ ಕೋರಲಾಗಿದೆ. ಇದರಿಂದ ಹನಿ ನೀರಾವರಿ ಮೂಲಕ ಗಿಡಗಳಿಗೆ ನೀರುಣಿಸುವ ಯೋಜನೆಯೂ ಇದೆ. ಸದ್ಯ ಸುಮಾರು 60ಕ್ಕೂ ಹೆಚ್ಚು ಕಾರ್ಮಿಕರು ಈ ಮಾರ್ಗದ ಅಂದ ಹೆಚ್ಚಿಸುವಲ್ಲಿ ತಲ್ಲೀನರಾಗಿದ್ದಾರೆ’ ಎಂದು ಹಿರೇಮಠ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT